ಬ್ಯಾಟರಿ ವಿದ್ಯುತ್ ಈ ಕಾಲಕ್ಕೆ ಶುಕ್ರದೆಸೆ
ಇನ್ನುಮುಂದೆ ಇರುವುದೇ ಬ್ಯಾಟರಿ ವಿದ್ಯುತ್ ಬಳಸುವ ಕಾಲ. ಎಲ್ಲ ದೇಶಗಳಲ್ಲಿ ಇದರ ಬಗ್ಗೆ ಹೆಚ್ಚಿನ ಸಂಶೋಧನೆ ಮತ್ತು ಮಾರಾಟ ಅಧಿಕಗೊಳ್ಳುತ್ತಿದೆ. ಇದರಲ್ಲಿ ನಾವು ಹಿಂದೆ ಬೀಳಬಾರದು. ಚೀನಾ ಲೀಥಿಯಂ ಫೆರೊ ಫಾಸ್ಪೇಟ್ ಬ್ಯಾಟರಿ ಉತ್ಪಾದನೆಯಲ್ಲಿ ಮನಾಪಲಿ ಸಾಧಿಸಿದೆ. ಈಗ ನಾವು ಬಳಸುತ್ತಿರುವ ಲೀಥಿಯಂ ಬ್ಯಾಟರಿಗಳಿಗಿಂತ ಕಡಿಮೆ ದರದಲ್ಲಿ ಲಭ್ಯ. ಅಲ್ಲದೆ ದೀರ್ಘಕಾಲಿಕ. ಮುಂದಿನ ದಿನಗಳಲ್ಲಿ ಬ್ಯಾಟರಿಗೆ ಬೇಕಾದ ಖನಿಜಗಳಿರುವ ದೇಶಗಳಿಗೆ ಪ್ರಾಧಾನ್ಯತೆ ಬರಲಿದೆ.
ವಿದ್ಯುತ್ ಮೊದಲಿನಿಂದಲೂ ದಾಸ್ತಾನು ಮಾಡಬಹುದಾದ ಇಂಧನವಲ್ಲ. ಉತ್ಪಾದನೆಯಾದ ಕೂಡಲೇ ಬಳಸಿಬಿಡಬೇಕು. ಬ್ಯಾಟರಿ ಬಳಕೆ ಜನಪ್ರಿಯಗೊಂಡ ಮೇಲೆ ವಿದ್ಯುತ್ ದಾಸ್ತಾನು ಕಷ್ಟದ ಕೆಲಸವಲ್ಲ. ಎಲ್ಲಿ ಬೇಕಾದರು ಬ್ಯಾಟರಿ ಇಟ್ಟು ವಿದ್ಯುತ್ ಬಳಸಬಹುದು. ಹಿಂದೆ ಕಲ್ಲಿದ್ದಲು, ಜಲ. ಅಣು ಸೇರಿದಂತೆ ಎಲ್ಲ ರೂಪದ ವಿದ್ಯುತ್‌ಗಳಿಗೆ ಬೇಕಾದ ಕಚ್ಚಾವಸ್ತುಗಳನ್ನು ದಾಸ್ತಾನು ಮಾಡಬೇಕಿತ್ತು. ಬ್ಯಾಟರಿ ಆವಿಷ್ಕಾರವಾದ ಮೇಲೆ ವಿದ್ಯುತ್ ದಾಸ್ತಾನು ಸುಲಭದ ಕೆಲಸವಾಗಿದೆ. ಈಗ ಪೆಟ್ರೋಲ್, ಡೀಸೆಲ್, ಸಿಎನ್‌ಜಿ, ಎಲ್‌ಪಿಜಿ ಉಳಿತಾಯ ಮಾಡಲು ಬ್ಯಾಟರಿಗಳನ್ನು ಬಳಸುತ್ತಿದ್ದೇವೆ. ಬ್ಯಾಟರಿ ಚಾಲಿತ ವಾಹನಗಳಿಗೆ ಈಗ ಬೇಡಿಕೆ ಅಧಿಕಗೊಂಡಿದೆ.
