ಪ್ರಶ್ನೆ ಪತ್ರಿಕೆ ಸೋರಿಕೆ: ವಿದ್ಯಾರ್ಥಿಗಳಲ್ಲಿ ಆತಂಕ
ಧಾರವಾಡ: ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ಅರ್ಧ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ವದಂತಿ ವಿದ್ಯಾರ್ಥಿಗಳಲ್ಲಿ ಮತ್ತು ಪಾಲಕರಲ್ಲಿ ಆತಂಕ ಮೂಡಿಸಿದೆ.
ಕಳೆದ ಎರಡು ದಿನಗಳ ಹಿಂದೆ ಹಿಂದಿ ಮತ್ತು ಗಣಿತ ವಿಷಯದ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು. ಈ ಕುರಿತು ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿದ್ದಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಶನಿವಾರ ವಿಜ್ಞಾನ ವಿಷಯದ ಪರೀಕ್ಷೆ ನಡೆಯಲಿದ್ದು, ಶುಕ್ರವಾರ ರಾತ್ರಿ ೯ಕ್ಕೆ ಪ್ರಶ್ನೆಪತ್ರಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ ಎಂಬ ವದಂತಿ ಜೊತೆಗೆ ಪ್ರಶ್ನೆಪತ್ರಿಕೆಗಳೂ ಹರಿದಾಡಿದ್ದವು. ಇದಕ್ಕೆ ಸಂಬಂಧಿಸಿದಂತೆ ಪಾಲಕರು ಮತ್ತು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದರು.
ಆದರೆ, ಇದನ್ನು ಅಲ್ಲಗಳೆದಿರುವ ಡಿಡಿಪಿಐ ಎಸ್.ಎಸ್. ಕೆಳದಿಮಠ ಅವರು, ಸಂಬಂಧಪಟ್ಟ ಶಾಲೆಗಳಿಗೆ ಪರೀಕ್ಷೆ ನಿಗದಿಯಾದ ದಿನಾಂಕದಂದು ಮುಂಜಾನೆ ೬ಕ್ಕೆ ಪ್ರಶ್ನೆ ಪತ್ರಿಕೆ ನೀಡಲಾಗುತ್ತದೆ. ಇದಕ್ಕೂ ಮುನ್ನೆ ಪ್ರಶ್ನೆಪತ್ರಿಕೆ ಸೋರಿಕೆಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.