For the best experience, open
https://m.samyuktakarnataka.in
on your mobile browser.

ಮಕ್ಕಳಿರಲವ್ವ ತಲೆ ತುಂಬಾ

03:30 AM Jan 08, 2025 IST | Samyukta Karnataka
ಮಕ್ಕಳಿರಲವ್ವ ತಲೆ ತುಂಬಾ

ವಿಶ್ವನ ಮನೆಗೆ ನಾನು ಎಂಟ್ರಿ ಕೊಟ್ಟಾಗ ಗಾಢ ಮೌನ ಆವರಿಸಿತ್ತು. ವಿಶ್ವ ವಿಶಾಲೂ ಮುಂದೆ ಹೊಸ ಮದುವೆ ಗಂಡಾದ ಮೋಹನ ಸಪ್ಪಗೆ ಕುಳಿತಿದ್ದ. ಹೊಸ ವರ್ಷದಲ್ಲಿ ಹೊಸ ಮದುವೆ ಗಂಡಿಗೆ ಯಾಕಿಷ್ಟು ಆತಂಕ ಎಂದು ನನಗೆ ಗಾಬರಿ ಆಯಿತು.
“ಮದ್ವೆ ಟೈಮಲ್ಲಿ ಪ್ರೆಸೆಂಟೇಷನ್ಸ್ ಕಮ್ಮಿ ಆಯ್ತು ಅಂತಾನಾ ಮೋಹನ ಸಪ್ಪಗಿರೋದು?” ಎಂದು ರೇಗಿಸಿದೆ. ಮೋಹನ ಮುಖ ನೋಡಿ ಸುಮ್ಮನಾದ. ವಿಶ್ವ ಉತ್ತರಿಸಿದ.
“ಈಗ ತಾನೇ ಸಂತಾನಲಕ್ಷ್ಮೀ ದೇವಸ್ಥಾನಕ್ಕೆ ಹೋಗಿ ಬಂದ. ಅರ್ಚಕರು ಸ್ಟ್ರಾಂಗಾಗಿ ಆಶೀರ್ವಾದ ಮಾಡಿದ್ದಾರೆ. ಆ ಬಗ್ಗೆ ಹೆದರಿದ್ದಾನೆ”
“ಹೆದರೋಂತಹ ಆಶೀರ್ವಾದ ಏನಿರುತ್ತೆ?” ಎಂದು ನಾನು ಮೋಹನ್‌ನ ಕೇಳಿದೆ.
“ಕನಿಷ್ಠ ಮೂರು ಮಕ್ಕಳು ಆಗಲಿ ಅಂತ ಆದೇಶ ಕೊಟ್ಟು ಆಶೀರ್ವಾದ ಮಾಡಿದ್ದಾರೆ”
“ಮಕ್ಕಳಿಗೆ ಏನು, ಪುತಪುತ ಆಗುತ್ತೆ ಬಿಡು, ಸಂತಾನ ಲಕ್ಷ್ಮೀ ದೇವಾಲಯ ಅರ್ಚಕರ ವರ ಎಂದೂ ಫೈಲಾಗೊಲ್ಲ” ಎಂದಳು ವಿಶಾಲು.
“ನಂಗೆ ಮೂರು ಮಕ್ಕಳಾದ್ರೆ ಮುಂದೆ ನನ್ನ ಗತಿ?” ಎಂದ ಮೋಹನ.
ಅವನ ಮಾತಲ್ಲಿ ಆತಂಕ ಇತ್ತು. ಮಕ್ಕಳೆಷ್ಟಾಗಬೇಕು ಎಂದು ಸರ್ಕಾರ ನಿರ್ಧರಿಸುವ ಕಾಲ ಒಂದಿತ್ತು.
