For the best experience, open
https://m.samyuktakarnataka.in
on your mobile browser.

ಪ್ರಚೋದನಕಾರಿ ಹೇಳಿಕೆ: ಸವಾಲ್, ಪ್ರತೀ ಸವಾಲ್

05:59 PM Sep 16, 2024 IST | Samyukta Karnataka
ಪ್ರಚೋದನಕಾರಿ ಹೇಳಿಕೆ  ಸವಾಲ್  ಪ್ರತೀ ಸವಾಲ್

ಮಂಗಳೂರು: ಹಿಂದೂ, ಮುಸ್ಲಿಂ ನಾಯಕರ ಪ್ರಚೋದನಕಾರಿ ಹೇಳಿಕೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ. ರೋಡ್‌ನಲ್ಲಿ ಇಂದು ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಪೊಲೀಸರ ಕಾರ್ಯಚಟುವಟಿಕೆಯಿಂದ ಪರಿಸ್ಥಿತಿ ತಿಳಿಗೊಂಡಿದ್ದು ನಿಯಂತ್ರಣದಲ್ಲಿದೆ.
ಪ್ರಚೋದನಕಾರಿಯಾಗಿ ಹೇಳಿಕೆ ನೀಡಿರುವ ಮುಹಮ್ಮದ್ ಶರೀಫ್ ಹಾಗೂ ಪುರಸಭಾ ಸದಸ್ಯ ಹಸೈನಾರ್ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದ್ದು ಅವರನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ವಿಶ್ವ ಹಿಂದು ಪರಿಷತ್ ಮುಂದಾಳುಗಳಾದ ಶರಣ್ ಪಂಪ್‌ವೆಲ್ ಮತ್ತು ಪುನೀತ್ ಅತ್ತಾವರ ವಿರುದ್ಧ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ
ಬಿ. ಸಿ. ರೋಡ್‌ನಲ್ಲಿ ಇಂದು ಬೆಳಗ್ಗೆ ಈದ್ ಮಿಲಾದ್ ಮೆರವಣಿಗೆ ನಡೆಯಿತು. ರವಿವಾರ ಒಂದಡೆ ಹಬ್ಬದ ತಯಾರಿ ನಡೆಯುತ್ತಿದ್ದರೆ, ಮತ್ತೊಂದಡೆ ಸಂಜೆ ಕೆಲ ಮುಸ್ಲಿಂ ಮುಖಂಡರು ಆಡಿಯೋ ರೆಕಾರ್ಡ್ ಮಾಡಿ “ತಾಕತ್ತಿದ್ದರೆ ಈದ್ ಮಿಲಾದ್ ಮೆರವಣಿಗೆ ತಡೆಯಿರಿ. ಶರಣ್ ಪಂಪ್‌ವೆಲ್ ಸೋಮವಾರ ಬಿ.ಸಿ. ರೋಡ್‌ನಿಂದ ಕೈಕಂಬದ ಮಸೀದಿಯವರೆಗೆ ಈದ್ ಮಿಲಾದ್ ಮೆರವಣಿಗೆ ಮಾಡುತ್ತೇವೆ. ನೀನಾಗಲಿ ನಿನ್ನ ಚೇಲಾಗಳಾಗಲಿ ಯಾರು ಬಿ.ಸಿ. ರೋಡಿನಲ್ಲಿದ್ದಾರೆ, ನಿಮಗೆ ತಾಕತ್ತು ಧಮ್ಮು ಇದ್ದರೆ ನಮ್ಮ ಮೆರವಣಿಗೆ ಹೋಗುವಾಗ ಬಂದು ನಿಲ್ಲಬೇಕು. ದಾಳಿ ಮಾಡುವ ವಿಷಯ ಬಿಡು, ಅದು ನಿನ್ನಿಂದ(ಶರಣ್ ಪಂಪ್‌ವೆಲ್) ಆಗದ ವಿಷಯ. ನೀನು ಕೇವಲ ಮಾಧ್ಯಮದ ಎದುರು ಮಾತ್ರ ಬಾಯಿಗೆ ಬಂದ ಹಾಗೆ ಬೊಗಳಿ ಹೋಗುತ್ತೀಯಾ” ಎಂದು ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಹಾಗೂ ಸದಸ್ಯನ ಸಹೋದರ ಹಸೀನಾರ್ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿತ್ತು.
ಇದರಿಂದ ಆಕ್ರೋಶಗೊಂಡ ಭಜರಂಗದಳ ವಿಭಾಗ ಸಂಯೋಜಕ ಪುನೀತ್ ಅತ್ತಾವರ ಫೇಸ್‌ಬುಕ್ ಮೂಲಕ ಬಿ.ಸಿ.ರೋಡ್ ಚಲೋ ಕರೆ ನೀಡಿದ್ದರು. ‘ಜಿಹಾದಿಗಳೇ ನಿಮ್ಮ ಸವಾಲನ್ನು ಸ್ವೀಕರಿಸಿದ್ದೇವೆ, ನಾವು ಬರುತ್ತಿದ್ದೇವೆ. ನಿಮಗೆ ತಾಕತ್ತು ಇದ್ದರೆ ತಡೆಯಿರಿ. ನೀನು ಹೇಳಿದ ಜಾಗಕ್ಕೆ ಬರುತ್ತೇವೆ. ಹಿಂದುತ್ವ ಮೇಲಾ ಅಥವಾ ಜಿಹಾದಿಗಳಾದ ನೀವು ಮೇಲಾ ಎಂದು ನೋಡೆ ಬಿಡುವ” ಎಂದು ಪೋಸ್ಟ್ ಮಾಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಪೋಸ್ಟ್‌ನಿಂದ ಎಚ್ಚೆತ್ತ ಪೊಲೀಸರು ಪ್ರಚೋದನಕಾರಿ ಹೇಳಿಕೆ ನೀಡಿದ ಭಜರಂಗದಳ ಮುಖಂಡ ಪುನೀತ್ ಅತ್ತಾವರ ಮತ್ತು ಶರಣ್ ಪಂಪ್‌ವೆಲ್ ವಿರುದ್ಧ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಪ್ರಚೋದನಕಾರಿ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ಹರಿಬಿಟ್ಟಿದ್ದ ಮುಸ್ಲಿಂ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಿದ್ದಾರೆ.
ಇಂದು ಬೆಳ್ಳಂ ಬೆಳಗ್ಗೆ ಹಿಂದು ಸಂಘಟನೆ ಕಾರ್ಯಕರ್ತರು ಬಿಸಿ ರೋಡ್‌ನ ರಕ್ತೇಶ್ವರಿ ದೇವಸ್ಥಾನದ ಬಳಿ ಜಮಾವಣೆಯಾದರು. ಕೆಲ ಹೊತ್ತಿನ ಬಳಿಕ ಶರಣ್ ಪಂಪವೆಲ್, ಪುನೀತ್ ಅತ್ತಾವರ ಕೂಡ ಆಗಮಿಸಿದರು. ಈ ಸಂದರ್ಭ ಮಾತನಾಡಿದ ಇದು ಕೇವಲ ಶರಣ್ ಪಂಪ್‌ವೆಲ್‌ಗೆ ಹಾಕಿದ ಸವಾಲಲ್ಲ. ಇಡೀ ಹಿಂದೂ ಸಮಾಜಕ್ಕೆ ಸವಾಲು ಹಾಕಿದ್ದರು. ಹೀಗಾಗಿ ಬಿ.ಸಿ.ರೋಡ್‌ಗೆ ನಾವು ಬಂದಿದ್ದೇವೆ. ನಾನು ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡಿಲ್ಲ. ನಾಗಮಂಗಲದಲ್ಲಿ ಹಿಂದೂ ಅಂಗಡಿಗಳಿಗೆ ಬೆಂಕಿ ಹಾಕಿದ್ದಾರೆ. ಸವಾಲು ಹಾಕಿದವನಿಗೆ ತಾಕತ್ ಇದ್ದರೆ ಇಲ್ಲಿಗೆ ಬರಬೇಕಿತ್ತು ಎಂದು ಹೇಳಿದರು.

