ಮಹಾರಾಷ್ಟ್ರ ಗೆಲುವಿಗೆ ಒಡೆದು ಆಳುವ ನೀತಿ ಆಧಾರ
ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನಾ ಮತ್ತು ಎನ್‌ಸಿಪಿ ಮೈತ್ರಿ ಗೆಲುವನ್ನು ಸಾಧಿಸಲು ಬ್ರಿಟಿಷರ ಕಾಲದ ಒಡೆದು ಆಳುವ ನೀತಿ ಅನುಸರಿಸಿದ್ದೇ ಕಾರಣ. ಮಹಿಳೆಯರಿಗೆ ಮಾಸಿಕ ೧೫೦೦ ರೂ. ಉಚಿತ ನೆರವು ನೀಡಿದ್ದು ಮತಗಳಿಕೆಗೆ ಕಾರಣ ಎಂದು ಹೇಳಿದರೂ ಅದಕ್ಕಿಂತ ಹೆಚ್ಚಾಗಿ ಹಿಂದೂ ಮತಗಳ ಕ್ರೋಡೀಕರಣ, ಅಲ್ಪಸಂಖ್ಯಾತರ ಮತಗಳ ವಿಭಜನೆಗೆ ವ್ಯವಸ್ಥಿತ ಅಪಪ್ರಚಾರ ಎರಡೂ ಕಾರಣ. ಇದನ್ನು ಬಹಳ ಅಚ್ಚುಕಟ್ಟಾಗಿ ಮೂರೂ ಪಕ್ಷಗಳು ಕೈಗೊಂಡಿವೆ. ಇದಕ್ಕಾಗಿ ನಾವು ಒಂದಾಗಿರಬೇಕು' ಎಂಬ ಫೋಷಣೆಯೇ ಪ್ರಧಾನವಾಗಿ ಕೇಳಿ ಬಂದಿತು. ಪ್ರತಿಪಕ್ಷಗಳಿಗೆ ಹೋಗಬೇಕಾದ ಮತಗಳನ್ನು ಒಡೆಯುವುದು, ತಮ್ಮ ಮತಗಳನ್ನು ಭಾವನಾತ್ಮಕವಾಗಿ ತಮ್ಮಲ್ಲಿ ಕ್ರೋಡೀಕರಣಗೊಳ್ಳುವಂತೆ ಮಾಡುವುದು ಮೈತ್ರಿ ಕೂಟ ಬಹು ಜಾಣ್ಮೆಯಿಂದ ಅನುಸರಿಸಿದೆ. ಮಹಿಳೆಯರಿಗೆ ಉಚಿತ ನೆರವು ನೀಡಿದ್ದ ಮಾತ್ರಕ್ಕೆ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರಲಿಲ್ಲ. ಏಕೆಂದರೆ ಈ ಗ್ಯಾರಂಟಿ ಯೋಜನೆ ಮಧ್ಯಪ್ರದೇಶ, ತಮಿಳುನಾಡು, ಕರ್ನಾಟಕ, ತೆಲಂಗಾಣ ರಾಜ್ಯಗಳಲ್ಲೂ ಜಾರಿಯಲ್ಲಿವೆ. ಮಹಾರಾಷ್ಟ್ರದಲ್ಲಿ ೨.೫೦ ವಾರ್ಷಿಕ ಆದಾಯಕ್ಕಿಂತ ಕಡಿಮೆ ಇರುವ ಎಲ್ಲ ಮಹಿಳೆಯರಿಗೆ ಈ ಸವಲತ್ತು ನೀಡಲಾಗಿದೆ. ೨.೫ ಕೋಟಿ ಮಹಿಳೆಯರು ಇದರ ಲಾಭ ಪಡೆಯುತ್ತಿದ್ದಾರೆ. ಮಾಸಿಕ ೧೫೦೦ ರೂ. ಇರುವುದನ್ನು ಈಗ ೨೧೦೦ ರೂಗಳಿಗೆ ಹೆಚ್ಚಿಸುವ ಭರವಸೆಯೂ ಮೂಡಿದೆ. ಬೇರೆ ಪಕ್ಷಗಳು ಮಾಸಿಕ ೩ ಸಾವಿರ ರೂ. ನೀಡಲು ಮುಂದೆ ಬಂದಿವೆ. ಹೀಗಾಗಿ ಮಹಿಳೆಯರಿಗೆ ಉಚಿತ ನೆರವು ಒಂದೇ ಕೆಲಸ ಮಾಡಿಲ್ಲ. ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಸೇರಿದಂತೆ ಎಲ್ಲರೂ ಹಿಂದೂಗಳ ಮತಗಳ ಕ್ರೋಡೀಕರಣಕ್ಕೆ ಯತ್ನಿಸಿದರು. ಒಂದುಗೂಡದಿದ್ದಲ್ಲಿ ರಕ್ಷಣೆ ಸಿಗುವುದಿಲ್ಲ ಎಂಬ ಭಾವನೆ ಮೂಡುವಂತೆ ಮಾಡಿದ್ದಾರೆ. ಮತ್ತೊಂದು ಕಡೆ ಲವ್ ಜಿಹಾದ್, ಓಟು ಜಿಹಾದ್ ಮೂಲಕ ಅಲ್ಪಸಂಖ್ಯಾತರಲ್ಲಿ ಭೀತಿ ಮೂಡಿಸುವ ಕೆಲಸ ನಡೆದಿದೆ. ಹಿಂದೆ
ತುಕಡೆ ತುಕಡೆ ಗ್ಯಾಂಗ್' ಘೋಷಣೆ ಜನಪ್ರಿಯಗೊಳಿಸಲಾಗಿತ್ತು. ಅಲ್ಲದೆ ಅರ್ಬನ್ ನಕ್ಸಲ್ ಮಾತುಗಳು ಕೇಳಿ ಬಂದಿದ್ದವು. ಲೋಕಸಭೆ ಚುನಾವಣೆ ಕಾಲದಲ್ಲೂ ಇದೇ ರೀತಿ ನಡೆದಿತ್ತು. ಮತದಾರರಲ್ಲಿ ಒಂದು ರೀತಿಯ ಭೀತಿ ಮೂಡಿಸುವ ಕೆಲಸ ನಡೆದಿತ್ತು. ಎಲ್ಲಿಯವರೆಗೆ ಎಂದರೆ ರೈತರಿಗೆ ಒಂದು ಎತ್ತು ಕೂಡ ಕಾಂಗ್ರೆಸ್ ಪಾಲಾಗುತ್ತದೆ ಎಂದು ವದಂತಿ ಹಬ್ಬಿಸಲಾಗಿತ್ತು. ಈ ಎಲ್ಲ ಅಪಪ್ರಚಾರ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡಿರುವುದು ಸ್ಪಷ್ಟ. ಹಿಂದೂ ಮತ ಕ್ರೋಡೀಕರಿಸಲು ಉಳಿದ ಸಮುದಾಯಗಳಲ್ಲಿ ಭೀತಿ ಮೂಡಿಸುವುದು ಸರಿಯಾದ ಕ್ರಮವಲ್ಲ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಜಗತ್ತಿನಲ್ಲಿರುವ ಎಲ್ಲ ಹಿಂದೂಗಳು ಒಂದುಗೂಡದಿದ್ದಲ್ಲಿ ಉಳಿಗಾಲ ವಿಲ್ಲ ಎಂದು ಹೇಳಲು ಆರಂಭಿಸಿದ್ದಾರೆ. ಬಾಂಗ್ಲಾ ಮತ್ತಿತರ ಕಡೆ ಅಲ್ಪಸಂಖ್ಯಾತರಿಗೆ ತೊಂದರೆ ಕಟ್ಟಿಟ್ಟ ಬುತ್ತಿ. ಅಮೆರಿಕ ಸೇರಿದಂತೆ ಎಲ್ಲ ದೇಶಗಳಲ್ಲೂ ಅಲ್ಪಸಂಖ್ಯಾತರು ಇದ್ದೇ ಇರುತ್ತಾರೆ. ಅವರ ರಕ್ಷಣೆಗೆ ಆಯಾ ದೇಶದ ಸರ್ಕಾರಗಳು ಸೂಕ್ತ ನಿಯಮಗಳನ್ನು ರಚಿಸಿಕೊಂಡಿವೆ. ಅಮೆರಿಕದಲ್ಲಿ ಕಪ್ಪು ವರ್ಣಿಯರನ್ನು ರಕ್ಷಿಸಲು ೧೯೬೪ ರಲ್ಲಿ ನಿಯಮ ಮಾಡಲಾಯಿತು. ನಮ್ಮಲ್ಲಿ ಸುದೈವದಿಂದ ಡಾ. ಅಂಬೇಡ್ಕರ್ ಅಲ್ಪಸಂಖ್ಯಾತರ ರಕ್ಷಣೆಗೆ ಸಂವಿಧಾನದಲ್ಲೇ ಅನುಕೂಲಮಾಡಿಕೊಟ್ಟದ್ದಾರೆ.
