ಬಂದಾನ ನೋಡು ಮೇಲೆ ಕರಕೋ…
ತಿಗಡೇಸಿ ಗ್ರಾಮ ಪಂಚಾಯ್ತಿ ಸದಸ್ಯನಾದ ಮೇಲೆ ಆತನ ಖರ‍್ರೇ ಬದಲಾಯಿತು. ಯಾರದಾದರೂ ಮನೆಯಲಿ ಮದುವೆ ಸಮಾರಂಭ ನಡೆದರೆ ಆತನದೇ ಓಡಾಟ. ಊರಲ್ಲಿ ಏನೇ ಕಾರ್ಯಕ್ರಮವಿದ್ದರೂ ಆತನೇ ಮುಂದು. ಗಂಡ ಹೆಂಡಿರ ಜಗಳವಾಡಿದರೆ ಆತನೇ ಬಗೆ ಹರಿಸುತ್ತಿದ್ದ. ಅಣ್ಣ ತಮ್ಮಂದಿರ ಮಧ್ಯೆ ಆಸ್ತಿ ಜಗಳ ಬಂದರೆ ಪಂಚಾಯ್ತಿ ಮಾಡುತ್ತಿದ್ದ. ಊರಲ್ಲಿ ಯಾರೇ ಶಿವನ ಪಾದ ಸೇರಿದರೂ ಅಲ್ಲಿಗೆ ಹೋಗಿ ತನಗೆ ಗೊತ್ತಿಲ್ಲದಿದ್ದರೂ ಗುಣಗಾನ ಮಾಡುತ್ತಿದ್ದ. ಒಂದೇ ಒಂದು ಓಟಿನಿಂದ ಆರಿಸಿಬಂದ ತಿಗಡೇಸಿ ಇಷ್ಟೆಲ್ಲ ಧಿಮಾಕು ಮಾಡುತ್ತಿದ್ದಾನೆ ಎಂದು ತಳವಾರ್ಕಂಟಿ ಗ್ಯಾಂಗಿನವರು ಮಾತಾಡಿಕೊಳ್ಳುತ್ತಿದ್ದರು. ಪಕ್ಕದ ಊರಿನವರ ಮುಂದೆಯಂತೂ ತಿಗಡೇಸಿ… ನಾ ಊರಲ್ಲಿ ಇಲ್ಲದಿದ್ದರೆ ಆಗುವುದೇ ಇಲ್ಲ…. ಜನರು ಹಪಹಪಿಸುತ್ತಾರೆ. ನಾ ಊರಲ್ಲಿ ಇಲ್ಲದಿದ್ದರೆ ದನಗಳು ಮೇಯಲು ಹೋಗುವುದಿಲ್ಲ. ಶ್ವಾನಗಳು ಬೌ ಅನ್ನುವುದಿಲ್ಲ. ಲಾದುಂಚಿ ರಾಜ ಸೈಕಲ್ ಹತ್ತುವುದಿಲ್ಲ. ಹೊಟೆಲ್ ಶೇಷಮ್ಮ ಚಹ ಕಾಸುವುದಿಲ್ಲ. ನಾ ಊರಲ್ಲಿ ಇಲ್ಲ ಅಂದರೆ ಯಾವ ಎಂಎಎಲ್ ಎ ನೂ ಊರಿಗೆ ಕಾಲಿಡುವುದಿಲ್ಲ… ನಾ ಹೋಗದ ಹೊರತು ಶವ ಎತ್ತುವುದಿಲ್ಲ ಎಂದು ಏನೇನೋ ಹೇಳುತ್ತಿದ್ದ. ಈ ಸುದ್ದಿ ಊರವರಿಗೆ ಮುಟ್ಟಿತ್ತು. ಅವರೆಲ್ಲ ಗುಪ್ತ ಸಭೆ ನಡೆಸಿ ಒಂದು ನಿರ್ಧಾರಕ್ಕೆ ಬಂದು ಎಲ್ಲರೂ ಒಪ್ಪಿದರು. ಅವತ್ತು ಕರಿಭಾಗೀರತಿ ಸೋದರತ್ತೆಯ ಮೈದುನ ತೀರಿಕೊಂಡಿದ್ದ. ಎಂದಿನಂತೆ ತಿಗಡೇಸಿ ಅಲ್ಲಿಗೆ ಹೋದಕೂಡಲೇ….. ಎಲ್ಲ ಹೆಣಮಕ್ಕಳು… ಅಯ್ಯೋ ತಿಗಡೇಸಿ ಬಂದ ನೋಡೂ… ಮೊನ್ನೆ ತಿಗಡೇಸಿನ ಕರಕೊಂಡು ಜಾತ್ರೆಗೆ ಹೋಗಬೇಕು ಅಂತಿದ್ದೆಲ್ಲ ಆತನನ್ನೂ ಕರೆದುಕೊಂಡು ಹೋಗು ಎಂದು ಹಾಡಾಡಿಕೊಂಡು ಅತ್ತರು. ಗಾಬರಿಯಾದ ತಿಗಡೇಸಿ ಅಲ್ಲಿಂದ ಓಡಿಬಂದ. ಸ್ವಲ್ಪ ದಿನದ ನಂತರ ದಾಸ್ರುಸೇನಪ್ಪನ ಸಂಬಂಧಿ ಹೋಗಿಬಿಟ್ಟ. ಅಲ್ಲಿಗೆ ತಿಗಡೇಸಿ ಹೋದ ಕೂಡಲೇ ಬಂದ್ ಕೂಡಲೇ ತಿಗಡ್ಯಾ ಬಾ..ಬಾ ಅಂತಿದ್ದೆಲ್ಲ ಬಂದ ನೋಡು ಕರಕೊಂಡೋಗು ಅಂದ. ಅಲ್ಲಿಂದ ತಿಗಡೇಸಿ ಕಾಲ್ಕಿತ್ತ. ಅಂದಿನಿಂದ ತಿಗಡೇಸಿ ಅಲ್ಲಿ ಹೋದಕೂಡಲೇ ಮೇಲೆ ಕರಕೋ… ಕರಕೊಂಡು ಹೋಗು ಅಂತ ಹಾಡಾಡಿಕೊಂಡು ಅಳುವುದನ್ನು ನೋಡಿ ಅಂದಿನಿಂದ ತಿಗಡೇಸಿ ಎಲ್ಲಿಗೂ ಹೋಗುವುದನ್ನು ನಿಲ್ಲಿಸಿದ… ಹಿರೇತನ ಮಾಡುವುದನ್ನು ಬಂದ್ ಮಾಡಿದ.