For the best experience, open
https://m.samyuktakarnataka.in
on your mobile browser.

ಮಗುವಿನ ಚಿಕಿತ್ಸೆಗೆ ಬೇಕು ಬರೋಬ್ಬರಿ ₹ ೧೬ ಕೋಟಿ..!

04:47 PM Jan 07, 2025 IST | Samyukta Karnataka
ಮಗುವಿನ ಚಿಕಿತ್ಸೆಗೆ ಬೇಕು ಬರೋಬ್ಬರಿ ₹ ೧೬ ಕೋಟಿ

ಹರ್ಷ ಕುಲಕರ್ಣಿ
ಹುಬ್ಬಳ್ಳಿ: ದಯವಿಲ್ಲದ ಧರ್ಮ ಯಾವುದಯ್ಯಾ ಎಂಬ ಬಸವಣ್ಣನವರ ವಚನದಂತೆ ತಾವೆಲ್ಲ ತೋರುವ ದಯೆ, ಮಾಡುವ ದಾನದಿಂದ ಅಪರೂಪದ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ೨ ವರ್ಷದ ಮಗುವಿನ ಮೊಗದಲ್ಲಿ ಮತ್ತೆ ನಗು ಅರಳಬಹುದು…!
ಮೈಸೂರು ಮೂಲದ ಎಚ್. ನಾಗಶ್ರೀ ಮತ್ತು ಎನ್. ಕಿಶೋರ್ ದಂಪತಿಯ ಪುತ್ರಿ ಒಂದು ವರ್ಷ ಹತ್ತು ತಿಂಗಳಿನ ಕೆ.ಕೀರ್ತನಾ, ಎಸ್‌ಎಂಎ (ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ) ಅಂದರೆ ಬೆನ್ನು ಮೂಳೆಯ ಸ್ನಾಯು ಕ್ಷೀಣತೆಯಾಗುವ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದು, ಕೇವಲ ಒಂದು ಇಂಜೆಕ್ಷನ್‌ಗೆ ಬರೋಬ್ಬರಿ ೧೬ ಕೋಟಿ ರೂ. ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಗುವಿಗೆ ಬಂದಿರುವ ಕಾಯಿಲೆಯಿಂದ ಕುಟುಂಬಸ್ಥರು ಕಂಗಾಲಾಗಿದ್ದು, ಅಷ್ಟೊಂದು ಮೊತ್ತವನ್ನು ಭರಿಸಲು ಸಾಧ್ಯವಾಗದೇ ಮಗುವಿನ ಚಿಕಿತ್ಸೆಗೆ ದಾನಿಗಳ ಮೊರೆ ಹೋಗಿದ್ದಾರೆ.
ಕಾಯಿಲೆಗೆ ತುತ್ತಾಗಿರುವ ಕೀರ್ತನಾಗೆ ದಿನೇ ದಿನೇ ಉಸಿರಾಟದ ಸಮಸ್ಯೆ ಹೆಚ್ಚಾಗುತ್ತಿದೆ. ಮೂಳೆಯ ಸ್ನಾಯು ಕ್ಷೀಣಿಸುತ್ತಾ ಬಂದಿದ್ದು, ಮಗುವನ್ನು ಉಳಿಸಿ ಕೊಳ್ಳಲು ಕುಟುಂಬ ಹರಸಾಹಸ ಪಡುತ್ತಿದೆ. ಮಗುವಿನ ತಾಯಿ ನಾಗಶ್ರೀ ಎಚ್.ಡಿ.ಕೋಟೆಯ ಹುಣಸೇಕುಪ್ಪೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ತಂದೆ ಕಿಶೋರ್ ಸರ್ಕಾರಿ ನೌಕರರಾಗಿದ್ದಾರೆ. ಸದ್ಯ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಸೊಂಟದಿಂದ ಕೆಳಗಿನ ಅವಯವಗಳು ಕಾರ್ಯನಿರ್ವಹಿಸುತ್ತಿಲ್ಲ. ಕೆಲವೇ ತಿಂಗಳೊಳಗೆ ಚಿಕಿತ್ಸೆ ಮತ್ತು ಔಷಧ ಸಿಗದಿದ್ದರೆ ಇನ್ನಿತರ ಅಂಗಗಳೂ ಸಾಮರ್ಥ್ಯ ಕಳೆದುಕೊಳ್ಳಬಹುದು ಎಂಬುದು ವೈದ್ಯರ ಆತಂಕ. ಇದರೊಟ್ಟಿಗೆ ಸ್ನಾಯುಗಳು ದುರ್ಬಲಗೊಂಡು, ಚಲನೆ ಕಷ್ಟವಾಗುತ್ತಿದೆ. ಮಿದುಳಿನ ಕೋಶ ಮತ್ತು ಬೆನ್ನೆಲುಬಿನ ರಕ್ತನಾಳ ಕೊಳೆಯಲು ಆರಂಭಿಸುತ್ತವೆ. ಇದರಿಂದ ಉಸಿರಾಟಕ್ಕೆ ತೊಂದರೆಯಾಗುತ್ತದೆ.
ಇಂತಹ ಮಾರಣಾಂತಿಕ ಕಾಯಿಲೆಗೆ ಅಮೆರಿಕಾದಿಂದ ಝೋಲ್‌ಜೆನ್ಸ್ಮಾ ಎಂಬ ಇಂಜೆಕ್ಷನ್ ತರಿಸಿ ಚಿಕಿತ್ಸೆ ಕೊಡಿಸಬೇಕಿದೆ. ಇದರ ಬೆಲೆ ೧೬ ಕೋಟಿ ರೂ. ಮಗುವಿನ ಉಳಿವಿಗಾಗಿ ತಂದೆ, ತಾಯಿ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಸಹಾಯ ಮಾಡ ಬಯಸುವ ದಾನಿಗಳ ನೆರವಿನಿಂದ ಉಳಿಸಬಹುದಾಗಿದೆ.

