For the best experience, open
https://m.samyuktakarnataka.in
on your mobile browser.

ಬಾಹ್ಯಾಕಾಶಕ್ಕೆ ಹಾರಲಿವೆ ಧಾರವಾಡದ ನೊಣಗಳು

04:19 AM Aug 27, 2024 IST | Samyukta Karnataka
ಬಾಹ್ಯಾಕಾಶಕ್ಕೆ ಹಾರಲಿವೆ ಧಾರವಾಡದ ನೊಣಗಳು

ಧಾರವಾಡ: ೨೦೨೫ರಲ್ಲಿ ಇಸ್ರೋ ಕೈಗೊಳ್ಳಲಿರುವ ಗಗನಯಾನದಲ್ಲಿ ಧಾರವಾಡದ ವಿಶೇಷ ನೊಣಗಳು ಗಗನ ಯಾತ್ರಿಗಳಾಗಿ ಪ್ರಯಾಣ ಕೈಗೊಳ್ಳಲಿರುವುದು ಪೇಢಾ ನಗರಿಯ ಹೆಮ್ಮೆಯಾಗಿದೆ.
ಇದೇನಪ್ಪ ನೊಣಗಳು ಗಗನ ಯಾತ್ರಿಗಳಾ ಎನ್ನುತ್ತೀರಾ…!! ಹೌದು.. ಹಣ್ಣಿನ ನೊಣ(ಫ್ರುಟ್ಸ್ ಫ್ಲೈಸ್) ಎಂಬ ವಿಶೇಷವಾದ ನೊಣ ಮನುಷ್ಯನ ದೈಹಿಕ ರಚನೆಯ ಶೇ. ೭೦ರಷ್ಟು ಅಂಶವನ್ನು ಒಳಗೊಂಡಿದೆ. ೨೦೨೫ರ ವೇಳೆಗೆ ಇಸ್ರೋ ಮಾನವ ಸಹಿತ ಗಗನಯಾನ ಕೈಗೊಳ್ಳಲಿದ್ದು, ಅದಕ್ಕಿಂತಲೂ ಮುಂಚೆ ಮನುಷ್ಯನ ದೈಹಿಕ ರಚನೆ ಹೋಲುವ ಈ ಹಣ್ಣಿನ ನೊಣವನ್ನು ಗಗನಯಾನಕ್ಕೆ ಕಳುಹಿಸಲು ತೀರ್ಮಾನಿಸಲಾಗಿದೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಜೈವಿಕಶಾಸ್ತç ವಿಭಾಗದಿಂದ ಅಭಿವೃದ್ಧಿಪಡಿಸಲಾದ ಈ ನೊಣದ ಕಿಟ್ ಇಸ್ರೋ ಕೈಗೊಳ್ಳಲಿರುವ ಗಗನಯಾನಕ್ಕೆ ಆಯ್ಕೆಯಾಗಿದೆ.
ಏನಿದು ಹಣ್ಣಿನ ನೊಣ…
ಶೂನ್ಯ ಗುರುತ್ವದಲ್ಲಿ ಈ ನೊಣ ಹೋದಾಗ ಅದರ ದೇಹದಲ್ಲಿ ಆಗುವ ವೈಪರಿತ್ಯಗಳನ್ನು ಗಮನಿಸಲಾಗುತ್ತದೆ. ಕೇಂದ್ರ ಸರ್ಕಾರ ಈ ಯೋಜನೆಗೆ ೭೮ ಲಕ್ಷ ರೂ. ನೀಡಿದ್ದು, ಸತತ ಎರಡು ವರ್ಷಗಳ ಕಾಲ ಈ ಹಣ್ಣಿನ ನೊಣಗಳನ್ನು ಅಧ್ಯಯನಕ್ಕೆ ಒಳಪಡಿಸಿ ಕಿಟ್ ಸಿದ್ಧಪಡಿಸಲಾಗಿದೆ. ಈ ನೊಣ ಸಾಮಾನ್ಯವಾಗಿ ಹಣ್ಣಿನ ಮೇಲೆ ಕುಳಿತುಕೊಳ್ಳುತ್ತದೆ. ಇದು ಮಾನವ ದೈಹಿಕ ರಚನೆ ಹೊಂದಿದ್ದು, ಗಗನಯಾನಕ್ಕೆ ಮೊದಲಿಗೆ ಈ ನೊಣವನ್ನು