ಮುಸ್ಲಿಂ ವೈಯಕ್ತಿಕ ಕಾಯಿದೆ ವೈಶಿಷ್ಟ್ಯ
ಸುಮಾರು ಅರವತ್ತು ವಯಸ್ಸಿನ ಮುಸ್ಲಿಂ ಧರ್ಮದ ಬುಜುರ್ಗ್(ಹಿರಿಯರು), ತಮ್ಮ ಮುಸ್ಲಿಂ ಸಾಂಪ್ರದಾಯಿಕ ಕುರ್ತಾ ಪೈಜಾಮಾ ದಿರಿಸು ಧರಿಸಿ, ತಲೆಯ ಬಿಳಿ ದುಂಡುಟೊಪ್ಪಿಗೆ ಹಾಕಿಕೊಂಡು, ನೀಳವಾದ ಮೆಹಂದಿ ಹಚ್ಚಿದ ಲಂಬಾ ಚಹಾರಾ(ಉದ್ದವಾದ ಗಡ್ಡ)ವನ್ನು ಬಿಟ್ಟುಕೊಂಡು, ಕೈಯಲ್ಲಿ ತಸಬಿ (ಜಪಮಾಲೆ)ಯನ್ನು ಬೆರಳಲ್ಲಿ ಜಿಕ್ರ (ತಿರುವುತ್ತ )ಮಾಡುತ್ತ ಬಂದರು. ಹೋಮ್ ಆಫೀಸ್ ಮೆಟ್ಟಲು ಏರಿಬಂದು ಸುಸ್ತಾಗಿ ಸುಧಾರಿಸಿಕೊಳ್ಳುತ್ತಿದ್ದರು. ಸ್ವಲ್ಪ ತಡೆದು, ಬೋಲಿಯೇ ಜನಾಬ್ ಎಂದು ಮಾತಿಗೆ ಎಳೆದೆ. ವಕೀಲ ಸಾಹೇಬ್, ನಮ್ಮದೊಂದು ಸಮಸ್ಯೆ ಇತ್ತು ಎಂದು ಮಾತು ಮುಂದುವರೆಸಿದರು. ನಮ್ಮ ಅಬ್ಬಾಜಾನ(ತಂದೆ) ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಇಂತಿಕಾಲ (ಮೃತ)ಆಗಿದ್ದಾರೆ. ಅವರಿಗೆ ನಮ್ಮ ಅಮ್ಮಿಜಾನ (ತಾಯಿ)ನಾವು ಮೂರು ಜನ ಲಡಕಂದಾ (ಗಂಡು ಮಕ್ಕಳು) ಮತ್ತು ಒಬ್ಬಳು ಲಡಕಿ (ಹೆಣ್ಣು ಮಗಳು)ವಾರಸುದಾರರು. ತಂದೆ ಬಿಟ್ಟು ಹೋದ ಫಲವತ್ತಾದ ೮ ಎಕರೆ ಜಮೀನಿಗೆ ನಾವೆಲ್ಲ ವಾರಸುದಾರರು. ನಾನು ಎರಡನೆಯ ಮಗ. ಅಣ್ಣ ಮನೆಯ ಉಸ್ತುವಾರಿ ಮಾಡುತ್ತಿದ್ದನು. ನಾನು ಮತ್ತು ಕೊನೆಯ ಸಹೋದರ ಬೀದಿ ವ್ಯಾಪಾರ ಮಾಡಿಕೊಂಡು ಬದುಕುತ್ತಿದ್ದೇವೆ. ಸಹೋದರಿಯನ್ನು ತಂದೆ ನಿಖಾಹ ಮಾಡಿಕೊಟ್ಟಿದ್ದಾರೆ. ಈಗ ಗಂಡ ಮಕ್ಕಳೊಂದಿಗೆ ಬೇರೆ ರಾಜ್ಯಕ್ಕೆ ದುಡಿಯಲು ಗುಳೆ ಹೋಗಿದ್ದು ಎಲ್ಲಿರುತ್ತಾಳೆ ವಿಳಾಸ ಗೊತ್ತಿಲ್ಲ. ಅಮ್ಮಿಜಾನ್ ತೀರಿಕೊಂಡಿದ್ದಾಳೆ. ನನ್ನ ಮಕ್ಕಳು ದೊಡ್ಡವರಾಗಿದ್ದಾರೆ. ನಿಖಾಹ ಮಾಡುವ ಸಲುವಾಗಿ ಹಣದ ಅಡಚನೆಯಾಯಿತು. ಆಸ್ತಿಯಲ್ಲಿ ಪಾಲು ಕೊಡಲು ಅಣ್ಣನನ್ನು ಕೇಳಿಕೊಂಡೆನು. ತಂದೆ ಜೀವಿತ ಅವಧಿಯಲ್ಲಿ ನಿನ್ನ ಹೆಸರಿಗೆ ಒಂದು ಎಕರೆ ಜಮೀನು ಖರೀದಿಸಿದ್ದಾನೆ, ಅದನ್ನು ನಿನ್ನ ಹಿಸ್ಸೆ ಎಂದು ಬಿಟ್ಟು ಕೊಟ್ಟಿದ್ದಾನೆ. ತಂದೆ ಬಿಟ್ಟುಹೋದ ನಂತರ ಇರುವ ಆಸ್ತಿಯಲ್ಲಿ ಯಾವುದೇ ಹಕ್ಕು ಇಲ್ಲ ಎಂದು ನಿರಾಕರಿಸಿದ. ಆದರೆ ಆಸ್ತಿ ನಾನೇ ಖರೀದಿಸಿದ ಸ್ವಂತ ಆಸ್ತಿ. ಬೇರೆ ದಾರಿ ಕಾಣದೆ ಜಮೀನದ ಪಹಣಿ ದಾಖಲೆಗಳನ್ನು ಪರಿಶೀಲಿಸಿದೆ. ಆಘಾತವಾಯಿತು. ಹಿರಿಯ ಸಹೋದರ, ತಂದೆಗೆ ತನ್ನ ಹೆಂಡತಿ, ಇಬ್ಬರೆ ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳು ಉತ್ತರಾಧಿಕಾರಿಗಳು, ತಾಯಿ, ಹೆಣ್ಣು ಮಗಳು ತನ್ನ ಇಬ್ಬರು ಗಂಡು ಮಕ್ಕಳಿಗೆ ತಮ್ಮ ಹಕ್ಕು ಬಿಟ್ಟುಕೊಟ್ಟಿದ್ದಾರೆ ಎಂದು ವರದಿ ನೀಡಿ ತಮ್ಮ ಹೆಸರು ಕಂದಾಯ ದಾಖಲೆಗಳಲ್ಲಿ, ನನ್ನ ಹೆಸರನ್ನು ಬಿಟ್ಟು ಕೇವಲ ತಮ್ಮ ಹೆಸರು ಮಾತ್ರ ಹಚ್ಚಿಕೊಂಡಿದ್ದಾರೆ. ಅಲ್ಲದೆ ಅರ್ಧ ಜಮೀನನ್ನು ಮಾರಾಟ ಮಾಡಿದ್ದಾರೆ. ಎಲ್ಲವೂ ನನಗೆ ಗೊತ್ತಿಲ್ಲದ ಹಾಗೆ ಬೆನ್ನು ಹಿಂದೆ ನಡೆದಿದೆ ಎಂದು ಉರ್ದು ಶೈಲಿಯ ಕನ್ನಡದಲ್ಲಿ ಹೇಳಿ ಕಾಗದ ಪತ್ರಗಳನ್ನು ನನ್ನ ಮುಂದೆ ಇಟ್ಟರು.
