For the best experience, open
https://m.samyuktakarnataka.in
on your mobile browser.

ರಾಜಕೀಯ ಲಾಭಕ್ಕಾಗಿ ನಕ್ಸಲ್ ಶರಣಾಗತಿ

07:13 PM Jan 11, 2025 IST | Samyukta Karnataka
ರಾಜಕೀಯ ಲಾಭಕ್ಕಾಗಿ ನಕ್ಸಲ್ ಶರಣಾಗತಿ

ಹಿಂದಿ ಒಂದು ಅಫಿಶಿಯಲ್ ಲ್ಯಾಂಗ್ವೇಜ್, ಪ್ರಧಾನ ಮಂತ್ರಿ ತುಂಬಾ ಕಡೆ ಇದನ್ನೇ ಹೇಳಿದ್ದು

ಮಂಗಳೂರು: ಕರ್ನಾಟಕದ ಇತ್ತೀಚಿಗೆ ನಡೆದ ನಕ್ಸಲ್ ಶರಣಾಗತಿ, ಎನ್ಕೌಂಟರ್ ಬಗ್ಗೆ ಅನುಮಾನ ಮೂಡುತ್ತಿದೆ. ಇಲ್ಲಿ ರಾಜಕೀಯ ಮೈಲೇಜಿಗೋಸ್ಕರ ಶರಣಾಗತಿ ಪ್ರಕ್ರಿಯೆ ನಡೆಸಲಾಗಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಕ್ಸಲ್ ಶರಣಾಗತಿ ನಿಯಮ ಬಹಳ ದೊಡ್ಡಮಟ್ಟದ ಪ್ರಕ್ರಿಯೆ. ಶರಣಾಗತಿ ಸಂದರ್ಭ ಕೆಲವೊಂದು ಶರತ್ತುಗಳಿರುತ್ತವೆ. ಆದರೆ ಕರ್ನಾಟಕದಲ್ಲಿ ಮೊನ್ನೆ ನಡೆದ ನಕ್ಸಲ್ ಶರಣಾಗತಿಯ ಬಗ್ಗೆ ಸ್ವಲ್ಪ ಅನುಮಾನ ಮೂಡುತ್ತಿದೆ. ನಕ್ಸಲ್ ಮುಖಂಡ ವಿಕ್ರಮ್ ಗೌಡನ ಎನ್ಕೌಂಟರ್ ನಲ್ಲೂ ಅನುಮಾನವಿದೆ. ಎನ್ಕೌಂಟರ್ ಆದ ತಕ್ಷಣ ನಕ್ಸಲ್ ಶರಣಾದರು ಎಂದು ಸರಕಾರ ಹೇಳುತ್ತಿದೆ. ನಕ್ಸಲರು ಶರಣಾಗುವಂತೆ ಯಾರು ಮಾತುಕತೆ ನಡೆಸಿದರು ಎಂಬುದು ತಿಳಿದಿಲ್ಲ. ನಕ್ಸಲ್ ತಂಡದೊಳಗಡೆ ಇರುವ ಆಂತರಿಕ ರಾಜಕೀಯವನ್ನು ಕಾಂಗ್ರೆಸ್ ದುರ್ಬಳಕೆ ಮಾಡುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಹೇಳಿದರು.

