ಮಗಳು, ಮಗಳೆಂದು ರುಜುವಾತು ಆಗಲಿಲ್ಲ!
ನ್ಯಾಯಾಲಯ ಕಿಕ್ಕಿರಿದ ಕಕ್ಷಿದಾರರರು, ವಕೀಲರು, ಕೋರ್ಟ್ ಸಿಬ್ಬಂದಿಗಳಿಂದ ಆವರಣ ತುಂಬಿ ತುಳುಕುತ್ತಿತ್ತು. ಅಲ್ಲದೆ ನೂರಾರು ಕಾಲೇಜ್ ವಿದ್ಯಾರ್ಥಿಗಳಿಗೆ ಕೋರ್ಟ್ ಕಲಾಪ ವೀಕ್ಷಿಸಲು ಅನುಮತಿ ನೀಡಿದ್ದರು. ಎಲ್ಲ ಕೋರ್ಟ್ ಹಾಲ್‌ಗಳಲ್ಲಿ ಒಂದು ತರಹದ ಗಲಿಬಿಲಿ, ಗಜಿಬಿಜಿ ವಾತಾವರಣ. ಕೋರ್ಟ್ ಹಾಲ್ ಪ್ರವೇಶಿಸಲು ವಕೀಲರು ಜನರನ್ನು ಸರಿಸಿ ಬರಬೇಕಾದ ಅನಿವಾರ್ಯತೆ. ಇಂತಹ ಜನದಟ್ಟಣೆ ಯಾವಾಗಲೊಮ್ಮೆ ನಿರ್ಮಾಣ ಆಗುತ್ತದೆ.
ಅದೊಂದು ಏನೂ ವಿಶೇಷತೆ ಇಲ್ಲದ, ಹಲವಾರು ವ್ಯಾಜ್ಯಗಳಂತೆ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣ. ಆದರೆ ಕಠಿಣವಾದ ತಿರುವು ಪಡೆದುಕೊಂಡಿತು. ನನ್ನ ಕಕ್ಷಿದಾರಳನ್ನು, ಅನುರಾಧ.. ಅನುರಾಧ.. ಅನುರಾಧ..(ಹೆಸರು ಬದಲಿಸಲಾಗಿದೆ) ಎಂದು ಸಿ ಪಾಯಿ ಕೂಗಿದ. ಜನದಟ್ಟಣೆಯನ್ನು ಛೇದಿಸಿಕೊಂಡು ಬರಲು ಸ್ವಲ್ಪ ವಿಳಂಬವಾಯಿತು. ಅವಳ ಹಿಂದಿನಿಂದ ಪ್ರತಿವಾದಿಯರು ಪ್ರವೇಶಿಸಿದರು. ಕೋರ್ಟ್ ಹಾಲ್‌ನಲ್ಲಿ ಉಭಯ ಕಕ್ಷಿದಾರರು ಎದುರು ಬದಿರಾಗಿ ಕೈ ಮುಗಿದು ನಿಂತುಕೊಂಡರು. ಈ ಪ್ರಕರಣದಲ್ಲಿ ಪ್ರತಿವಾದಿಯರು, ನನ್ನ ಕಕ್ಷಿದಾರ ವಾದಿ ದಾಖಲಿಸಿದ ಪ್ರತ್ಯೇಕ ಹಿಸ್ಸೆ ಮತ್ತು ಸ್ವಾಧೀನಕ್ಕೆ ಪ್ರಾರ್ಥಿಸಿದ ಸಿವಿಲ್ ದಾವೆಗೆ ತಮ್ಮ ಲಿಖಿತ ಹೇಳಿಕೆ/ಕೈಫಿಯತ ದಾಖಲಿಸಬೇಕಿತ್ತು. ಪ್ರತಿವಾದಿ ಪರ ವಕೀಲರು ಕೈಫಿಯತ ದಾಖಲಿಸಿ, ಪ್ರತಿಯನ್ನು ನನಗೆ ನೀಡಿದರು. ವಿವರವನ್ನು ಬಿಡುವು ಮಾಡಿಕೊಂಡು ಓದುವುದು ರೂಢಿ. ಅಷ್ಟರಲ್ಲಿ ನ್ಯಾಯಾಧೀಶರು, ನನ್ನ ಕಕ್ಷಿದಾರ ವಾದಿ ಹಾಗೂ ಪ್ರತಿವಾದಿಯರಾದ ಸುಮಾರು ೭೫ ವಯಸ್ಸಿನ ಹಿರಿಯಳು, ಇಬ್ಬರು ಸುಮಾರು ೫೦ ವಯಸ್ಸಿನ ಆಚೆ ಈಚಿನ ಪುರುಷರನ್ನು ಗಮನಿಸಿ ನನ್ನನ್ನು ಉದ್ದೇಶಿಸಿ "ಏನು ಪ್ರಕರಣ ವಕೀಲರೆ? ರಾಜಿ ಏಕೆ ಆಗಬಾರದು"? ಎಂದು ಪ್ರಶ್ನಿಸಿದರು. "ಯುವರ್ ಆನರ್, ವಾದಿ ನನ್ನ ಕಕ್ಷಿದಾರಳು, ತನ್ನ ತಾಯಿ ಮತ್ತು ಸಹೋದರರ ಮೇಲೆ ಮನೆತನದ ಆಸ್ತಿಯಲ್ಲಿ ಪಾಲು ಕೇಳಿ ದಾವೆ ಮಾಡಿದ್ದಾಳೆ, ಅವಳ ಹಿಸ್ಸೆ ಕೊಟ್ಟರೆ ಸಂಧಾನ ಆಗುತ್ತದೆ" ಎಂದು ಮಾತು ಮುಗಿಸುವಷ್ಟರಲ್ಲಿ ಪ್ರತಿವಾದಿಯೊಬ್ಬ ತನ್ನ ವಕೀಲರು ಏನೋ ಹೇಳಬೇಕು ಅನ್ನುವಷ್ಟರಲ್ಲಿ," ಇವಳು ನಮ್ಮ ಮನೆತನಕ್ಕೆ ಸಂಬಂಧವಿಲ್ಲ, ನಮ್ಮ ಸಹೋದರಿ ಅಲ್ಲ" ಎಂದು ರಾಜಿ ಮಾತುಕತೆಗೆ ಕೊನೆ ಹೇಳಿದ. ಪ್ರತಿವಾದಿ ಪರ ವಕೀಲರು "ಯುವರ್ ಆನರ್, ವಾದಿಯು ಪ್ರತಿವಾದಿಯರ ಮನೆತನಕ್ಕೆ ಅಪರಿಚಿತಳು ಎಂದು ನಮ್ಮ ಕೈಫಿಯತ ಸಲ್ಲಿಸಿದ್ದೇವೆ, ವಿಚಾರಣೆ ಆಗಲಿ" ಎಂದು ಹೇಳಿದರು. ನ್ಯಾಯಾಲಯ ಮುಂದಿನ ವಿಚಾರಣೆಗೆ ಪ್ರಕರಣವನ್ನು ಮುಂದೂಡಿತು. ವಾದಿ ಕುಸಿದು ಹೋಗಿದ್ದಳು. ಭಯದಿಂದ, ಮುಂದೇನು ಎಂಬ ಭಾವದಿಂದ ನನ್ನನ್ನು ನೋಡುತ್ತಾ, ಕೋರ್ಟ್ ಹಾಲ್‌ನಿಂದ ನಿರ್ಗಮಿಸಿದಳು.
ಅಂದಿನ ಕೋರ್ಟಿನ ಪ್ರಾರ್ಥಮಿಕ ವಿಚಾರಣೆ ಹಂತ ಮುಗಿದು ಹಲವು ಕೇಸುಗಳು ಮುಂದೂಡಿ, ಕೆಲವು ಕೇಸುಗಳನ್ನು ವಿಚಾರಣೆಗೆ ಇರಿಸಿಕೊಳ್ಳುವ ಪ್ರಕ್ರಿಯೆ ಮುಗಿದ ನಂತರ ಹೊರಗೆ ಬಂದೆನು. ಹಲವಾರು ಕಕ್ಷಿದಾರರು ಸುತ್ತುವರಿದರು. ಅವರಿಗೆ ಮುಂದಿನ ಮುದ್ದತ್ತು ನೀಡಿದೆ. ಅನುರಾಧ ಇವರನ್ನು ಕರೆದು ಏನು ಗೊಂದಲ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ವಿರಾಮವಾಗಿ ಕುಳಿತು ಚರ್ಚೆ ಮಾಡೋಣ ಆಫೀಸಿಗೆ ಬನ್ನಿರಿ ಎಂದು ಹೇಳಿ ಕಳಿಸಿದೆ.