ಕಂದಾಯ ದಾಖಲೆಗಳನ್ನು ಪರಿಶೀಲಿಸಿದೆ. ತಂದೆ ಮೃತನಾದ ನಂತರ ಉತ್ತರಾಧಿಕಾರಿಗಳಾಗಿ ತಾಯಿ ಮೂವರು ಗಂಡು, ಒಬ್ಬಳು ಹೆಣ್ಣು ಮಗಳು ಮುಸ್ಲಿಂ ಕಾನೂನಿನ ಪ್ರಕಾರ ಜಂಟಿ ಬಾಡಿಗೆದಾರರ (ಟೆ ನಂಟ್ ಇನ್ ಕಾಮನ್) ತತ್ವದ ಅಡಿಯಲ್ಲಿ ಸ್ವಾಧೀನ ಹೊಂದಿದ್ದಾರೆ. ತಂದೆ ಮರಣವಾದ ನಂತರ ಇಬ್ಬರು ಗಂಡು ಮಕ್ಕಳು, ತಾಯಿ ಹಾಗೂ ಸಹೋದರಿ ತಮ್ಮ ಹಕ್ಕನ್ನು ತಮಗೆ ಬಿಟ್ಟುಕೊಟ್ಟಿದ್ದಾರೆ ಎಂದು ವರದಿ ನೀಡಿ ಕೇವಲ ತಮ್ಮ ಹೆಸರನ್ನು ದಾಖಲಿಸಿ ಕೊಂಡರು. ಎಲ್ಲಿಯೂ ಕೂಡ ಇನ್ನೊಬ್ಬ ಗಂಡು ಮಗ ವಾದಿ ಇರುವ ಬಗ್ಗೆ ಪ್ರಸ್ತಾಪ ಇರಲಿಲ್ಲ. ಈ ರೀತಿ ಖೊಟ್ಟಿಯಾಗಿ ಮಾಡಿಕೊಂಡ ಕಂದಾಯ ಬದಲಾವಣೆ ಕಾನೂನಿನ ಅಡಿಯಲ್ಲಿ ಸಿಂಧು ಇರುವುದಿಲ್ಲ. ಇಬ್ಬರು ಸಹೋದರರು ಅರ್ಧ ಹಿಸ್ಸೆಯನ್ನು ಬೇರೆಯ ವರನಿಗೆ ಮಾರಾಟ ಮಾಡಿದ್ದರು. ಇವೆಲ್ಲ ಕಂದಾಯ ದಾಖಲೆಗಳು ಕಾನೂನಿನ ವಿರುದ್ಧವಾಗಿದ್ದವು. ಸಾಕ್ಷಿ ಪುರಾವೆ ಮಾನ್ಯತೆ ಇರುವುದಿಲ್ಲ. ಇಬ್ಬರು ಸಹೋದರರು ಮಾಡಿಕೊಟ್ಟ ಕ್ರಯ ಪತ್ರ ನನ್ನ ಕಕ್ಷಿದಾರನ ಹಕ್ಕಿಗೆ ಬಂಧನವಿರಲಿಲ್ಲ. ಈ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಪ್ರಶ್ನಿಸುವ ಎಲ್ಲಾ ಅಂಶಗಳು ಇದ್ದು, ನನ್ನ ಕಕ್ಷಿದಾರನ ಪರವಾಗಿ ವಿಭಜನೆ ಮತ್ತು ಪ್ರತ್ಯೇಕ ಸ್ವಾಧೀನಕ್ಕಾಗಿ ದಾವೆ ಮಾಡಲು ಯೋಗ್ಯವೆಂದು ಅಭಿಪ್ರಾಯವನ್ನು ಕಕ್ಷಿದಾರನಿಗೆ ತಿಳಿಸಿ ಹೇಳಿದೆ. ಸಹೋದರಿಯನ್ನು ಪ್ರತಿವಾದಿಯನ್ನಾಗಿ ಮಾಡುವುದು ಅವಶ್ಯ ಎಂದು ಸೂಚಿಸಿದೆ. ಆದರೆ ಸಹೋದರಿ ಎಲ್ಲಿದ್ದಾಳೆ ಎನ್ನುವುದು ಕೂಡ ಗೊತ್ತಿಲ್ಲ ಎಂದು ವಾದಿಸಿದ. ಸಹೋದರಿಯನ್ನು ಪಾರ್ಟಿ ಮಾಡದಿರುವುದೇ ಋಣಾತ್ಮಕ ಅಂಶ ಎನ್ನುವುದು ಕೂಡ ಅವನಿಗೆ ತಿಳಿಸಿ ಹೇಳಿದೆ. ಅದಕ್ಕೆ ಅವನು ಒಪ್ಪಲಿಲ್ಲ. ಆಯ್ತು ಪ್ರಯೋಗ ಮಾಡಿದರಾಯಿತು ಎನ್ನುವ ಅಪಾಯ ಸ್ವೀಕರಿಸಿ, ಸಹೋದರರು, ಖರೀದಾರಣ ಮೇಲೆ ವಿಭಜನೆ ಮತ್ತು ಪ್ರತ್ಯೇಕ ಸ್ವಾಧೀನ ದಾವೆಯನ್ನು ಸಿವಿಲ್ ನ್ಯಾಯಾಲಯದಲ್ಲಿ ದಾಖಲಿಸಿದೆ.
