ಮಠಾಧೀಶರು ಸಮಾಜದ ಸ್ವಾಸ್ಥ್ಯ ಹಾಳು ಮಾಡಬಾರದು
ವಿಜಯಪುರ: ನಾಡಿನ ಮಠಾಧೀಶರು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೆಲಸ ಮಾಡಬಾರದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅಭಿಪ್ರಾಯಪಟ್ಟಿದ್ದಾರೆ.
ಮುಸ್ಲಿಂರಿಗೆ ಮತದಾನ ಹಕ್ಕು ಬೇಡ ಎಂಬ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾಡಿನ ಮಠಾಧೀಶರು ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸ ಮಾಡಬೇಕು. ಅನಗತ್ಯವಾಗಿ ಮಾತನಾಡಿ, ಸಮಾಜದ ಸ್ವಾಸ್ಥ್ಯ ಹಾಳು ಮಾಡಬಾರದು. ಈ ದೇಶದ ಸಂವಿಧಾನದ ಪ್ರಕಾರ ರಾಷ್ಟ್ರಪತಿಗೂ ಒಂದೇ ಕಾನೂನು, ಜನಸಾಮಾನ್ಯರಿಗೂ ಒಂದೇ ಕಾನೂನು ಎಂದರು.
ನಾನು ಕರ್ನಾಟಕದ ಸಚಿವೆಯಾಗಿದ್ದರೂ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಈಗಲೂ ಸಕ್ರಿಯವಾಗಿರುವೆ. ಮಂತ್ರಿಯಾಗಿರುವ ಕಾರಣ ಕೆಲಸದ ಒತ್ತಡದಿಂದಾಗಿ ಮೀಸಲಾತಿ ಹೋರಾಟದ ಒಂದೆರಡು ಸಭೆಗಳಿಗೆ ಹೋಗಲು ಸಾಧ್ಯವಾಗಲಿಲ್ಲ. ಆದರೆ ನನ್ನ ತಮ್ಮ ಹಾಗೂ ನನ್ನ ಮಗ ಪಾಲ್ಗೊಳ್ಳುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
ಪಂಚಮಸಾಲಿ ಸಮಾಜ ಸದಾ ನನ್ನೊಂದಿಗಿದೆ. ನಾನು ಕೂಡ ಯಾವಾಗಲೂ ಸಮಾಜದ ಜೊತೆ ಇರುವೆ. ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ನಾಲ್ಕು ಬಾರಿ ಭೇಟಿಯಾಗಿದ್ದೆವು. ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಈಗಾಗಲೇ ಮೂರು ಬಾರಿ ಭೇಟಿ ಮಾಡಲಾಗಿದೆ. ನಮ್ಮ ಸಮಾಜಕ್ಕೆ ಖಂಡಿತವಾಗಿಯೂ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.