ಮುಂಚೆ ತಿಳಿಸಿದಂತೆ ಅನುರಾಧ ಹೋಮ್ ಆಫೀಸಿಗೆ ಬಂದರು. ಅನುರಾಧ ಇವರ ಲಗ್ನವಾಗಿ ಸುಮಾರು ಇಪ್ಪತ್ತು ವರ್ಷವಾಗಿವೆ. ಅವಳಿಗೆ ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದಾರೆ. ಗಂಡನಿಗೆ ಯಾವುದೇ ಆಸ್ತಿ ಇಲ್ಲ. ಸಣ್ಣ ವ್ಯಾಪಾರ ಮಾಡುತ್ತಾನೆ. ಇವಳು ಟೇಲರ್ ಅಂಗಡಿಯಲ್ಲಿ ಟೇಲರಿಂಗ್ ಕೆಲಸ ಮಾಡುತ್ತಾಳೆ. ಹೊಟ್ಟೆ ಬಟ್ಟೆಗೆ ಇಬ್ಬರು ದುಡಿಯುವದು ಅನಿವಾರ್ಯ. ಹೀಗೆ ಬದುಕು ಸಾಗಿದೆ. ಈಗ ಒಂದು ವರ್ಷದ ಹಿಂದೆ ಇವಳ ತಂದೆ ತೀರಿಕೊಂಡರು. ತವರು ಮನೆಗೆ ಹೋಗಿ ಮಾತನಾಡಿಸಿ ಬರುವ ಧೈರ್ಯ ಸಾಲಲಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ಮುಂದಿನ ಭವಿಷ್ಯದ ಸವಾಲು ಎದುರಾಯಿತು. ತಾಯಿ ಅಣ್ಣಂದಿರನ್ನು ಏಕೆ ಕೇಳಬಾರದು ಎಂದು ತಮ್ಮ ಸಮೀಪ ಸಂಬಂಧಿಕರ ಮೂಲಕ ವಿಚಾರಿಸಿದಳು. ಪಾಲು ಕೊಡುವದಿಲ್ಲವೆಂದು ನಿರಾಕರಿಸಿದರು. ತವರು ಮನೆತನಕ್ಕೆ ಸುಮಾರು ೧೮ ಎಕರೆ ಫಲವತ್ತಾದ ಜಮೀನು, ಮೂರು ಮನೆ ಇದ್ದವು. ಕಂದಾಯ, ನಗರಸಭೆ ದಾಖಲಾತಿಗಳನ್ನು ತೆಗೆದು ನೋಡಲಾಗಿ, ತಂದೆ ಮೃತನಾದ ನಂತರ ಮೃತನಿಗೆ ಹೆಂಡತಿ, ಇಬ್ಬರು ಗಂಡು ಮಕ್ಕಳು ಮಾತ್ರ ಎಂದು ಉತ್ತರ ಜೀವಿತ ಪತ್ರ ಪಡೆದು ಕೇವಲ ತಮ್ಮ ಹೆಸರು ದಾಖಲಿಸಿಕೊಂಡಿದ್ದರು. ಮೃತನ ಹೆಣ್ಣು ಮಗಳ ಹೆಸರು ಪ್ರಸ್ತಾಪವಾಗಿರಲಿಲ್ಲ. ನೇರವಾಗಿ ತಾಯಿ, ಅಣ್ಣಂದಿರನ್ನು ಪ್ರಶ್ನಿಸಿದಳು, ಉತ್ತರಿಸಲಿಲ್ಲ. ಕೊನೆಗೆ ನನ್ನ ಕಡೆಗೆ ಬಂದಳು. ಪಾಲು ಹಿಸ್ಸೆ, ಸ್ವಾಧೀನದ ದಾವೆ ಮಾಡುವುದು ಉಚಿತವೆಂದು ದಾವೆ ದಾಖಲಿಸಿದೆ. ಅನುರಾಧ ಇವರನ್ನು ನೇರವಾಗಿ ಕೇಳಿದೆ "ನೀನು ಮಗಳೇ ಅಲ್ಲ ಎಂದು ನಿಮ್ಮ ತಾಯಿ ಹೇಳಲು ಕಾರಣ ಏನು? "ಅವಳು ಹೇಳಿದ್ದು ಇಷ್ಟು" ಸರ್, ನಾನು ಇಲ್ಲಿಯವರೆಗೆ ನಿಮಗೆ ಹೇಳಿರಲಿಲ್ಲ. ನಾನು ಬೇರೆ ಜಾತಿಯವನನ್ನು ಪ್ರೀತಿಸಿ, ಮನೆಯವರ ಮಾತು ಮೀರಿ ಓಡಿಹೋಗಿ ಮದುವೆ ಆಗಿದ್ದೇನೆ. ಆವಾಗಿನಿಂದ ತವರುಮನೆ ಪಾಲಿಗೆ ಸತ್ತು ಹೋಗಿದ್ದೇನೆ. ತಂದೆ ತಾನು ಸತ್ತ ನಂತರ ಕೂಡ ಅವಳನ್ನು ಕರೆಯಬೇಡಿ ಎಂದು ಮಾತು ತೆಗೆದು ಕೊಂಡಿದ್ದರಂತೆ", ಅಳಲಾರಂಭಿಸಿದಳು. ಸಮಾಧಾನಿಸಲು ಮಾತು ಇರಲಿಲ್ಲ. ಮಗಳು ಎನ್ನಲು ಏನಾದರು ದಾಖಲಾತಿ ಇದೆಯೇ ಎಂದು ವಿಚಾರಿಸಿದೆ. ಇಲ್ಲ ಎಂದಳು. ಶಾಲಾ ದಾಖಲಾತಿಗಳ ಬಗ್ಗೆ ವಿಚಾರಿಸಿದೆ. ಚಿಕ್ಕಂದಿನಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರಿಂದ ಶಾಲೆಗೆ ಕಳಿಸಿರಲಿಲ್ಲ. ನಂತರದ ದಿನದಲ್ಲಿ ಮನೆ ಪಾಠದಿಂದ ಓದಲು, ಬರೆಯಲು ಕಲಿತಿದ್ದಳು. ಮಗಳು ಎಂದು ರುಜುವಾತುಪಡಿಸಲು ದಾಖಲೆ ಇರಲಿಲ್ಲ. ಪ್ರಕರಣದ ಯಶಸ್ಸು ಕ್ಲಿಷ್ಟ ಸಾಧ್ಯ ತಿಳಿಸಿದೆ. "ಸರ್ ಪ್ರಯತ್ನಿಸಿ, ಮುಂದೆ ನನ್ನ ಹಣೆಬರಹ" ಎಂದಳು. ಪ್ರಕರಣದ ವಿಚಾರಣೆ ಪ್ರಾರಂಭವಾಯಿತು. ಮೊದಲಿಗೆ ವಾದಿ ಅನುರಾಧಳ ಮುಖ್ಯ ವಿಚಾರಣೆ ಪ್ರಮಾಣ ಪತ್ರ ಹಾಜರುಪಡಿಸಿದೆ. ಆಸ್ತಿಗಳ ದಾಖಲಾತಿ ಹೊರತುಪಡಿಸಿ ಯಾವುದೇ ದಾಖಲೆ ಇರಲಿಲ್ಲ. ಪ್ರತಿವಾದಿ ಪರ ವಕೀಲರ ಪ್ರಶ್ನೆಗಳಿಗೆ ತತ್ತರಿಸಿ ಉತ್ತರಿಸದೆ ಹೋದಳು. ಇವಳ ಪರವಾಗಿ ಯಾರೂ ಸಾಕ್ಷಿ ಹೇಳಲು ಬರಲಿಲ್ಲ. ಶಸ್ತ್ರ ಇಳಿಸುವ ಪ್ರಶ್ನೆ ಇರಲಿಲ್ಲ. ಕೊನೆಯ ಅಸ್ತ್ರವಾಗಿ ಪಿತೃತ್ವ ಪರೀಕ್ಷೆಗಾಗಿ ವೈಜ್ಞಾನಿಕ ತಜ್ಞರಿಂದ ಡಿಎನ್‌ಎ ಪರೀಕ್ಷೆಗೆ ವಾದಿ ಮತ್ತು ಪ್ರತಿವಾದಿಯರನ್ನು ಒಳಪಡಿಸುವಂತೆ ಅರ್ಜಿ ದಾಖಲಿಸಿದೆ. ಎದುರುದಾರರು ತಮ್ಮ ತಕರಾರು ದಾಖಲಿಸಿ, ವಾದಿ ಮೇಲ್ನೋಟಕ್ಕೆ ಲಿಖಿತ ಹಾಗೂ ಸಂಬಂಧಿಕರ ಸಾಕ್ಷಿ ಹಾಜರುಪಡಿಸಿಲ್ಲ. ತಾವು ಪರೀಕ್ಷೆಗೆ ಒಳಪಡಲು ಸಿದ್ಧರಿಲ್ಲ ಎಂದು ನಿರಾಕರಿಸಿದರು. ನ್ಯಾಯಾಲಯ ಅರ್ಜಿಯನ್ನು ಅಂತಿಮ ತೀರ್ಪಿನ ಜೊತೆ ವಿಚಾರಣೆಗೆ ಆದೇಶಿಸಿತು. ಪ್ರತಿವಾದಿ ಪರ ಸಾಕ್ಷಿದಾರರನ್ನು ಪರೀಕ್ಷಿಸಿದರು. ವಾದಿ ಪ್ರತಿವಾದಿ ಪರ ಸುದೀರ್ಘ ವಾದವನ್ನು ನ್ಯಾಯಾಲಯ ಆಲಿಸಿ ತೀರ್ಪಿಗಾಗಿ ಪ್ರಕರಣ ಮುಂದೂಡಿತು.
