For the best experience, open
https://m.samyuktakarnataka.in
on your mobile browser.

ಪ್ರೇಮಕ್ಕೆ ಅಡ್ಡಿ, ತಾಯಿ-ಮಗನ ಕೊಂದ ಪ್ರಿಯಕರ

05:00 PM Dec 05, 2024 IST | Samyukta Karnataka
ಪ್ರೇಮಕ್ಕೆ ಅಡ್ಡಿ  ತಾಯಿ ಮಗನ ಕೊಂದ ಪ್ರಿಯಕರ

ಬೆಳಗಾವಿ: `ನನ್ನ ಪುತ್ರಿಯ ಜತೆಗೆ ಯಾವುದೇ ಪ್ರೇಮ-ಗೀಮ ಅಂದ್ಕೊಂಡು ಮನೆಗೆ ಬರಬೇಡ' ಎಂದು ಗದರಿಸಿದ್ದಕ್ಕೆ ಆಕ್ರೋಶಗೊಂಡ ಪ್ರೇಮಿಯೊಬ್ಬ ತನ್ನಿಬ್ಬರು ಸ್ನೇಹಿತರ ಜತೆ ಬಂದು ಪ್ರೇಯಸಿಯ ತಾಯಿ ಹಾಗೂ ತಮ್ಮನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಿಪ್ಪಾಣಿಯಲ್ಲಿ ನಡೆದಿದೆ.
ನಿಪ್ಪಾಣಿ ತಾಲ್ಲೂಕಿನ ಅಕ್ಕೋಳ ಹೊರವಲಯದ ಬಾಳೋಬಾ ಮಾಳದಲ್ಲಿ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ. ಹುಕ್ಕೇರಿ ತಾಲ್ಲೂಕಿನ ರವಿ ಖಾನಪ್ಪಗೋಳ ಎಂಬಾತ ಬಾಳೋಬಾ ಮಾಳದ ಮಂಗಲಾ ಸುಶಾಂತ ನಾಯಿಕ ಅವರ ದೂರದ ಸಂಬಂಧಿಯಾಗಿದ್ದು, ಮಂಗಲಾ ಅವರ ಪುತ್ರಿಯ ಜತೆ ಪ್ರೇಮಾಂಕುರವಾಗಿ ಆಕೆಯನ್ನು ಭೇಟಿಯಾಗಲು ಪದೇ ಪದೇ ಇವರ ಮನೆಗೆ ಬರುತ್ತಿದ್ದ.
ರವಿಯ ಚಲನವಲನಗಳು ಸರಿ ಕಾಣದೆ ಇದ್ದಾಗ ಮಂಗಲಾ ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ತೀವ್ರ ಆಕ್ರೋಶಕ್ಕೆ ಒಳಗಾದ ರವಿ, ಬುಧವಾರ ರಾತ್ರಿ ತನ್ನಿಬ್ಬರು ಸ್ನೇಹಿತರ ಜತೆ ಮಂಗಲಾ ಮನೆಗೆ ಬಂದು ಮನೆಯಲ್ಲಿದ್ದ ಮಂಗಲಾ ಮತ್ತು ಅವರ ಪುತ್ರ ಪ್ರಜ್ವಲ ನಾಯಿಕ ಅವರನ್ನು ಕೊಚ್ಚಿ ಕೊಂದಿದ್ದಾನೆ. ನಿಪ್ಪಾಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ರವಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.