ಮಗುವಿಗೆ ಥೈರಾಯಿಡ್ ಎಂದು ತಪ್ಪು ವರದಿ: ಖಾಸಗಿ ಆಸ್ಪತ್ರೆ ವಿರುದ್ಧ ದೂರು
ಮಂಗಳೂರು: ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ೪ ತಿಂಗಳ ಮಗುವಿಗೆ ಥೈರಾಯಿಡ್ ಇರುವುದಾಗಿ ತಪ್ಪು ವರದಿ ನೀಡುವ ಜೊತೆಗೆ ೩ ತಿಂಗಳಿಗಾಗುವಷ್ಟು ಔಷಧಿಗಳನ್ನು ಬರೆದು ಕೊಟ್ಟ ಘಟನೆ ನಡೆದಿದೆ. ಈ ಕುರಿತು ಮಗುವಿನ ತಂದೆ ಆರೋಪ ಮಾಡಿದ್ದು, ಅವರು ಸುರತ್ಕಲ್ ಪೊಲೀಸರು ಮತ್ತು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ದೂರು ನೀಡಿದ್ದಾರೆ.
ಮಗುವಿನ ತಂದೆ ಸಂತ್ರಸ್ತ ಸುರತ್ಕಲ್ ಸಸಿಹಿತ್ಲು ನಿವಾಸಿ ರಾಮ ಸಾಲ್ಯಾನ್, ತಿಂಗಳ ಚುಚ್ಚುಮದ್ದು ಪಡೆದುಕೊಳ್ಳಲೆಂದು ನನ್ನ ಪತ್ನಿ ೪ ತಿಂಗಳ ಮಗಳೊಂದಿಗೆ ಶ್ರೀನಿವಾಸ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಅಲ್ಲಿನ ವೈದ್ಯರು ಮಗುವಿನ ಥೈರಾಯಿಡ್ ಲಕ್ಷಣಗಳ ಪರಿಶೀಲನೆಗೆ ಆಸ್ಪತ್ರೆಯ ಲ್ಯಾಬ್‌ಗೆ ಚೀಟಿ ಬರೆದುಕೊಟ್ಟಿದ್ದರು. ಅದರಂತೆ ಅಲ್ಲಿ ರಕ್ತ ಪರೀಕ್ಷೆ ನಡೆಸಿದ ಸಿಬ್ಬಂದಿ ಮಗುವಿನಲ್ಲಿ ೧೨.೦೫ ಥೈರಾಯಿಡ್ ಇರುವುದುದಾಗಿ ವರದಿ ನೀಡಿದ್ದರು. ಅದನ್ನು ವೈದ್ಯರಿಗೆ ತೋರಿಸಿದಾಗ ಮಗುವಿನಲ್ಲಿ ಥೈರಾಯಿಡ್ ಪ್ರಮಾಣ ಅಧಿಕವಾಗಿದ್ದು, ತಕ್ಷಣ ಚಿಕಿತ್ಸೆ ನೀಡಬೇಕೆಂದು ಹೇಳಿ, ೩ ತಿಂಗಳ ಕಾಲ ನಿರಂತರ ಔಷಧಿ ನೀಡುವಂತೆ ಹೇಳಿ ಔಷಧಿ ಬರೆದುಕೊಟ್ಟಿದ್ದರು ಎಂದು ಹೇಳಿದ್ದಾರೆ.
ಮರುದಿನ ಪಕ್ಕದ ಮನೆಯವರಲ್ಲಿ ಮಗುವಿನ ವಿಚಾರ ತಿಳಿಸಿದಾಗ ಅವರು ಶ್ರೀನಿವಾಸ್ ಆಸ್ಪತ್ರೆಯ ವೈದ್ಯಕೀಯ ವರದಿಗಳು ಸರಿಯಾಗಿ ಬರುವುದಿಲ್ಲ ಎಂದು ತಮ್ಮ ಅನುಭವ ಹೇಳಿದ್ದರು. ಹಾಗಾಗಿ ಸಂಶಯಕ್ಕೊಳಗಾಗಿ ಮಗಳನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಮತ್ತೆ ಥೈರಾಯಿಡ್ ಪರೀಕ್ಷೆ ಮಾಡಿಸಿದೆ. ಮಗುವಿಗೆ ಥೈರಾಯಿಡ್ ಸಹಜ ಸ್ಥಿತಿಯಲ್ಲಿರುವುದಾಗಿ ಅಲ್ಲಿನ ವೈದ್ಯರು ವರದಿ ನೀಡಿದ್ದಾರೆ ಎಂದು ರಾಮ ಸಾಲ್ಯಾನ್ ತಿಳಿಸಿದ್ದಾರೆ.
