ನಾಳೆ ಬಸ್, ಆಟೋ ಸಂಚಾರ ವ್ಯತ್ಯಯ
ಹುಬ್ಬಳ್ಳಿ: ಸಂಸತ್ ಅವೇಶನದಲ್ಲಿ ಸಂವಿಧಾನದ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಡೆ ಖಂಡಿಸಿ ಹಾಗೂ ಅವರ ವಜಾಕ್ಕೆ ಆಗ್ರಹಿಸಿ ೧೦೨ಕ್ಕೂ ಹೆಚ್ಚು ದಲಿತಪರ ಮತ್ತು ಪ್ರಗತಿಪರ ಸಂಘಟನೆಗಳು ಗುರುವಾರ ಬೆಳಗ್ಗೆ ೬ ಗಂಟೆಯಿಂದ ಸಂಜೆ ೬ರ ವರೆಗೆ ಹುಬ್ಬಳ್ಳಿ-ಧಾರವಾಡ ಬಂದ್‌ಗೆ ಕರೆ ನೀಡಿವೆ.
ಹುಬ್ಬಳ್ಳಿಯಲ್ಲಿ ಚನ್ನಮ್ಮ ವೃತ್ತದಲ್ಲಿ ಹಾಗೂ ಧಾರವಾಡದಲ್ಲಿ ಜ್ಯುಬಿಲಿ ವೃತ್ತದಲ್ಲಿ ಬಂದ್‌ಗೆ ಕರೆ ನೀಡಿದ್ದ ಸಂಘಟನೆಗಳು ಸಮಾವೇಶಗೊಂಡು ಪ್ರತಿಭಟಿಸಲಿವೆ. ಬಸ್, ಆಟೋ ಸೇರಿದಂತೆ ಸಾರಿಗೆ ಸಂಚಾರ ವ್ಯತ್ಯಯ ಆಗಲಿದೆ. ಸಾರಿಗೆ ಸಂಸ್ಥೆ ಅಧಿಕೃತವಾಗಿ ಬಸ್‌ಗಳನ್ನು ರಸ್ತೆಗಿಳಿಸುವ ಅಥವಾ ಬಸ್ ಸಂಚಾರ ಸ್ಥಗಿತಗೊಳಿಸುವ ಕುರಿತು ಆದೇಶ ಹೊರಡಿಸಿಲ್ಲ. ಆಯಾ ಸಂದರ್ಭ, ಪರಿಸ್ಥಿತಿಗೆ ಅನುಗುಣವಾಗಿ ತೀರ್ಮಾನಿಸಿ ಕ್ರಮಕೈಗೊಳ್ಳಲಾಗುವುದೆಂದು ವಾಕರಸಾ ಸಂಸ್ಥೆಯ ಮೂಲಗಳು ತಿಳಿಸಿವೆ.
ಗುರುವಾರ ಕೆಲಸ ಕಾರ್ಯಗಳಿಗೆ ಹೋಗುವವರು, ದೂರ ಪ್ರಯಾಣ ಮಾಡುವವರು ಹೊರಡುವ ಮುನ್ನ ಬಂದ್ ಪರಿಸ್ಥಿತಿ ತಿಳಿದುಕೊಂಡು ತೆರಳುವುದು ಸೂಕ್ತ.