ಮುಸ್ಲಿಂ ವೈಯಕ್ತಿಕ ಕಾನೂನು ಅಡಿಯಲ್ಲಿ ಪಿತ್ರಾರ್ಜಿತ, ಏಕತ್ರ ಕುಟುಂಬ, ಪಿತ್ರಾರ್ಜಿ, ಸ್ವಯಾರ್ಜಿ, ದತ್ತಕ, ಹುಟ್ಟಿನಿಂದ ಆಸ್ತಿ ಹಕ್ಕು ಅನ್ನುವ ಪರಿಕಲ್ಪನೆ ಕಾನೂನು ತತ್ವ ಇರುವುದಿಲ್ಲ. ಯಾವ ವ್ಯಕ್ತಿಯ ಕೈಯಲ್ಲಿ, ವಾರಸುದಾರಿಕೆಯಿಂದ ಇಲ್ಲವೇ ಯಾವುದೇ ಮೂಲದಿಂದ ಸ್ವತ್ತು ಬಂದಿದ್ದರೂ ಅವನ ಸ್ವತಂತ್ರ ಆಸ್ತಿ ಎಂದು ಪರಿಗಣಿಸಲ್ಪಡುತ್ತದೆ. ಸರಳ ರೀತಿಯಲ್ಲಿ ಹೇಳ ಬಹುದಾದರೆ, ಯಾರ ಜೇಬಿನಲ್ಲಿ ಹಣ ಇರುತ್ತದೆಯೋ ಅದು ಅವನದೆ ಆಗಿರುತ್ತದೆ. ಆಸ್ತಿಯನ್ನು ತನ್ನ ಸ್ವ ಇಚ್ಛೆಯಂತೆ ಅನುಭವಿಸಿ ಉಳಿಸಿದ್ದರೆ ಮಾತ್ರ ಮರಣ ನಂತರ ವಾರಸುದಾರರಿಗೆ ಉತ್ತರಾಧಿಕಾರ ಹಕ್ಕು ಪ್ರಾಪ್ತಿಯಾಗುತ್ತದೆ. ಜೀವಿತ ಅವಧಿಯಲ್ಲಾಗಲಿ ಮರಣ ನಂತರವಾಗಲಿ ವಾರಸುದಾರರು ಹಸ್ತಾಂತರ ಪ್ರಶ್ನಿಸಲಾಗದು. ವಾರಸುದಾರರು ನಿರ್ಧಿಷ್ಟವಾದ ಹಿಸ್ಸೆ ಹೊಂದಿರುತ್ತಾರೆ. ಅದು ಉಳಿದ ವಾರಸುದಾರರ ಇರುವಿಕೆ ಮೇಲಿಂದ ಬದಲಾಗುತ್ತದೆ.
ಪ್ರತಿವಾದಿಯರು ವಕೀಲರ ಮುಖಾಂತರ ಕೋರ್ಟಿಗೆ ಹಾಜರಾದರು. ಸಹೋದರರು ತಮ್ಮ ತಕರಾ ರಾರು/ರಿಟ್ಟನ್ ಸ್ಟೇಟ್ಮೆಂಟ್ ಸಲ್ಲಿಸಿ, ವಾದಿಯೆ ಕಂದಾಯ ಅಧಿಕಾರಿಗೆ ವರದಿ ನೀಡಿ, ತಾಯಿ, ಸಹೋದರಿ ತಮ್ಮ ಹಕ್ಕನ್ನು ತಮಗೆ ಬಿಟ್ಟುಕೊಟ್ಟಿರುವುದಾಗಿ, ತಮ್ಮ ಹೆಸರು ದಾಖಲಿಸಿದ್ದಾನೆ. ಆನಂತರ ಅರ್ಧ ಜಮೀನನ್ನು ಪ್ರತಿವಾದಿ ಖರೀದಿದಾರನಿಗೆ ಮಾರಾಟ ಮಾಡಿದ್ದೇವೆ. ಇವೆಲ್ಲ ಬದಲಾವಣೆ ವಾದಿಗೆ ಗೊತ್ತಿದ್ದು, ಆ ಕಾಲಕ್ಕೆ ತಕರಾರು ಮಾಡಿಲ್ಲವೆಂದು, ದಾವೆ ವಜಾಗೊಳಿಸಲು ಪ್ರಾರ್ಥಿಸಿಕೊಂಡರು. ಖರೀದಿದಾರ ಪ್ರತಿವಾದಿ ತಾನು ಎಲ್ಲ ಕಂದಾಯ ದಾಖಲೆ, ಸ್ವಾಧೀನ ಪರಿಶೀಲಿಸಿ ಹಣ ಕೊಟ್ಟು ಕ್ರಯ ಪತ್ರ ಮಾಡಿಕೊಂಡ ಅಮಾಯಕ, ಖರೀದಾರ ಎಂದು ಉಲ್ಲೇಖಸಿ ಕೈಫಿಯತ್ ಸಲ್ಲಿಸಿದ.