ಎಜೆ ಆಸ್ಪತ್ರೆಯಿಂದ ನೇರ ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ಹೋಗಿ ಅಲ್ಲಿ ವೈದ್ಯರನ್ನು ವಿಚಾರಿಸಿದಾಗ ಅವರು ಲ್ಯಾಬ್ ಸಿಬ್ಬಂದಿಯನ್ನು ದೂರುತ್ತಾರೆ. ಸಿಬ್ಬಂದಿ ಥೈರಾಯಿಡ್ ಪರೀಕ್ಷಿಸುವ ಮೆಶಿನ್‌ನ್ನು ದೂರಲು ಆರಂಭಿಸಿದರು. ಸೂಕ್ತ ಸ್ಪಂದನ ನೀಡದಿದ್ದರೆ ಮಾಧ್ಯಮದವರನ್ನು ಕರೆಸುವುದಾಗಿ ಹೇಳಿದ ಕಾರಣ ಹೆದರಿದ ಆಸ್ಪತ್ರೆಯವರು ತಕ್ಷಣ ನನ್ನ ಮನೆಗೆ ತೆರಳಿ ಮಗುವಿನ ರಕ್ತದ ಮಾದರಿಯನ್ನು ಸಂಗ್ರಹಿಸಿಕೊಂಡು ಮತ್ತೆ ಥೈರಾಯಿಡ್ ಪರೀಕ್ಷೆಗೆ ಒಳಪಡಿಸಿದರು. ಈ ವೇಳೆ ಥೈರಾಯಿಡ್ ಸಹಜ ಸ್ಥಿತಿಯಲ್ಲೇ ಇರುವುದಾಗಿ ವರದಿ ಬಂದಿದೆ ಎಂದವರು ತಿಳಿಸಿದರು.
ನನ್ನ ಮಗಳಿಗೆ ಥೈರಾಯಿಡ್ ಪರೀಕ್ಷೆ ನಡೆಸಿ ತಪ್ಪು ವರದಿ ನೀಡಿದ ಮುಕ್ಕದ ಶ್ರೀನಿವಾಸ ಆಸ್ಪತ್ರೆ ವಿರುದ್ಧ ಸೂಕ್ತ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಸಂತ್ರಸ್ತ ಮಗುವಿನ ತಂದೆ ರಾಮ ಸಲ್ಯಾನ್ ಸುರತ್ಕಲ್ ಪೊಲೀಸ್ ಠಾಣೆಗೆ ಮತ್ತು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ತಮ್ಮಯ್ಯ ಅವರಿಗೆ ದೂರು ನೀಡಿದ್ದಾರೆ.
ಸಂತ್ರಸ್ತ ಮಗುವಿನ ತಂದೆ ನೇರವಾಗಿ ನಮ್ಮ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ದೂರು ನೀಡಿದ್ದಾರೆ. ಈ ಕುರಿತು ತನಿಖೆಗಾಗಿ ಈಗಾಗಲೇ ತನಿಖಾ ತಂಡವೊಂದನ್ನು ರಚಿಸಲಾಗಿದೆ. ಈ ಬಗ್ಗೆ ಸುಧೀರ್ಘ ತನಿಖೆ ನಡೆಯಬೇಕಿದೆ. ತಂಡದಲ್ಲಿ ಒಬ್ಬರು ಆರೋಗ್ಯಾಧಿಕಾರಿ, ಮಕ್ಕಳ ತಜ್ಞರು, ಬಯೋಕೆಮಿಸ್ಟ್ರಿ ಇದ್ದಾರೆ. ತನಿಖೆಗೆ ಕಾಲಾವಕಾಶ ಬೇಕಿದ್ದು, ಆದಷ್ಟು ಶೀಘ್ರದಲ್ಲಿ ತನಿಖೆ ನಡೆಸಿ ವರದಿಯನ್ನು ನೀಡಲಾಗುವುದು ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.