ಮನುಷ್ಯನ ಆರೋಗ್ಯಕ್ಕೂ, ಮಣ್ಣಿನ ಆರೋಗ್ಯಕ್ಕೂ ಸಂಬಂಧವಿದೆ
ಬೆಂಗಳೂರು: ಮಣ್ಣಿನ ಆರೋಗ್ಯ, ಮಣ್ಣಿನ ಫಲವತ್ತತೆ, ಮಣ್ಣಿನ ಉತ್ಪಾದಕತೆ ಕುರಿತು ರೈತರು ಹಾಗೂ ಸಾರ್ವಜನಿಕರಲ್ಲಿ ಮಣ್ಣಿನ ಮಹತ್ವದ ಬಗ್ಗೆ ಅರಿವುಮೂಡಿಸಲು ಪ್ರತಿ ವರ್ಷ ಡಿಸೆಂಬರ್ 5 ರಂದು "ಜಾಗತಿಕ ಮಣ್ಣಿನ ದಿನ"ವೆಂದು ಆಚರಿಸಲಾಗುತ್ತದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು..
ಕೃಷಿ ಇಲಾಖೆ ಹಾಗು ಜಲಾನಯನ ಅಭಿವೃಧ್ದಿ ಇಲಾಖೆ ವತಿಯಿಂದ ಬೆಂಗಳೂರಿನ ಕೃಷಿ ಆಯುಕ್ತಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, "ಜಗವೇ ನಿಂತಿದೆ-ನೇಗಿಲ ಆಳದ ಮಣ್ಣಿನ ಮೇಲೆ", "ಮಣ್ಣು ಬರಿದಾದರೆ-ಕಣ್ಣು ಕುರುಡಾದೀತು", "ನಾವು ಸತ್ತರೇ ಮಣ್ಣಿಗೆ-ಮಣ್ಣೇ ಸತ್ತರೇ ಇನ್ನೆಲ್ಲಿಗೆ" ಮತ್ತು "ಮಣ್ಣೇ ಮಾಣಿಕ್ಯ" ಎಂಬ ನಾನ್ನುಡಿಗಳು ಮಣ್ಣಿನ ಮಹತ್ವವನ್ನು ಸಾರುತ್ತವೆ. ಮನುಷ್ಯರು ಆರೋಗ್ಯವಾಗಿರಬೇಕೆಂದರೆ ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಆರೋಗ್ಯಕರವಾದ ಆಹಾರವು ಆರೋಗ್ಯಕರ ಮಣ್ಣಿನಲ್ಲಿ ಬೆಳೆಯುತ್ತದೆ, ಆದ್ದರಿಂದ ಮನುಷ್ಯರ ಆರೋಗ್ಯಕ್ಕೂ ಮಣ್ಣಿನ ಆರೋಗ್ಯಕ್ಕೂ ನೇರವಾದ ಸಂಬಂಧವಿದೆ ಎಂದು ತಿಳಿಸಿದರು..
ಜಾಗತಿಕವಾಗಿ ಶೇಕಡಾ 95 ರಷ್ಟು ಆಹಾರವನ್ನು ಮಣ್ಣಿನಿಂದಲೇ ಬೆಳೆಯಲಾಗುತ್ತದೆ, ಹಾಗೂ ಬೆಳೆಗಳಿಗೆ ಬೇಕಾಗುವ 15 ಅಗತ್ಯ ಪೋಷಕಾಂಶಗಳನ್ನೂ ಕೂಡಾ ಮಣ್ಣೇ ಒದಗಿಸುತ್ತದೆ.
ಹಸಿರು ಕ್ರಾಂತಿಯ ಅವಧಿಯಲ್ಲಿ-ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣವು ಶೇಕಡಾ 0.75 ರಿಂದ 1 ರಷ್ಟಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ಒಂದೇ ಬೆಳೆಯನ್ನು ಬೆಳೆಯುವುದರಿಂದ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರವನ್ನು ಬಳಸುವುದರಿಂದ ಮತ್ತು ಅವೈಜ್ಞಾನಿಕವಾಗಿ ಹೆಚ್ಚಾಗಿ ನೀರನ್ನು ಬಳಸುವುದರಿಂದ ಪ್ರಸ್ತುತ ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣವು ಶೇಕಡಾ 0.3 ರಿಂದ 0.4 ರಷ್ಟು ಮಾತ್ರವಿದೆ ಎಂದು ಸಚಿವರು ತಿಳಿಸಿದರು..
ಮಣ್ಣಿನಲ್ಲಿ ಸಾವಯವ ಪದಾರ್ಥ ಹಾಗೂ ಸೂಕ್ಷ ಜೀವಾಣುಗಳು ಇರುವುದರಿಂದ ಮಣ್ಣು ಕೂಡಾ ಒಂದು ಜೀವಂತ ವಸ್ತುವೆಂದು ಪರಿಗಣಿಸಲಾಗಿದೆ. ನಿಸರ್ಗದಲ್ಲಿ ಒಂದು ಇಂಚು ಮಣ್ಣು ತಯಾರಾಗಲು ಸಾವಿರ ವರ್ಷಗಳೇ ಬೇಕು, ಆದರೆ ಮಣ್ಣಿನ ಸಮತಟ್ಟು ಮಾಡದೇ, ಮಣ್ಣನ್ನು ಸೂಕ್ತ ನಿರ್ವಹಣೆ ಮಾಡದೇ ಇದ್ದಲ್ಲಿ ಒಂದೆ ರಭಸದ ಮಳೆಗೆ ಹಾಲಿನ ಕೆನೆಯಂತಿರುವ ಫಲವತ್ತಾದ ಮೇಲ್ಮಣ್ಣು ಕೊಚ್ಚಿ ನೀರಿನೊಂದಿಗೆ ಹರಿದು ಹೋಗಿ ಕೆಳಪದರಿನ ಸತ್ವ ರಹಿತ ಮಣ್ಣು ಮಾತ್ರ ಉಳಿದುಕೊಳ್ಳುತ್ತದೆ, ಈ ಹಿನ್ನಲೆಯಲ್ಲಿ ಮಣ್ಣಿನ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಸಚಿವರು ಹೇಳಿದರು..
ಕೃಷಿ ಇಲಾಖೆಯ ಮೂಲಕ ಹಮ್ಮಿಕೊಂಡಿರುವ ಜಾಗತಿಕ ಮಣ್ಣು ದಿನದ ಆಚರಣೆಯು ಯಶಸ್ವಿಯಾಗಲೆಂದು ಈ ಮೂಲಕ ಹಾರೈಸುತ್ತೇನೆ ಎಂದು ಚಲುವರಾಯಸ್ವಾಮಿ ತಿಳಿಸಿದರು..
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಮಹೇಶ್ ಶಿರೂರು, ಕೃಷಿ ಇಲಾಖೆ ನಿರ್ದೇಶಕ ಡಾ.ಪುತ್ರ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.