`ನಾವೇ ನಮ್ಮನ್ನು ದೇವರೆಂದು ಘೋಷಿಸಿಕೊಳ್ಳಬಾರದು'
ಪುಣೆ: ನಾವು ದೇವರಾಗುತ್ತೇವೋ ಇಲ್ಲವೋ ಎನ್ನುವುದನ್ನ ಜನ ನಿರ್ಧರಿಸುತ್ತಾರೆ. ನಮಷ್ಟಕ್ಕೆ ನಾವೇ ನಮ್ಮನ್ನು ದೇವರೆಂದು ಘೋಷಿಸಿಕೊಳ್ಳಬಾರದು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಪುಣೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋಹನ್ ಭಾಗವತ್, ಶಾಂತವಾಗಿರುವುದರ ಬದಲು ಕೆಲವು ಜನ ಮಿಂಚಿನಂತೆ ಹೊಳೆಯಬೇಕೆಂದು ಬಯಸುತ್ತಾರೆ. ಆದರೆ ಮಿಂಚು ಬಂದು ಹೋದ ಮೇಲೆ ಮತ್ತೆ ಕತ್ತಲೆಯೇ ಆವರಿಸುತ್ತದೆ. ಹಾಗಾಗಿ ನಾವು ದೀಪದಂತೆ ಉರಿಯಬೇಕು ಹಾಗೂ ಅವಶ್ಯವಿದ್ದಾಗಲಷ್ಟೇ ಮಿಂಚಿನಂತೆ ಪ್ರಕಾಶಿಸಬೇಕು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಸದ್ಯ ಮೋಹನ್ ಭಾಗವತ್‌ರ ಈ ಹೇಳಿಕೆ ಎಲ್ಲೆಡೆ ಸದ್ದು ಮಾಡುತ್ತಿದೆ. ಕೆಲವರು ಸೂಪರ್ ಮ್ಯಾನ್‌ಗಳಾಗಬೇಕು ಅಂತ ಬಯಸುತ್ತಾರೆ. ಆದರೆ ಅವರ ಬಯಕೆ ಅಷ್ಟಕ್ಕೆ ನಿಲ್ಲುವುದಿಲ್ಲ. ಅವರು ದೇವರಾಗಲು ಮುಂದಾಗುತ್ತಾರೆ ಎನ್ನುವ ಮಾತನ್ನ ಮೋಹನ್ ಭಾಗವತ್ ಕೆಲ ತಿಂಗಳ ಹಿಂದಷ್ಟೇ ಆಡಿದ್ದರು. ಈಗ ಮತ್ತೆ ಅಂಥದೇ ಮಾತನ್ನ ಆಡಿದ್ದಾರೆ. ಈ ರೀತಿಯ ಹೇಳಿಕೆಗಳ ಮೂಲಕ ಭಾಗವತ್ ಪ್ರಧಾನಿ ಮೋದಿಗೆ ಚಾಟಿ ಬೀಸುತ್ತಿದ್ದಾರೆಯೇ ಎನ್ನುವ ಚರ್ಚೆಗಳು ಈಗ ಶುರುವಾಗಿದೆ. ಲೋಕಸಭಾ ಚುನಾವಣೆ ಟೈಮಲ್ಲಿ ನಾನೇ ದೇವರು ಎನ್ನುವ ಅರ್ಥದಲ್ಲಿ ಮೋದಿ ಮಾತಾಡಿದ್ದು ಇದಕ್ಕೆ ಕಾರಣವಿರಬಹುದು ಎನ್ನಲಾಗಿದೆ.