For the best experience, open
https://m.samyuktakarnataka.in
on your mobile browser.

ಮನೆಯೊಳಗೆ `ಭೂತ’ಚೇಷ್ಟೆ..!

07:09 PM Nov 30, 2024 IST | Samyukta Karnataka
ಮನೆಯೊಳಗೆ  ಭೂತ’ಚೇಷ್ಟೆ

ಚಿತ್ರ: ನಾ ನಿನ್ನ ಬಿಡಲಾರೆ

ನಿರ್ದೇಶನ: ನವೀನ್ ಜಿ.ಎಸ್

ನಿರ್ಮಾಣ: ಭಾರತಿ ಬಾಲಿ

ತಾರಾಗಣ: ಅಂಬಾಲಿ ಭಾರತಿ, ಪಂಚಿ, ಕೆ.ಎಸ್.ಶ್ರೀಧರ್, ಶ್ರೀನಿವಾಸ್ ಪ್ರಭು, ರಘು ಮುಂತಾದವರು.

ರೇಟಿಂಗ್ಸ್: 3

-ಜಿ.ಆರ್.ಬಿ

ಹಾರರ್ ಸಿನಿಮಾ ಎಂದರೆ ಸಿನಿಮಾ ಶುರುವಿನಿಂದಲೂ ಹೆದರಿಸಲೇಬೇಕು ಅಂತೇನಿಲ್ಲವಲ್ಲ..? ಕಥೆಯನ್ನು ಒಂದು ಹಂತಕ್ಕೆ ಹೇಳಿದ ಬಳಿಕ ನೋಡುಗರನ್ನು ಹೆದರಿಸಬಹುದು, ಸಸ್ಪೆನ್ಸ್ ಸುಳಿಯಲ್ಲಿ ಸಿಲುಕಿಸಬಹುದು, ಭೂತಚೇಷ್ಟೆ, ವಿಚಿತ್ರ ಶಬ್ಧಗಳ ಮೂಲಕ ಬೆಚ್ಚಿ ಬೀಳಿಸಲೂಬಹುದು… ದಾರಿ ಸಾಕಷ್ಟಿವೆ. ಆದರೆ ‘ನಾ ನಿನ್ನ ಬಿಡಲಾರೆ’ ಇದೇ ಜಾನರ್‌ನ ಸಿನಿಮಾವಾದರೂ ಬೇರೆ ನೆಲೆಗಟ್ಟಿನಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ನವೀನ್. ಕಥೆಯಲ್ಲಿ ಬೇರೆ ಬೇರೆ ಎಳೆಗಳಿವೆ. ಅದನ್ನು ಒಟ್ಟುಗೂಡಿಸಿ, ಒಟ್ಟೊಟ್ಟಿಗೆ ಭಯಪಡಿಸಲು ಮುಂದಾಗುತ್ತಾರೆ. ಅದೂ ಒಂದು ಸರಿಯಾದ ಕ್ರಮದಲ್ಲಿ..!

ಒಂದು ಬೃಹತ್ ಮನೆ. ಅದರೊಳಗೆ ಹೋದವರಿಗೆ ವಿಚಿತ್ರವಾದ ಅನುಭವ. ಒಂದಷ್ಟು ಚೀರಾಟ, ಕೂಗಾಟಗಳ ಜತೆಗೆ ಸಿನಿಮಾ ಟೇಕಾಫ್ ಆಗುತ್ತದೆ. ನೆರಳು-ಬೆಳಕಿನಾಟದ ನಡುವೆ ಹಾಗೋ-ಹೀಗೋ ಮೊದಲಾರ್ಧ ಮುಗಿಯುತ್ತದೆ. ಅಸಲಿ ಸಿನಿಮಾ ಶುರುವಾಗುವುದೇ ದ್ವಿತೀಯಾರ್ಧದ ನಂತರ… ಬರೀ ಮನೆಯ ಕಥೆ ಎಂದುಕೊಂಡವರಿಗೆ ಕಾಯಿಲೆ ಅದಕ್ಕೊಂದು ವೈದಕೀಯ ಹಿನ್ನೆಲೆ ಏನೆಂಬುದು ತೆರೆದುಕೊಳ್ಳುತ್ತದೆ. ಅಲ್ಲೀವರೆಗೂ ಇದೊಂದು ಹಾರರ್ ಸಿನಿಮಾ ಎಂದುಕೊಂಡವರಿಗೆ ಕೆಲವೊಂದು ಟ್ವಿಸ್ಟ್‌ಗಳು ಎದುರಾಗುತ್ತವೆ. ಮತ್ತಷ್ಟು ಭಯಭೀತರಾಗುವಂಥ ಸನ್ನಿವೇಶ ಅಲ್ಲಿಂದ ಮತ್ತಷ್ಟು ಜೋರಾಗುತ್ತದೆ.

ಕಥೆಗೆ ತಕ್ಕಂತೆ ಶೀರ್ಷಿಕೆ ಅಥವಾ ಶೀರ್ಷಿಕೆಗೆ ಹೊಂದಿಕೊಳ್ಳುವಂತೆ ಕಥೆ ಹೆಣೆದು ಅದಕ್ಕೆ ನ್ಯಾಯ ಒದಗಿಸಲಾಗಿದೆ. ಹಾರರ್, ಮೆಡಿಕಲ್ ವಿಷಯದ ಜತೆಗೆ ಕೊನೆಯಲ್ಲಿ ರಾಯರ ಮಹಿಮೆ ಮೂಲಕ ಸಿನಿಮಾಕ್ಕೆ ಮುಕ್ತಿ ನೀಡಲಾಗಿದೆ. ಆದರೆ ಇದರ ‘ಮುಂದುವರಿದ ಭಾಗ’ ಬರಲಿದೆ ಎಂಬುದರ ಸುಳಿವು ಕೊಡಲಾಗಿದೆ.

ಕೆಲವೊಂದು ಲೋಪದೋಷಗಳನ್ನು ಸರಿಸಿ ಸಿನಿಮಾ ನೋಡಿದರೆ ಮೆಚ್ಚುಗೆಗೆ ಅರ್ಹ. ಅಂಬಾಲಿ ಭಾರತಿ ನಟನೆ ಗಮನಾರ್ಹ. ಪಂಚಿ, ಕೆ.ಎಸ್.ಶ್ರೀಧರ್, ಶ್ರೀನಿವಾಸ ಪ್ರಭು ಹಾಗೂ ರಘು ಮೊದಲಾದವರು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.