ಮತ್ತೊಮ್ಮೆ ಕೆಂಪಾಗದಿರಲಿ ಹಸಿರು ಸಹ್ಯಾದ್ರಿ
ನೆತ್ತರು ಇತಿಹಾಸ ಅಂತ್ಯಗೊಂಡಿತಾ?
ರಾಜ್ಯದ ಹಸಿರು ಕಣಿವೆಯಲ್ಲಿ ಚೆಲ್ಲಿದ ರಕ್ತ, ಬಂದೂಕಿನ ಮೊರೆತ, ಅಮಾಯಕರ ಸಾವು ನೋವು, ಸದಾ ಭಯದ ನೆರಳಲ್ಲಿನ ಬದುಕು ಇವೆಲ್ಲವುಗಳಿಗೆ ಇಂದು ಅಂತ್ಯವಾದಂತಾಗಿದೆ ಎಂದು ಆಶಿಸಬಹುದೇನೋ…!?
ಕರ್ನಾಟಕದ ಮೂರು ದಶಕಕ್ಕೂ ಹೆಚ್ಚಿನ ನಂಟಿರುವ ಮಾವೋವಾದಿ ಸಂಘಟನೆಯ ಆರು ಮಂದಿ ಇಂದು ಕಾಡಿನಿಂದ ಹೊರಬಂದು ಬಂದೂಕು ತ್ಯಜಿಸಿ ಶರಣಾಗುವ ಮೂಲಕ ಕರ್ನಾಟಕದಲ್ಲಿ ನಕ್ಸಲೀಯರ ರಕ್ತಸಿಕ್ತ ಅಧ್ಯಾಯ ಬಹುಶಃ ಪೂರ್ಣವಿರಾಮ ಕಾಣಲಿದೆ. ಇದೊಂದು ಸದಾಶಯ ಕೂಡ.
ಜನರ ಮತ್ತು ಜನಪರ ಹೋರಾಟದ ನೆಪದಲ್ಲಿ ಶಸ್ತ್ರ ಮತ್ತು ಸಮರದಿಂದಲೇ ಕ್ಷಿಪ್ರ ಪರಿಹಾರ ಸಾಧ್ಯ ಎಂಬ ಸಿದ್ಧಾಂತದ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಮಾವೋವಾದಿ ಸಂಘಟನೆ ದಕ್ಷಿಣ ಭಾರತದಲ್ಲಿ ಇಂದು ಕೊನೆಯುಸಿರು ಎಳೆದು ಶಸ್ತ್ರತ್ಯಾಗಕ್ಕೆ ಬಂದಿರುವುದು ಒಂದು ಸದ್ಭಾವನೆ ವಿಶ್ವಾಸವೇ ಸರಿ.
ಪಶ್ಚಿಮ ಬಂಗಾಳದ ನಕ್ಸಲ್ ಬಾರಿ ಗ್ರಾಮದಲ್ಲಿ ಹುಟ್ಟಿದ ಈ ಮಾವೋವಾದಿ ಹೋರಾಟ ಪಶ್ಚಿಮ ಭಾಗದಲ್ಲಿ ಕನ್ಯಾಕುಮಾರಿಯವರೆಗೆ ರೆಡ್ ಕಾರಿಡಾರ್' ಸ್ಥಾಪಿಸಿತ್ತು. ಜನರ ಮೂಲಭೂತ ಸಮಸ್ಯೆ, ಗುಡ್ಡಗಾಡು ಮತ್ತು ಅದರಂಚಿನ ಜನರ ಅಗತ್ಯತೆ, ಹೋರಾಟ ಇತ್ಯಾದಿಗಳಿಗೆ ಪರೋಕ್ಷ ಬೆಂಬಲ ಕೊಟ್ಟು ಅದನ್ನೇ ಬಳಸಿಕೊಂಡು ಬೆಳೆದ ಸಂಘಟನೆ ದೇಶಾದ್ಯಂತ ಸಾವಿರಾರು ಜನರನ್ನು ಆಹುತಿ ಪಡೆದಿತ್ತು. ಹಾಗೆಯೇ ಸಾವಿರಾರು ಮಂದಿ ನಕ್ಸಲೀಯರೂ ಕೂಡ ಸಾವನ್ನಪ್ಪಿದ್ದರು. ಪ್ರಜಾತಂತ್ರ ವ್ಯವಸ್ಥೆ ಬೆಂಬಲಿಸುತ್ತೇವೆ. ಜನರ ಸಮಸ್ಯೆಗಳಿಗೆ ಬಂದೂಕಿನಿಂದಲೇ ಪರಿಹಾರ. ಭ್ರಷ್ಟ ವ್ಯವಸ್ಥೆ ಹಾಗೂ ಜನವಿರೋಧಿ ಧೋರಣೆಯನ್ನು ವಿರೋಧಿಸುವುದು ತಮ್ಮ ಕರ್ತವ್ಯ ಎಂಬ ಘೋಷವಾಕ್ಯದೊಂದಿಗೆ ಉಗ್ರ ಸಂಘಟನೆಯ ರೂಪ ತಳೆದು ನಕ್ಸಲ್ ಚಟುವಟಿಕೆ ಕರ್ನಾಟಕದಲ್ಲಿ ವಿಶೇಷವಾಗಿ ಪಶ್ಚಿಮ ಘಟ್ಟದ ಅಂಚಿನಲ್ಲಿಯೇ ಬೆಳೆದಿತ್ತು ಕೂಡ. ಕರ್ನಾಟಕದಲ್ಲಿ ನಕ್ಸಲಿಸಂ ಮೊದಲು ಬೇರೂರಿದ್ದು ಬೀದರ್‌ನಲ್ಲಿ. ಆ ನಂತರ ರಾಯಚೂರು ಮತ್ತು ಆಂಧ್ರ ಗಡಿಯಲ್ಲಿ ಬೆಳೆದು ಕುದುರೆಮುಖದಲ್ಲಿ ಕಾಲೂರಿ ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಮೊದಲಾದ ಭಾಗಗಳಲ್ಲಿ ವ್ಯಾಪಿಸಿ ಸುಮಾರು ಎರಡೂವರೆ ಮೂರು ದಶಕಗಳ ಕಾಲ ರಾಜ್ಯವನ್ನು ಕಾಡಿದೆ. ಹಲವು ರಕ್ತಸಿಕ್ತ ಘಟನೆಗಳಿಗೂ ಸಾಕ್ಷಿಯಾಗಿದೆ. ಎಡಪಂಥೀಯ ಕ್ರಾಂತಿಕಾರಿ ಧೋರಣೆ ಹೊಂದಿರುವ ನಕ್ಸಲ್ ತೀವ್ರಗಾಮಿಗಳಿಗೆ ನಗರದ
ವಿಚಾರವಾದಿ'ಗಳು ಸೈದ್ಧಾಂತಿಕ ಮತ್ತು ಪೂರಕ ಸಹಕಾರ ಬೆಂಬಲ ನೀಡಿದ್ದಿದೆ. ಪರಿಣಾಮ ಹಲವು ಶಕ್ತಿಗಳು ಮಾವೋ ಉಗ್ರರ ಹೋರಾಟದಲ್ಲಿ ತೊಡಗಿಸಿಕೊಂಡು ಬೆಂಬಲಿಸಿದ್ದೂ ಇದೆ.
ಸಮ ಸಮಾಜದ ಕನಸು ಹೊತ್ತು ಅದನ್ನು ಯುವಕರಲ್ಲಿ ಬಿತ್ತಿ, ನೂರಾರು ಯುವಕ ಯುವತಿಯರ ಕೈಗೆ ಬಂದೂಕು ನೀಡಿ ನಡೆಸಿದ ಸಶಸ್ತ್ರ ಹೋರಾಟ ಪ್ರಪ್ರಥಮ ಬಾರಿಗೆ ಬಯಲಿಗೆ ಬಂದದ್ದು ತಮ್ಮ ತರಬೇತಿಯ ವೇಳೆ ಗುಂಡು ಹಾರಿ ಮಹಿಳೆಯೋರ್ವಳ ಕಾಲಿಗೆ ಬಡಿದು ರಕ್ತ ಚೆಲ್ಲಿದಾಗ.