ವಿವಿಧ ಬ್ಯಾಟರಿ
ನಾವು ವಾಹನಗಳಿಗೆ ಬಳಸುವ ಲೀಥಿಯಂ ಅಯಾನ್ ಬ್ಯಾಟರಿ ಈಗ ಜನಪ್ರಿಯ. ಇದರಲ್ಲಿ ವಿದ್ಯುತ್ ಸಂಗ್ರಹಿಸುವ ಸಾಮರ್ಥ್ಯ ಅಧಿಕವಾಗಿದೆ. ಇದು ದುಬಾರಿ ಕೂಡ. ಇದಲ್ಲದೆ ವನಡಿಯಂ ಫ್ಲೊ ಬ್ಯಾಟರಿ ಕೂಡ ಬಳಕೆಯಲ್ಲಿದೆ. ಇದು ದ್ರವರೂಪದ ಎಲೆಕ್ಟ್ರೋಲೈಟ್ಸ್ ಹೊಂದಿದೆ. ಇದು ಹೆಚ್ಚು ಕಾಲ ವಿದ್ಯುತ್ ಹಿಡಿದಿಟ್ಡುಕೊಳ್ಳುತ್ತದೆ. ಸೋಡಿಯಂ ಅಯಾನ್ ಬ್ಯಾಟರಿ ಕೂಡ ಬಂದಿದೆ. ಅದೇರೀತಿ ಸಾಲಿಡ್ ಎಲೆಕ್ಟ್ರೋಲೈಟ್ಸ್ ಬಂದಿದೆ. ಇದರಲ್ಲಿ ಎಲೆಕ್ಟೊçಲೈಟ್ ಘನರೂಪದಲ್ಲಿರುತ್ತದೆ. ಹಾಗೆ ಹೈಬ್ರಿಡ್ ಬ್ಯಾಟರಿಗಳೂ ಬಳಕೆಯಲ್ಲಿವೆ. ಪನೊಸಾನಿಕ್ ಎವರ್‌ವೋಲ್ಟ್ ಬ್ಯಾಟರಿ ಎ.ಸಿ. ಮತ್ತು ಡಿ.ಸಿ. ವಿದ್ಯುತ್ ನೀಡುವ ಸಾಮರ್ಥ್ಯ ಪಡೆದಿದೆ. ಇದರಲ್ಲಿ ಸೋಲಾರ್ ಮತ್ತು ಪವನ ವಿದ್ಯುತ್ ಎರಡನ್ನೂ ದಾಸ್ತಾನು ಮಾಡಬಹುದು.
ಬ್ಯಾಟರಿ ದರ
ಬ್ಯಾಟರಿಗಳು ದುಬಾರಿ ಎಂಬ ಭಾವನೆ ಜನರಲ್ಲಿದೆ. ಇದಕ್ಕೆ ಕಾರಣವೂ ಇದೆ. ಇದಕ್ಕೆ ಮೊದಲು ಹಾಕದ ಹಣ ಹೆಚ್ಚು. ಆಮೇಲೆ ನಿರ್ವಹಣೆ ವೆಚ್ಚ ಕಡಿಮೆ. ಅಲ್ಲದೆ ಕಡಿಮೆ ದರದಲ್ಲಿ ವಿದ್ಯುತ್ ಲಭಿಸಲಿದೆ. ೨೪ ಗಂಟೆ ನಿರಂತರ ಬಳಸಬಹುದು. ದಟ್ಟ ಕಾಡಿನಲ್ಲಿದ್ದರೂ ಬ್ಯಾಟರಿ ವಿದ್ಯುತ್ ಅಬಾಧಿತ. ಸಾಮಾನ್ಯವಾಗಿ ಒಂದು ಬ್ಯಾಟರಿಗೆ ೨೫ ರಿಂದ ೩೫ ಸಾವಿರ ರೂ. ಹಣ ತೊಡಗಿಸಬೇಕು. ಲೀಥಿಯಂ ಬ್ಯಾಟರಿಗಳು ೧೦-೧೫ ವರ್ಷಗಳವರೆಗೆ ಕೆಲಸ ಮಾಡುತ್ತವೆ. ಸೀಸದ ಆಸಿಡ್ ಇರುವ ಬ್ಯಾಟರಿಗಳು ಕಡಿಮೆ ದರದಲ್ಲಿ ಲಭ್ಯ. ಇದು ೫-೭ ವರ್ಷ ಬರುತ್ತದೆ. ಉಪ್ಪುನೀರಿನ ಬ್ಯಾಟರಿಗಳೂ ಬರುತ್ತವೆ. ಇವುಗಳು ಪರಿಸರಸ್ನೇಹಿ. ಆದರೆ ವಿದ್ಯುತ್ ಕೊಡುವ ಸಾಮರ್ಥ್ಯ ಕಡಿಮೆ.
ಮಾರುಕಟ್ಟೆ
ಬ್ಯಾಟರಿಗಳ ಮಾರುಕಟ್ಟೆ ಬಹಳ ದೊಡ್ಡದು. ಈಗ ಎಲ್ಲ ದೇಶಗಳಲ್ಲಿ ಬ್ಯಾಟರಿ ಬಳಕೆ ಅಧಿಕಗೊಳ್ಳುತ್ತಿದೆ. ಇಡೀ ಜಗತ್ತಿನಲ್ಲಿ ೪೨ ಗಿಗಾವ್ಯಾಟ್ ವಿದ್ಯುತ್ ಬ್ಯಾಟರಿಯಲ್ಲಿ ದಾಸ್ತಾನು ಆಗುತ್ತಿದೆ. ೨೦೨೩ರಲ್ಲಿ ಬ್ಯಾಟರಿಚಾಲಿತ ವಾಹನಗಳ ಸಂಖ್ಯೆ ಶೇ.೪೩ ರಷ್ಟು ಅಧಿಕಗೊಂಡಿದೆ. ಬ್ಯಾಟರಿ ಚಾಲಿತ ೧೪ ದಶಲಕ್ಷ ಕಾರುಗಳು ರಸ್ತೆಗೆ ಬರುತ್ತಿದೆ. ಲೀಥಿಯಂ ಬ್ಯಾಟರಿಗಳಿಗೆ ಶೇ.೯೦ ರಷ್ಟು ಬೇಡಿಕೆ ಹೆಚ್ಚಾಗಿದೆ. ಮೊಬೈಲ್‌ಗಳಿಗೂ ಈಗ ಬ್ಯಾಟರಿ ಬೇಕೇಬೇಕು. ಇದಕ್ಕೆ ತಕ್ಕಂತೆ ಬ್ಯಾಟರಿ ಬೆಲೆ ಇಳಿಯುತ್ತಿವೆ. ೨೦೧೦ ರಲ್ಲಿ ಪ್ರತಿ ಕಿ.ವ್ಯಾಟ್ ಬ್ಯಾಟರಿಗೆ ೧೪೦೦ ಡಾಲರ್ ಇತ್ತು. ಈಗ ೧೪೦ ಡಾಲರ್‌ಗೆ ಇಳಿದಿದೆ.
ಎಲ್‌ಎಫ್‌ಪಿ ಬ್ಯಾಟರಿ
ಲೀಥಿಯಂ ಬ್ಯಾಟರಿ ದುಬಾರಿಯಾಗುತ್ತಿದ್ದಂತೆ ಲೀಥಿಯಂ ಫೆರೊ ಫಾಸ್ಫೇಟ್ ಬ್ಯಾಟರಿಗಳು ಬಳಕೆಗೆ ಬಂದಿವೆ. ಇದರ ಬೆಲೆ ಕಡಿಮೆ ಹಾಗೂ ದೀರ್ಘಕಾಲಿ. ಚೀನಾ ಇದರ ಉತ್ಪಾದನೆಯಲ್ಲಿ ಮನಾಪಲಿ ಸಾಧಿಸಿದೆ. ಇದಕ್ಕೆ ಬೇಕಾದ ಎಲ್ಲ ವಸ್ತುಗಳನ್ನು ಚೀನಾ ತನ್ನ ಪ್ರಾಬಲ್ಯ ಸಾಧಿಸಿದೆ. ಲೀಥಿಯಂ ಕೋಬಾಲ್ಟ್ ನಿಕ್ಕಲ್ ಮ್ಯಾಂಗನೀಸ್ ಎಲ್ಲ ಕಡೆ ಬಳಕೆಯಲ್ಲಿದೆ. ಫೆರೊ ಫಾಸ್ಟೇಟ್ ಈ ಬಳಕೆಯನ್ನು ಕಡಿಮೆ ಮಾಡಲಿದೆ. ಮುಂದಿನ ದಿನಗಳಲ್ಲಿ ಎಲ್ಲ ದೇಶಗಳು ತಮ್ಮ ತಮ್ಮ ಖನಿಜ ಸಂಪತ್ತು ರಕ್ಷಿಸಿಕೊಳ್ಳಲು ಪ್ರಯತ್ನ ಮಾಡಲಿದೆ. ಬ್ಯಾಟರಿ ಜನಪ್ರಿಯಗೊಂಡಂತೆ ಪೆಟ್ರೋಲ್, ಡೀಸೆಲ್ ಮೇಲಿನ ಅವಲಂಬನೆ ಇಳಿಮುಖಗೊಳ್ಳಲಿದೆ. ಅದರಿಂತ ತೈಲ ರಾಷ್ಟ್ರಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಕಡಿಮೆಯಾಗಲಿದೆ. ಈಗ ಬ್ಯಾಟರಿಗೆ ಬೇಕಾದ ಖನಿಜ ಸಂಪತ್ತನ್ನು ಪಡೆದುಕೊಳ್ಳುವ ಪೈಪೋಟಿಯಲ್ಲಿ ಬಲಿಷ್ಠ ರಾಷ್ಟçಗಳಿವೆ. ಹಿಂದೆ ಆಫ್ಘಾನಿಸ್ತಾನದ ಖನಿಜ ಸಂಸತ್ತಿನ ಮೇಲೆ ಕಣ್ಣು ಬಿದ್ದಿತ್ತು. ಈಗ ಅದೇರೀತಿ ಬೇರೆ ಬೇರೆ ದೇಶಗಳಲ್ಲಿ ಖನಿಜ ಸಂಪತ್ತನ್ನು ಹುಡುಕುವ ಕೆಲಸ ನಡೆಯುತ್ತಿದೆ. ಚೀನಾ ಈ ವಿಷಯದಲ್ಲಿ ಮುಂದಿದೆ. ಇದನ್ನು ಹೊರತಪಡಿಸಿದರೆ ಅಮೆರಿಕ ಮತ್ತು ಕೊರಿಯಾ ಖನಿಜ ಸಂಪತ್ತನ್ನು ರಕ್ಷಿಸಿಕೊಳ್ಳುವುದರಲ್ಲಿ ಮುಂದಿದೆ. ೨೦೫೦ಕ್ಕೆ ತೈಲಗಳ ಬಳಕೆ ಶೂನ್ಯಕ್ಕೆ ಬರಲಿದೆ. ಅಷ್ಟರಲ್ಲಿ ಬ್ಯಾಟರಿ ಉತ್ಪಾದನೆ ಹೆಚ್ಚಿಸಿಕೊಳ್ಳುವುದು ಅಗತ್ಯ. ಕಡಿಮೆ ದರದಲ್ಲಿ ಬ್ಯಾಟರಿ ಉತ್ಪಾದಿಸಲು ಸಾಧ್ಯವಾದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ಪೈಪೋಟಿ ಎದುರಿಸಲು ಸಾಧ್ಯವಾಗಲಿದೆ. ನಮ್ಮಲ್ಲೂ ಬ್ಯಾಟರಿ ಚಾಲಿತ ವಾಹನಗಳ ಬಳಕೆ ಅಧಿಕಗೊಳ್ಳುತ್ತಿದೆ. ಆದರೆ ಬ್ಯಾಟರಿ ಉತ್ಪಾದನೆ ನಿರೀಕ್ಷಿತ ಮಟ್ಟದಲ್ಲಿ ಅಧಿಕಗೊಳ್ಳುತ್ತಿಲ್ಲ. ಸೌರವಿದ್ಯುತ್ ಉತ್ಪಾದನೆಯೊಂದಿಗೆ ಅದನ್ನು ಬ್ಯಾಟರಿಯಲ್ಲಿ ದಾಸ್ತಾನು ಮಾಡುವ ಪ್ರಮಾಣ ಅಧಿಕಗೊಳ್ಳಬೇಕು. ಈಗ ೧೨ ಗಂಟೆ ಸೋಲಾರ್ ವಿದ್ಯುತ್ ಉತ್ಪಾದನೆ ಸಾಧ್ಯ. ಆದರೆ ಉತ್ಪಾದಿತ ವಿದ್ಯುತ್ ದಾಸ್ತಾನು ಮಾಡಲು ಬ್ಯಾಟರಿಗಳ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಬ್ಯಾಟರಿ ಉತ್ಪಾದನೆಗೆ ವಿದೇಶಿ ನೇರ ಬಂಡವಾಳವನ್ನು ಆಹ್ವಾನಿಸುವುದು ಅನಿವಾರ್ಯ. ಬ್ಯಾಟಿರಿಗಳ ದಾಸ್ತಾನು ಸಾಮರ್ಥ್ಯ ಹೆಚ್ಚಿಸಿದರೆ ವಿದ್ಯುತ್ ಅಭಾವ ಇರುವುದಿಲ್ಲ. ಈಗ ಋತುಮಾನ ಬದಲಾದಂತೆ ವಿದ್ಯುತ್ ಉತ್ಪಾದನೆ ಮೂಲವನ್ನು ಬದಲಿಸುತ್ತಿದ್ದೇವೆ. ಮಳೆಗಾಲದಲ್ಲಿ ಜಲ ವಿದ್ಯುತ್, ಬೇಸಿಗೆಯಲ್ಲಿ ಶಾಖೋತ್ಪನ್ನ ವಿದ್ಯುತ್‌ನ ಬಳಕೆ ಅನಿವಾರ್ಯ. ಬ್ಯಾಟರಿ ದಾಸ್ತಾನು ಅಧಿಕಗೊಂಡಲ್ಲಿ ಈ ಸಮಸ್ಯೆ ಇರುವುದಿಲ್ಲ. ಕಡಿಮೆ ವೆಚ್ಚದಲ್ಲಿ ವಿದ್ಯುತ್ ದಾಸ್ತಾನು ಮಾಡಲು ಸಾಧ್ಯವಾಗಲಿದೆ. ಲೀಥಿಯಂನಿಂದಲೂ ಪರಿಸರಕ್ಕೆ ಹಾನಿ ಆಗುವುದು ನಿಜ. ಆದರೆ ಪೆಟ್ರೊಲ್ ಮತ್ತು ಡೀಸೆಲ್‌ನಿಂದ ಆಗುವ ಪರಿಸರಕ್ಕೆ ಹಾನಿ ಅಧಿಕ. ಬ್ಯಾಟರಿ ಅತಿಕಡಿಮೆ ಸ್ಥಳ ತೆಗೆದುಕೊಳ್ಳುವುದರಿಂದ ಅತಿ ಕಡಿಮೆ ಸ್ಥಳದಲ್ಲಿ ಅತಿ ಹೆಚ್ಚು ವಿದ್ಯುತ್ ಸಂಗ್ರಹಿಸಿಡಬಹುದು. ಈಗ ಜಲ ವಿದ್ಯುತ್ ಕೇಂದ್ರಗಳಲ್ಲಿ ಪಂಪ್ಡ್ ಸ್ಟೋರೇಜ್ ಸಿಸ್ಟಂ ಬದಲು ಬ್ಯಾಟರಿ ದಾಸ್ತಾನು ವ್ಯವಸ್ಥೆಯನ್ನು ಬಳಸಲಾಗುತ್ತಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಟ್ಟು ಬ್ಯಾಟರಿ ದಾಸ್ತಾನಿಗೆ ಹೆಚ್ಚಿನ ಬಂಡವಾಳ ಹೂಡುವುದು ಸೂಕ್ತ. ಇದರ ಬಗ್ಗೆ ರಾಜ್ಯ ಸರ್ಕಾರ ಮರುಚಿಂತನೆ ನಡೆಸುವುದು ಸೂಕ್ತ. ತಂತ್ರಜ್ಞರು ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡುವುದು ಸೂಕ್ತ. ಪರಿಸರ ರಕ್ಷಣೆಗೆ ಎಲ್ಲ ಕ್ರಮ ಕೈಗೊಳ್ಳುವುದು ಅಗತ್ಯ. ಬ್ಯಾಟರಿ ತಂತ್ರಜ್ಞಾನ ಈಗ ಎಲ್ಲ ಕಡೆ ಬಳಕೆಯಾಗುತ್ತಿರುವಾಗ ನಾವು ಹಿಂದೆ ಬೀಳುವುದು ಸರಿಯಲ್ಲ. ಪಂಪ್ಡ್ ಸ್ಟೋರೇಜ್ ವ್ಯವಸ್ಥೆ ಈಗ ಕೆಲವು ಕಡೆ ಮಾತ್ರ ಬಳಕೆಯಲ್ಲಿದೆ. ಮುಂದಿನ ದಿನಗಳಲ್ಲಿ ಜಲ ವಿದ್ಯುತ್ ಯೋಜನೆಗಳು ನಿಲ್ಲುವ ಕಾಲ ಬರಬಹುದು. ಬ್ಯಾಟರಿ ದಾಸ್ತಾನು ವ್ಯವಸ್ಥೆಗೆ ಇನ್ನೂ ೨೫-೩೦ ವರ್ಷಗಳ ಭವಿಷ್ಯವಿದೆ.