ಪರಮೇಶ್ವರ, ರಾಹುಲ್ ಗಾಂಧಿಯಂತೆ ಮಾತನಾಡಬಾರದು
ಹುಬ್ಬಳ್ಳಿ: ಜಿ.ಪರಮೇಶ್ವರ್ ಅವರನ್ನ ನಾವು ಸಜ್ಜನ, ದೇಶ ಮತ್ತು ರಾಜ್ಯದ ಬಗ್ಗೆ ಕಳಕಳಿ ಇರುವವರು ಎಂದು ತಿಳಿದುಕೊಂಡಿದ್ದೇವೆ. ಆದರೆ, ದೇಶದ ಭದ್ರತೆಯ ವಿಚಾರವಾಗಿ ಅವರು ರಾಹುಲ್ ಗಾಂಧಿಯಂತೆ ಚಿಲ್ಲರೆಯಾಗಿ ಮಾತನಾಡುವುದನ್ನ ಬಿಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.
ಹುಬ್ಬಳ್ಳಿಯ ಗೃಹ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿನ ಪಾಕಿಸ್ತಾನಿ ಪ್ರಜೆಗಳನ್ನು ಪತ್ತೆ ಹಚ್ಚುವಲ್ಲಿ ಕೇಂದ್ರ ತನಿಖಾ ತಂಡಗಳು ವಿಫಲವಾಗಿವೆ ಎಂದು ಡಾ. ಪರಮೇಶ್ವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ನುಸುಳುಕೊರರು ಭಾರತಕ್ಕೆ ನುಗ್ಗುವದನ್ನು ಕಡಿವಾಣ ಹಾಕಿದ್ದೆ ಬಿಜೆಪಿ ಸರ್ಕಾರ. ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಬೆಂಗಳೂರು, ಹೈದ್ರಾಬಾದ್, ಮುಂಬೈ, ಹುಬ್ಬಳ್ಳಿ ಸೇರಿದಂತೆ ಅನೇಕ ಕಡೆ ಬಾಂಬ್ ಬ್ಲಾಸ್ಟ್‌ಗಳಾಗಿವೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇವಕ್ಕೆಲ್ಲ ಕಡಿವಾಣ ಬಿದ್ದಿದೆ. ಈ ವಿಷಯದಲ್ಲಿ ನಾವು ರಾಜಕಾರಣ ಮಾಡಿಲ್ಲ ಎಂದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಎಷ್ಟು ನುಸುಳುಕೊರರು ಭಾರತಕ್ಕೆ ಬಂದಿದ್ದಾರೆ. ಎಷ್ಟು ಭಯೋತ್ಪಾದನಾ ಚಟುವಟಿಕೆಗಳಾಗಿವೆ. ಎಲ್ಲೆಲ್ಲಿ ಬಾಂಬ್ ಬ್ಲಾಸ್ಟ್‌ಗಳಾಗಿವೆ ಎಂಬುದನ್ನು ಗೃಹ ಸಚಿವ ಪರಮೇಶ್ವರ ತಿಳಿದುಕೊಳ್ಳಬೇಕು ಎಂದರು.
ಜಿ.ಟಿ.ದೇವೇಗೌಡ ಅವರ ಹೇಳಿಕೆಯಿಂದ ಬಿಜೆಪಿಗೆ ಏನೂ ಡ್ಯಾಮೇಜ್ ಆಗೋಲ್ಲ. ಜಿ.ಟಿ.ದೇವೇಗೌಡ ಮೊನ್ನೆ ಮೊನ್ನೆವರೆಗೆ ಸಿದ್ದರಾಮಯ್ಯ ಮತ್ತು ಅವರ ಸರ್ಕಾರದ ವಿರುದ್ಧ ಮಾತನಾಡಿದ್ದರು. ಈಗ ಏಕಾಏಕಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಜೆಡಿಎಸ್ ನಲ್ಲಿ ಸ್ಥಾನಮಾನ, ಟಿಕೆಟ್, ಮಂತ್ರಿ ಸ್ಥಾನ ಸಿಗದ ಕಾರಣ ಹತಾಶರಾಗಿ ಅವರು ಮಾತನಾಡುತ್ತಿದ್ದಾರೆ. ಪಕ್ಷದ ವಿರುದ್ಧ ಮಾತನಾಡುವುದು, ಪಕ್ಷ ಬಿಡುವ ಕೆಲಸ ಮಾಡುತ್ತಾರೆ. ಈಗ ರಾಜ್ಯ ಸರ್ಕಾರದ ವಿರುದ್ಧ ಮುಡಾ ಮತ್ತು ವಾಲ್ಮೀಕಿ ಹಗರಣ ಕೇಳಿ ಬಂದಿವೆ.
ಇಂತಹ ಸಮಯದಲ್ಲಿ ಜಿ.ಟಿ.ದೇವೇಗೌಡ್ರ ಹೇಳಿಕೆ ಸರಿಯಲ್ಲ ಎಂದರು.