೨೦೦೨ರಲ್ಲಿ ತರಬೇತಿ ವೇಳೆ ಹರಿದ ಗುಂಡಿನಿಂದ ಮೆಣಸಿನಹಾಡ್ಯದಲ್ಲಿ ಕಟ್ಟಿಗೆ ಮತ್ತು ತರಗೆಲೆ ತರಲು ಹೋದ ಚೀರಮ್ಮ ಎಂಬ ಮಹಿಳೆಗೆ ತಾಗಿದ್ದರಿಂದ, ನಕ್ಸಲೀಯರಿಗೆ ಬಂದೂಕು ಸಿಕ್ಕಿದೆ ಎನ್ನುವ ಸುಳಿವು ಸರ್ಕಾರಕ್ಕೆ ದೊರೆಯಿತು. ಆ ನಂತರ ಇದನ್ನು ಗಂಭೀರವಾಗಿ ತೆಗೆದುಕೊಂಡ ಸರ್ಕಾರ ೨೦೦೫ರಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಮತ್ತು ಶಿವಲಿಂಗು ಅವರನ್ನು ಎನ್‌ಕೌಂಟರ್‌ನಲ್ಲಿ ಮುಗಿಸಿತು. ಸಾಕೇತ್ ರಾಜನ್ ಅತ್ಯಂತ ಬುದ್ಧಿವಂತ, ಪ್ರಭಾವಿ ಹೋರಾಟಗಾರ. ದೆಹಲಿ ಜೆಎನ್‌ಯು ವಿದ್ಯಾರ್ಥಿ ಕೂಡ ಆಗಿದ್ದ.
೨೦೦೫ರಲ್ಲಿ ಮೆಣಸಿನಹಾಡ್ಯದಲ್ಲಿ ನಡೆದ ಸಾಕೇತ್ ರಾಜನ್ ಹತ್ಯೆ, ಆ ನಂತರ ನಡೆದ ಎನ್‌ಕೌಂಟರ್‌ಗಳು ಇಡೀ ಮಾವೋವಾದಿ ಸಂಘಟನೆ ಕ್ಷೀಣಿಸುವಲ್ಲಿ ಯಶಸ್ವಿಯಾಗಿದ್ದವು. ಜನಬೆಂಬಲವೂ ಕಡಿಮೆಯಾಯಿತು. ಆದಾಗ್ಯೂ ಅಲ್ಲಲ್ಲಿ, ಕೇರಳ-ಕರ್ನಾಟಕ ಗಡಿ, ಚಿಕ್ಕಮಗಳೂರು, ಶಿವಮೊಗ್ಗ, ಬೆಳ್ತಂಗಡಿ ಭಾಗದಲ್ಲಿ ಜೀವ ಹಿಡಿದುಕೊಂಡು ನೆಲೆಯೂರಿದ್ದ ಮಾವೋವಾದಿಗಳನ್ನು ಮನವೊಲಿಸಿ ಶರಣಾಗಿಸುವಲ್ಲಿ ಸರ್ಕಾರ ನಡೆಸಿದ ಪ್ರಯತ್ನ ಸಾಕಷ್ಟು ಯಶಸ್ವಿಯೂ ಆಯಿತೆನ್ನಿ.
ಮೆಣಸಿನಹಾಡ್ಯ ಘಟನೆಯಿಂದಲೇ ನಕ್ಸಲ್ ಹೋರಾಟವನ್ನು ಹೊಸಕಿಹಾಕುವ ಪ್ರಯತ್ನವನ್ನು ಸರ್ಕಾರ ಆರಂಭಿಸಿತು. ನಕ್ಸಲ್ ನಿಗ್ರಹ ದಳ ರಚನೆಯಾಯಿತು. ಸುಳಿವು ಸಿಕ್ಕಲ್ಲಿ ಹೊಸಕಿಹಾಕಿತು. ಹಾಗೇ ಅವರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನಕ್ಕೂ ಇಳಿಯಿತು. ಈ ಹಿಂದೆ ಸಿರಿಗೆರೆ ನಾಗರಾಜ, ನೂರ್ ಶ್ರೀಧರ್ ಮೊದಲಾದವರು ಸರ್ಕಾರದ ಪುನರ್ವಸತಿ ಪ್ಯಾಕೇಜನ್ನು ಪಡೆದು ನಾಗರಿಕ ಜೀವನಕ್ಕೆ ತೊಡಗಿದರೆ, ಇದಕ್ಕೆ ಒಗ್ಗದ ಕೆಲವರ ತಂಡದ ನೇತೃತ್ವವನ್ನು ವಿಕ್ರಂ ಗೌಡ ವಹಿಸಿದ್ದರು. ಎರಡು ತಿಂಗಳ ಹಿಂದೆ ವಿಕ್ರಂ ಗೌಡನ ಹತ್ಯೆಯಾದ ಮೇಲೆ ಸಂಘಟನೆಯ ಬಲ ಕುಸಿಯಿತು.
