ರಾಂಗ್ ನಂಬರ್ರಾ? ಅಲ್ಲ ಸಾಹೇಬ್ರ ಮನಿ
ಮರಿಫುಡಾರಿ ಕ್ವಾಂಟ್ರಭೀಮಯ್ಯ ಎಲ್ಲರನ್ನೂ ಸಾಹೇಬರು ಎಂದು ಕರೆಯುತ್ತಿದ್ದ. ಕೆಲವೊಂದು ಬಾರಿ ಪಂಚಾಯ್ತಿ ಮೆಂಬರ್ ಅಲೈಕನಕನನ್ನೂ ಸಹ ಸಾಹೇಬ್ರು ಅಂತ ಕರೆಯುತ್ತಿದ್ದ. ಮರಿಫುಡಾರಿ ಆಗಿದ್ದರಿಂದ ಬಹಳಷ್ಟು ಮಂದಿ ಆತನ ಹತ್ತಿರ ಹೋದಾಗ ಅಯ್ಯೋ ನನಗೆ ಸಾಹೇಬರು ಭಯಂಕರ ಕ್ಲೋಸು ಅನ್ನುತ್ತಿದ್ದ. ಮೆಂಬರ್ರಿಂದ ಹಿಡಿದು ಮುಖ್ಯಮಂತ್ರಿಗಳ ವರೆಗೆ ಎಲ್ಲರಿಗೂ ಸಾಹೇಬರು ಅನ್ನುತ್ತಿದ್ದರಿಂದ ಬಹಳಷ್ಟು ಜನರು ಮೂರನೇ ಮಹಡಿಯವರಿಗೇ ಸಾಹೇಬರು ಅನ್ನುತ್ತಾನೆ ಎಂದು ತಿಳಿದುಕೊಂಡಿದ್ದರು. ದಿನಾಲೂ ಬೆಳಗ್ಗೆ ಜನರು ಭೀಮಯ್ಯನ ಮನೆಮುಂದೆ ಸಾಲು ಸಾಲಾಗಿ ನಿಂತಿರುತ್ತಿದ್ದರು. ನೀಟಾಗಿ ಎಲ್ಲರ ಹತ್ತಿರ ಏನು ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತಿದ್ದ. ಇತ್ತೀಚಿಗೆ ಬರೀ ತೆಗೆದುಕೊಳ್ಳುತ್ತಿದ್ದನೇ ಹೊರತು ಕೆಲಸ ಮಾಡಿಸಿಕೊಡುತ್ತಿರಲಿಲ್ಲ. ಯಾಕಪಾ ಅಂತ ಕೇಳಿದರೆ…. ಆ ಸಾಹೇಬರುಗಳು ವಾಕಿಂಗ್ ಯಾತ್ರೆ-ಮೂಡಾ ಪಾತ್ರೆ ಅಂದರೆ ಈ ಸಾಹೇಬರು ಸಮಾವೇಶ-ಮಾರುವೇಶ ಎಂದು ಇವರು ಹೇಳುತ್ತಾರೆ. ಎಲ್ಲರೂ ಅದರಲ್ಲೇ ಬ್ಯುಸಿ ಆಗಿದ್ದಾರೆ. ಯಾವ ಸಾಹೇಬರುಗಳೂ ಕೈಗೆ ಸಿಗುತ್ತಿಲ್ಲ. ಅದೂ ಮಿಕ್ಕಿ ಅವರಿದ್ದಲ್ಲಿಗೆ ಹೋಗಿ ಏನಾದರೂ ಕೇಳಿದರೆ ಅಯ್ಯೋ ನಮದೇ ನಮಗೆ… ನಿಮ್ಮೆದಿಲ್ಲಿ ನಿಮಗೆ ಎಂದು ಏನೇನೋ ಅನ್ನುತ್ತಿದ್ದಾರೆ ಎಂದು