ಈ ಹಿಂದೆ ನಾನು ಚಿಕ್ಕಮಂಗಳೂರು ಎಸ್ಪಿಯಾಗಿದ್ದ ಸಂದರ್ಭ ನಕ್ಸಲರು ಶರಣಾಗಿದ್ದರು. ನಕ್ಸಲರ ಶರಣಾಗತಿ ಪ್ರಕ್ರಿಯೆಯಲ್ಲಿ ನಾನು ಭಾಗವಹಿಸಿದ್ದೆ. ನಿಯಮಗಳ ಪ್ರಕಾರ ಜಿಲ್ಲಾಧಿಕಾರಿ ಮತ್ತು ಎಸ್ಪಿಯ ಎದುರು ನಕ್ಸಲರು ಶರಣಾಗಬೇಕು. ಆನಂತರ ಬೇರೆ ಪ್ರಕ್ರಿಯೆಗಳು ನಡೆಯುತ್ತವೆ. ಇಲ್ಲಿ ರಾಜಕೀಯ ಮೈಲೇಜ್ ಗೋಸ್ಕರ ಶರಣಾಗತಿ ಪ್ರಕ್ರಿಯೆ ನಡೆಸಲಾಗಿದೆ. ನಕ್ಸಲ್ ಬೆಂಬಲಿಗರು ಸರಕಾರದ ಮೇಲೆ ಪ್ರಭಾವ ಬೀರಿದ್ದಾರೆ. ನಾಗರಿಕ ಸಮಾಜದ ಮೇಲೂ ಇವರು ಪ್ರಭಾವ ಬೀರಲಿದ್ದಾರೆ ಎಂದು ಅವರು ಆರೋಪಿಸಿದರು.
ನಕ್ಸಲರು ಶರಣಾದಾಗ ಜನರಿಗೆ ವಿಶ್ವಾಸ ಬರಬೇಕು. ನಕ್ಸಲರ ಶರಣಾಗತಿಯ ಬಗ್ಗೆ ಜನರಿಗೆ ವಿಶ್ವಾಸವಿಲ್ಲ. ಶರಣಾಗತಿಯ ಬಗ್ಗೆ ಗೃಹಸಚಿವರೇ ಮಾಹಿತಿಯ ಕೊರತೆಯಿದ್ದ ಹಾಗೆ ಉಲ್ಟಾ-ಪಲ್ಟಾ ಮಾತನಾಡುತ್ತಾರೆ. ಶರಣಾದ ನಕ್ಸಲರು ನಾಗರಿಕ ಸಮಾಜದ ಮೇಲೆ ಪ್ರಭಾವ ಬೀರುವ ಅಪಾಯವಿದೆ ಎಂದರು.

ಹಿಂದಿ ರಾಷ್ಟ್ರೀಯ ಭಾಷೆ: ಹಿಂದಿ ಭಾಷೆ ರಾಷ್ಟ್ರೀಯ ಭಾಷೆಯೇ ಅಲ್ಲ ಎಂದು ಮಾಜಿ ಕ್ರಿಕೆಟಿಗ ಅಶ್ವಿನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಹಿಂದಿ ಭಾಷೆಯ ಕುರಿತು ಆರ್. ಅಷ್ವಿನ್ ಒಂದು ದೃಷ್ಟಿಕೋನ ಇಟ್ಟುಕೊಂಡು ಹೇಳಿಕೆ ನೀಡಿದ್ದಾರೆ, ಹಿಂದಿ ಒಂದು ಅಫಿಶಿಯಲ್ ಲ್ಯಾಂಗ್ವೇಜ್, ಪ್ರಧಾನ ಮಂತ್ರಿ ತುಂಬಾ ಕಡೆ ಇದನ್ನೇ ಹೇಳಿದ್ದು, ಕೇವಲ ಹಿಂದಿ ಮಾತ್ರ ರಾಷ್ಟ್ರೀಯ ಭಾಷೆ ಅಂತಲ್ಲ, ಎಲ್ಲಾ ಭಾಷೆಯೂ ರಾಷ್ಟ್ರೀಯ ಭಾಷೆ ಅಂತನೇ ಹೇಳಿದ್ದಾರೆ, ಅಲ್ಲದೆ ಪ್ರಧಾನಿ ಅವರು ಕನ್ನಡ ಭಾಷೆಗೆ ತುಂಬಾ ಮರ್ಯಾದೆ ಕೊಡುತ್ತಾರೆ ಅದೇ ರೀತಿ ತಮಿಳುಗೂ ತುಂಬಾ ಮರ್ಯಾದಿ ಕೊಡುತ್ತಾರೆ, ಅಶ್ವಿನ್ ಒಂದು ದೃಷ್ಟಿಕೋನದಲ್ಲಿ ಹೇಳಿದ್ದಾರೆ, ಕೇವಲ ಹಿಂದಿ ಮಾತ್ರವಲ್ಲ ಎಲ್ಲಾ ಭಾಷೆಯು ರಾಷ್ಟ್ರೀಯ ಭಾಷೆ ಎಂಬ ಅರ್ಥದಲ್ಲಿ ಅಶ್ವಿನಿ ಹೇಳಿದ್ದಾರೆ ಅಷ್ಟೇ ಬೇರೆ ಏನು ವಿಚಾರ ಇಲ್ಲ ಎಂದು ಹೇಳಿದ್ದಾರೆ.

Tags :