ಈಗ ಪ್ರಜೆಗಳೇ ನಿರ್ಧರಿಸುತ್ತಾರೆ. ಒಂದು ಎರಡು ಬೇಕು, ಮೂರು ಸಾಕು’ ಎಂಬುದು ಹಳೇ ಸ್ಲೋಗನ್! ಆಮೇಲೆ ಆರತಿಗೊಂದು, ಕೀರ್ತಿಗೊಂದು’ ಅಂತ ಎರಡು ಮಕ್ಕಳಿಗೆ ಇಳಿಸಿತು. ಅದೂ ಬದಲಾವಣೆ ಆಗಿಬೀದಿಗೊಂದು ದೀಪ, ಮನೆಗೊಂದು ಪಾಪ’ ಅಂತ ಆಯ್ತು. ಹೀಗಿರೋವಾಗ ಮಕ್ಕಳು ಜಾಸ್ತಿ ಆಗಲಿ ಅಂತ ಅವರು ಯಾಕೆ ಹೇಳಿದ್ರು ಎಂದು ಯೋಚಿಸಿದೆ.
“ಮದುವೆಯಾಗಲು ಹೆಣ್ಮಕ್ಕಳು ಸಿಗೋದು ಕಷ್ಟ ಆಗ್ತಿರೋದ್ರಿಂದ ಹೆಚ್ಚು ಹೆಚ್ಚು ಮಕ್ಕಳನ್ನ ಪಡೀಬೇಕು ಅಂತ ಅವರ ಉದ್ದೇಶ” ಎಂದ ವಿಶ್ವ.
“ಸಾಧ್ಯವಿಲ್ಲ, ಅದರಿಂದ ಈ ಸಮಸ್ಯೆ ಇನ್ನೂ ಉಲ್ಬಣ ಆಗುತ್ತಲ್ಲ?” ಮೋಹನನ ಖಡಕ್ ಪ್ರಶ್ನೆ.
“ಅದೇನೋ ನಿಜ. ಈಗ್ಲೇ ಮದುವೆಗೆ ಹೆಣ್ಮಕ್ಕಳು ಸಿಕ್ತಾ ಇಲ್ಲ. ಇನ್ನು ಮನೆಗೆ ಮರ‍್ಮೂರು ಗಂಡು ಮಕ್ಕಳಾದ್ರೆ ಗತಿ?” ಎಂದೆ.
“ದೇವರು ಸೃಷ್ಟೀಲಿ ಗಂಡು, ಹೆಣ್ಣು ಅಂತ ಸರಿಸಮಾನವಾಗಿ ತಾನೇ ಕೊಡೋದು?” ಎಂದಳು ವಿಶಾಲು.
“ದೇವರು ಸರಿಯಾಗಿ ಬ್ಯಾಲೆನ್ಸ್ ಮಾಡಿ ೫೦:೫೦ ಅನುಪಾತದಲ್ಲಿ ಗಂಡು-ಹೆಣ್ಣು ಸೃಷ್ಟಿಸ್ತಾನೆ. ಆದ್ರೆ ಮನುಷ್ಯರೇ ಕಡ್ಡಿ ಆಡ್ಸಿ ದೇವರ ಕೆಲಸಕ್ಕೆ ಅಡ್ಡಿ ಮಾಡ್ತಾರೆ. ಹುಟ್ಟೋದು ಹೆಣ್ಣು ಅಂತ ಗೊತ್ತಾದ ತಕ್ಷಣ ರಾಕ್ಷಸರಾಗಿ ಭ್ರೂಣ ಹತ್ಯೆ ಮಾಡ್ತಾರೆ” ಎಂದೆ.
“ಮೂರು ಮಕ್ಕಳ್ನ ಸಂಭಾಳಿಸೋಕೆ ನನ್ ಕೈಲಿ ಸಾಧ್ಯವೇ ಇಲ್ಲ” ಎಂದು ಮೋಹನ ತಲೆ ಕೊಡವಿದ.
“ಮಕ್ಕಳಿಗೆ ಯಾಕೆ ಹೆರ‍್ತೀಯ ಮೋಹನ?” ವಿಶ್ವ ಕೇಳಿದ.