ವಾದಿ ಪ್ರತಿವಾದಿಯರು ತಮ್ಮ ಮೌಕಿಕ, ಲಿಖಿತ ಸಾಕ್ಷಿಗಳನ್ನು ಹಾಜರು ಪಡಿಸಿದರು. ವಾದಿಯ ಪ್ರತಿ ವಾದಿಯರು ವಾದ ಮಂಡಿಸಿದರು. ನ್ಯಾಯಾಲಯವು ತೀರ್ಪು ನೀಡಿ ಸಹೋದರಿಯನ್ನು ದಾವೆಯಲ್ಲಿ ಸೇರಿಸಿಲ್ಲವೆಂದು ದಾವೆಯನ್ನು ವಜಾಗೊಳಿಸಿತು.
ತೀರ್ಪಿನ ಮೇಲೆ ವಾದಿಯ ಪರವಾಗಿ, ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮೆಲ್ಮನವಿ ಸಲ್ಲಿಸಿದೆ. ಮೆಲ್ಮನವಿಧಾರ ಎದುರುದಾರರ ಪರ ವಕೀಲರ ವಾದವನ್ನು ಆಲಿಸಿ, ನ್ಯಾಯಾಲಯವು ಮೆಲ್ಮನವಿಯನ್ನು ಪುರಸ್ಕರಿಸಿ ಕೆಳ ನ್ಯಾಯಾಲಯದ ತೀರ್ಪುರದ್ದು ಪಡಿಸಿ, ಸಹೋದರಿಗೆ ನೋಟಿಸ್ ನೀಡಿ ಕೆಳ ನ್ಯಾ ಯಾಲಯ ವಿಚಾರಣೆ ನಡೆಸಬೇಕಿತ್ತು ಎಂದು ಅಭಿಪ್ರಾಯಪಟ್ಟು, ಸಹೋದರಿಗೆ ನೋಟಿಸ್ ನೀಡಿ ದಾವೆ ಮರು ವಿಚಾರಣೆ ಮಾಡಲು ನಿರ್ದೇಶನ ನೀಡಿ ಪ್ರಕರಣವನ್ನು ಕೆಳ ನ್ಯಾಯಾಲಯಕ್ಕೆ ಮರಳಿಸಿತು.
ಕೆಳ ನ್ಯಾಯಾಲಯದಲ್ಲಿ ಮರು ವಿಚಾರಣೆ ಪ್ರಾರಂಭವಾಯಿತು. ಆದರೆ, ವಾದಿ ಪ್ರತಿವಾದಿಯರು ಹಾಜರು ಆಗಲಿಲ್ಲ. ಸಹೋದರಿಗೆ ಪಾಲು ದೊರೆಯ ಬಹುದು ಎಂದು, ಬಹುಶ: ಹೊರ ಒಪ್ಪಂದ ಮಾಡಿಕೊಂಡು ಕೋರ್ಟಿಗೆ ಹಾಜರಾಗಲಿಕ್ಕಿಲ್ಲ. ವಾದಿಯ ದಾವೆ ಮುನ್ನಡೆಸದ್ದಕ್ಕೆ ವಜಾಗೊಂಡಿತು.
ಆಯಾ ಕೇಸಿನ ನ್ಯಾಯಾಲಯದ ಅಭಿಪ್ರಾಯಗಳು, ಆ ಕೇಸಿನ ಸಂಗತಿಗಳು, ಸಂಬಂಧಗಳಿಗೆ ಸೀಮಿತ ವಾಗುತ್ತವೆ, ಸಾರ್ವತ್ರಿಕ ಆಗುವುದಿಲ್ಲ. ಒಂದು ನ್ಯಾಯಾಲಯದ ತೀರ್ಪಿನ ಕಾರಣಗಳ ಅಭಿಪ್ರಾಯ, ಮೇಲನ್ಮವಿ ನ್ಯಾಯಾಲಯ ತಳ್ಳಿ ಹಾಕಿ ಇನ್ನೊಂದು ನ್ಯಾಯವ್ಯಾಖ್ಯಾನ ನೀಡಬಹುದು.
ಕಾನೂನು ಒಂದೆ ಆದರೂ ಅವುಗಳನ್ನು ಅರ್ಥೈಸುವ, ಅಳವಡಿಕೆಯ ವಿವೇಚನೆ ಬೇರೆ ಬೇರೆ ಆಗಿರುತ್ತದೆ. ಅಂತಿಮ ಸತ್ಯ, ನ್ಯಾಯದಾನ ಆಗಿರುತ್ತದೆ.