ಪ್ರಜಾಪ್ರಭುತ್ವ ಅಣಕಿಸುವ ಚುನಾವಣೆ ವ್ಯವಸ್ಥೆ…
ಮೊದಲೆಲ್ಲ ಮಂಡಕ್ಕಿ-ಮಿರ್ಚಿ, ಅರ್ಧ ಟೀ ಸವಿದು ಚುನಾವಣೆ ನಡೆಸುವ ವಾತಾವರಣ ಇತ್ತು. ಸಾರ್ವಜನಿಕ ಸೇವೆ’ ಒಂದು ಗೌರವಾರ್ಥ ಆಗಿರುವ ಮತ್ತು ಸಮಾಜದಲ್ಲಿ ಘನತೆ ಹೆಚ್ಚಿಸುವುದಾಗಿತ್ತು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಜನರ ಸೇವೆ ಮಾಡುವುದು ಹಿಂದಿನ ಕಾಲದಲ್ಲಿತ್ತು. ಹಿಂದಿನ ಪಂಚಾಯತಿ ಕಟ್ಟೆಗಳಿಂದ ಇತ್ತೀಚಿನ ಮಂಡಲ ಪಂಚಾಯತಿವರೆಗೂ ಈ ಪದ್ಧತಿ ಮುಂದುವರೆದಿತ್ತು. ಇತ್ತೀಚಿನ ದಿನಗಳಲ್ಲೂ ಕೆಲವು ಗ್ರಾಮ ಪಂಚಾಯತಿಗಳಿಗೆ ಅವಿರೋಧ ಆಯ್ಕೆ ನಡೆಯುತ್ತಿದ್ದವು. ಹಳ್ಳಿಗಳ ಹಿರಿಯರು ಹೇಳುವ ಇಲ್ಲವೆ ಜನರೇ ಅವಿರೋಧವಾಗಿ ಊರಿನ ಪ್ರಮುಖರೊಬ್ಬರನ್ನು ಪಂಚಾಯತಿಗೆ ಆಯ್ಕೆ ಮಾಡುವ ಪದ್ಧತಿ ಇತ್ತು. ಆದರೆ, ಈಚೆಗೆ ಗ್ರಾಮ ಪಂಚಾಯತಿಯಿಂದ ಹಿಡಿದು ಲೋಕಸಭಾ ಕ್ಷೇತ್ರದವರೆಗೆ ಎಲ್ಲಾ ಚುನಾವಣೆಗಳೂ ದುಬಾರಿಯಾಗಿವೆ. ಎಲ್ಲ ಚುನಾವಣೆಗಳಲ್ಲೂ ಕುರುಡು ಕಾಂಚಾಣ ಕುಣಿಯುತ್ತದೆ. ಇಂದು ಹಣ ಇದ್ದವರಿಗೆ ಮಾತ್ರ ಚುನಾವಣೆಗೆ ಸ್ಪರ್ಧಿಸುವ ಅರ್ಹತೆ ಇದೆ ಎಂಬಂತಾಗಿದೆ. ಹಣದ ಹೊಳೆ ಹರಿಸುವ ಶಕ್ತಿವಂತರು ಮಾತ್ರ ಸಂಸದ, ಶಾಸಕರಾಗಲು ಸಾಧ್ಯ ಎಂದು ರಾಜಕೀಯ ಪಕ್ಷಗಳು ನಿರ್ಧರಿಸಿಬಿಟ್ಟಿವೆ. ಮೊನ್ನೆತಾನೆ ನಡೆದ ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ವಿಧಾನಸಭಾ ಚುನಾವಣೆಯಲ್ಲಿ
ಕುರುಡು ಕಾಂಚಾಣ’ ಥಕಥೈ ಎಂದು ಕುಣಿದುಕುಣಿದು ಕುಪ್ಪಳಿಸಿದ್ದು `ಪ್ರಜಾಪ್ರಭುತ್ವ’ ಪದ್ಧತಿಯನ್ನೇ ಅಣಕಿಸುವಂತಿತ್ತು. ಮತದಾನ ನಡೆಯುವ ಹಿಂದಿನ ದಿನವೇ ರಾಜ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆ ಹೆಸರಿನಲ್ಲಿ ಹೆಣ್ಣುಮಕ್ಕಳಿಗೆ ೨ ಸಾವಿರ ರೂ. ನೀಡಿ ಅಧಿಕೃತವಾಗಿಯೇ ಆಮಿಷ ಒಡ್ಡಿ ಓಟು ಪಡೆದುಕೊಂಡಿದ್ದಲ್ಲದೆ ಮನೆಮನೆಗೂ ನೋಟಿನ ಕಂತೆ ನೀಡಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಇದು ಸತ್ಯವೊ ಸುಳ್ಳೋ ಎಂಬುದು ಹಣ ಕೊಟ್ಟವರಿಗೆ ಮತ್ತು ಪಡೆದುಕೊಂಡವರಿಗೆ ಗೊತ್ತು. ಕೆಲವು ಕಡೆ ಹಣಬಲ ಜೊತೆಗೆ ತೋಳ್ಬಲವೂ ಇರುವುದನ್ನು ಅಲ್ಲಗಳೆಯುವಂತಿಲ್ಲ. ಜನರಲ್ಲಿ ಭಯ ಹುಟ್ಟಿಸಿ, ಹೆದರಿಸಿ ಬೆದರಿಸಿ ಮತ ಹಾಕಿಸಿಕೊಳ್ಳುವ ಕೆಟ್ಟ ಸಂಪ್ರದಾಯವನ್ನೂ ಕೆಲವು ಕಡೆ ಕಾಣುತ್ತಿದ್ದೇವೆ. ಈ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಹಣ ಹಂಚಿರುವುದು ಸುಳ್ಳಲ್ಲ. ಮಹಾರಾಷ್ಟç, ಜಾರ್ಖಂಡ್ ಸೇರಿದಂತೆ ದೇಶಾದ್ಯಂತ ನಡೆದ ಎಲ್ಲ ಉಪಚುನಾವಣೆಗಳಲ್ಲಿ ಹಣದ ಹೊಳೆಯೇ ಹರಿದಿರುವುದು ಚುನಾವಣೆ ಆಯೋಗ ವಶಪಡಿಸಿಕೊಂಡ ನೂರಾರು ಕೋಟಿ ರೂ. ಹಣ, ಮದ್ಯ, ಮತ್ತಿತರ ವಸ್ತುಗಳಿಂದಲೇ ನಮ್ಮ ಚುನಾವಣಾ ವ್ಯವಸ್ಥೆ ಎಲ್ಲಿಗೆ ಬಂದು ನಿಂತಿದೆ ಎಂಬುದನ್ನು ಸಾಬೀತು ಮಾಡಿವೆ. ಇದರ ಜೊತೆಗೆ ಜಾತಿ, ಧರ್ಮ ಆಧಾರದ ಮೇಲೆ ಚುನಾವಣೆ ನಡೆಸುವ ಮೂಲಕ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಪದ್ಧತಿಯನ್ನು ಅಣಕಿಸುವಂತೆ ಮಾಡಿದೆ.
ಸರ್ಕಾರಿ ನೌಕರರೂ ಹಣವಂತರೇ..!
ಎಂಎಲ್‌ಎ, ಎಂಪಿ ಚುನಾವಣೆಗಳನ್ನೇ ನಾಚಿಸುವ ರೀತಿಯಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರಿ ನೌಕರರ ಸಂಘಗಳಿಗೆ ಜಿಲ್ಲಾ ಮಟ್ಟದಲ್ಲಿ ನಿರ್ದೇಶಕರ ಆಯ್ಕೆಯ ಚುನಾವಣೆಗಳು ನಡೆದಿದ್ದು ಸಾಮಾನ್ಯ ಜನರಲ್ಲಿ ಅಚ್ಚರಿ ಮೂಡಿಸಿತು. ಇಲಾಖೆವಾರು ನಿರ್ದೇಶಕ ಸ್ಥಾನಗಳಿಗೆ ಸ್ಪರ್ಧಿಸಿದ್ದ ನೌಕರರು ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ರಾತ್ರಿ ಗುಂಡು ಪಾರ್ಟಿ, ಗಿಫ್ಟ್ ಕೊಟ್ಟು ಮತಬೇಟೆ ನಡೆಸಿದ್ದು ಅಚ್ಚರಿ ಮೂಡಿಸಿತು. ೧೫ ದಿನಗಳ ಕಾಲ ಕಾಲಿಗೆ ಚಕ್ರ ಕಟ್ಟಿಕೊಂಡು ಮನೆ ಮನೆ, ಕಚೇರಿಗೆ ತೆರಳಿ ಮತಯಾಚಿಸಿದ ಸ್ಪರ್ಧಿಗಳು, ಡಾಬಾ, ಹೋಟೆಲ್ ಹೀಗೆ ವಿವಿಧೆಡೆ ಗುಂಡು ಪಾರ್ಟಿ ಆಯೋಜಿಸಿ ಮತದಾರರ ಮನ ತೃಪ್ತಿಗೊಳಿಸುವ ಕಾರ್ಯ ನಡೆಸಿದರು. ಜತೆಗೆ ಗಿಫ್ಟ್, ಕವರ್ ಕೊಡುತ್ತಿದ್ದ ದೃಶ್ಯ ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ ಜಿಲ್ಲೆಯಲ್ಲಿ ಕಂಡುಬಂದಿತು. ತಮ್ಮ ಪರ ಪ್ರಚಾರ ನಡೆಸುವ ಪ್ರಭಾವಿ ನೌಕರರಿಗೆ ಓಡಾಡಲು ಕಾರು, ಮದ್ಯ, ಬಾಡೂಟ, ಖರ್ಚಿಗೆ ಹಣದ ಹೊಳೆಯನ್ನೇ ಹರಿಸಿದರು. ಕೆಲ ನೌಕರರು ಆಮಿಷವನ್ನು ತಿರಸ್ಕರಿಸಿ ಪ್ರಬುದ್ಧತೆ ಮೆರೆದಿದ್ದು ವಿಶೇಷವಾಗಿತ್ತು.
ಆದರೆ, ಚುನಾವಣೆ ದಿನದಂದು ಅಭ್ಯರ್ಥಿಗಳ ಬೆಂಬಲಿಗರು ಎಂಎಲ್‌ಎ ಚುನಾವಣೆ ರೀತಿ ಶಾಮಿಯಾನ ಹಾಕಿಕೊಂಡು ಮತದಾರರ ಮನವೊಲಿಸುವ ಕಸರತ್ತು ನಡೆಸಿದರು. ಜತೆಗೆ ತಿಂಡಿ, ಟೀ, ಉಪಹಾರಕ್ಕೆ ಟೋಕನ್ ವ್ಯವಸ್ಥೆ ಕೂಡ ಮಾಡಿದ್ದರು. ಗೆದ್ದವರು ಮತ್ತೊಮ್ಮೆ ತಣ್ಣನೆಯ ಪ್ರವಾಸಿ ತಾಣಗಳಿಗೆ ತಮ್ಮ ಬೆಂಬಲಗರೊಂದಿಗೆ ತೆರಳಿ ಗುಂಡು-ತುಂಡಿನ ಪಾರ್ಟಿ ನಡೆಸಿದರೆ, ಇನ್ನೂ ಕೆಲವರು ಹೋಟೆಲ್, ಮನೆಗಳಲ್ಲಿ ಸರಳವಾಗಿ ಊಟೋಪಾಚಾರ ವ್ಯವಸ್ಥೆ ಮಾಡಿ ಕೃತಜ್ಞತೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂತು. ಅಬ್ಬಾ ಇದನ್ನು ನೋಡಿದರೆ, ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಸರ್ಕಾರಿ ನೌಕರರ ಸಂಘಗಳ ಜಿಲ್ಲಾ ಅಧ್ಯಕ್ಷರ ಚುನಾವಣೆ, ರಾಜ್ಯ ಘಟಕದ ಅಧ್ಯಕ್ಷರ ಚುನಾವಣೆ ಯಾವ ಹಂತದಲ್ಲಿ ನಡೆಯಬಹುದು ಎಂಬುದನ್ನು ಊಹಿಸಿಕೊಂಡರೆ ಭಯ ಆಗುತ್ತದೆ. ಕೆಲ ಜಿಲ್ಲೆಗಳಲ್ಲಿ ಈಗಾಗಲೇ ತಮ್ಮ ಪರವಾಗಿರುವ ನಿರ್ದೇಶಕರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ್ ರಾಜಕಾರಣ ಆರಂಭಿಸಿದ್ದಾರೆ. ಕೆಲವರು ಪ್ರವಾಸಿ ತಾಣಗಳಿಗೆ ಕಳುಹಿಸುವ ವ್ಯವಸ್ಥೆಯನ್ನೂ ಮಾಡುತ್ತಿದ್ದಾರೆ. ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಮತ್ತು ರಾಜ್ಯ ಘಟಕಗಳಿಗೆ ಅಧ್ಯಕ್ಷರಾಗುವವರು ಜಾತಿ, ಹಣ, ತುಂಡು-ಗುಂಡಿನ ಆಮಿಷ ತೋರಿಸಿ ಚುನಾವಣೆ ಗೆಲ್ಲಲು ಹವಣಿಸುತ್ತಿದ್ದಾರೆ.
ಎಂಎಲ್‌ಎ ಮತ್ತು ಎಂ.ಪಿ ಚುನಾವಣೆಗಳು ತಮ್ಮ ಪಾವಿತ್ರ್ಯ ಕಳೆದುಕೊಂಡಿದ್ದರೂ, ಇತ್ತೀಚಿನವರೆಗೂ ವಿಧಾನ ಪರಿಷತ್‌ನ ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರಗಳು ತಮ್ಮ ಘನತೆಯನ್ನು ಕಾಪಾಡಿಕೊಂಡಿದ್ದವು. ಆದರೆ ಈ ಕ್ಷೇತ್ರಗಳಲ್ಲಿ ರಿಯಲ್ ಎಸ್ಟೇಟ್ ಕುಳಗಳು, ಗಣಿ ಉದ್ಯಮಿಗಳು, ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳ ಮಾಲಿಕರು ಸ್ಪರ್ಧಿಸಲು ಆರಂಭಿಸಿದ ನಂತರ ಹಣದ ಹೊಳೆ ಹರಿಯಲು ಆರಂಭಿಸಿತು. ಶಿಕ್ಷಕರ ಮತ್ತು ಪದವೀಧರ ಬಹುತೇಕ ಮತದಾರರನ್ನು ಭ್ರಷ್ಟರನ್ನಾಗಿಸಿದರು. ಆದರೆ ಪ್ರಜ್ಞಾವಂತ ಮತದಾರರಾಗಿರುವ ಶಿಕ್ಷಕರು ಮತ್ತು ಪದವೀಧರರು ಯಾಕೆ ಆಮಿಷಗಳಿಗೆ ಬಲಿಯಾಗುತ್ತಿದ್ದಾರೆ. ಭ್ರಷ್ಟವಾಗಿರುವ ಚುನಾವಣೆ ವ್ಯವಸ್ಥೆಯನ್ನು ಸಂಪೂರ್ಣ ಸರಿ ಮಾಡಲು ಸಾಧ್ಯವಾಗದಿದ್ದರೂ, ಪ್ರಜ್ಞಾವಂತ ಮತದಾರರು ತಮ್ಮ ಕ್ಷೇತ್ರದ ಚುನಾವಣೆ ವ್ಯವಸ್ಥೆಯನ್ನಾದರೂ ಸುಧಾರಿಸಲು ಸಾಧ್ಯವಿಲ್ಲವೆ? ಹೀಗಾದರೆ ಚುನಾವಣೆ ಪಾವಿತ್ರ್ಯತೆ ಕಾಪಾಡುವವರು ಯಾರು? ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬೆಲೆ ಕೊಡುವವರು ಯಾರು? ಎಂಬ ಪ್ರಶ್ನೆಗಳಿಗೆ ಅವರಿಂದಲೇ ಉತ್ತರ ಸಿಗಬೇಕಿದೆ.