ನಮ್ಮ ಒಬ್ಬಳೇ ಮಗಳಾದ ಕೆ.ಕೀರ್ತನ ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ ಎಂಬ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದು, ಅವಳ ಲೋಯರ್ ಲಿಂಬ್ಸ್ ಸಂಪೂರ್ಣವಾಗಿ ದುರ್ಬಲವಾಗುತ್ತಿದೆ. ಓರಲ್ ಚಿಕಿತ್ಸೆಗೆ ಪ್ರತಿ ವರ್ಷಕ್ಕೆ ೫೦ ಲಕ್ಷ ರೂ. ಬೇಕಾಗಿದ್ದು, ಸಂಪೂರ್ಣ ಗುಣವಾಗಲು ಶಾಶ್ವತ ಜೀನ್ ಥೆರಪಿ ಮಾಡಿಸಬೇಕಿದೆ. ಇದಕ್ಕಾಗಿ ೧೬ ಕೋಟಿ ರೂ. ವೆಚ್ಚ ತಗುಲಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇಷ್ಟು ಹಣವನ್ನು ನಮ್ಮಿಂದ ಹೊಂದಿಸಲು ಸಾಧ್ಯವಿಲ್ಲ. ದಾನಿಗಳು ತಮ್ಮ ಸಹಾಯಹಸ್ತ ಚಾಚಿದರೆ ನಾವು ನಮ್ಮ ಮಗುವನ್ನು ಉಳಿಸಿಕೊಳ್ಳುತ್ತೇವೆ.

  • - ಎಚ್. ನಾಗಶ್ರೀ, ಕೆ.ಕೀರ್ತನಾ ತಾಯಿ

ಸಹಾಯ ಮಾಡಲು ಇಚ್ಛಿಸುವವರು…
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ, ದೇವರಾಜ ಅರಸ್ ರಸ್ತೆ, ಮೈಸೂರು.
ಖಾತೆದಾರರ ಹೆಸರು: ಕೆ.ಕೀರ್ತನಾ
ಖಾತೆ ಸಂಖ್ಯೆ: ೪೩೫೩೨೫೮೮೪೨೯
ಐಎಫ್‌ಎಸ್‌ಸಿ ಕೋಡ್: ಎಸ್‌ಬಿಐಎನ್ ೦೦೭೦೨೭೦
ಸಂಪರ್ಕ ಸಂಖ್ಯೆ: ೯೯೮೦೬೯೦೨೩೪ ಅಥವಾ ೯೯೦೧೨೬೨೨೦೬