“ಒಂದು ಮಗೂನ ಓದಿಸೋಕೆ ವರ್ಷಕ್ಕೆ ಐದು ಲಕ್ಷ ರೂಪಾಯಿ ಬೇಕು. ಮೂರು ಮಕ್ಕಳಾದ್ರೆ ವರ್ಷಕ್ಕೆ ಹದಿನೈದು ಲಕ್ಷ ಎಲ್ಲಿಂದ ತರೋದು?”
ಮಕ್ಕಳಿರಲವ್ವ ಮನೆ ತುಂಬಾ ಅಂತಿದ್ದ ಕಾಲ ಹೋಯ್ತು. ಮಕ್ಕಳು ತಲೇಲಿದ್ರೆ ಸಾಕು, ಮನೇಲಿ ಎಲ್ಲರ‍್ತಾರೆ?
“ಅಲ್ಲಿಗೆ, ಭಾರತದಲ್ಲಿ ಫ್ಯಾಮಿಲಿ ಪ್ಲಾನಿಂಗ್‌ಗೆ ಎಲ್.ಕೆ.ಜಿ. ವಿದ್ಯಾಕ್ಷೇತ್ರ ಪರೋಕ್ಷವಾಗಿ ಸಹಾಯ ಮಾಡ್ತಿದೆ ಅಂತಾಯ್ತು. ಮೊದಲ ಮಗುವನ್ನು ಎಲ್.ಕೆ.ಜಿ.ಗೆ ಸೇರಿಸಿದಾಗ ಕೊಡೋ ಐದು ಲಕ್ಷ ರೂಪಾಯಿ ಡೊನೇಷನ್ ರಸೀದಿಯನ್ನ ಬ್ಲೋ ಅಪ್ ಮಾಡಿ ಕಟ್ ಹಾಕಿಸಿ ಬೆಡ್‌ರೂಂನಲ್ಲಿ ಫೋಟೋ ಥರ ನೇತು ಹಾಕಿದರೆ ಫೀಸ್ ಭಯಕ್ಕೆ ಎರಡನೇ ಮಗು ಆಗುವುದೇ ಇಲ್ಲ” ಎಂದು ವಿಶ್ವ ನಕ್ಕ.
“ಮಕ್ಕಳು ಜಾಸ್ತಿ ಆದಾಗ ಹೆಣ್ ಮಕ್ಕಳೇ ಹುಟ್ಟುತ್ತೆ ಅಂತ ಹೇಳೋಕೆ ಆಗೊಲ್ಲ” ಎಂದಳು ವಿಶಾಲು.
“ಹೆಣ್ಣು ಮಕ್ಕಳ್ನ ಸ್ಕ್ಯಾನ್ ಮಾಡಿ ಬ್ಯಾನ್ ಮಾಡ್ತಿದ್ದಾರಲ್ಲ?” ಎಂದ ವಿಶ್ವ.
“ಜನಸಂಖ್ಯೆ ಅಂಬೋ ಗಂಭೀರ ಸಮಸ್ಯೆ ಬಗ್ಗೆ ಸಂತಾನಲಕ್ಷ್ಮೀ ದೇವಸ್ಥಾನದ ಅರ್ಚಕರು ಸರಿಯಾಗಿ ಯೋಚ್ನೆ ಮಾಡ್ತಿಲ್ಲ ವಿಶ್ವ” ಎಂದು ನಾನು ಪ್ರವಚನ ಶುರು ಮಾಡಿದೆ.
“ಭಾರತದ ಜನಸಂಖ್ಯೆ ಎಷ್ಟಿದೆ? ಪ್ರಪಂಚದಲ್ಲೇ ನಾವು ನಂಬರ್ ಒನ್. ೧೪೫ ಕೋಟಿ! ಅದು ದಿನಕ್ಕೆ ೨೦ ಲಕ್ಷ ರ‍್ತಿದೆ. ಆದರೆ ಆಸ್ಟ್ರೇಲಿಯಾ ಜನಸಂಖ್ಯೆ ಕೇವಲ ಎರಡೂವರೆ ಕೋಟಿ ಮಾತ್ರ” ಎಂದಾಗ ಮೂವರಿಗೂ ಆಶ್ಚರ್ಯವಾಯಿತು.