ಕಳುಹಿಸಿ ಅಲ್ಲಿ ಅದರ ಶರೀರದಲ್ಲಿ ಆಗುವ ಬಲಾವಣೆಗಳನ್ನು ಗಮನಿಸಲಾಗುತ್ತದೆ. ಕೇರಳದ ತ್ರಿವೇಂದ್ರಂ ಹಾಗೂ ಧಾರವಾಡದ ಕೃಷಿ ವಿವಿ ಜೊತೆಗೂಡಿ ಈ ನೊಣಗಳ ಬಗ್ಗೆ ಅಧ್ಯಯನ ನಡೆಸುತ್ತಿವೆ. ಈ ನೊಣಗಳ ಕಿಟ್‌ನಲ್ಲಿ ೧೦ ಗಂಡು ಹಾಗೂ ೧೦ ಹೆಣ್ಣು ನೊಣಗಳು ಇರಲಿದ್ದು, ಗಗನಯಾನದ ಸಂದರ್ಭದಲ್ಲಿ ಆ ನೊಣಗಳ ಸಂತಾನೋತ್ಪತ್ತಿ ಬಗ್ಗೆಯೂ ಗಮನವಿಡಲಾಗುತ್ತಿದೆ.
ಯಾಕೆ ನೊಣಗಳ ಆಯ್ಕೆ…?
ಗಗನಯಾತ್ರಿಗಳು ನಬಕ್ಕೆ ಹಾರಿದಾಗ ಅವರಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಕಾಡುತ್ತಿದೆ. ಅಲ್ಲದೇ ಮನುಷ್ಯನ ದೇಹದಲ್ಲಿಯ ಮೂಳೆ ಸವೆತಗಳು ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿರುವುದು ಗಮನಕ್ಕೆ ಬಂದಿದೆ. ಮನುಷ್ಯರನ್ನು ಕಳುಹಿಸುವ ಮೊದಲು ಪ್ರಾಯೋಗಿಕವಾಗಿ ಮನುಷ್ಯನ ದೇಹ ರಚನೆಯನ್ನೇ ಹೋಲುವ ಈ ಹಣ್ಣಿನ ನೊಣವನ್ನು ಮೊದಲಿಗೆ ಕಳಿಹಿಸಿ ಅದರಲ್ಲಾಗುವ ಬದಲಾವಣೆಗಳನ್ನು ಇಸ್ರೋ ಪರಿಶೀಲನೆ ನಡೆಸಲಿದೆ. ಇಸ್ರೋ ನಡೆಸಿದ ಮಾದರಿಗಳ ಪರೀಕ್ಷೆಯಲ್ಲಿ ೭೫ ವಿಶ್ವದ್ಯಾಲಯಗಳು ತನ್ನ ಮಾದರಿಯನ್ನು ನೀಡಿದ್ದವು. ಅದರಲ್ಲಿ ಧಾರವಾಡದ ಕೃಷಿ ವಿವಿ ನೀಡಿದ ೨೦ ಹಣ್ಣಿನ ನೊಣಗಳಿರುವ ಕಿಟ್ ಆಯ್ಕೆಯಾಗಿದೆ.
ನಾಸಾ ಜೊತೆಗೂ ಕೃಷಿ ವಿವಿ ಈ ಸಂಬಂಧ ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ ನೊಣಗಳ ಕಿಟ್ ಸಿದ್ಧಪಡಿಸಲು ವಿಜ್ಞಾನಿಗಳ ತಂಡ ಸಜ್ಜಾಗಿ ಕೆಲಸ ಮಾಡುತ್ತಿದೆ. ಒಂದು ವೇಳೆ ಶೂನ್ಯ ಗುರುತ್ವದಲ್ಲಿ ಈ ನೊಣಗಳ ದೇಹದಲ್ಲಿ ಯಾವುದೇ ವೈಪರಿತ್ಯ ಉಂಟಾಗದೇ ಹೋದಲ್ಲಿ ಅನ್ಯಗ್ರಹ ವಾಸದ ಕನಸು ಕಾಣುತ್ತಿರುವ ಬಾಹ್ಯಾಕಾಶ ವಿಜ್ಞಾನಿಗಳಿಗೆ ಯಶಸ್ಸಿ ಸಿಕ್ಕಂತಾಗುತ್ತದೆ.

Tags :