ತೀರ್ಪು: ವಾದಿಯ ದಾವೆಯನ್ನು ವಜಾಗೊಳಿಸಿ, ವಾದಿ ಲಿಖಿತ, ಮೌಖಿಕ ಸಾಕ್ಷಿ ಮೂಲಕ ಮೃತನ ಮಗಳು ಎಂದು ರುಜುವಾತುಪಡಿಸಲು ವಿಫಲವಾಗಿದ್ದಾಳೆ ಎಂದು ಅಭಿಪ್ರಾಯಪಟ್ಟಿತು. ಉಚ್ಚ ನ್ಯಾಯಾಲಯದ ಮಾರ್ಗದರ್ಶಿ ತೀರ್ಪಿನಂತೆ, ಮೇಲ್ನೋಟಕ್ಕೆ ಸಂಬಂಧ ರುಜುವಾತುಪಡಿಸಬೇಕು ಮತ್ತು ಎದುರುದಾರರು ಡಿಎನ್‌ಎ ಪರೀಕ್ಷೆಗೆ ಒಪ್ಪಿರಬೇಕು, ಇಂತಹ ಸಂದರ್ಭದಲ್ಲಿ ಡಿಎನ್‌ಎ ಪರೀಕ್ಷೆ ಸೂಕ್ತವೆಂದು ಅಭಿಪ್ರಾಯಪಟ್ಟಿದೆ. ಈ ಪ್ರಕರಣದಲ್ಲಿ ಡಿಎನ್‌ಎ ಪರೀಕ್ಷೆ ಯೋಗ್ಯವಲ್ಲವೆಂದು ನಿರ್ಣಯಿಸಿತು.
ತೀರ್ಪಿನ ಮೇಲೆ ಮೇಲ್ಮನವಿ ಯೋಗ್ಯ ಎಂಬ ಅಭಿಪ್ರಾಯ ಕಕ್ಷಿದಾರಳಿಗೆ ತಿಳಿಸಿದೆ. ಮುಂದೇನಾಯಿತು ತಿಳಿಯಲಿಲ್ಲ. ಗೆಲುವು ಸೋಲುಗಳ ಮೇಲೆ ವೃತ್ತಿ ಪರಿಗಣಿಸಲ್ಪಡುತ್ತದೆ. ಸೋಲು ನಮ್ಮದಾಗುತ್ತದೆ, ಗೆಲುವು ಕಕ್ಷಿದಾರರದೆ. ಎಲ್ಲರೂ ಅಪೇಕ್ಷಿಸುವುದು ಗೆಲುವು ಎಂತಹ ಅಶಕ್ತ ಕೇಸು ಇದ್ದರು!
ನ್ಯಾಯ ವ್ಯವಸ್ಥೆಯಲ್ಲಿ ಲಿಖಿತ, ಮೌಖಿಕ ಬಲವಾದ ಸಂಭವನೀಯ, ನಂಬುವ ಸಾಕ್ಷ್ಯಾಧಾರಗಳ ಮೇಲೆ ತೀರ್ಪುಗಳು ಹೊರಬರುತ್ತವೆ. ಪ್ರತಿ ಕೇಸಿನ ತೀರ್ಪು ಆ ಕೇಸಿನ ಸಾಕ್ಷ್ಯಾಯಧಾರ ಅವಲಂಬಿತ ಆಗಿರುತ್ತದೆ.