ಲೆಬನಾನ್ ಕದನಕ್ಕೆ ಬಂದೀತೆ ವಿರಾಮ?
ಇಸ್ರೇಲ್ ಮತ್ತು ಹೆಜ್ಬೊಲ್ಲಾ ಸಂಘಟನೆಯ ನಡುವೆ ನವೆಂಬರ್ ೨೭, ಬುಧವಾರ ಬೆಳಗ್ಗೆ ೭.೩೦ಕ್ಕೆ ೬೦ ದಿನಗಳ ಕದನ ವಿರಾಮ ಜಾರಿಗೆ ಬಂತು. ಅಮೆರಿಕ ಮತ್ತು ಫ್ರಾನ್ಸ್ಗಳ ಮಧ್ಯಸ್ಥಿಕೆಯಲ್ಲಿ ಜಾರಿಗೆ ಬಂದ ಈ ಕದನ ವಿರಾಮ, ಪ್ರಾದೇಶಿಕ ಸ್ಥಿರತೆಯ ಭರವಸೆ ನೀಡಿದೆ. ಕಳೆದ ೧೪ ತಿಂಗಳುಗಳಿಂದ ನಡೆಯುತ್ತಿರುವ ನಿರಂತರ ಯುದ್ಧದಿಂದಾಗಿ, ಎರಡೂ ದೇಶಗಳ ಗಡಿ ಪ್ರದೇಶಗಳ ಜನರು ತಮ್ಮ ಮನೆಗಳನ್ನು ಬಿಟ್ಟು ತೆರಳಿದ್ದರು. ಈಗ ಕದನ ವಿರಾಮ ಜಾರಿಗೆ ಬಂದ ಬಳಿಕ ಅವರು ತಮ್ಮ ಮನೆಗಳಿಗೆ ಮರಳತೊಡಗಿದ್ದಾರೆ.
ಲೆಬನಾನ್ ಪ್ರಧಾನಿ ನಜೀಬ್ ಮಿಕಾಟಿ ಅವರು ನೂತನ ಕದನ ವಿರಾಮ ಒಪ್ಪಂದವನ್ನು ಸ್ವಾಗತಿಸಿದ್ದು, ಈ ಶಾಂತಿ ಒಪ್ಪಂದದ ಸ್ಥಾಪನೆಗೆ ನೆರವಾದ ಅಮೆರಿಕ ಮತ್ತು ಫ್ರಾನ್ಸ್ಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಅವರು ಮಧ್ಯ ಪೂರ್ವದಲ್ಲಿ ತಿಂಗಳುಗಳ ಕಾಲ ನಡೆದ ಯುದ್ಧ ಮತ್ತು ಹಿಂಸಾಚಾರಗಳ ಬಳಿಕ ಜಾರಿಗೆ ಬಂದಿರುವ ಈ ಕದನ ವಿರಾಮವನ್ನು ಆಶಾ ಭಾವನೆಯ ಮೊದಲ ಸಂಕೇತ' ಎಂದು ಕರೆದಿದ್ದಾರೆ. ಪ್ರಸ್ತುತ ಯುದ್ಧದಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದು, ಹತ್ತು ಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದರು. ಈಗ ಜಾರಿಗೆ ಬಂದಿರುವ ಕದನ ವಿರಾಮ ಈ ಯುದ್ಧಕ್ಕೆ ಒಂದು ಅಂತ್ಯ ಹಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎಂದು ಪರಿಗಣಿಸಲ್ಪಟ್ಟಿದೆ. ಅರವತ್ತು ದಿನಗಳ ಕದನ ವಿರಾಮ ಘೋಷಣೆಯಾಗುತ್ತಿದ್ದಂತೆ, ತೀವ್ರ ದಾಳಿಗೆ ತುತ್ತಾಗಿದ್ದ ಲೆಬನಾನ್ ರಾಜಧಾನಿ ಬೈರುತ್ನಲ್ಲಿ ಸಂಭ್ರಮಾಚರಣೆಗಳು ಆರಂಭಗೊಂಡವು. ಇರಾನಿನ ಬೆಂಬಲ ಹೊಂದಿರುವ ಸಶಸ್ತ್ರ ಪಡೆಯಾದ ಹೆಜ್ಬೊಲ್ಲಾ ಸಂಘಟನೆ ಮತ್ತು ಇಸ್ರೇಲ್ಗಳು ಕದನ ವಿರಾಮ ಘೋಷಣೆಯಾಗುವ ತನಕ ಪರಸ್ಪರ ಸೆಣಸಾಡುತ್ತಿದ್ದವು. ಇಸ್ರೇಲ್ ಈ ಹಿಂದೆ ದಾಳಿಗೊಳಗಾಗಿರದ ಬೈರುತ್ನ ಭಾಗಗಳ ಮೇಲೆ ದಾಳಿ ನಡೆಸಿದರೆ, ಹೆಜ್ಬೊಲ್ಲಾ ಇಸ್ರೇಲ್ ಮೇಲೆ ಡ್ರೋನ್ಗಳು ಮತ್ತು ಕ್ಷಿಪಣಿಗಳನ್ನು