For the best experience, open
https://m.samyuktakarnataka.in
on your mobile browser.

ಪ್ಯಾಕೇಜ್-ಕ್ಯಾಬೇಜ್

03:00 AM Nov 16, 2024 IST | Samyukta Karnataka
ಪ್ಯಾಕೇಜ್ ಕ್ಯಾಬೇಜ್

ತಿರುಕೇಸಿಯ ಮಗ ತಿರಬೋಕಿಗೆ ಕೆಲಸ ಸಿಕ್ಕು ಊರತುಂಬ ಊಟ ಹಾಕಿಸಲು ಮುಂದಾಗಿದ್ದ. ಊರಲ್ಲಿ ನಾನು ಅಂದರೆ ದೊಡ್ಡ ಮರ್ಯಾದೆ ಇದೆ. ಜನರೆಲ್ಲ ಆತನಿಗೆ ಕೆಲಸ ಸಿಕ್ಕಿದ್ದು ನಮಗೇನು ಖುಷಿನೇ ಕೊಡಲಿಲ್ಲ ಅನ್ನಬಾರದಲ್ಲವೇ? ಸಾಲ ಮಾಡಿದರೂ ಪರವಾಯಿಲ್ಲ ನಾನು ಮಾತ್ರ ಊರೂಟ ಹಾಕಸುತ್ತೇನೆ ಎಂದು ತಿರುಕೇಸಿ ನಿರ್ಧಾರ ಮಾಡಿದ್ದ. ಮಗ ದೂರದ ಊರಿನಲ್ಲಿ ಕುಳಿತು ನನಗೆ ಕೆಲಸ ಸಿಕ್ಕಿದೆ ಎಂದು ಹೇಳಿದಾಗಿನಿಂದ ತಿರುಕೇಸಿಯು ಊರು ಪರ ಊರುಗಳಲ್ಲಿದ್ದ ಜನರಿಗೆ ಹೇಳಿಕೊಂಡು ಬಂದ. ಮಗನಿಗೆ ಕೆಲಸ ಸಿಕ್ಕ ಖುಷಿಯಲ್ಲಿ ಆತ ಊರೂಟ ಹಾಕಿಸಬೇಕು ಎಂದು ನಿರ್ಧರಿಸಿ ಅಡುಗಿ ತಿಮ್ಮಣ್ಣನನ್ನು ಭೇಟಿಯಾಗಿ ಇಂಗಿಂಗೆ ನಾನು ಊರೂಟ ಹಾಕಿಸುತ್ತೇನೆ ಎಷ್ಟು ಖರ್ಚಾಗಬಹುದು ಎಂದು ಕೇಳಿದ. ತಿಮ್ಮಣ್ಣನು ಕ್ಯಾಲ್ಕುಲೇಟರ್ ತೆಗೆದುಕೊಂಡು ಲೆಕ್ಕಹಾಕಿ ಹೆಚ್ಚುಕಡಿಮಿ ಇಷ್ಟು ಎಂದು ಹೇಳಿದ. ತಿಮ್ಮಣ್ಣ ಸುಮ್ಮನಿರಲಾರದೇ ಯಾಕೆ ತಿರುಕೇಸಿ ಇಷ್ಟೊಂದು ಖರ್ಚು ಮಾಡುತ್ತೀರಿ ಅಂದಾಗ… ಅಯ್ಯೋ ಅದೆಲ್ಲ ಬುಡಿ.. ಆ ತಿಗಡೇಸಿಯ ಹುಡುಗ ಸೆಂಟ್ರಲ್‌ಜೈಲಿನಲ್ಲಿ ಎಸ್‌ಡಿಸಿ ಆಗಿ ನೇಮಕವಾಗಿದ್ದಕ್ಕೆ ಊರೂಟ ಹಾಕಿಸಿದ್ದ. ನಮ್ಮುಡುಗ ಅಷ್ಟೊಂದು ಓದಿ ನೌಕರಿ ತೆಗೆದುಕೊಂಡಿದ್ದಾನೆ ಅದಕ್ಕಾಗಿ ನಾನು ಊರು ಪರ ಊರೂಟ ಹಾಕಿಸುತ್ತೇನೆ ಎಂದು ಹೇಳಿದ. ಅವತ್ತು ಕನ್ನಡ ಮಾಸ್ತಾರ್ ತಿರುಕೇಸಿ ನಿಮ್ಮ ಹುಡುಗನಿಗೆ ಎಷ್ಟು ವೇತನ ಎಂದು ಕೇಳಿದಾಗ… ಅವನು ಕೆಲಸ ಅಂದ ಆಮೇಲೆ ಅದೇನೋ ಕ್ಯಾಬೇಜ್ ಅಂದರಿ ಎಂದು ಹೇಳಿದ. ಪಡದಯ್ಯ ಮಾಸ್ತರ್ ಇದೇನಿದು ಕ್ಯಾಬೇಜ್ ಅಂದು ಸುಮ್ಮನಾದ. ಮುದಿಗೋವಿಂದಪ್ಪನ ಅಂಗಡಿಗೆ ಹೋದಾಗ ಏನು ನಿಮ್ಮ ಹುಡುಗನಿಗೆ ಎಷ್ಟು ಪಗಾರ ಎಂದಾಗ ಕ್ಯಾಬೇಜ್ ಇದೆಯಂತೆ ಅಂದಾಗ… ಆತ ಓಹೋ ಪಗಾರದ ಬದಲು ತರಕಾರಿ ಕೊಡುತ್ತಿರಬಹುದು ಎಂದು ಸುಮ್ಮನಾದ. ಊರಲ್ಲಿ ತಿರುಕೇಸಿಯ ಮಗನಿಗೆ ಪ್ಯಾಕೇಜ್ ಬದಲಾಗಿ ಕ್ಯಾಬೇಜ್ ಅಂತ ಸುದ್ದಿ ಆಯಿತು. ಅವತ್ತು ಊರು ಪರಊರಿನ ಜನರು ಊಟಕ್ಕೆ ಸೇರಿದ್ದರು. ಊಟಕ್ಕಿಂತ ಮುನ್ನ ತಿರುಕೇಸಿ ಮಗ ತಿರುಬೋಕಿಯನ್ನು ಕರೆದು ಚಂಡುವಿನ ಹಾರ ಹಾಕಿ ಪಡದಯ್ಯ ಮಾಸ್ತರ್ ಭರ್ಜರಿ ಭಾಷಣ ಮಾಡಿ, ಈ ಹುಡುಗ ನನ್ನ ಕೈಯಲ್ಲಿ ಕಲಿತಿದ್ದಾನೆ ಈಗ ಈತನಿಗೆ ವೇತನ ಎಷ್ಟು ಗೊತ್ತೆ? ಇಡೀ ಕ್ಯಾಬೇಜ್ ಅಂದ. ಅಲ್ಪ ಸ್ವಲ್ಪ ಸಾಲಿ ಕಲಿತವರು ತಿರುಬೋಕಿಗೆ ಶೇಕ್‌ಹ್ಯಾಂಡ್ ಮಾಡಿ ಒಳ್ಳೇ ಕ್ಯಾಬೇಜ್ ಮಾರಾಯ ನಿಂಗೆ ಅಂದು ಹೇಳುತ್ತಿದ್ದರು. ತಿರುಬೋಕಿ ಕ್ಯಾಬೇಜ್ ಅಲ್ಲ ಪ್ಯಾಕೇಜ್ ಅಂದರೆ ಓಹೋ ಕ್ಯಾಬೇಜನ್ನು ಪ್ಯಾಕ್ ಮಾಡಿ ಕೊಡುತ್ತಾರಾ ಎಂದು ಪ್ರಶ್ನೆ ಕೇಳುತ್ತಿದ್ದರು. ಭರ್ಜರಿ ಊಟ ಸವಿದು ಹೊರಗೆ ಬರುತ್ತಿರುವವರು ಮಾತ್ರ ಭರ್ಜರಿ ಕ್ಯಾಬೇಜು ಇದೆಯಂತಲ್ಲ ಅಂತ ಮಾತಾಡಿಕೊಂಡು ಹೋಗುತ್ತಿದ್ದರು.