ಆಸ್ಟ್ರೇಲಿಯಾ ಭಾರತಕ್ಕಿಂತ ವಿಸ್ತೀರ್ಣದಲ್ಲಿ ಎರಡೂವರೆ ಪಟ್ಟು ದೊಡ್ಡದಾಗಿದೆ. ಅಲ್ಲಿನ ಜನಸಂಖ್ಯೆ ಬರೀ ಎರಡೂವರೆ ಕೋಟೀನಾ ಎಂಬ ಆಶ್ಚರ್ಯ.
“ಭಾರತದಲ್ಲಿ ಒಂದು ವರ್ಷಕ್ಕೆ ಎರಡೂವರೆ ಕೋಟಿ ಮಕ್ಕಳು ಹುಟ್ತಾ ಇವೆ. ಅಂದ್ರೆ ಪ್ರತಿ ವರ್ಷ ಒಂದೊಂದು ಆಸ್ಟ್ರೇಲಿಯಾನ ನಾವು ಹುಟ್ಹಾಕ್ತಾ ಇದ್ದೀವಿ. ಇದು ಇನ್ನೂ ಜಾಸ್ತಿ ಆದ್ರೆ ತಿನ್ನೋಕೆ ಆಹಾರ ಇರೊಲ್ಲ, ಕುಡಿಯೋಕೆ ನೀರಿರೊಲ್ಲ. ಮಲಗೋಕೆ ಬೆಡ್‌ರೂಂ ಇರೊಲ್ಲ” ಎಂದೆ.
“ಅಂದ್ರೆ ಜನಸಂಖ್ಯೇಲಿ ನಂಬರ್ ಒನ್ ಪಟ್ಟದಿಂದ ಭಾರತವನ್ನು ಕೆಳಗೆ ಇಳಿಸಬೇಕು ಅಂತಾನಾ ನೀನು ಹೇಳ್ತಾ ಇರೋದು?” ಎಂದ ವಿಶ್ವ.
“ಖಂಡಿತವಾಗ್ಲೂ. ಯಾವ್ದೇ ಮುಂದುವರಿದ ರಾಷ್ಟçವನ್ನ ನೋಡು. ಅಮೆರಿಕಾ ನಮಗಿಂತ ಮೂರು ಪಟ್ಟು ದೊಡ್ಡ ರಾಷ್ಟ್ರ, ಆಸ್ಟ್ರೇಲಿಯಾ ಎರಡೂವರೆ ಪಟ್ಟು ದೊಡ್ಡದು. ವಿಸ್ತೀರ್ಣದಲ್ಲಿ ಇವೆಲ್ಲ ದೊಡ್ಡದಾಗಿದ್ರೂ ಜನಸಂಖ್ಯೇಲಿ ತುಂಬಾ ಕಡಿಮೆ ಇವೆ. ಆದ್ದರಿಂದ್ಲೇ ಎಲ್ಲರಿಗೂ ಕೆಲ್ಸ ಸಿಗುತ್ತೆ. ಎಲ್ರೂ ಆರಾಮವಾಗಿ ಇದ್ದಾರೆ. ಈಗ್ಲೇ ನಮ್ಮಲ್ಲಿ ನಿರುದ್ಯೋಗದ ಸಮಸ್ಯೆ ತಾಂಡವ ಆಡ್ತಾ ಇದೆ. ಇನ್ನು ಎ.ಐ.’ ಅಂತಆರ್ಟಿಫಿಷಿಯಲ್ ಇಂಟೆಲಿಜೆನ್ಸ್’ ಬಂದ್ಬಿಟ್ರೆ ಮುಗಿದ್ಹೋಯ್ತು ಕತೆ. ಮನೆ ಕೆಲ್ಸಕ್ಕೆ ಹೆಂಡ್ತಿ ಕೂಡ ಬೇಕಾಗೊಲ್ಲ” ಎಂದೆ.
