ಪಾದಯಾತ್ರೆಯಲ್ಲಿ ಕಲೆಪ್ರದರ್ಶನ
ಈ ಪಾದಯಾತ್ರೆ ಮತ್ತು ಸಮಾವೇಶದಿಂದಾಗಿ ದೊಡ್ಡ ಕಲೆ ಪ್ರದರ್ಶನ ವಾದಂತಾಯಿತು. ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅವರು ಹೊರಹಾಕಿದ ಪರಿ ಇದೆಯಲ್ಲ… ಎಂತಹ ಅವಾರ್ಡ್ ಕೊಟ್ಟರೂ ಕಡಿಮೆಯೇ. ಅದೇನು ಮಾತುಗಳು…. ದಿಟ್ಟೋ ಹಾವ ಭಾವ ಭಂಗಿ, ಅಂತಹ ಮಿಮಿಕ್ರಿಯನ್ನು ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಮಳೆ- ಗಾಳಿ, ಶೀತವಾತಾವರಣದಿಂದ ಗಂಟಲಲ್ಲಿ ಕೀಚ್.. ಕೀಚ್ ಅನ್ನುತ್ತಿದ್ದರೂ ಅದೆಷ್ಟು ದೊಡ್ಡ ಧ್ವನಿಯಲ್ಲಿ ಒದರಿದರು. ಇದು ಒಬ್ಬ ಒಳ್ಳೆಯ ಕಲಾವಿದನಿಗೆ ಇರುವ ಲಕ್ಷಣ ಎಂದು ಅನೇಕ ತಜ್ಞರು ಮಾತನಾಡಿಕೊಂಡರು. ಎಲ್ಲರೂ ಎಲ್ಲ ಪದಗಳನ್ನೂ ಬಳಸುತ್ತಾರೆ. ಆದರೆ ನಿನ್ನೆ ಆ ಬಂಡೆಸಿವು ಆಡಿದ ಮಾತುಗಳನ್ನು ಕೇಳಿ ಅನೇಕರು ದಂಗಾಗಿ ಹೋದರು. ಯಾವ ಬಬ್ರುವಾಹನನೂ ಆತನ ಮುಂದೆ ಹತ್ತುತ್ತಿರಲಿಲ್ಲ. ಮರುದಿನ ಸುಮಾರಣ್ಣನವರು… ಅಬ್ಬಬ್ಬ… ಅದೆಂತಹ ಮಾತುಗಳು… ಇವರಿಬ್ಬರ ಭಾರೀ ಡೈಲಾಗ್ ನೋಡಿ…ಓ ಇವರು ಹಿಂದಕ್ಕೆ ಭೀಮಾರ್ಜುನರ ಕಾಳಗದಲ್ಲಿ ಪಾರ್ಟು ಮಾಡಿದ್ದರೇನೋ ಎಂದು ಅಂದುಕೊಂಡರು. ಆ ಧ್ವನಿಗಳ ಏರಿಳಿತ… ಮುಖದಲ್ಲಿನ ಭಾವ ಇವೆಲ್ಲವೂ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿತ್ತು. ಮಧ್ಯಮ ಕಲಾವಿದರದ್ದು ಹೀಗಾದರೆ… ಹಿರಿಯ ಕಲಾವಿದರಾದ ಮದ್ರಾಮಣ್ಣ-ಸಿಟ್ಯೂರಪ್ಪನವರದ್ದಂತೂ ಕೇಳಲೇಬೇಡಿ. ಮದ್ರಾಮಣ್ಣ ತಮ್ಮ ಹರೆಯದ ದಿನಗಳಲ್ಲಿ ಬಾಯಿಪಾಟ ಮಾಡಿದ್ದ ನಾಟಕದ ಪದಗಳನ್ನು ಒಂದೊಂದಾಗಿ ಬಿಚ್ಚುಡುತ್ತಿದ್ದರು… ಒಂದೊಂದೇ ಡೈಲಾಗು… ಉರಿ..ಉರಿ.. ಅವರಿಗೆ ಹೊಟ್ಟೆ ಉರಿ ಎಂದು ಮುಖದ ಭಾವ ಬದಲಿ ಬದಲಿ ಮಾಡಿ ಹೇಳುತ್ತಿದ್ದರೆ ಜನರ ಭಾವನೆಗಳು ಮಡುಗಟ್ಟಿ ಕಣ್ಣಲ್ಲಿ ತಟ್..ತಟ್ ಎಂದು ನೀರುಕ್ಕುತ್ತಿತ್ತು. ಅಲ್ಲದೇ ಈ ಸಮಾಪಾದಯಾತ್ರೆಯಲ್ಲಿ ಅನೇಕ ಬಾಲಕಲಾವಿದರು ಪ್ರವರ್ಧಮಾನಕ್ಕೆ ಬರುವ ಲಕ್ಷಣಗಳು ಇವೆ. ಅಲ್ಲದೇ ಇಂತಹ ಸಂದರ್ಭದಲ್ಲಿ ಪೋಸ್ಟರ್‌ಗಳಿಗೆ ಬೆಂಕಿಯನ್ನು ಹೇಗೆ ಹಚ್ಚಬೇಕು ಎನ್ನುವುದನ್ನೂ ಸ್ವಲ್ಪ ಮಟ್ಟಿಗೆ ಕಲಿಸಿಕೊಡಲಾಯಿತು. ಕೆಲವರು ಅಯ್ಯೋ ಅಂದರು.. ಇನ್ನೂ ಹಲವರು ಇದೆಂತಹುದು ಅಂದರು. ಒಟ್ಟಾರೆಯಾಗಿ ಯಾಕ್ರಯ್ಯ ಹಿಂಗೆ ಎಂದು ಇಬ್ಬರನ್ನೂ ನಿಲ್ಲಿಸಿ ಕೇಳಿದರೆ… ಜಗತ್ತೇ ಒಂದು ರಂಗಭೂಮಿ ನಾವು ನೀವು ಪಾತ್ರಧಾರಿಗಳು ಅಷ್ಟೇ…. ಎಂದು ಶೆಕ್ಸಪಿಯರ್‌ನ ಹೇಳಿಕೆ ಹೇಳಿ ಸುಮ್ಮನಾಗುತ್ತಿದ್ದಾರೆ.