ಬಿಜೆಪಿಗೆ ಉಭಯಸಂಕಟ
ಶಿವಕುಮಾರ್ ಮೆಣಸಿನಕಾಯಿ
ಬೆಂಗಳೂರು: ಉಪ ಚುನಾವಣೆಯ ಅಭೂತ ಪೂರ್ವ ವಿಜಯದ ಬಳಿಕ ಬಲಾಬಲವನ್ನು ೧೩೯ಕ್ಕೆ ಹೆಚ್ಚಿಸಿಕೊಂಡು ಆತ್ಮವಿಶ್ವಾಸದಿಂದ ಬೀಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಆಡಳಿತರೂಢ ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ಆಂತರಿಕ ಕಚ್ಚಾಟದಿಂದ ದಿಕ್ಕೆಟ್ಟು ಹೋಗಿರುವ ಬಿಜೆಪಿ ಸೋಮವಾರದಿಂದ ಬೆಳಗಾವಿ ಸುವರ್ಣ ಸೌಧದಲ್ಲಿ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಸಮರ್ಥವಾಗಿ ಎದುರಿಸುವುದು ಅನುಮಾನ ಎಂಬ ಸಂಶಯ ಸ್ವತಃ ಬಿಜೆಪಿಯನ್ನು ಕಾಡುತ್ತಿದೆ.
ಒಂದೆಡೆ ಪಕ್ಷದ ಆಂತರಿಕ ಕಚ್ಚಾಟ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಕೋವಿಡ್ ಹಗರಣ ವನ್ನು ಸರ್ಕಾರ ಮುನ್ನೆಲೆಗೆ ತಂದಿರುವುದು ಬಿಜೆಪಿ ನೈತಿಕ ಸ್ಥೈರ್ಯವನ್ನು ಕುಂದಿಸಿದ್ದರೆ, ಉಪ ಚುನಾವಣೆ ಗೆಲುವಿನ ಬಳಿಕ ಮುಡಾ, ವಾಲ್ಮೀಕಿ ಹಗರಣಗಳಲ್ಲಿ ತನಿಖೆ ಮತ್ತು ನ್ಯಾಯಾಲಯದ ವಿಚಾರಣೆ ಯಾವುದೇ ತಾರ್ಕಿಕ ಹಂತ ಕಾಣದೇ ಇರುವ ಹಿನ್ನೆಲೆಯಲ್ಲಿ ಪ್ರತಿಪಕ್ಷವಾಗಿ ಬಿಜೆಪಿ ಸರ್ಕಾರವನ್ನು ಹಣಿಯಲು ಒದ್ದಾಡುವಂತಾಗಿದೆ.
ಕಳೆದ ವರ್ಷ ಬೆಳಗಾವಿ ಅಧಿವೇಶನದಲ್ಲಿ ಬೆಂಗಳೂರು ಬಿಜೆಪಿ ಶಾಸಕರು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಒಂದು ಹಂತದಲ್ಲಿ ಅಶೋಕ್ ಹೇಳಿದಂತೆ ಸದನದಂತೆ ಕೇಳುವ ಅನಿವಾರ್ಯತೆ ನಮಗಿಲ್ಲ ಎಂದು ಗುಟುರು ಹಾಕಿದ್ದರು. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಅದೇ ತಾನೇ ಹೊಸದಾಗಿ ರಾಜ್ಯಾಧ್ಯಕ್ಷರಾಗಿದ್ದ ಬಿ.ವೈ.ವಿಜಯೇಂದ್ರ ವಿರುದ್ಧ ಸದನದಲ್ಲೇ ವಾಗ್ದಾಳಿ ನಡೆಸಿದ್ದರು. ಇದರಿಂದ ಪ್ರತಿಪಕ್ಷ ಬಿಜೆಪಿ ವಿಧಾನಮಂಡಲ ಅಧಿವೇಶನದ ಮೊದಲ ವಾರ ಸಂಪೂರ್ಣ ಹಿನ್ನಡೆ ಅನುಭವಿಸಿ, ಸರ್ಕಾರವೇ ಮೇಲುಗೈ ಸಾಧಿಸಿತ್ತು. ಆದರೆ ಎರಡನೇ ವಾರ ಭಿನ್ನಮತವನ್ನು ಮುಚ್ಚಿಟ್ಟುಕೊಂಡು ಅಷ್ಟೂ, ಇಷ್ಟೂ ಹೋರಾಟದ ಪ್ರಯತ್ನ ನಡೆಸಿ ಕುಂದಿದ ಆತ್ಮವಿಶ್ವಾಸದ ನಡುವೆಯೇ ಅಧಿವೇಶನ ಪೂರ್ಣಗೊಳಿಸಿತ್ತು.