ದೇಶದಲ್ಲಿಯೇ ನಕ್ಸಲ್ ಚಟುವಟಿಕೆ ಕೊನೆಗೊಳಿಸುವ ಸವಾಲನ್ನು ಕೇಂದ್ರ ಸರ್ಕಾರ ಸ್ವೀಕರಿಸಿದೆ. `೨೦೨೬ರ ಅಂತ್ಯದೊಳಗೆ ನಕ್ಸಲ್‌ವಾದಿಗಳು ಈ ದೇಶದಲ್ಲಿ ಇರೋಲ್ಲ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಡುಗಿದ ಮರುದಿನವೇ ಛತ್ತೀಸ್‌ಗಢದಲ್ಲಿ ನಕ್ಸಲರು ೯ ಯೋಧರ ಬಲಿ ಪಡೆದು, ತಮ್ಮ ಬಲ ಕುಗ್ಗಿಲ್ಲ ಎಂದು ಅಟ್ಟಹಾಸ ಮೆರೆದರು. ಆದರೆ, ನಿಜಸಂಗತಿ ಏನೆಂದರೆ, ಸಮರ್ಥ ನಾಯಕತ್ವ, ಬೆಂಬಲ ಇಲ್ಲದೆ ಬಲ ಕುಗ್ಗಿದೆ. ಹಾಗೇ, ನಕ್ಸಲರ ಶರಣಾಗತಿಗೂ ರಾಜ್ಯ ಸರ್ಕಾರಗಳು ಪ್ರಯತ್ನ ನಡೆಸಿವೆ. ಕರ್ನಾಟಕ, ಒಡಿಶಾ ಸರ್ಕಾರಗಳು ಹತ್ತು ವರ್ಷಗಳ ಹಿಂದೆಯೇ ನಕ್ಸಲ್ ಪ್ಯಾಕೇಜ್ ಘೋಷಿಸಿವೆ. ಮನವೊಲಿಕೆಗೆ ಎಡಪಂಥೀಯ ವಿಚಾರವಾದಿಗಳನ್ನು ಬಳಸಿಕೊಂಡಿವೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನಕ್ಸಲ್‌ಪೀಡಿತ ಪ್ರದೇಶ ಗಡ್‌ಚಿರೋಲಿಗೆ ಭೇಟಿ ನೀಡಿ ಆ ಪ್ರದೇಶದಲ್ಲಿಯೇ ಉಕ್ಕಿನ ಉದ್ಯಮ ಸ್ಥಾಪಿಸುವ ಹಾಗೂ ನಕ್ಸಲ್‌ವಾದಿಗಳಿಗೆ ಪುನರ್ವಸತಿ ಕಲ್ಪಿಸುವ ಪ್ಯಾಕೇಜ್ ಘೋಷಿಸಿದರು. ಮುಖ್ಯವಾಹಿನಿಗೆ ಕರೆತರುವ ಕಾರ್ಯವಂತೂ ಜಾರಿಗೆ ಬಂದಿದೆ. ಜನಪರ ಕಾರ್ಯ ಹಾಗೂ ಅಭಿವೃದ್ಧಿಯೊಂದೆ ಕಾರ್ಯತಂತ್ರ ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ.
ಈಗ ರಾಜ್ಯದ ಮುಖ್ಯಮಂತ್ರಿಯ ನೇರ ಆಹ್ವಾನದ ಮೇರೆಗೆ ಆರು ನಕ್ಸಲ್‌ಗಳು ಶರಣಾಗುತ್ತಿದ್ದಾರೆ. ಅವರ ಬೇಡಿಕೆಗಳನ್ನು ಕೂಡ ಈಡೇರಿಸುವ ಬದ್ಧತೆಯನ್ನು ಸರ್ಕಾರ ಸ್ಪಷ್ಟವಾಗಿ ವ್ಯಕ್ತಪಡಿಸಿದೆ. ಮುಖ್ಯವಾಹಿನಿಗೆ ಬರುವ ನಕ್ಸಲೀಯರಿಗೆ ಆರ್ಥಿಕ ಪ್ಯಾಕೇಜ್‌ನೊಂದಿಗೆ ಅವರ ಕಾನೂನಾತ್ಮಕ ತೊಡಕು - ಪ್ರಕರಣಗಳನ್ನು ಪರಿಹರಿಸುವ ಭರವಸೆ ನೀಡಲಾಗಿದೆ. ಇಷ್ಟಕ್ಕೂ ಈ ಕ್ಷಣದವರೆಗೂ ಅವರು ಮುಂದಿಟ್ಟಿರುವ ಬೇಡಿಕೆ ಜನಪರವಾದದ್ದೇ. ಸುಮಾರು ಹದಿನೆಂಟು ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಂದೆ ಇಟ್ಟಿದ್ದಾರೆ ಶರಣಾಗುತ್ತಿರುವ ನಕ್ಸಲರು. ಪ್ರಮುಖವಾಗಿ ಜನಸಾಮಾನ್ಯರು ಪಡುತ್ತಿರುವ ಸಂಕಷ್ಟಕ್ಕೆ ಸಂಬಂಧಿಸಿದವುಗಳನ್ನೇ ಇವರು ಮುಂದೊಡ್ಡಿದ್ದಾರೆ. ವೈಯಕ್ತಿಕ ಅಥವಾ ಸಂಘಟನೆಗೆ ಸಂಬಂಧಿಸಿದಂತೆ ಕೇಳಿರುವುದು ಕಡಿಮೆಯೇ.