ಬಿಗಿ ಭದ್ರತೆ
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಾತನಾಡಿ, ಕೈಕಂಬ ಮಸೀದಿಯ ಈದ್ ಮಿಲಾದ್ ಮೆರವಣಿಗೆ ಮಾರ್ಗ ಬದಲಿಸಿಲ್ಲ. ಹಿಂದೂ ಸಂಘಟನೆಗಳು ಶಾಂತಿಯುತ ಧರಣಿ ನಡೆಸುತ್ತೇವೆಂದಿದ್ದರು. ಹಾಗಾಗಿ ಬಿ.ಸಿ.ರೋಡ್ ಜಂಕ್ಷನ್‌ನಲ್ಲಿ ಅವಕಾಶ ನೀಡಿದ್ದೇವೆ. ಏನಾದರೂ ಸಮಸ್ಯೆಯಾದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದೇವೆ. ಈವರೆಗೂ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಮುಂದೆಯೂ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಬಿ.ಸಿ.ರೋಡ್‌ನಲ್ಲಿ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗಿದೆ ಎಂದಿದ್ದಾರೆ. ಕೆ.ಎಸ್.ಆರ್.ಪಿ ತುಕಡಿಗಳು, ಆರ್ಮ್ ರಿಸರ್ವ್ ಫೋರ್ಸ್ ಸೇರಿದಂತೆ ವಿವಿಧ ತುಕಡಿಗಳ ಮುಕ್ಕಾಂ ಹೂಡಿವೆ. ಪರಸ್ಪರ ಪ್ರಚೋದನಕಾರಿ ಹೇಳಿಕೆಯಿಂದ ಉದ್ವಿಗ್ನಗೊಂಡಿದ್ದ ಪರಿಸ್ಥಿತಿಯನ್ನು ಶಾಂತಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೌಹಾರ್ದತೆ
ಬೋಳಿಯಾರಿನಲ್ಲಿ ಸೋಮವಾರ ಈದ್‌ ಮಿಲಾದ್ ಜಾಥಾದ ಸಂದರ್ಭ ಊರಿನ ಹಿಂದೂ ಮತ್ತು ಕ್ರಿಶ್ಚಿಯನ್ ಬಾಂಧವರು ಜಾಥಾನಿರತರಿಗೆ ಸಿಹಿ ತಿಂಡಿ, ಪಾನೀಯಗಳನ್ನು ವಿತರಿಸಿದರು.