“ಹೆಂಡ್ತಿ ಯಾಕೆ ಬೇಕಾಗೊಲ್ಲ?” ಎಂದು ವಿಶಾಲೂ ತಕರಾರು ಮಾಡಿದ್ಲು.
“ಗಟಾಣಿ ಹೆಂಡ್ತಿ ಮಾಡೋ ಕೆಲ್ಸಾನ ಪುಟಾಣಿ ಎ.ಐ. ಗೊಂಬೇನೇ ಮಾಡುತ್ತೆ” ಎಂದೆ.
“ಅದ್ಹಾö್ಯಗೆ ಸಾಧ್ಯ?” ವಿಶಾಲೂಗೆ ಗಾಬರಿ.
“ಹೆಣ್ಣಿನ ರೂಪದಲ್ಲಿ ಗೊಂಬೆ ಇರುತ್ತೆ. ಅದಕ್ಕೆ ಸರಿಯಾದ ರೀತಿಯಲ್ಲಿ ಪ್ರೋಗ್ರಾಂ ಫೀಡ್ ಮಾಡಿದ್ರೆ ಹೆಂಡ್ತಿ ಮಾಡೋ ಎಲ್ಲಾ ಕೆಲ್ಸ ತಾನೇ ಮಾಡುತ್ತೆ”
“ರಾತ್ರಿ ಬೆಡ್‌ರೂಂಗೆ ಹಾಲು ತಂದು ಕೊಡುತ್ತಾ?” ವಿಶಾಲೂ ಕೇಳಿದಳು.
“ಹಾಲು ತಂದ್ಕೊಡುತ್ತೆ. ಗಂಡನ ಪಕ್ಕದಲ್ಲಿ ಮಲಗೋದೂ ಅದಕ್ಕೆ ಗೊತ್ತಿರುತ್ತೆ” ಎಂದೆ.
“ಆದರೆ ಮಕ್ಕಳೇ ಆಗೊಲ್ಲ” ಎಂದಳು ವಿಶಾಲು.
“ಹೆಚ್ಚು ಮಕ್ಕಳಾಗ್ತಿರೋದೇ ಈಗಿನ ಸಮಸ್ಯೆ ಅಲ್ವಾ?” ಎಂದಾಗ ವಿಶ್ವನಿಗೆ ನನ್ನ ಮಾತಿನ ಹಿನ್ನೆಲೆ ತಿಳೀತು.
“ಜಾಸ್ತಿ ಮಕ್ಕಳನ್ನ ಪಡೀರಿ ಅನ್ನೋದು ತಪ್ಪು. ಜಾಸ್ತಿ ಹೆಣ್ಮಕ್ಕಳ್ನ ಪಡೀರಿ ಅಂತ ಅರ್ಚಕರು ಬುದ್ಧಿ ಉಪಯೋಗಿಸಿ ಹೇಳಿದ್ರೆ ನಾನು ಭೇಷ್ ಅಂತಿದ್ದೆ” ಎಂದೆ.
“ಇದಕ್ಕೆ ಪರಿಹಾರ ಏನು?” ಎಲ್ಲರ ಪ್ರಶ್ನೆ.
“ಗಂಡು ಮಗುವೇ ಬೇಕು ಅನ್ನೋ ಕೆಟ್ಟ ಆಲೋಚನೆ ನಮ್ಮ ತಲೆಯಿಂದ ದೂರ ಆಗ್ಬೇಕು. ಹೆಣ್ಣು ಮಕ್ಕಳು ಜಾಸ್ತಿ ಆಗ್ಬೇಕು ಅನ್ನೋದನ್ನ ಎಲ್ಲರೂ ಅರ್ಥ ಮಾಡ್ಕೋಬೇಕು. ದೇವರ ಸೃಷ್ಟಿಗೆ ಮಾನವ ಸವಾಲು ಒಡ್ಡೋದು ನಿಲ್ಲಿಸಿದರೆ ಮದುವೆಗಳಿಗೆ ಶಾಶ್ವತ ಪರಿಹಾರ ಸಿಗುತ್ತೆ” ಎಂದೆ.