For the best experience, open
https://m.samyuktakarnataka.in
on your mobile browser.

ಪಿತ್ರಾರ್ಜಿತ, ಸ್ವಯಾರ್ಜಿತ ಆಸ್ತಿ ನಡುವಿನ ಅಂತರ

07:10 AM Dec 07, 2024 IST | Samyukta Karnataka
ಪಿತ್ರಾರ್ಜಿತ  ಸ್ವಯಾರ್ಜಿತ ಆಸ್ತಿ ನಡುವಿನ ಅಂತರ

ವಾದಿಯರ ಪರ ವಕೀಲರು ಆವೇಶದಿಂದ ತಮ್ಮ ವಾದವನ್ನು ಅಚ್ಚ ಕನ್ನಡದಲ್ಲಿ ಕೋರ್ಟ್ ಹಾಲ್ ರಿಂಗನಿಸುವಂತೆ ಮಂಡಿಸುತ್ತಿದ್ದರು. ಬೇರೆ ಪ್ರಕರಣಗಳಲ್ಲಿ ಬಂದ ಕಕ್ಷಿದಾರರರು ಕೋರ್ಟ್ ಹಾಲ್ ಬಾಗಿಲು ಬಳಿ ಬಂದು ಇಣುಕಿ ನೋಡಿ ಕೇಳುತ್ತಿದ್ದರು. ಅದೊಂದು ವಿಭಜನೆ ಮತ್ತು ಪ್ರತ್ಯೇಕ ಸ್ವಾಧೀನ ಕುರಿತು ದಾವೆ. ಪ್ರತಿವಾದಿ ಕಕ್ಷಿದಾರರ ಬೇಡಿಕೆಯನ್ನು ವಾದಿಯ ಮೇಲೆ ಭಾರ ಹೇರಿ, ಸುಮ್ಮನೆ ಕುಳಿತು ವಾದವನ್ನು ಕೇಳುತ್ತ, ನೋಟ್ಸ್ ದಾಖಲಿಸುತ್ತ ಕುಳಿತಿದ್ದೆ.
ವಾದಿ ಪರ ವಕೀಲರು ವಾದಿಸುತ್ತ, ಯುವರ್ ಆನರ್, ವಾದಿಯ ದಾವೆಯ ಸಂಗತಿಗಳು ಏನೆಂದರೆ, ವಾದಿ ಪ್ರತಿವಾದಿಯರ ಮೂಲ ಪುರುಷ ರಾಮದೇವ ಬಹಳ ವರ್ಷಗಳ ಹಿಂದೆ ಮೃತನಾಗಿದ್ದಾನೆ. ಮೃತನಿಗೆ ಹೆಂಡತಿ ಮತ್ತು ವಿಷ್ಣು ಶ್ಯಾಮ, ಸಂಕೇತ, ಸಾಗರ, ವಾದಿ ರಾಜೇಶ ಅನ್ನುವ ನಾಲ್ಕು ಜನ ಗಂಡು ಮಕ್ಕಳು ಮತ್ತು ಅನಸೂಯಾ ಅನ್ನುವ ಒಬ್ಬಳು ಹೆಣ್ಣು ಮಗಳು. (ಎಲ್ಲ ಹೆಸರುಗಳನ್ನು ಬದಲಾಯಿಸಲಾಗಿದೆ) ರಾಮದೇವ ಮೃತನಾಗಿದ್ದಾಗ ಹಿರಿಯ ಮಗ ವಿಷ್ಣು (ಕಕ್ಷಿದಾರ)ನನ್ನು ಹೊರತುಪಡಿಸಿ ಉಳಿದೆಲ್ಲ ಮಕ್ಕಳು ಮೈನರ್ ಆಗಿದ್ದರು. ಮೈನರ್ ಮಕ್ಕಳಿಗೆ ತಾಯಿ ಮೈನರ್ ಗಾರ್ಡಿಯನ್ ಆಗಿದ್ದಳು. ಮೂಲ ಪುರುಷ ರಾಮದೇವ ಮೃತನಾದ ನಂತರ ಅವನ ಹೆಂಡತಿ, ಮಕ್ಕಳ ಹೆಸರುಗಳು, ಕುಟುಂಬದ ಆಸ್ತಿಗಳ ದಾಖಲೆಗಳಲ್ಲಿ ದಾಖಲಾದವು. ಕೊನೆಯ ಮಗ ವಾದಿ ರಾಜೇಶ ತನ್ನ ಪಿತ್ರಾರ್ಜಿತ ಸ್ವತ್ತುಗಳಲ್ಲದೆ, ತನ್ನ ಮೃತ ಸಹೋದರರಾದ ಸಂಕೇತ ಹಾಗೂ ಸಾಗರ ಖರೀದಿಸಿದ ಆಸ್ತಿಗಳಲ್ಲಿ ಹಿಸ್ಸೆ ಕೇಳಿ ಈ ದಾವೆಯನ್ನು ದಾಖಲಿಸಿದ್ದಾನೆ. ಕೊನೆಯ ಮಗ ವಾದಿ ರಾಜೇಶ, ಅಶಿಕ್ಷಿತನಾಗಿ ಜಂಟಿ ಆಸ್ತಿಗಳನ್ನು ಉಸ್ತುವಾರಿ ಮಾಡಿಕೊಂಡು ಊರಲ್ಲಿಯೇ ಉಳಿದನು. ಮೂರು ಜನ ಸಹೋದರರು ಬೇರೆ ಬೇರೆ ಕಡೆ ನೆಲೆಗೊಂಡಿರುತ್ತಾರೆ. ಮೊದಲ ಮಗ ಶ್ಯಾಮ, ಕೊನೆಯ ಮಗ ವಾದಿ ರಾಜೇಶ ಯಾವುದೇ ಆಸ್ತಿ ಸಂಪಾದಿಸಿಲ್ಲ. ವಾದಿ ರಾಜೇಶನ ವಾದ ಏನೆಂದರೆ, ಸಂಕೇತ ಮತ್ತು ಸಾಗರ ಸಂಪಾದಿಸಿದ ಸ್ವತ್ತುಗಳು ಕೂಡ ಐದು ಜನರ ಜಂಟಿ ಕುಟುಂಬದ ಆಸ್ತಿಗಳು. ಜಂಟಿ ಜಮೀನಿನ ಉತ್ಪನ್ನದಿಂದ ವಾದಿ ಹಾಗೂ ಇತರರು ದುಡಿದು ಗಳಿಸಿದ ಹಣದಿಂದ ಇಬ್ಬರು ಸಹೋದರರ ಹೆಸರಿನಲ್ಲಿ ಖರೀದಿಸಿದ್ದೇವೆ, ಆದ್ದರಿಂದ ಜಂಟಿ ಆಸ್ತಿಗಳು ಮತ್ತು ಇಬ್ಬರು ಮೃತ ಸಹೋದರ ಹೆಸರಿನಲ್ಲಿ ಖರೀದಿಸಿದ ಆಸ್ತಿಗಳಲ್ಲಿ ಸಮನಾಗಿ ವಿಭಜನೆ ಆಗಬೇಕು ಎಂದು ಪ್ರಾರ್ಥಿಸಿ ಈ ದಾವೆ ಮಾಡಿದ್ದಾನೆ. ವಾದ ಮುಂದುವರಿಸಿ, ಯುವರ್ ಆನರ್, ಪ್ರತಿವಾದಿ ಶ್ಯಾಮ ವಾದಿಯ ದಾವೆಯನ್ನು ಅನುಸರಿಸಿ ತಕರಾರು/ ಕೈಫಿಯತ್ ಸಲ್ಲಿಸಿ ದಾವೆ ಆಸ್ತಿಗಳಲ್ಲಿ ಸಮಪಾಲು ಕೇಳಿದ್ದಾನೆ. ಹೆಣ್ಣು ಮಗಳು ಅನಸೂಯಾ ಗೈರುಹಾಜರು ಉಳಿದಿದ್ದಾಳೆ. ಮೃತ ಸಹೋದರ ಸಾಗರ ಮತ್ತು ಸಂಕೇತನ ವಾರಸುದಾರರು ತಕರಾರು/ ಕೈಫಿಯತ್ ಸಲ್ಲಿಸಿ ಸಂಕೇತ, ಸಾಗರ ತಮ್ಮ ನೌಕರಿಯಿಂದ ಬಂದ ಸಂಬಳದಲ್ಲಿ ಉಳಿಸಿ ಬೇರೆ ಬೇರೆ ಊರುಗಳಲ್ಲಿ ಮನೆ ಜಮೀನು ಖರೀದಿಸಿದ್ದಾರೆ, ಅವುಗಳು ಅವರ ಸ್ವಯಾರ್ಜಿತ ಆಸ್ತಿಗಳು. ಸಂಕೇತ ಮೃತನಾದ ನಂತರ ಮಕ್ಕಳು ತಂದೆಯ ಆಸ್ತಿಗಳನ್ನು ನೋಂದಾಯಿತ ವಿಭಜನೆ ಪತ್ರದ ಮೂಲಕ ಬೇರೆ ಬೇರೆ ಮಾಡಿಕೊಂಡು ವಾಸಿಸುತ್ತಿದ್ದಾರೆ. ಸಾಗರ ಮೃತನಾದ ನಂತರ ಅವನ ಹೆಂಡತಿ ಮಕ್ಕಳು, ಸಾಗರನ ಹೆಸರಲ್ಲಿರುವ ಆಸ್ತಿಗಳಿಗೆ ತಮ್ಮ ತಮ್ಮ ಹೆಸರುಗಳನ್ನು ದಾಖಲಿಸಿಕೊಂಡಿದ್ದಾರೆ. ಮಗಳು ಅನಸೂಯಾ ತನ್ನ ಗಂಡನ ಮನೆಯಲ್ಲಿ ಸುಖವಾಗಿದ್ದಾಳೆ. ವಾದಿಗೆ ಜಂಟಿ ಕುಟುಂಬದ ಆಸ್ತಿಗಳಲ್ಲಿ ಮಾತ್ರ ಸಮನಾದ ಹಿಸ್ಸೆ ಇರುತ್ತದೆ. ವಾದಿ ಹಾಗೂ ಒಂದನೆ ಪ್ರತಿವಾದಿ ಶ್ಯಾಮಗೆ, ಸಂಕೇತ ಮತ್ತು ಸಾಗರ ಇವರ ಆಸ್ತಿಗಳಲ್ಲಿ ಹಿಸ್ಸೇ ಇರುವುದಿಲ್ಲ ಎಂದು ವಾದಿಸಿದರು. ಮತ್ತೆ ಮುಂದುವರಿದು, ಯುವರ್ ಆನರ್, ಈ ದಾವೆಯಲ್ಲಿ ವಾದಿಯು ತನ್ನ ಹಾಗೂ ತನ್ನ ಪರವಾಗಿ ಮೂರು ಜನರ ಸಾಕ್ಷಿಯನ್ನು ಮಂಡಿಸಿದ್ದಾನೆ. ಎಲ್ಲ ಸಾಕ್ಷಿದಾರರು ಸ್ಪಷ್ಟವಾಗಿ ದಾವೆಯ ಆಸ್ತಿಗಳು ಅಂದರೆ ವಾದಿಯ ತಂದೆಯಿಂದ ಬಂದಂತಹ ಆಸ್ತಿಗಳು, ಸಾಗರ ಮತ್ತು ಸಂಕೇತ ಸಹೋದರರು ಗಳಿಸಿದ ಆಸ್ತಿಗಳು ಜಂಟಿ ಕುಟುಂಬದ ಎಂದು ನುಡಿದಿದ್ದಾರೆ. ಆದ್ದರಿಂದ ನ್ಯಾಯಾಲಯವು ವಾದಿಯ ದಾವೆಯನ್ನು ಡಿಕ್ರಿಗೊಳಿಸಿ, ಸಮಪಾಲು ನೀಡಲು ಆದೇಶ ಮಾಡಲು ವಿನಂತಿಸಿಕೊಂಡು ತಮ್ಮ ವಾದಕ್ಕೆ ವಿರಾಮ ಹೇಳಿದರು.
ಸಂಕೇತ ಮತ್ತು ಸಾಗರನ ವಾರಸುದಾರ ಪ್ರತಿವಾದಿಯರ ಪರ ವಕೀಲರು ತಮ್ಮ ವಾದವನ್ನು ಮಂಡಿ ಸುತ್ತ, ವಾದಿ ಪ್ರತಿವಾದಿಯರ ತಂದೆ ರಾಮದೇವ ಮೃತನಾದ ನಂತರ, ಮೊದಲ ಮಗ ಶ್ಯಾಮ, ಸಂಕೇತ, ಸಾಗರ ವಿದ್ಯೆ ಪಡೆದು, ನೌಕರಿ ದೊರಕಿಸಿಕೊಂಡು ಬೇರೆ ಬೇರೆ ಊರುಗಳಲ್ಲಿ ನೆಲೆಗೊಂಡಿದ್ದಾರೆ. ಸಾಗರ ಮತ್ತು ಸಂಕೇತ ತಮ್ಮ ಮಕ್ಕಳಿಗೂ ಕೂಡ ಒಳ್ಳೆಯ ವಿದ್ಯಾಭ್ಯಾಸವನ್ನು ನೀಡಿ ಅವರಿಗೂ ಒಳ್ಳೆಯ ಸರ್ಕಾರಿ ಹುದ್ದೆ ಕೊಡಿಸಿದ್ದಾರೆ. ತಂದೆ ಮಕ್ಕಳು ತಮ್ಮ ಸ್ವ ಸಂಪಾದನೆಯಿಂದ ತಮ್ಮ ತಂದೆ ಹೆಸರುಗಳಲ್ಲಿ ಆಸ್ತಿಗಳನ್ನು ಗಳಿಸಿದ್ದಾರೆ. ಸಂಕೇತ ಮತ್ತು ಸಾಗರ ಹೆಸರಿನಲ್ಲಿದ್ದ ಆಸ್ತಿಗಳು ಸ್ವ ಸಂಪಾದನೆಯ ಆಸ್ತಿಗಳು. ಆ ಆಸ್ತಿಗಳಲ್ಲಿ ವಾದಿಗೆ ಹಾಗೂ ಹಿರಿಯ ಮಗ ಶಾಮ ಮಗಳು ಅನುಸೂಯಾಳಿಗೆ ಯಾವುದೇ ಹಕ್ಕು ಇರುವುದಿಲ್ಲ. ವಾದಿಯು ವಾದಿಸುವಂತೆ ಜಂಟಿ ಕುಟುಂಬದ ಸದಸ್ಯರು ತಮ್ಮ ಸಂಪಾದನೆಯಿಂದ ಸಾಗರ ಹಾಗೂ ಸಂಕೇತನ ಹೆಸರಿನಲ್ಲಿ ಜಮೀನು ಸಂಪಾದಿಸಿದ್ದಾರೆ ಅನ್ನುವ ವಾದದಲ್ಲಿ ಯಾವುದೇ ಹುರುಳು ಇರುವುದಿಲ್ಲ. ಸಾಗರ ಮತ್ತು ಸಂಕೇತ ಆಸ್ತಿ ಖರೀದಿಸಿದ ಸಮಯದಲ್ಲಿ ವಾದಿ ಮೈನರ್ ಇದ್ದನು. ವಾದಿಯು ಕೆಟ್ಟ ಚಟಗಳಿಗೆ ಅಂಟಿಕೊಂಡಿದ್ದು, ಜಂಟಿ ಕುಟುಂಬದ ಉತ್ಪನ್ನವನ್ನು ತನ್ನ ಸಹೋದರರಿಗೆ ಹಾಗೂ ಸಹೋದರನ ಮಕ್ಕಳಿಗೆ ಕೊಟ್ಟಿರುವುದಿಲ್ಲ ಅದನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಜಂಟಿ ಕುಟುಂಬದ ಸದಸ್ಯರು ಸಾಗರ ಮತ್ತು ಸಂಕೇತನ ಹೆಸರಿನಲ್ಲಿ ಜಮೀನು ಗಳಿಸಿದ್ದಾರೆ ಅನ್ನುವ ವಾದದಲ್ಲಿ ಗಟ್ಟಿತನ ಇರುವುದಿಲ್ಲ. ಈ ರೀತಿಯಾದ ವಾದದಲ್ಲಿ ಪ್ರಬಲವಾದ, ಕಾನೂನುಬದ್ಧ ಲಿಖಿತ, ಮೌಖಿಕ, ನಂಬುವಂತಹ ಸಾಕ್ಷ್ಯಾಧಾರ ಇರುವುದಿಲ್ಲ. ಆದ್ದರಿಂದ ಜಂಟಿ ಕುಟುಂಬದಲ್ಲಿ ಸಂಕೇತ ಮತ್ತು ಸಾಗರನ ವಾರಸುದಾರರಿಗೆ ಜಂಟಿ ಕುಟುಂಬದ ಆಸ್ತಿಗಳಲ್ಲಿ ಸಮ ಹಿಸ್ಸೆ ನೀಡಿ ಆದೇಶ ಮಾಡಬೇಕು ಮತ್ತು ಸಾಗರ ಮತ್ತು ಸಂಕೇತನ ಹೆಸರಿನಲ್ಲಿ ಇರುವ ಆಸ್ತಿಗಳ ಸಂಬಂಧ ವಾದಿಯ ದಾವೆಯನ್ನು ಖರ್ಚು ಸಹಿತ ವಜಾಗೊಳಿಸಬೇಕು ಎಂದು ದೀರ್ಘ ವಾದ ಮಂಡಿಸಿ, ಮುಕ್ತಾಯಗೊಳಿಸಿದರು.