ವಿಜಯೇಂದ್ರಗೆ ಬಹುದೊಡ್ಡ ಸವಾಲು
ಇದೀಗ ತಾನೆ ರಾಜ್ಯ ಬಿಜೆಪಿಯ ಭಿನ್ನಮತದ ಒಂದು ಬಹಿರಂಗ ಪರ್ವ ಮುಕ್ತಾಯಗೊಂಡಿದೆ. ಪಕ್ಷದ ರಾಷ್ಟ್ರೀಯ ಶಿಸ್ತು ಸಮಿತಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ, ಇನ್ನು ಮುಂದೆ ಬಹಿರಂಗ ಹೇಳಿಕೆ ಕೊಡದಂತೆ ತಾಕೀತು ಮಾಡಿತ್ತು. ಕಳೆದ ನಾಲ್ಕು ದಿನಗಳ ಬೆಳವಣಿಗೆ ನೋಡಿದರೆ ಯತ್ನಾಳ ಬದಲಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿಜಯೇಂದ್ರ ವಿರುದ್ಧ ಬಹಿರಂಗ ಹೇಳಿಕೆ ಕೊಡುತ್ತಿದ್ದಾರೆ. ರಾಜ್ಯ ಕೋರ್ ಕಮೀಟಿ ಸಭೆಯಲ್ಲಿ ಪಕ್ಷದ ಪ್ರಭಾರಿ ರಾಧಾಮೋಹನ್‌ದಾಸ್ ಅಗರ್‌ವಾಲ್ ಆಡಿರುವ ಮಾತುಗಳು ವಿಜಯೇಂದ್ರಗೆ ಕೆಲಮಟ್ಟಿನ ಶಕ್ತಿ ತುಂಬಿದಂತೆ ಕಾಣುತ್ತಿದೆ. ಆದರೆ ವಿಜಯೇಂದ್ರಗೆ ಈಗ ನಿಜವಾದ ಸವಾಲು ಎದುರಾಗಿದೆ.
ವಾಲ್ಮೀಕಿ, ಮುಡಾ ಹಗರಣ, ವಕ್ಫ್ ಮಂಡಳಿಯಿಂದ ರೈತರ ಆಸ್ತಿ ವಶ ಪ್ರಕರಣಗಳ ವಿರುದ್ಧ ಸದನದ ಹೊರಗೆ ಹೇಗೆ ಪಕ್ಷದ ವತಿಯಿಂದಲೇ ಹೋರಾಟ ನಡೆಸಲು ವಿಜಯೇಂದ್ರ ತಿಣುಕಾಡುತ್ತಿದ್ದಾರೆಯೋ ಅದೇ ರೀತಿ ಸದನದ ಒಳಗೆ ಯತ್ನಾಳ ಅಥವಾ ಇನ್ನಾರೋ ಹೈಜಾಕ್ ಮಾಡುವ ಬದಲು ಪಕ್ಷದಿಂದಲೇ ಹೋರಾಟ ಮಾಡಿದೆವು ಎಂಬುದನ್ನು ಸಾಬೀತುಪಡಿಸಬೇಕಾದ ಬಹುದೊಡ್ಡ ಸವಾಲು ವಿಜಯೇಂದ್ರ ಮುಂದಿದೆ. ಆರಂಭದಲ್ಲಿ ಕೆಲದಿನಗಳ ಕಾಲ ಜೋಡೆತ್ತುಗಳಂತೆ ನಾವು ಹೋರಾಡುತ್ತೇವೆ ಎನ್ನುತ್ತಿದ್ದ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಕೂಡ ಇತ್ತೀಚೆಗೆ ವಿಜಯೇಂದ್ರ ಜೊತೆ ಉತ್ತಮ ಸಂಬಂಧ ಹೊಂದಿದಂತೆ ಕಾಣುತ್ತಿಲ್ಲ. ಇತ್ತೀಚೆಗೆ ಅಶೋಕ್ ದೆಹಲಿಗೆ ಹೋಗಿ ಬಂದ ನಂತರವಂತೂ ಅಶೋಕ್ ಯಾವ ಕಡೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಹೀಗಾಗಿ ವಿಜಯೇಂದ್ರ ಈಗ ಯತ್ನಾಳ ಜೊತೆಗೆ ಅಶೋಕ್ ಅವರನ್ನೂ ಎದುರಿಸಿ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಬೇಕಿದೆ. ಅದೇ ವೇಳೆ ಅಶೋಕ್ ಅವರಿಗೂ ಕೂಡ ಯತ್ನಾಳ ಮತ್ತು ವಿಜಯೇಂದ್ರ ನಡುವೆ ಅತ್ತದರಿ, ಇತ್ತಪುಲಿ ಎಂಬ ಸ್ಥಿತಿ ಇದೆ.