ಪಶ್ಚಿಮಘಟ್ಟದಲ್ಲಿ ಪರಿಸರ ನಾಶ ಮಾಡುವ ಟೂರಿಸಂ ನಿಲ್ಲಬೇಕು. ನಿರುದ್ಯೋಗಿ ಯುವಜನಾಂಗಕ್ಕೆ ಅರ್ಹತೆಗೆ ತಕ್ಕಂತೆ ಸರ್ಕಾರಿ ಉದ್ಯೋಗ ಕೊಡಬೇಕು. ದಲಿತರು ಮತ್ತು ಆದಿವಾಸಿಗಳಿಗೆ ಆದ್ಯತೆ ನೀಡಬೇಕು. ಕಾಡಿನ, ಕಾಡಿನಂಚಿನಲ್ಲಿರುವ ಎಲ್ಲ ಆದಿವಾಸಿಗಳಿಗೆ ಕಾಡಿನ ಮೇಲಿನ ಹಕ್ಕು, ಅದರ ಉತ್ಪನ್ನ ಸಂಗ್ರಹಿಸಲು ಅಧಿಕಾರ ಇರಬೇಕು. ಅರಣ್ಯಾಧಿಕಾರಿಗಳ ಕಿರುಕುಳ ನಿಲ್ಲಬೇಕು. ಕೃಷಿ ಮನುಷ್ಯನ ಬದುಕಿನ ಮೇಲೆ, ಪ್ರಕೃತಿಯ ಮೇಲೆ ಹವಾಮಾನ ಬದಲಾವಣೆಯಿಂದ ಆಗಿರುವ ಸಮಸ್ಯೆಗೆ ಸೂಕ್ತ ಶಾಶ್ವತ ಯೋಜನೆ ರೂಪಿತವಾಗಬೇಕು. ಬಡ ಮತ್ತು ಮಧ್ಯಮ ವರ್ಗದ ರೈತರ ಒತ್ತುವರಿ ಭೂಮಿಗಳನ್ನು ತೆರವುಗೊಳಿಸಬಾರದು. ಆದಿವಾಸಿ ಸಮುದಾಯದಲ್ಲಿ ಅಕಾಲಿಕ ಮರಣ ಹೊಂದಿರುವ ಯುವಜನರ ಕುರಿತು ಸಂಶೋಧನೆ ನಡೆಸಿ ಸೂಕ್ತ ನಾಗರಿಕ ಸೌಲಭ್ಯ ಒದಗಿಸಬೇಕು. ಪ್ರಮುಖವಾಗಿ ಆಯಾ ಪ್ರದೇಶದಲ್ಲಿ ಸ್ಥಳೀಯವಾಗಿ ಬೆಳೆಯುತ್ತಿರುವ ಅಕ್ಕಿ ಅಥವಾ ಧಾನ್ಯವನ್ನು ಅಲ್ಲಿಯ ಪಡಿತರ ಅಂಗಡಿಗಳಲ್ಲಿಯೇ ನೀಡುವಂತಾಗಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈ ಕೊನೇ ಕ್ಷಣದವರೆಗೂ ಕೂಡ ಶರಣಾತರಾಗುವ ನಕ್ಸಲರು ಇಟ್ಟಿದ್ದಾರೆ.