ಭಾರತ ಸರ್ಕಾರ ವಿದೇಶಗಳಲ್ಲಿ ಭಾರತೀಯರು ಅಸು ನೀಗಿದರೆ ಕೂಡಲೇ ಪ್ರತಿಕ್ರಿಯೆ ನೀಡುತ್ತದೆ. ಅಲ್ಲದೆ ಖಂಡಿಸುವ ಕೆಲಸವನ್ನು ಕೈಗೊಳ್ಳುತ್ತದೆ. ಅದೇ ದೇಶದೊಳಗೆ ಅಲ್ಪಸಂಖ್ಯಾತರು ಎದುರಿಸುವ ಕಿರುಕುಳದ ಬಗ್ಗೆ ಚಕಾರ ಎತ್ತುವುದಿಲ್ಲ. ಇದು ಸರ್ಕಾರದ ಇಬ್ಬಂದಿತನ. ವಿದೇಶಗಳಲ್ಲಿ ದೇವಾಲಯ, ಗುರುದ್ವಾರಗಳ ಮೇಲೆ ದಾಳಿ ನಡೆದ ಕೂಡಲೇ ಖಂಡನೆಗಳ ಸುರಿಮಳೆಯಾಗುತ್ತದೆ. ನಮ್ಮಲ್ಲಿ ಪ್ರಾರ್ಥನಾ ಮಂದಿರಗಳ ವಿಚಾರ ಬಂದಾಗ ಮೌನವಹಿಸುವುದು ಸಾಮಾನ್ಯ ಸಂಗತಿ. ಬಾಂಗ್ಲಾದಲ್ಲಿ ಇಸ್ಕಾನ್ ಸಂತನ ಬಂಧನಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತದೆ. ಅದರೆ ಮಠಾಧೀಶರೊಬ್ಬರು ಮುಸ್ಲಿಮರಿಗೆ ಮತದಾನ ಹಕ್ಕು ಬೇಡ ಎಂದು ಪ್ರತಿಪಾದಿಸುತ್ತಾರೆ. ಅದಕ್ಕೆ ಪ್ರತಿಕ್ರಿಯೆ ನೀರಸ. ಇದು ಪ್ರಜಾಪ್ರಭುತ್ವ ದೃಷ್ಟಿಯಿಂದ ಒಳಿತಲ್ಲ. ಇಂಥ ಬೆಳವಣಿಗೆ ಒಳಿತಲ್ಲ. ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ತಂತ್ರ-ಪ್ರತಿತAತ್ರ ಅನುಸರಿಸುವಾಗ ಪ್ರಜಾತಂತ್ರದ ಮೂಲಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಈ ವಿಷಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಮ್ಮತಕ್ಕೆ ಬರುವುದು ಅಗತ್ಯ. ಬಡವರಿಗೆ ಗ್ಯಾರಂಟಿ ಕೊಡುವುದಕ್ಕೂ ಅಲ್ಪಸಂಖ್ಯಾತರನ್ನು ಭಯದಲ್ಲಿಡುವುದಕ್ಕೂ ಬಹಳ ವ್ಯತ್ಯಾಸವಿದೆ. ಈ ವಿಷಯದಲ್ಲಿ ಯಾವುದೇ ಗೊಂದಲ ಬೇಕು. ಎಲ್ಲ ಸಮುದಾಯಗಳು ದೇಶದ ಸ್ವಾತಂತ್ರö್ಯಕ್ಕೆ ಹೋರಾಟ ನಡೆಸಿವೆ. ಹೀಗಾಗಿ ಎಲ್ಲ ಸಮುದಾಯಗಳಿಗೆ ಸಮಾನ ಹಕ್ಕು ಇದ್ದೇ ಇದೆ. ಇದನ್ನು ಕಡಿತಗೊಳಿಸಲು ಬರುವುದಿಲ್ಲ. ಹಿಂದೆ ಎಂದೂ ಇಂಥ ಪರಿಸ್ಥಿತಿ ಬಂದಿರಲಿಲ್ಲ. ಈಗ ಇದು ದೇಶದ ಸಮಗ್ರತೆ, ಐಕ್ಯತೆಗೆ ಧಕ್ಕೆ ತರುವುದಕ್ಕೆ ಕಾರಣವಾಗಬಾರದು.