ಬೈಯ್ದವನು ಬಕ್ಕೇಸಿ, ಬಯ್ಯದವನು ಟಕ್ಕೇಸಿ
ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಈ ಮೂರು ಕಾಲಗಳನ್ನು ಕೇಳಿದ್ದೇನೆ.. ಇತ್ತೀಚಿಗೆ ಮಾತ್ರ ಅದ್ಯಾವುದೋ ಬಯ್ದಾಡುವ ಕಾಲ ಎಂದು ಬಂದಿದೆ ಎಂದು ರಾಜ್ಯದ ತುಂಬ ಸುದ್ದಿ ಆಗಿದೆ. ಎಲ್ಲರೂ ಇದೆಂತಹ ಕಾಲ ಬಂತು ಎಂದು ಗಾಬರಿಯಾಗಿದ್ದಾರೆ. ಈ ವನ್ ಮೋದಿ ಅವರೂ ಸಹ ಅರೆ ಯಾರ್ ಎ ಕೈಸೆ ಕಾಲ್ ಆಗಯಾ ಅಂದಿದ್ದು ಸಿಎಂ ಇಬ್ಬಿಸಾಬನು ಅಯ್ಯೋ ಕಿಸಿ ಕಿಸಿಕೋ ಕಾಲ್ ಆತಾ ಹೈ ಚೋಡೋ ಎಂದು ಮೆಸೇಜ್ ಕಳಿಸಿದರಂತೆ. ಈ ವಿಷಯ ಇಷ್ಟಕ್ಕೆ ಬಿಟ್ಟರೆ ಸರಿ ಇರುವುದಿಲ್ಲ ಇದನ್ನು ಗೊತ್ತಿಗೆ ಹಚ್ಚಲೇಬೇಕು ಎಂದು ಎಲ್ಲರೂ ನಿರ್ಧಾರ ಮಾಡಿ ಕೊನೆಗೆ ಕೇಳಿದರೆ ಕಂಟ್ರಂಗಮ್ಮತ್ತಿಗೇ ಕೇಳಬೇಕು ಎಂದು ನಿರ್ಧಾರ ಮಾಡಿ ಆಕೆಯ ಕಡೆಗೆ ಹೋದರು. ಸತ್ಯಮ್ಮತ್ತಿ, ಅಲೈಬೀಬಾ ಅವರ ಜತೆ ಯಾವುದೋ ಕಥೆ ಹೇಳುತ್ತ ಕಟ್ಟೆಯ ಮೇಲೆ ಕುಳಿತಿದ್ದಳು. ಇವರೆಲ್ಲರೂ ಹೋದದ್ದು ನೋಡಿ… ಏನ್ ಎಲ್ಲ ಮ್ಯಾಳದವರೂ ಬಂದಿದ್ದೀರಿ ಕೂಡ್ರಿ.. ಕೂಡ್ರಿ ಎಂದು ಕೂಡಿಸಿದಳು. ಎಲ್ಲರೂ ಬಂದ ಕಾರಣವೇನು? ಎಂದು ಕೇಳಲು….. ಏನಂತ ಹೇಳಣ ಕಂಟ್ರಂಗಮ್ಮತ್ತಿ ಈಗ ಕಾಲ ಏನೋ ಬದಲಾಗುತ್ತಿವೆಯಂತೆ… ಮೂರು ಕಾಲಗಳು ಇದ್ದದ್ದು ಈಗ ನಾಲ್ಕನೇ ಕಾಲ ಕೂಡಿದೆಯಂತೆ. ಅದೇನೋ ಬಯ್ದಾಡುವ ಕಾಲವಂತೆ ಎಂದಾಗ… ಉಷ್ಯಪ್ಪ ಎಂದು ನಿಟ್ಟುಸಿರುಬಿಟ್ಟ ಕಂಟ್ರಂಗಮ್ಮತ್ತಿಯು, ಹೌದೌದು ಈಗ ಅದೇನೋ ಬಯ್ದಾಡುವ ಕಾಲ ಬಂದಿದೆಯಂತೆ. ಅವರಿದ್ದಾರಲ್ಲ ಅವರಿಂದಲೇ ಇವೆಲ್ಲ ಉದ್ಭವ ಆಗುತ್ತಿವೆ. ಅಂದಾಗ… ತಳವಾರ್ಕಂಟಿ.. ಯಾರತ್ತಿ? ಅಂದಳು. ಅವೇ… ಸುಮಾರಣ್ಣ-ಬಂಡೆಸಿವು ಇಬ್ಬರೂ ಬಾಯಿಗೆ ಬಂದಂತೆ ಬಯ್ದಾಡುತ್ತಿವೆ. ಹಾಗಾಗಿ ಎಲ್ಲರೂ ಕಾಲ ಬದಲಾಗುತೈತಿ… ಅಂತ ತಿಳಿದಿದ್ದಾರೆ. ಅಂಥದ್ದೇನೂ ಇಲ್ಲ. ಅದ್ಯಾವ ಕಾಲವೂ ಬದಲಾಗುವುದಿಲ್ಲ. ಅವರೆಡೂ ನೀ ಅತ್ತಂಗ ಮಾಡು ನಾ ಸತ್ತಂಗ ಮಾಡುತ್ತೇನೆ ಅಂತ ಮಾತನಾಡಿಕೊಂಡಿದ್ದು ನನಗೆ ನನ್ನ ಅಂತಶ್ಚಕ್ತಿ ಹೇಳಿದೆ. ನೀವು ಯಾರೂ ತಲೆಕೆಡೆಸಿಕೊಳ್ಳಬೇಡಿ.. ಬೈಯ್ದವನು ಬಕ್ಕೇಸಿ-ಬಯ್ಯದವನು ಟಕ್ಕೇಸಿ ಅಷ್ಟೇ ಎಂದು ಮಾತು ಮುಗಿಸಿದಳು ಕಂಟ್ರಂಗಮ್ಮತ್ತಿ.