For the best experience, open
https://m.samyuktakarnataka.in
on your mobile browser.

ಬಾಕಿ ಕಬ್ಬು ಬಿಲ್ಲು ವಸೂಲಾತಿಗೆ ಕ್ರಮ

05:20 PM Dec 17, 2024 IST | Samyukta Karnataka
ಬಾಕಿ ಕಬ್ಬು ಬಿಲ್ಲು ವಸೂಲಾತಿಗೆ ಕ್ರಮ

ಬೆಳಗಾವಿ (ಸುವರ್ಣಸೌಧ): ಸಕ್ಕರೆ ಕಾರ್ಖಾನೆಗಳು ರೈತರಿಗೆ ಬಾಕಿ ಮೊತ್ತವನ್ನು ನೀಡಿರುವುದಿಲ್ಲವೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ನಿರ್ದಿಷ್ಟ ಪ್ರಕರಣಗಳು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ಆಯುಕ್ತಾಲಯದಲ್ಲಿ ವರದಿಯಾಗಿರುವುದಿಲ್ಲ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್ ಪಾಟೀಲ ಅವರು ಹೇಳಿದರು.
ವಿಧಾನ ಪರಿಷತನಲ್ಲಿ ಮಂಗಳವಾರ ಸದಸ್ಯರಾದ ಎನ್ ರವಿಕುಮಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು.
2018-19ನೇ ಸಾಲಿಗೆ ಸಂಬಂಧಿಸಿದಂತೆ ಮಾತ್ರ ಮೂರು ಸಕ್ಕರೆ ಕಾರ್ಖಾನೆಗಳಿಂದ 3.94 ರೂ ಕೋಟಿಗಳ ಕಬ್ಬು ಬಿಲ್ಲನ್ನು ಪಾವತಿಸುವುದು ಬಾಕಿ ಇದೆ
ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಸಿ., ಹಳ್ಳಿಖೇಡ್, ಹುಮನಾಬಾದ್ ತಾಲ್ಲೂಕಿನಿಂದ 0.89 ಕೋಟಿ ಬಾಕಿ ಮೊತ್ತ, ಭವಾನಿ ಶುಗರ್ಸ್ ಲಿ., ಬರೂರು, ಬೀದರ್ ತಾಲ್ಲೂಕಿನಿಂದ 1.80 ಕೋಟಿ ರೂ. ಮತ್ತು ಧ್ಯಾನಯೋಗಿ ಶ್ರೀ ಶಿವಕುಮಾರ್ ಸ್ವಾಮೀಜಿ ಶುಗರ್ಸ್ ಲಿ., ಮರಗೂರು, ಇಂಡಿ ತಾಲ್ಲೂಕಿನಿಂದ 1.25 ಕೋಟಿ ರೂ ಕಬ್ಬು ಬಿಲ್ಲನ್ನು ಪಾವತಿಸುವುದು ಬಾಕಿ ಇದೆ.
ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ನಿ., ಹಳ್ಳಿಖೇಡ್, ಹುಮನಾಬಾದ್ ತಾಲ್ಲೂಕು, ಬೀದರ್ ಜಿಲ್ಲೆ ಮತ್ತು ಧ್ಯಾನಯೋಗಿ ಶ್ರೀ ಶಿವಕುಮಾರ್ ಸ್ವಾಮೀಜಿ ಶುಗರ್ಸ್ ಲಿ., ಮರಗೂರು, ಇಂಡಿ ತಾಲ್ಲೂಕು, ವಿಜಯಪುರ ಜಿಲ್ಲೆ ಈ ಕಾರ್ಖಾನೆಗಳು ಸ್ಥಗಿತಗೊಂಡಿರುತ್ತವೆ. ಕಬ್ಬು ಬಿಲ್ಲು ಬಾಕಿ ವಸೂಲಾತಿ ಸಂಬಂಧ ಕಬ್ಬು (ನಿಯಂತ್ರಣ) ಆದೇಶ 1966ರ ಅನ್ವಯ ಬಾಕಿ ವಸೂಲಾತಿ ಸಂಬಂಧ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ವಸೂಲಾತಿ ಪ್ರಮಾಣ ಪತ್ರವನ್ನು ಹೊರಡಿಸಲಾಗಿದೆ ಎಂದು ತಿಳಿಸಿದರು.
2024-25ನೇ ಹಂಗಾಮಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಕಾರ್ಖಾನೆವಾರು ಪಾವತಿಸಬೇಕಾದ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು ನಿಗದಿಪಡಿಸಲಾಗಿದೆ. ನಿಗದಿಪಡಿಸಿದ ದರವು ಎಫ್ ಆರ್ ಪಿ ನಿಯಮದಂತೆ ಎಕ್ಸಗೇಟ್ ದರವಾಗಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

Tags :