ಗಂಭೀರ ಚಿಂತನೆ ಅಗತ್ಯ
ರಾಜಕಾರಣಿಗಳು ಮತದಾರರನ್ನು ಭ್ರಷ್ಟರನ್ನಾಗಿಸಿ ತಾವೂ ಮಹಾ ಭ್ರಷ್ಟರಾಗುವ ಮೂಲಕ ಇಡೀ ವ್ಯವಸ್ಥೆಯ ದಾರಿ ತಪ್ಪಿಸಿದ್ದು, ಅದನ್ನು ಸರಿದಾರಿಗೆ ತರುವ ಗಂಭೀರ ಚಿಂತನೆ ದೇಶಾದ್ಯಂತ ನಡೆಯಬೇಕಿದೆ. ಇಂದು ದಕ್ಷರು, ನಿಜವಾಗಲೂ ಸಮಾಜಸೇವೆ, ದೇಶಸೇವೆ ಮಾಡುವ ಹಂಬಲ ಇದ್ದವರು ಚುನಾವಣೆ ರಾಜಕೀಯಕ್ಕೆ ಬರುವುದು ಆಗುತ್ತಿಲ್ಲ. ಹಣವಂತರು, ತೋಳ್ಬಲವುಳ್ಳವರು, ಉದ್ದಿಮೆದಾರರು, ಕ್ರಿಮಿನಲ್ ಹಿನ್ನಲೆ ಉಳ್ಳವರು ರಾಜಾರೋಷವಾಗಿ ಜನರ ಓಟು ಖರೀದಿಸಿ ಅಧಿಕಾರಕ್ಕೆ ಬರುವುದು ಸಾಮಾನ್ಯವಾಗಿದೆ. ದೇಶದ ರಾಜಕಾರಣದಲ್ಲಿ ಜನ ಮತ್ತು ದೇಶ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಲಾಲ್ ಬಹದ್ದೂರ್ ಶಾಸ್ತಿç, ಡಾ.ಬಿ.ಆರ್.ಅಂಬೇಡ್ಕರ್, ವಲ್ಲಭಭಾಯಿ ಪಟೇಲ್, ಅಟಲ್ ಬಿಹಾರಿ ವಾಜಪೇಯಿ, ರಾಜ್ಯದಲ್ಲಿ ಎಸ್.ನಿಜಲಿಂಗಪ್ಪ, ಎಚ್.ಜಿ.ಗೋವಿಂದೇಗೌಡ, ನಜೀರ್‌ಸಾಬ್, ರಾಮಕೃಷ್ಣ ಹೆಗಡೆ ಅವರಂತಹ ಮುತ್ಸದ್ದಿ ರಾಜಕಾರಣಿಗಳು ರೂಪುಗೊಳ್ಳದಿರುವುದು ಆತಂಕದ ಸಂಗತಿ.
ಇತ್ತೀಚಿಗೆ ಜರುಗಿದ ಚುನಾವಣೆಗಳಲ್ಲಿ ಯಾವೊಬ್ಬ ರಾಜಕಾರಣಿಯೂ ಅಭಿವೃದ್ಧಿಪರ ಮಾತನಾಡಲಿಲ್ಲ. ಈ ಹಿಂದೆ ತಾವೇನು ಮಾಡಿದ್ದೇವೆ ಎಂದು ಹೇಳಲಿಲ್ಲ. ಮುಂದೆ ಯಾವ ಕೆಲಸ ಮಾಡುತ್ತೇವೆ ಎಂದು ಹೇಳಲಿಲ್ಲ. ಕೇವಲ ಜಾತಿ-ಧರ್ಮದ ಆಧಾರದಲ್ಲಿ ಹಾಗೂ ಹಣ-ಹೆಂಡದ ಮತ್ತಿತರ ಆಮಿಷ ತೋರಿಸುವ ಮೂಲಕ ಚುನಾವಣೆ ನಡೆಸಿದರು. ಇದೇ ಪದ್ಧತಿ ಎಲ್ಲ ಹಂತದ ಚುನಾವಣೆಗಳಲ್ಲೂ ಹಾಸುಹೊಕ್ಕಾಗಿದೆ.
ಶಿಕ್ಷಣ ತಜ್ಞರಾದ ಗುರುರಾಜ್ ಕರಜಗಿ ಅವರು ಪದೇ ಪದೇ ಹೇಳುತ್ತಿರುತ್ತಾರೆ ``ನಮ್ಮ ದೇಶದ ವ್ಯವಸ್ಥೆ ಹಾಳಾಗಿರುವುದು ವಿದ್ಯಾವಂತರಿಂದಲೆ ಹೊರತು ಅಕ್ಷರ ಕಲಿಯದ ಅವಿದ್ಯಾವಂತರಿಂದ ಅಲ್ಲ’’ ಎಂದು. ಅಕ್ಷರಶಃ ಇದು ನಿಜವಾಗಿದ್ದು, ಈ ವ್ಯವಸ್ಥೆಯನ್ನು ಬದಲಾಯಿಸಿ ಸರಿದಾರಿಗೆ ತರುವಲ್ಲಿ ವಿದ್ಯಾವಂತರೇ ಮುಂದಾಗಬೇಕಿದೆ. ಈ ಬದಲಾವಣೆ ಒಂದೇ ದಿನದಲ್ಲಿ ಇಲ್ಲವೆ ಒಂದೇ ವರ್ಷದಲ್ಲಿ ಆಗುವಂತಹುದಲ್ಲ. ದೇಶದ ಚುನಾವಣೆ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಬದಲಾವಣೆ ಮಾಡುವುದು ತುರ್ತು ಅಗತ್ಯವಾಗಿದೆ.