ನಿಧಿ ಬಳಕೆಯಾಗದೆ ಹಾಗೆ ಕೊಳೆಯುತ್ತಿದೆ
ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಧಿಕಾರ ಹಂಚಿಕೆಯ ಕಿತ್ತಾಟ ರಾಜ್ಯದ ಆಡಳಿತ ಯಂತ್ರದ ಮೇಲೆ ನೇರ ದುಷ್ಪರಿಣಾಮ ಬೀರುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರ ಆದೇಶಕ್ಕೂ ಬೆಲೆ ಇಲ್ಲದೆ ಕಳೆದ ಒಂದು ವರ್ಷದಿಂದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಬಳಕೆಯಾಗದೆ ಹಾಗೆ ಕೊಳೆಯುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಒಂದು ಕಡೆ 2023-24ನೇ ಸಾಲಿನ 1,038 ಕೋಟಿ ರೂಪಾಯಿ ಶಾಸಕರ ನಿಧಿ ಇನ್ನೂ ಬಳಕೆಯಾಗದೆ ಉಳಿದಿದ್ದರೆ, ಮತ್ತೊಂದು ಕಡೆ 2024-25 ಸಾಲಿನಲ್ಲಿ ಅನುಮೋದನೆ ಆಗಿರುವ 121.40 ಕೋಟಿ ರೂಪಾಯಿ ಮೊತ್ತದ 2,468 ಕಾಮಗಾರಿಗಳಲ್ಲಿ, ನವೆಂಬರ್ ಕಳೆದು ಡಿಸೆಂಬರ್ ಬಂದಿದ್ದರೂ ಖರ್ಚಾಗಿರುವುದು ಕೇವಲ 2.49 ಕೋಟಿ ರೂಪಾಯಿ. ಸಿಎಂ ಸಿದ್ದರಾಮಯ್ಯನವರೇ, ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ತಮ್ಮ ಪಕ್ಷದಲ್ಲಿ ಉಂಟಾಗಿರುವ ಗೊಂದಲದಿಂದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಒಂದಾ ರಾಜೀನಾಮೆ ಕೊಟ್ಟು ಬೇರೆಯವರಿಗೆ ದಾರಿ ಮಾಡಿ ಕೊಡಿ. ಅಥವಾ ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ಸ್ಪಷ್ಟನೆ ಕೊಟ್ಟು ಈ ಗೊಂದಲಕ್ಕೆ ಶಾಶ್ವತವಾಗಿ ತೆರೆ ಎಳೆಯಿರಿ. ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಗೋಡೆಯ ಮೇಲೆ ದೀಪವಿಟ್ಟಂತೆ ಮಾತಾಡಿದರೆ ಅಧಿಕಾರಶಾಹಿಗೆ, ನೌಕರಶಾಹಿಗೆ ಏನು ಸಂದೇಶ ಹೋಗುತ್ತದೆ? ಎಂದು ಪ್ರಶ್ನಿಸಿದ್ದಾರೆ.