ಮಹಾರಾಷ್ಟ್ರ ಹೊಸ ಸರ್ಕಾರ ತ್ರಿಮೂರ್ತಿಗಳಿಗೆ ಅಗ್ನಿಪರೀಕ್ಷೆ
ಕಳೆದ ಎರಡೂವರೆ ವರ್ಷಗಳಲ್ಲಿ ಸರ್ಕಾರದ ಮೂಲಕ ನಗರಗಳ ಮೂಲಭೂತ ಸವಲತ್ತು ಅಭಿವೃದ್ಧಿಪಡಿಸುವುದರಲ್ಲಿ ಕೈಗೊಂಡ ಯೋಜನೆಗಳು ಜನರ ಗಮನ ಸೆಳೆದವು ಎನ್ನುವುದರಲ್ಲಿ ಉತ್ಪ್ರೆಕ್ಷೆ ಏನೂ ಇಲ್ಲ.
ಮಹಾರಾಷ್ಟ್ರದಲ್ಲಿ ಈಗ ಹೊಸ ಸರ್ಕಾರ ರಚನೆಯಾಗಿದೆ. ಏಕನಾಥ ಶಿಂದೆ, ಅಜಿತ್ ಪವಾರ್, ದೇವೇಂದ್ರ ಫಡ್ನವೀಸ್ ಅವರಿಗೆ ಈಗ ಅಗ್ನಿಪರೀಕ್ಷೆ ಕಾಲ. ಮೂವರೂ ತಮ್ಮ ತಮ್ಮ ರಾಜಕೀಯ ಜಾಣಾಕ್ಷತವನ್ನು ತೋರಿಸಬೇಕು. ಹಿಂದೆ ಮುಖ್ಯಮಂತ್ರಿಯಾಗಿದ್ದ ಏಕನಾಥ ಶಿಂದೆ ಈಗ ಡಿಸಿಎಂ ಹುದ್ದೆಗೆ ತೃಪ್ತಿಪಟ್ಟಿಕೊಳ್ಳಬೇಕು. ಕರ್ನಾಟಕದಲ್ಲಿ ಬಿಜೆಪಿ ಮೂರು ಸೀಟುಗಳನ್ನು ಕಳೆದುಕೊಂಡಿದ್ದರೂ ಮಹಾರಾಷ್ಟçದಲ್ಲಿ ಅತಿ ಹೆಚ್ಚು ಸೀಟುಗಳನ್ನು ಪಡೆದದ್ದು ದೊಡ್ಡ ಸಾಧನೆ. ಇದು ಲೋಕಸಭೆಯ ಮೇಲೆ ಪ್ರಭಾವ ಬೀರಲಿದೆ. ರಾಜ್ಯಸಭೆಯಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ. ಗುಜರಾತ್, ಉತ್ತರಪ್ರದೇಶ, ಮಹಾರಾಷ್ಟç ಆಡಳಿತ ಪಕ್ಷಕ್ಕೆ ಪ್ರಮುಖ ರಾಜ್ಯಗಳು. ಬಿಜೆಪಿ ಅನಿರೀಕ್ಷಿತವಾಗಿ ಹೆಚ್ಚು ಸೀಟುಗಳನ್ನು ಮಹಾರಾಷ್ಟçದಲ್ಲಿ ಗೆದ್ದಿತು ಎಂದು ಎಲ್ಲರೂ ಹೇಳುತ್ತಾರೆ. ಇದಕ್ಕೆ ಕಾರಣ ಹುಡುಕುತ್ತಾ ಹೋದರೆ ಕೆಲವು ಅನಿರೀಕ್ಷಿತ ಕ್ರಮಗಳು ಬದಲಾವಣೆಗೆ ಕಾರಣವಾಗಿದೆ. ಮೊದಲನೆಯದಾಗಿ ಮೋದಿ ಹೆಸರನ್ನು ಹೆಚ್ಚಾಗಿ ಬಳಸಿಲ್ಲ. ಮೋದಿಯ ಘೋಷಣೆಗಳು ಮಾತ್ರ ಪ್ರಚಾರಕ್ಕೆ ಬಂದವು. ಕಾಂಗ್ರೆಸ್ ಪಕ್ಷ ಇತರೆ ರಾಜ್ಯಗಳಲ್ಲಿ ಆರಂಭಿಸಿದ ಗ್ಯಾರಂಟಿ ಯೋಜನೆಯನ್ನು ಮಹಾರಾಷ್ಟçದಲ್ಲಿ ಜಾರಿಗೆ ಕೊಡಲಾಯಿತು. ಅದರಲ್ಲೂ ಮಹಿಳೆಯರಿಗೆ ಪ್ರತಿ ತಿಂಗಳು ೧೫೦೦ ರೂ. ನೀಡಿದ್ದು ಮತಗಳಿಕೆಗೆ ಸಹಕಾರಿಯಾಯಿತು. ಈಗ ಇದನ್ನು ೨೧೦೦ ರೂಗೆ ಹೆಚ್ಚಿಸಲು ಹೊಸ ಸರ್ಕಾರ ಒಪ್ಪಿದೆ. ಮರಾಠ ಮೀಸಲಾತಿಗೆ ಒಪ್ಪಿಗೆ ಮತ್ತು ಒಬಿಸಿಗೆ ನೆರವು ಇನ್ನೂ ಆಗಬೇಕು. ಆರ್‌ಎಸ್‌ಎಸ್ ಕೇಂದ್ರ ಸ್ಥಾನ ನಾಗಪುರವಾಗಿದ್ದರಿಂದ ಈ ಬಾರಿ ೬೦ ಸಾವಿರ ಪುಟ್ಟ ಸಭೆಗಳನ್ನು ಆರ್‌ಎಸ್‌ಎಸ್ ನಡೆಸಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಿದೆ. ಇದೆಲ್ಲವೂ ಫಲ ನೀಡಿದೆ ಎಂದು ಪಕ್ಷದ ನಾಯಕರೇ ಒಪ್ಪಿಕೊಳ್ಳುತ್ತಾರೆ.
