For the best experience, open
https://m.samyuktakarnataka.in
on your mobile browser.

ಬಂಟ್ವಾಳ ಮುಂದುವರೆದ ಬಿಗಿ ಭದ್ರತೆ: ಮೂವರ ವಿರುದ್ಧ ಎಫ್‌ಐಆರ್

05:23 PM Sep 17, 2024 IST | Samyukta Karnataka
ಬಂಟ್ವಾಳ ಮುಂದುವರೆದ ಬಿಗಿ ಭದ್ರತೆ  ಮೂವರ ವಿರುದ್ಧ ಎಫ್‌ಐಆರ್

ಮಂಗಳೂರು: ಹಿಂದು ಸಂಘಟನೆಗಳು ‘ಬಿ.ಸಿ.ರೋಡ್ ಚಲೋ’ ನಡೆಸಿದ್ದನ್ನು ವಿರೋಧಿಸಿ ಬಂಟ್ವಾಳ ನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಹಿಂದು ಸಂಘಟನೆ ಮುಖಂಡ ಶರಣ್ ಪಂಪ್ವೆಲ್, ಭರತ್ ಕುಮ್ಡೇಲು ಮತ್ತು ಯಶೋಧರ ಕರ್ಬೆಟ್ಟು ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಮದ್ಯ ನಿಷೇಧ ಜೊತೆಗೆ ಬಿಗಿ ಭದ್ರತೆ ಮುಂದುವರೆದಿದ್ದು, ಆಯಕಟ್ಟಿನ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಮುಸ್ಲಿಂ ಧರ್ಮವನ್ನು ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಯಶೋಧರ ಕರ್ಬೆಟ್ಟು ಎಂಬವರ ವಿರುದ್ಧ ಬಂಟ್ವಾಳದ ಮಹಮ್ಮದ್ ನವಾಜ್ ಎಂಬವರು ದೂರು ನೀಡಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಮಹಮ್ಮದ್ ರಫೀಕ್ ಕೆಳಗಿನಪೇಟೆ ಎಂಬವರು, ಸೆ.೧೬ರಂದು ಬಿಸಿ ರೋಡ್ ಚಲೋ ನಡೆಸಿದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಶರಣ್ ಪಂಪ್‌ವೆಲ್ ಹಾಗೂ ಭರತ್ ಕುಮ್ಡೇಲು ಮುಸ್ಲಿಂ ಧರ್ಮದ ಘನತೆಗೆ ಕುಂದುಂಟಾಗುವ ರೀತಿ ಮತ್ತು ಮುಸ್ಲಿಮ್ ಸಮುದಾಯದ ಭಾವನೆಗೆ ಧಕ್ಕೆ ಬರುವ ರೀತಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ.
ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಧರ್ಮವನ್ನು ನಿಂದಿಸಿ ಕೋಮು ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದಾರೆ. ಹಿಂದು - ಮುಸ್ಲಿಮರ ನಡುವೆ ದ್ವೇಷ ಉಂಟಾಗುವ ರೀತಿ ವರ್ತಿಸಿದ್ದಾರೆ. ಇದರಿಂದ ಬಂಟ್ವಾಳದಲ್ಲಿ ಶಾಂತಿ ಕದಡುವ ಯತ್ನವಾಗಿದೆ ಎಂದು ಆರೋಪಿಸಿ ದೂರು ನೀಡಿದ್ದು, ಶರಣ್ ಪಂಪ್‌ವೆಲ್ ಮತ್ತು ಭರತ್ ಕುಮ್ಡೇಲು ಎಂಬವರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags :