ನೀವು ಕರೆ ಮಾಡಿರುವ ಚಂದಾದಾರರೂ….
ಸೋದಿ ಮಾಮಾ ಅಮೆರಿಕಕ್ಕೆ ಬರುತ್ತಿ ದ್ದಾನೆ ಎಂಬ ಸುದ್ದಿ ಬಂದಿದ್ದೇ ತಡ ಬುಡ್ಡೇ ಸಾಬ ಕಮಲಮ್ಮ ಸಿಕ್ಕಾಪಟ್ಟೆ ಖುಷಿಯಾದರು. ಹೇಗೂ ಶ್ರಾವಣಮಾಸ, ವರಮಹಾಲಕ್ಷ್ಮೀ ಹಬ್ಬ ಇದೆ. ಇಂತಹ ಸಂದರ್ಭ ದಲ್ಲಿ ಸೋದಿ ಮಾಮೋರು ಬರುತ್ತಿದ್ದಾರೆ ಎಂದರೆ ಇದು ಒಳ್ಳೆಯ ಲಕ್ಷಣವೇ ಸರಿ ಎಂದು ಕಮಲಮ್ಮ ಊರತುಂಬ ಸುದ್ದಿ ಮಾಡಿದಳು. ತಿನ್ನುವುದಕ್ಕೆ ಬೇಸನ್ನುಂಡಿ, ಕರ್ಚಿಕಾಯಿ, ಸೇರಿದಂತೆ ಅನೇಕ ತಿಂಡಿ ತಿನಿಸುಗಳನ್ನು ತಯಾರು ಮಾಡಿ ಡಬ್ಬದಲ್ಲಿ ತೆಗೆದಿರಿಸಿ ಬುಡ್ಡೇಸಾಬನಿಗೆ ಕಾಲ್ ಮಾಡಿ ಹೇಳಿದಾಗ ಅವರು ಭೇಷ್ ತಂಗಿ ಭೇಷ್ ಎಂದು ಹೇಳಿದಾಗ ಕಮಲಮ್ಮನ ಮುಖದಲ್ಲಿ ಭಯಂಕರ ಮುಗುಳ್ನಗು ಬಂದಿತ್ತು. ಅತ್ತ ಟ್ರಂಪೇಸಿಯು ಸೋದಿ ಮಾಮಾ ಯಾಕೆ ಬರುತ್ತಿದ್ದಾರೆ ಪತ್ತೆ ಹಚ್ಚಿ ಎಂದು ತನ್ನ ಅಸಿಸ್ಟಂಟ್‌ಗೆ ಹೇಳಿದರು. ತಾವೇ ಸೋದಿ ಮಾಮೋರಿಗೆ ಅದೆಷ್ಟು ಸಲ ಕರೆ ಮಾಡಿದರೂ ನೀವು ಕರೆ ಮಾಡಿರುವ ಚಂದಾದಾರರು ಎಂದು ಹೆಣ್ಣುಮಗಳು ವಯ್ಯಾರವಾಗಿ ಹೇಳಿದಾಗ… ನೋಡು ನೋಡು ಮಾಮೋರು ಯಾರದ್ದೋ ಕಡೆ ಫೋನ್ ಕೊಟ್ಟಿದ್ದಾರೆ ಅವರು ಹೇಗೆ ಹೇಳುತ್ತಿದ್ದಾಳೆ ಎಂದು ಪಕ್ಕದಲ್ಲಿದ್ದವರಿಗೆ ಹೇಳಿದ. ತಡಿ ಒಂದು ಐಡಿಯಾ ಮಾಡ್ತೀನಿ ಎಂದು ಹೇಳಿ, ಚೀನಾ ಜಿಂಗೇಸಿಗೆ ಕಾಲ್ ಮಾಡಿ ಸ್ವಲ್ಪ ಮಾಮೋರಿಗೆ ಕಾನ್ ಕಾಲ್ ಹಾಕ್ತೀರಾ ಅಂದಾಗ… ತಡೀ ಎಂದ ಜಿಂಗೇಸಿ ಫೋನನ್ನು ಎಂಗೇಜಿನಲ್ಲಿಟ್ಟು ನಂತರದಲ್ಲಿ..ಇಲ್ಲಿಲ್ಲ ಅವರದ್ದು ಬ್ಯುಸಿ..ಬ್ಯುಸಿ ಬರ್ತಿದೆ ಎಂದು ಹೇಳಿದ. ಅಯ್ಯೋ ಅಂದ ಟ್ರಂಪೇಸಿ… ರಷಿಯಾ ಪುಟ್ಯಾಗೆ ಕಾಲ್ ಮಾಡಿದ ಅವಂದು ಎಂಗೇಜ್ ಬರುತ್ತಿತ್ತು (ಪುಟ್ಯಾಗೆ ಜಿಂಗೇಸಿ ಕಾಲ್ ಮಾಡಿ ಹಿಂಗಿಂಗೆ… ಅಂವ ಮಾಡ್ತಾನೆ ಹಿಂಗೆ ಹೇಳು ಎಂದು ಹೇಳುತ್ತಿದ್ದ) ಮಿಸ್ಡ್ಕಾಲ್ ಅಲರ್ಟ್ ನೋಡಿ… ಟ್ರಂಪೇಸಿಗೆ ವಾಪಸ್ ಮಾಡಿದ ಪುಟ್ಯಾ ಯಾಕಣ ಫೋನ್ ಮಾಡಿದ್ದಿ ಅಂದ. ಏನಿಲ್ಲ ಸ್ವಲ್ಪ ಸೋದಿ ಮಾಮೋರಿಗೆ ಕಾನ್‌ಕಾಲ್ ಹಾಕು..ನನ್ ಫೋನ್ ಎತ್ತಾ ಇಲ್ಲ ಎಂದು ಹೇಳಿದಾಗ..ಪುಟ್ಯಾನೂ ಸಹ..ಅಯ್ಯೋ ಮುಂಜಾನಿಂದ ನನ್ನ ಕಾಲ್ ಎತ್ತಾ ಇಲ್ಲ ಮಾರಾಯಾ…ಯಾವಾಗ ಕಾಲ್ ಮಾಡಿದರೂ ವ್ಯಾಪ್ತಿ ಪ್ರದೇಶದಿಂದ ಹೊರಗೆ ಇದ್ದಾರೆ ಎಂದು ಬರುತ್ತಿದೆ ಎಂದು ಕಾಲ್ ಕಟ್ ಮಾಡಿದ. ಇವರದ್ದು ಇಷ್ಟೇ ಆಯಿತು ಎಂದು ಮತ್ತೆ ಟ್ರಂಪೇಸಿ ಸೋದಿ ಮಾಮಾರಿಗೆ ಕಾಲ್ ಮಾಡಿದ ಆಗಲೂ ಸಹ ನೀವು ಕರೆ ಮಾಡಿರುವ ಚಂದಾದಾರರೂ ಎಂದು ಆ ಹೆಣ್ಣುಮಗಳು ಹೇಳಿದಳು.