ಬಾಣಂತಿ ಸಾವು: ಸಮಿತಿ ವರದಿ ಬಂದ ನಂತರ ಸೂಕ್ತ ಕ್ರಮ
ಬಳ್ಳಾರಿ ಆಸ್ಪತ್ರೆಯಲ್ಲಿ ಇಂದು ಆರೋಗ್ಯ ಸಚಿವರು ಹಾಗೂ ಇಲಾಖೆ ಅಧಿಕಾರಿಗಳ ಪರಿಶೀಲನೆ
ಚಾಮರಾಜನಗರ: ಬಳ್ಳಾರಿ ಆಸ್ಪತ್ರೆಗೆ ಇಂದು ಆರೋಗ್ಯ ಸಚಿವರು ಹಾಗೂ ಇಲಾಖೆ ಅಧಿಕಾರಿಗಳು ಕೂಡ ಭೇಟಿ ನೀಡಿ ಬಾಣಂತಿ ಸಾವಿನ ಕುರಿತು ಪರಿಶೀಲನೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಚಾಮರಾಜನಗರದ ನರಿಪುರ ಗ್ರಾಮದ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಳ್ಳಾರಿ ಆಸ್ಪತ್ರೆಯ ಮೇಲೆ ಇಂದು ಲೋಕಾಯುಕ್ತ ದಾಳಿಯಾಗಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ನಾಲ್ಕು ಬಾಣಂತಿಯರು ಮರಣ ಹೊಂದಿದಾಗ ಸಭೆ ಕರೆಯಲಾಗಿತ್ತು. ಐದನೇ ಬಾಣಂತಿ ಮೃತಪಟ್ಟಿರುವ ಬಗ್ಗೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚೆ ನಡೆದಿದೆ. ಕಳಪೆ ಗುಣಮಟ್ಟದ ಔಷಧ ಸರಬರಾಜು ಮಾಡುತ್ತಿರುವ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಹಾಗೂ ಔಷಧ ನಿಯಂತ್ರಕರನ್ನು ಅಮಾನತು ಮಾಡಲಾಗಿದೆ ಎಂದರು.
ತಪ್ಪಿತಸ್ಥರ ಮೇಲೆ ಕ್ರಮ : ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ವರದಿ ಸಲ್ಲಿಸಲು ಸೂಚಿಸಿದೆ. ವರದಿ ಬಂದ ನಂತರ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.