For the best experience, open
https://m.samyuktakarnataka.in
on your mobile browser.

ಬಸ್ ತಂಗುದಾಣ ತೆರವು ಖಂಡಿಸಿ ಪ್ರತಿಭಟನೆ

08:41 PM Sep 11, 2024 IST | Samyukta Karnataka
ಬಸ್ ತಂಗುದಾಣ ತೆರವು ಖಂಡಿಸಿ ಪ್ರತಿಭಟನೆ

ಮಂಗಳೂರು: ನಗರದ ಹಂಪನಕಟ್ಟೆಯಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನ ಬಳಿ ಇದ್ದ ಪ್ರಯಾಣಿಕರ ತಂಗುದಾಣ ತೆರವುಗೊಳಿಸಿದ್ದನ್ನು ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಇಲ್ಲಿನ ಗಡಿಯಾರ ಗೋಪುರದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.
ಹಂಪನಕಟ್ಟೆಯಲ್ಲಿ ತೆರವುಗೊಳಿಸಿದ ಪ್ರಯಾಣಿಕರ ತಂಗುದಾಣವನ್ನು ಮತ್ತೆ ನಿರ್ಮಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಯವರು ಹಾಗೂ ಪಾಲಿಕೆ ಆಯುಕ್ತರು ಸ್ಥಳಕ್ಕೆ ಬಂದು ಭರವಸೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸುಮಾರು ಅರ್ಧ ಗಂಟೆ ಕಳೆದ ಬಳಿಕವೂ ಸ್ಥಳಕ್ಕೆ ಯಾವ ಅಧಿಕಾರಿಗಳೂ ಬಾರದಿದ್ದುದನ್ನು ಕಂಡು ಸಿಟ್ಟಿಗೆದ್ದ ಪ್ರತಿಭಟನಾಕಾರರು ಏಕಾಏಕಿ ರಸ್ತೆಗೆ ನುಗ್ಗಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಲು ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು ಇದಕ್ಕೆ ಅವಕಾಶ ಕಲ್ಪಿಸಲಿಲ್ಲ. ರಸ್ತೆಗಿಳಿದ ವಿದ್ಯಾರ್ಥಿಗಳ ಮೇಲೆ ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದರು.
ಬಳಿಕ ರಸ್ತೆ ತಡೆ ಕೈಬಿಟ್ಟ ವಿದ್ಯಾರ್ಥಿಗಳು ರಸ್ತೆ ಪಕ್ಕದಲ್ಲಿ ಪ್ರತಿಭಟನೆ ಮುಂದುವರಿಸಿದರು. ತಹಶೀಲ್ದಾರ್ ಪ್ರಶಾಂತ ಪಾಟೀಲ ಅವರು ಸ್ಥಳಕ್ಕೆ ಬಂದು ವಿದ್ಯಾರ್ಥಿಗಳ ಅಹವಾಲು ಆಲಿಸಿದರು. ಎಬಿವಿಪಿ ದ.ಕ. ಜಿಲ್ಲಾ ಘಟಕದ ಸಂಚಾಲಕ ಸುವಿತ್ ಶೆಟ್ಟಿ, ‘ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನ ಬಳಿ ದಶಕಗಳಿಂದ ಪ್ರಯಾಣಿಕರ ತಂಗುದಾಣ ಇದೆ. ಎರಡು ವರ್ಷಗಳ ಹಿಂದಷ್ಟೇ ಹಳೆ ಬಸ್ನಿಲ್ದಾಣವನ್ನು ಕೆಡವಿ ಹೊಸ ಬಸ್‌ ನಿಲ್ದಾಣ ನಿರ್ಮಿಸಲಾಗಿತ್ತು. ಈಗ ಅದನ್ನು ರಾತ್ರೋರಾತ್ರಿ ತೆರವುಗೊಳಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಅದನ್ನು ಅಲ್ಲೇ ಮತ್ತೆ ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿದರು.
‘ಈ ಬಗ್ಗೆ ನಾವು ಹತ್ತು ದಿನಗಳ ಹಿಂದೆಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಶಾಸಕ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹಾಗೂ ಪಾಲಿಕೆ ಆಯುಕ್ತರಿಗೆ ಅವರಿಗೂ ಮನವಿಯ ಪ್ರತಿಯನ್ನು ನೀಡಿದ್ದೇವೆ. ಆದರೂ ಸಮಸ್ಯೆ ನಿವಾರಿಸಲು ಯಾವುದೇ ಕ್ರಮ ಕೈಗೊಳ್ಳದ ಕಾರಣ ಪ್ರತಿಭಟನೆ ಅನಿವಾರ್ಯವಾಯಿತು’ ಎಂದರು.
ಎಬಿವಿಪಿ ತಾಲ್ಲೂಕು ಘಟಕದ ಸಂಚಾಲಕ ಶ್ರೇಯಸ್ ಇಡ್ಯಡ್ಕ, ‘ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಲು ಪ್ರಯಾಣಿಕರ ತಂಗುದಾನವನ್ನು ತೆರವುಗೊಳಿಸಲಾಗಿದೆ. ಈಗ ಸಂಚಾರ ದಟ್ಟಣೆಯ ನೆಪ ಹೇಳುತ್ತಾರೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್ ಕಾಯಲು ಮಳೆ ಬಿಸಿಲಿನಲ್ಲಿ ನಿಲ್ಲಬೇಕಾಗಿದೆ’ ಎಂದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಅವರು ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಸ್ಥಗಿತಗೊಳಿಸಿದರು. ಎಬಿವಿಪಿ ಪ್ರಮುಖರಾದ ಪ್ರತೀಕ್ ಬಂಟ್ವಾಳ್, ಲಿಖಿತ್ ಬಂಟ್ವಾಳ್, ಮೋನಿಶ್ ಮತ್ತಿತರರು ಭಾಗವಹಿಸಿದ್ದರು.