ಹೇಳುತ್ತಿದ್ದ. ಅಂಥದ್ದರಲ್ಲಿ ತಾರಾತಿಗಡೇಸಿಯ ಒಂದು ಕೆಲಸ ಮಾಡಿಕೊಡಲು ಕ್ವಾಂಟ್ರಭೀಮಯ್ಯ ಏನೇನೋ ಇಸಿದುಕೊಂಡು ಕೊನೆಗೆ ಒಪ್ಪಿಕೊಂಡ. ಸ್ವಲ್ಪ ದಿನ ಕಳೆದ ಮೇಲೆ ತಿಗಡೇಸಿ… ಎಲ್ಲಿ ನನ್ನ ಕೆಲಸ ಆಗಲೇ ಇಲ್ಲ ಎಂದು ವರಾತ ಹಚ್ಚಿದ. ಇಲ್ಲಿಲ್ಲ ಮಾಡಿಕೊಡುತ್ತೇನೆ ಎಲ್ಲರೂ ಅಲ್ಲಿ ಬ್ಯುಸಿ ಆಗಿದ್ದಾರೆ ಎಂದು ಹೇಳುತ್ತಲೇ ಬಂದ ಕ್ವಾಂಟ್ರಭೀಮಯ್ಯನಿಗೆ ಈತನಿಂದ ತಪ್ಪಿಸಿಕೊಂಡರೆ ಸಾಕು ಎಂದು ಅನಿಸತೊಡಗಿತು. ದಿನದಿಂದ ದಿನಕ್ಕೆ ಸಿಟ್ಟಿಗೇಳುತ್ತಿದ್ದ ತಿಗಡೇಸಿ ಅವತ್ತೊಂದು ದಿನ ನೀ ನೆಪ ಹೇಳಬೇಡ. ನನ್ನದು ನನಗೆ ಕೊಟ್ಟುಬಿಡು ಅಂದ… ಇಲ್ರೀ ಸಾಹೇಬರು ಇಲ್ಲ ಅಂದ… ಅಯ್ಯೋ ಇಂಥವೆಲ್ಲ ಬೇಡ.. ಹಾಗಿದ್ದರೆ ಫೋನಚ್ಚು ನೋಡನ ಅಂದಾಗ ಭೀಮಯ್ಯ ಫೋನು ಮಾಡಿ ಸಾಹೇಬ್ರ ಮನಿಯಾ? ಅಂದ ಅದಕ್ಕೆ ಅಲ್ಲ ಅಂದರು. ಅಯ್ಯೋ ರಾಂಗ್ ನಂಬರ್ ಎಂದು ಇನ್ನೊಂದು ನಂಬರ್ಗೆ ಡಯಲ್ ಮಾಡಿ ಸಾಹೇಬ್ರು ಮನಿಯೇನ್ರೀ? ಅಂದ. ಅಲ್ಲ ರಾಂಗ್ ನಂಬರ್ ಅಂದರು. ಇವನು ಬೇಕಂತಲೇ ಮಾಡುತ್ತಿದ್ದಾನೆ ಎಂದು ಅಂದುಕೊಂಡ ತಿಗಡೇಸಿ… ಯಾರ ಮುಂದೆ ಆಟವಾಡುತ್ತಿದ್ದೀಯ? ಈ ಬಾರಿ ರಾಂಗ್ ನಂಬರ್ ಹೊಡಿ ನೋಡನ ಅಂದ… ಕ್ವಾಂಟ್ರಭೀಮಯ್ಯ ನಂಬರ್ ತಿರುಗಿಸಿ ಆ ಕಡೆಯಿಂದ ರಿಂಗ್ ಆದ ಕೂಡಲೇ… ಸ್ವಾಮೀ ಇದು ರಾಂಗ್ ನಂಬರ್ರೇನ್ರೀ? ಅಂದ… ಆ ಕಡೆಯಿಂದ ಸಾಹೇಬ್ರ ಮನಿ ಅಂದರು ನಡೀ ಎಂದು ತಿಗಡೇಸಿ ಸಾಹೇಬರ ಮನೆಗೆ ಕೆರೆದುಕೊಂಡು ಹೋದ.