ಮಹಾರಾಷ್ಟç ಮೊದಲಿನಿಂದಲೂ ಕಾಂಗ್ರೆಸ್‌ಗೆ ಭದ್ರ ಕೋಟೆಯಾಗಿತ್ತು. ಯಶವಂತ್ ಚವ್ಹಾಣ್ ಅವರಿಂದ ಹಿಡಿದು ವಸಂತರಾವ್ ನಾಯ್ಕ್ವರೆಗೆ ಹಲವು ನಾಯಕರು ಬಂದು ಹೋದರು. ಕೊನೆಗೆ ಉಳಿದದ್ದು ಶರದ್‌ಪವಾರ್‌ಯವರ ಎನ್‌ಸಿಪಿ ಮತ್ತು ಬಾಳ್ ಠಾಕ್ರೆಯವರ ಶಿವಸೇನಾ. ಅದೂ ವಿಭಜನೆಗೊಂಡ ಮೇಲೆ ಕಾಂಗ್ರೆಸ್‌ಗೆ ಆಸರೆ ತಪ್ಪಿದಂತಾಗಿದೆ. ಎನ್‌ಸಿಪಿಯಿಂದ ಹೊರ ಬಂದ ಅಜಿತ್ ಪವಾರ್ ಮತ್ತು ಶಿವಸೇನಾದಿಂದ ಸಿಡಿದುಬಂದ ಏಕನಾಥ ಶಿಂದೆ ಜನರನ್ನು ಸೆಳೆಯುವುದರಲ್ಲಿ ಸಫಲರಾಗಿದ್ದಾರೆ. ಶರದ್ ಪವಾರ್ ಈಗ ರಾಜಕೀಯವಾಗಿ ನೇಪಥ್ಯಕ್ಕೆ ಸರಿಯುವ ಕಾಲ ಬಂದಿದೆ. ಏಕನಾಥ ಶಿಂದೆ ೨೪ ಗಂಟೆ ದುಡಿಯುವ ರಾಜಕಾರಣಿ. ಹೀಗಾಗಿ ಅವರು ಕಳೆದ ಎರಡೂವರೆ ವರ್ಷಗಳಲ್ಲಿ ಸರ್ಕಾರದ ಮೂಲಕ ನಗರಗಳ ಮೂಲಭೂತ ಸವಲತ್ತು ಅಭಿವೃದ್ಧಿಪಡಿಸುವುದರಲ್ಲಿ ಕೈಗೊಂಡ ಯೋಜನೆಗಳು ಜನರ ಗಮನ ಸೆಳೆದವು ಎನ್ನುವುದರಲ್ಲಿ ಉತ್ಪ್ರೆಕ್ಷೆ ಏನೂ ಇಲ್ಲ. ಇದರಿಂದ ಅವರು ಬಿಹಾರದಲ್ಲಿ ನಿತೀಶ್ ಕುಮಾರ್‌ಗೆ ಅವಕಾಶ ಕೊಟ್ಟಂತೆ ನನಗೂ ಕೊಡಿ ಎಂದು ಬಿಜೆಪಿಯನ್ನು ಕೇಳಿದರು ಇದಕ್ಕೆ ಬಿಜೆಪಿ ಒಪ್ಪಲಿಲ್ಲ. ಹೀಗಾಗಿ ಡಿಸಿಎಂ ಹುದ್ದೆ ಸ್ವೀಕರಿಸಬೇಕಾಯಿತು.
