ಪೂರ್ಣಾವಧಿಗೆ ಸಿಎಂ ಆಗಿ: ಡಿಕೆಶಿಗೆ ರಾಜಣ್ಣ ಸಲಹೆ
ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಸ್ತುತ ಸರ್ಕಾರದಲ್ಲಿ ಉಳಿದ ಎರಡೂವರೆ ವರ್ಷಗಳ ಅವಧಿಗಾಗಿ ಸಿಎಂ ಹುದ್ದೆಯ ಮೇಲೆ ಕಣ್ಣಿಡುವ ಬದಲು, ತಮ್ಮ ನಾಯಕತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಪೂರ್ಣಾವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಸಚಿವ ಕೆ.ಎನ್. ರಾಜಣ್ಣ ಸಲಹೆ ನೀಡಿದ್ದಾರೆ.
ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರ, ಏಪ್ರಿಲ್ ಬಳಿಕ ರಾಜ್ಯದಲ್ಲಿ “ಅಧಿಕಾರ ಹಂಚಿಕೆ” ಸೂತ್ರದಡಿಯಲ್ಲಿ ನಾಯಕತ್ವ ಬದಲಾವಣೆಯಾಗುವ ಸಾಧ್ಯತೆ ಇದೆ ಎಂಬ ವದಂತಿಗಳ ನಡುವೆ ರಾಜಣ್ಣ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಒಬ್ಬ ರಾಜಕಾರಣಿಯಾಗಿ, ಡಿಕೆಶಿ ಅವರಿಗೆ ಅಧಿಕಾರದ ಆಸಕ್ತಿ ಅಥವಾ ಆಸೆ ಇರುವುದು ತಪ್ಪಲ್ಲ. ೨೦೨೩ ಚುನಾವಣೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನೇತೃತ್ವದಲ್ಲಿ ನಡೆದು ರಾಜ್ಯದ ಜನರು ಆಶೀರ್ವಾದ ಮಾಡಿದ್ದಾರೆ. ಹೈಕಮಾಂಡ್ ಬಯಸಿದರೆ ಭವಿಷ್ಯದಲ್ಲಿ ನಾಯಕನನ್ನು ಬದಲಾಯಿಸಬಹುದು. ವರಿಷ್ಠರು ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ ಎಂದರು.
ಶಿವಕುಮಾರ್ ಅವರ ನೇತೃತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಎದುರಿಸಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರೋಣ. ಬಳಿಕ ಅವರು ಪೂರ್ಣ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರಲಿ, ಈಗ ಎರಡೂವರೆ ವರ್ಷಕ್ಕಾಗಿ ಏಕೆ ಹೋರಾಡಬೇಕು? ಕೇವಲ ಎರಡೂವರೆ ವರ್ಷ ಅಧಿಕಾರಕ್ಕಾಗಿ ಹೋರಾಡಬೇಡಿ. ಐದು ವರ್ಷ ಪೂರ್ಣಾವಧಿ ಸಿಎಂ ಆಗಲು ಹೋರಾಡಿ ಎಂದು ಅವರಿಗೆ ನಾನು ಪ್ರಾಮಾಣಿಕ ಸಲಹೆ ನೀಡುತ್ತೇನೆ ಎಂದು ರಾಜಣ್ಣ ಹೇಳಿದರು.
ಶಿವಕುಮಾರ ಅವರ ಸಂಪುಟದಲ್ಲಿ ಅವಕಾಶ ಸಿಕ್ಕರೆ ಸಚಿವರಾಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜಣ್ಣ, ಇನ್ನು ಮುಂದೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಮತ್ತು ಯಾರ ಸಂಪುಟದಲ್ಲೂ ಸಚಿವನಾಗುವ ಅಪೇಕ್ಷೆಯೂ ಇಲ್ಲ ಎಂದರು.