ನ್ಯಾಯಾಲಯವು ವಾದಿ ಮತ್ತು ಪ್ರತಿವಾದಿ ಪರ ವಕೀಲರ ಸುದೀರ್ಘವಾದ ವಾದವನ್ನು ಆಲಿಸಿ ಅಂತಿಮ ತೀರ್ಪನ್ನು ನೀಡುತ್ತ, ವಾದಿ ದಾವೆಯನ್ನು ಭಾಗಶಃ ಡಿಕ್ರಿಗೊಳಿಸಿ, ಜಂಟಿ ಕುಟುಂಬದ ಸ್ವತ್ತಿನಲ್ಲಿ ಸಮ ಹಿಸ್ಸೆ ನೀಡಿ, ಸಾಗರ ಮತ್ತು ಸಂಕೇತ ಗಳಿಸಿದ ಆಸ್ತಿಗಳ ಸಂಬಂಧ ದಾವೆಯನ್ನು ವಜಾಗೊಳಿಸಿದರು. ನ್ಯಾಯಾಲಯವು ತಮ್ಮ ತೀರ್ಪಿನಲ್ಲಿ, ವಾದಿಯು ಕೇಳಿಕೊಂಡಂತೆ ತನ್ನ ಇಬ್ಬರು ಸಹೋದರರು ಗಳಿಸಿದ ಆಸ್ತಿ ಜಂಟಿ ಕುಟುಂಬದ ಆಸ್ತಿ ಎಂದು ರುಜುವಾತುಪಡಿಸಲು ವಿಫಲರಾಗಿದ್ದಾನೆ. ಎಲ್ಲ ಜಂಟಿ ಕುಟುಂಬದ ಸದಸ್ಯರು, ಒಬ್ಬ ಸದಸ್ಯನ ಹೆಸರಿನಲ್ಲಿ ಆಸ್ತಿಯನ್ನು ಗಳಿಸಿದ್ದಾರೆ ಅನ್ನುವ ಸಂದರ್ಭದಲ್ಲಿ ಪ್ರತಿಯೊಂದು ವಿವರವಾದ ಸಾಕ್ಷ್ಯಾಧಾರ ಬೇಕಾಗುತ್ತದೆ. ಈ ಪ್ರಕರಣದಲ್ಲಿ ವಾದಿಯು ತನ್ನ ಸಹೋದರರು ಆಸ್ತಿಯನ್ನು ಖರೀದಿಸಿದ ಸಮಯದಲ್ಲಿ ಇನ್ನೂ ಮೈನರ್‌ರಿದ್ದನ್ನು ಅನ್ನುವುದು ಸ್ಪಷ್ಟವಾಗುತ್ತದೆ. ಅಲ್ಲದೆ ಜಂಟಿ ಕುಟುಂಬದ ಆಸ್ತಿಗಳು ಫಲವತ್ತಾದ ಭೂಮಿಗಳಲ್ಲ, ಅವುಗಳಿಂದ ಯಾವುದೇ ಉತ್ಪನ್ನ ಬರುವುದಿಲ್ಲ ಅನ್ನುವದು ಸ್ಪಷ್ಟವಾಗಿದೆ. ಆದ್ದರಿಂದ ಸಾಗರ ಮತ್ತು ಸಂಕೇತ ಖರೀದಿಸಿದ ಆಸ್ತಿಗಳು ಜಂಟಿ ಕುಟುಂಬದ ಆಸ್ತಿಗಳು ಎಂದು ಪರಿಗಣಿಸಲಾಗುವುದಿಲ್ಲವೆಂದು ಅಭಿಪ್ರಾಯಪಟ್ಟಿತು.
ಜಂಟಿ ಕುಟುಂಬದ ಆಸ್ತಿಗಳಲ್ಲಿ, ವಾರಸುದಾರಿಕೆಯಿಂದ ಬಂದ ಆಸ್ತಿಗಳೆಂದು ರುಜುವಾತುಪಡಿಸುವುದು ಸುಲಭ ಸಾಧ್ಯ. ಆದರೆ ಕೆಲವು ಸದಸ್ಯರ ಹೆಸರಿನಲ್ಲಿ ಗಳಿಸಿದ ಆಸ್ತಿಗಳು, ಜಂಟಿ ಕುಟುಂಬದ ಆಸ್ತಿಗಳು ಎಂದು ರುಜುವಾತುಪಡಿಸುವುದು ಸುಲಭವಲ್ಲ. ಅದಕ್ಕೆ ಬಲವಾದ, ನಂಬುವಂತ ಲಿಖಿತ ಮೌಖಿಕ ಸಾಕ್ಷ್ಯಾಧಾರ, ಪುರಾವೆ ಬೇಕಾಗುತ್ತವೆ.