ರಾಜಕೀಯದಲ್ಲಿ ವೈರಿಗಳಿಲ್ಲ ಎಲ್ಲರೂ ಸ್ನೇಹಿತರೆ
ಬೆಂಗಳೂರು: ರಾಜಕೀಯದಲ್ಲಿ ನನಗೆ ಯಾರೂ ವೈರಿಗಳಲ್ಲ. ಎಲ್ಲರೂ ನನ್ನ ಸ್ನೇಹಿತರೇ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ನಿಮ್ಮ ಹಾಗೂ ಪರಮೇಶ್ವರ್ ಅವರ ನಡುವೆ ಭಿನ್ನಾಭಿಪ್ರಾಯಗಳಿವೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ನನಗೆ ಯಾರ ಜತೆಯೂ ಭಿನ್ನಾಭಿಪ್ರಾಯವಿಲ್ಲ. ರಾಜಕೀಯದಲ್ಲಿ ನನಗೆ ಯಾರೂ ವೈರಿಗಳಲ್ಲ. ಎಲ್ಲರೂ ನನ್ನ ಸ್ನೇಹಿತರೇ. ಪಕ್ಷದಲ್ಲಿ ನಾವು ಜತೆಗೂಡಿ ಕೆಲಸ ಮಾಡಿದ್ದು, ಮುಂದೆಯೂ ಜತೆಯಲ್ಲೇ ಸಾಗುತ್ತೇವೆ. ಜತೆಗೂಡಿ ಯಶಸ್ಸು ಕಾಣುತ್ತೇವೆ ಎಂದರು.
ಅಧಿಕಾರ ಹಂಚಿಕೆ ಒಪ್ಪಂದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಜಿ.ಪರಮೇಶ್ವರ್ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸುತ್ತಾ, ನಾನು ನಿಮ್ಮ ಮುಂದೆ ಏನೂ ಮಾತನಾಡಿಲ್ಲ. ಪರಮೇಶ್ವರ್ ಹಾಗೂ ಇತರರ ಜೊತೆಯೂ ಮಾತನಾಡಿಲ್ಲ. ನಾನು ವಾಹಿನಿಯೊಂದರಲ್ಲಿ ನನ್ನದೇ ಆದ ವಿಚಾರ ಪ್ರಸ್ತಾಪ ಮಾಡಿದ್ದೆ. ನಾವು ಏನು ಮಾತನಾಡಿಕೊಂಡಿದ್ದೇವೆ ಎಂದು ನಿಮ್ಮ ಮುಂದೆ ಹೇಳಲು ಸಾಧ್ಯವೇ. ಈ ವಿಚಾರವಾಗಿ ಮುಖ್ಯಮಂತ್ರಿಗಳು ನಿನ್ನೆ ಯಾವುದೇ ಚರ್ಚೆ ಇಲ್ಲ ಎಂದು ಹೇಳಿದ್ದು, ನಾನು ಚರ್ಚೆ ಮಾಡುವುದಿಲ್ಲ ಎಂದು ಒಪ್ಪಿಕೊಂಡಿದ್ದೇನೆ. ಮುಖ್ಯಮಂತ್ರಿಗಳ ಮಾತನ್ನು ನಾನು ಒಪುö್ಪತ್ತೇನೆ. ಸದ್ಯಕ್ಕೆ ಅಧಿಕಾರ ಹಸ್ತಾಂತರದ ಪ್ರಸ್ತಾಪವಿಲ್ಲ. ಯಾವುದೇ ಸಮಸ್ಯೆ ಇಲ್ಲದೇ ನಮ್ಮ ಸರಕಾರದ ಅಧಿಕಾರ ಅವಧಿ ಪೂರ್ಣಗೊಳಿಸುತ್ತೇವೆ ಎಂದು ಸ್ಪಷ್ಟ ಪಡಿಸಿದರು.