ಇವೆಲ್ಲ ಬೇಡಿಕೆಗಳಲ್ಲ. ಸರ್ಕಾರ ಯೋಚಿಸುವ, ಯೋಜಿಸುವ, ನಿಭಾಯಿಸುವ ಜನಪರ ಆಡಳಿತದ ಕರ್ತವ್ಯ. ಇದನ್ನು ಸರ್ಕಾರ ಹೇಳಿಸಿಕೊಳ್ಳಬೇಕಾಗಿರುವುದು ಮಾತ್ರ ವಿಪರ್ಯಾಸ. ಅವರ ಸಾಂಘಿಕ ಬೇಡಿಕೆ ಎಂದರೆ ಕಾಮ್ರೇಡ್ ವಿಕ್ರಂ ಗೌಡ ಹತ್ಯೆ ಉದ್ದೇಶಪೂರಿತ ಎನ್‌ಕೌಂಟರ್. ಇದರ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಮತ್ತು ಮೂರು ರಾಜ್ಯಗಳ ಜೈಲಿನಲ್ಲಿರುವ ಎಲ್ಲ ಕಾಮ್ರೇಡ್‌ಗಳ ಪ್ರಕರಣಗಳನ್ನು ಶೀಘ್ರವಾಗಿ ಮುಗಿಸಬೇಕು. ಈ ಹಿಂದೆ ಸರ್ಕಾರದ ವಾಗ್ದಾನ ನಂಬಿ ಶರಣಾಗತರಾದ ನಕ್ಸಲಿರಿಗೆ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸತಕ್ಕದ್ದು. ವಿಶೇಷವಾಗಿ ನ್ಯಾಯಾಂಗ ಅಲೆದಾಟ ಮತ್ತು ಪುನರ್ವಸತಿ. ಇವು. ವಿಶೇಷವೆಂದರೆ ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲೂ ನಕ್ಸಲರ ಶರಣಾಗತಿ ಆಗಿತ್ತು. ಈಗ ಅಂತ್ಯದ ಹಂತಕ್ಕೆ ಅವರದ್ದೇ ಸರ್ಕಾರದಲ್ಲಿ ವಿಷಯ ಬಂದು ನಿಂತಿದೆ. ಆಳುವ ಸರ್ಕಾರ ಜನಪರವಾಗಿದ್ದರೆ, ಜನರ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಂಡಿದ್ದರೆ, ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಿ ಜನರ ಹಕ್ಕುಬಾಧ್ಯತೆ ರಕ್ಷಿಸಿದ್ದರೆ ಬಹುಶಃ ನಕ್ಸಲಿಸಂ ಕಾಲೂರುತ್ತಿರಲಿಲ್ಲ. ಅಂತಹ ವಿಶ್ವಾಸಾರ್ಹತೆ ಸರ್ಕಾರ ಪಡೆದುಕೊಂಡಿರುವುದು ಇಂದಿನ ಆರೂ ನಕ್ಸಲಿಗರ ಶರಣಾಗತಿಗೆ ಕಾರಣ. ಬಹುಶಃ ಇನ್ನು ಒಂದು ಕೈ ಎಣಿಸುವಷ್ಟು ಮಂದಿ ಮಾತ್ರ ರಾಜ್ಯ-ನೆರೆ ರಾಜ್ಯದಲ್ಲಿ ಈ ಚಟುವಟಿಕೆಯಲ್ಲಿ ಉಳಿಯಬಹುದು. ಅದೇನೇ ಇರಲಿ. ರಾಜ್ಯದಲ್ಲಂತೂ ಸಮಾಧಾನಕರ ಬೆಳವಣಿಗೆಯಾಗಿದೆ. ಆದ್ದರಿಂದ ಜನಪರ ಬೇಡಿಕೆಗಳಿಗೆ ಸರ್ಕಾರ ಆದ್ಯತೆ ನೀಡಬೇಕು. ನಕ್ಸಲರಿಗೆ ಸರ್ಕಾರದ ಸ್ಪಂದನೆ ಸ್ವಾಗತಾರ್ಹ ಕ್ರಮ. ಹಸಿರು ಹೊದಿಕೆ ಹೊತ್ತ ಪಶ್ಚಿಮಘಟ್ಟದಲ್ಲಿ ನಕ್ಸಲರ ಬಂದೂಕಿನ ಗುಂಡು ಮತ್ತೆ ಹಾರದಿರಲಿ ಎಂಬುದೇ ಜನಾಶಯ.