ಈಗ ಮೂವರೂ ರಾಜ್ಯದ ಅಭಿವೃದ್ಧಿ ಕಾರ್ಯದಲ್ಲಿ ಹಗಲು ಇರುಳು ಕೆಲಸ ಮಾಡಬೇಕಿದೆ. ಕೇಂದ್ರ ಸರ್ಕಾರ ಗುಜರಾತ್ ಮತ್ತು ಉತ್ತರ ಪ್ರದೇಶದ ಮೇಲೆ ಹೆಚ್ಚಿನ ಒಲವು ಹೊಂದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಕೆಲವು ಯೋಜನೆಗಳು ಮಹಾರಾಷ್ಟçದಿಂದ ಗುಜರಾತ್‌ಗೆ ಹೋಗಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಮುಂಬೈ ವಾಣಿಜ್ಯ ನಗರ. ಅದರ ಬಗ್ಗೆ ಹಿರಿಮೆಗೆ ಧಕ್ಕೆ ಬರಬಾರದು ಎಂಬುದು ಎಲ್ಲರ ಅಪೇಕ್ಷೆ. ಅದಕ್ಕೆ ಗುಜರಾತ್ ಸವಾಲು ಒಡ್ಡುವ ಹಂತ ತಲುಪಿದೆ. ದೇಶದ ಜಿಡಿಪಿಯಲ್ಲಿ ಮಹಾರಾಷ್ಟçದ ಕೊಡುಗೆ ಗಮನಾರ್ಹ. ವಿದೇಶಿ ನೇರ ಬಂಡವಾಳ ಪಡೆಯುವುದರಲ್ಲಿ ದೇಶದಲ್ಲೇ ಮೊದಲು. ಈ ಬೆಳವಣಿಗೆಯನ್ನು ಉಳಿಸಿಕೊಳ್ಳುವುದು ಇಂದಿನ ಸರ್ಕಾರದ ಹೊಣೆ. ರಾಜಕೀಯ ರಂಗದಲ್ಲಿ ಹಳೆ ತಲೆಗಳು ಹಿಂದೆ ಸರಿಯುತ್ತಿವೆ, ಹೊಸತಲೆಗಳು ತಲೆಎತ್ತುತ್ತಿವೆ. ಜನ ಕೂಡ ಯುವ ಪೀಳಿಗೆ ನಾಯಕರು ಬರಬೇಕೆಂದು ಬಯಸುತ್ತಿದ್ದಾರೆ. ಹೀಗಾಗಿ ಬದಲಾವಣೆ ಸಹಜವಾಗಿ ಕಂಡು ಬರುತ್ತಿದೆ. ಇವುಗಳ ನಡುವೆ ಮರಾಠ ಮೀಸಲಾತಿ, ಹಿಂದುಳಿದ ವರ್ಗಗಳ ಬೇಡಿಕೆಯನ್ನು ಈಡೇರಿಸುವುದು ಹೊಸ ಸರ್ಕಾರದ ಕರ್ತವ್ಯ. ಲೋಕಸಭೆ ಚುನಾವಣೆಯಲ್ಲಿ ತನ್ನ ಪಾಲನ್ನು ಕಳೆದುಕೊಂಡಿದ್ದ ಬಿಜೆಪಿ ಈಗ ಮಿತ್ರಪಕ್ಷಗಳ ನೆರವಿನ ಮೂಲಕ ಮತ್ತೆ ಗಳಿಸಲು ವಿಧಾನಸಭೆ ಚುನಾವಣೆಯನ್ನು ಬಳಸಿಕೊಳ್ಳುತ್ತಿದೆ. ಹೀಗಾಗಿ ಬಿಹಾರ, ಆಂಧ್ರ, ಮಹಾರಾಷ್ಟç ಉಳಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗಿದೆ.
ಈಗ ಮಹಾರಾಷ್ಟ್ರ ಒಟ್ಟು ೭.೮ ಲಕ್ಷ ಕೋಟಿ ರೂ. ಸಾಲದ ಹೊರೆ ಹೊಂದಿದೆ. ಅಲ್ಲದೆ ಇತರ ಭರವಸೆಗೆ ೯೦ ಸಾವಿರ ಕೋಟಿ ರೂ ವೆಚ್ಚ ಮಾಡಬೇಕಿದೆ. ಮಹಿಳೆಯರಿಗೆ ಮಾಸಿಕ ೨೧೦೦ ರೂ. ನೀಡಲು ಹೆಚ್ಚುವರಿಯಾಗಿ ೨ ಲಕ್ಷ ಕೋಟಿ ರೂ. ಬೇಕು. ಇದೆಲ್ಲಕ್ಕೂ ಸಂಪನ್ಮೂಲ ಕಂಡುಕೊಳ್ಳಬೇಕಿದೆ. ಕೃಷಿರಂಗದಲ್ಲಿ ಇನ್ನೂ ಹೆಚ್ಚು ಜನ ನಿರುದ್ಯೋಗಿಗಳಿದ್ದು, ಕಬ್ಬು ಬೆಳೆಯಲ್ಲಿ ಇಡೀ ದೇಶಕ್ಕೆ ಮೊದಲ ಸ್ಥಾನದಲ್ಲಿದ್ದು ಸಕ್ಕರೆ ಕಾರ್ಖಾನೆಗಳ ರಾಜಕೀಯ ಪ್ರಭಾವ ಇನ್ನೂ ಹಾಗೇ ಇದೆ.