ಪ್ರಧಾನಿ ನರೇಂದ್ರ ಮೋದಿ ಶಿರಸಿಗೆ: ಕಾಗೇರಿ ಪರ ಪ್ರಚಾರ
ಕಾರವಾರ: ಉತ್ತರಕನ್ನಡ ಹಾಗೂ ಹುನ್ಬಳ್ಳಿ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇಂದು ಶಿರಸಿಗೆ ಆಗಮಿಸಲಿದ್ದು, ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದೆ.
ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ 12-55ಕ್ಕೆ ಆಗಮಿಸಲಿದ್ದಾರೆ. ಅಲ್ಲದೆ ಇದೇ ವೇಳೆ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಹುಬ್ಬಳ್ಳಿ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪರ ಪ್ರಧಾನಿ ನರೇಂದ್ರ ಮೋದಿ ಮತಯಾಚನೆ ಮಾಡಲಿದ್ದಾರೆ.
ಇನ್ನು ದೇಶದ ಪ್ರಧಾನಿಯೋರ್ವರು ಶಿರಸಿ ನಗರಕ್ಕೆ ಇದೇ ಮೊದಲ ಬಾರಿ ಆಗಮಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಉತ್ತರಕನ್ನಡ ಜಿಲ್ಲೆಗೆ ಎರಡನೇ ಭಾರಿ ಆಗಮಿಸುತ್ತಿದ್ದಾರೆ. ಕಳೆದ ಬಾರಿ ವಿಧಾನಸಭಾ ಚುನಾವಣೆ ವೇಳೆ ಅಂಕೋಲಾಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು.
ಇನ್ನು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ, ಧಾರವಾಡ, ಹಾವೇರಿ ಹಾಗೂ ಉತ್ತರಕನ್ನಡ ಜಿಲ್ಲೆಯಿಂದ್ಯಾಂತ ಜನಸಾಗರ ಹರಿದು ಬರುವ ನೀರಿಕ್ಷೆ ಇದೆ. ಈಗಾಗಲೇ ಮುಂಜಾನೆಯಿಂದಲೇ ಸಾರ್ವಜನಿಕರು ಹಾಗೂ ಬಿಜೆಪಿ ಕಾರ್ಯಕರ್ತರು ಶಿರಸಿ ಮಾರಿಕಾಂಬಾ ಕ್ರೀಡಾಂಗಣದತ್ತ ಆಗಮಿಸುತ್ತಿದ್ದಾರೆ.
ಇನ್ನು ಮಾರಿಕಾಂಬ ಕ್ರೀಡಾಂಗಣದ ಸುತ್ತ ಪೊಲೀಸ್ ಹಾಗೂ ಎಸ್ಪಿಜಿ ಕಮಾಂಡ್ ನಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕ್ರೀಡಾಂಗಣದ ಸುತ್ತ ಹಲವು ಸುತ್ತಿನ ತೀವ್ರ ತಪಾಸಣೆ ಬಳಿಕ ಕ್ರೀಡಾಂಗಣದ ಒಳಗೆ ಪ್ರವೇಶ ನೀಡಲಾಗುತ್ತಿದೆ.
ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಶಿರಸಿಗೆ ಆಗಮಿಸಲಿದ್ದು ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳು ಇದೀಗ ಶಿರಸಿ ಮಾರಿಕಾಂಬಾ ಕ್ರೀಡಾಂಗಣದತ್ತ ಮುಖಮಾಡಿದ್ದಾರೆ.