ಪ್ರಯೋಗಿಸಿತ್ತು. ಶ್ವೇತಭವನದಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಕದನ ವಿರಾಮ ಈ ವಿಧ್ವಂಸಕ ಯುದ್ಧವನ್ನು ಕೊನೆಗೊಳಿಸಲಿದೆ ಎಂದಿದ್ದಾರೆ. ಗಾಜಾದಲ್ಲಿ ಇರಾನ್ ಬೆಂಬಲಿತ ಹಮಾಸ್ ಸಂಘಟನೆ ಮತ್ತು ಇಸ್ರೇಲ್ ನಡುವೆಯೂ ಕದನ ವಿರಾಮ ಜಾರಿಗೊಳಿಸಲು ಈಜಿಪ್ಟ್, ಕತಾರ್ ಮತ್ತು ಟರ್ಕಿಗಳೊಡನೆ ಸೇರಿ ಅಮೆರಿಕ ಪ್ರಯತ್ನ ನಡೆಸಲಿದೆ ಎಂದು ಅವರು ಹೇಳಿದ್ದಾರೆ. ಅಮೆರಿಕ ರೂಪಿಸಿದ ಕದನ ವಿರಾಮ ಒಪ್ಪಂದಕ್ಕೆ ಕೆಲವು ದಿನಗಳ ಹಿಂದೆಯೇ ಹೆಜ್ಬೊಲ್ಲಾ ತನ್ನ ಒಪ್ಪಿಗೆ ಸೂಚಿಸಿತ್ತು. ಇಸ್ರೇಲಿನ ಭದ್ರತಾ ಸಚಿವ ಸಂಪುಟ ನವೆಂಬರ್ ೨೮, ಮಂಗಳವಾರದಂದು ತನ್ನ ಒಪ್ಪಿಗೆ ಸೂಚಿಸಿದ ಬಳಿಕ ಒಪ್ಪಂದ ಅಂತಿಮಗೊಂಡಿತು. ಒಂದಷ್ಟು ಇಸ್ರೇಲಿ ರಾಜಕಾರಣಿಗಳು ಯುದ್ಧವನ್ನು ಮುಂದುವರಿಸಿ, ಹೆಜ್ಬೊಲ್ಲಾವನ್ನು ಸಂಪೂರ್ಣವಾಗಿ ಮಣಿಸಬೇಕೆಂದು ಆಗ್ರಹಿಸಿದ್ದರೂ, ನೆತನ್ಯಾಹು ಸಚಿವ ಸಂಪುಟದ ಸದಸ್ಯರನ್ನು ಕದನ ವಿರಾಮಕ್ಕೆ ಒಪ್ಪುವಂತೆ ಮನ ಒಲಿಸಿದರು. ಇಸ್ರೇಲ್ ಯಾಕೆ ಕದನ ವಿರಾಮಕ್ಕೆ ಒಪ್ಪಿಕೊಂಡಿತು? ಇಸ್ರೇಲ್ ಕದನ ವಿರಾಮಕ್ಕೆ ಒಪ್ಪಿರುವುದಕ್ಕೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮೂರು ಕಾರಣಗಳನ್ನು ನೀಡಿದ್ದಾರೆ. ಅವೆಂದರೆ: ಇರಾನ್ ಮೇಲೆ ಗಮನ ಕೇಂದ್ರೀಕರಿಸುವುದು, ಇಸ್ರೇಲಿ ಭದ್ರತಾ ಪಡೆಗಳಿಗೆ ವಿಶ್ರಾಂತಿ ಮತ್ತು ಮರುಪೂರೈಕೆಗಳನ್ನು ಒದಗಿಸುವುದು, ಮತ್ತು ಹಮಾಸ್ ಅಥವಾ ಹೆಜ್ಬೊಲ್ಲಾವನ್ನು ಯುದ್ಧದಿಂದ ಹೊರಗಿಟ್ಟು, ಉದ್ವಿಗ್ನತೆಯನ್ನು ಕಡಿಮೆಗೊಳಿಸುವುದು. ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ, ಇಸ್ರೇಲ್ ಗಾಜಾ ಮೇಲೆ ಬಾಂಬ್ ದಾಳಿ ಆರಂಭಿಸಿದ ಬೆನ್ನಲ್ಲೇ, ಹಮಾಸ್ ಸಂಘಟನೆಗೆ ಬೆಂಬಲ ನೀಡುವ ಸಲುವಾಗಿ ಹೆಜ್ಬೊಲ್ಲಾ ಇಸ್ರೇಲ್ ವಿರುದ್ಧ ಸಮರಕ್ಕೆ ಇಳಿದಿತ್ತು. ಇಸ್ರೇಲ್ ಕದನ ವಿರಾಮಕ್ಕೆ ಒಪ್ಪುವುದರ ಹಿಂದೆ, ಮೂರು ಇತರ ಕಾರಣಗಳೂ ಪ್ರಭಾವ ಬೀರಿರಬಹುದು. ಮೊದಲನೆಯದಾಗಿ, ಇಸ್ರೇಲಿನ ನಾಯಕತ್ವದಲ್ಲೇ ಒಂದಷ್ಟು ಭಿನ್ನಾಭಿಪ್ರಾಯಗಳು ಇರುವಂತೆ ಕಂಡುಬಂದಿವೆ. ಮಾಜಿ ರಕ್ಷಣಾ ಸಚಿವ ಯೊಆವ್ ಗ್ಯಾಲಂಟ್ ಮತ್ತು ಐಡಿಎಫ್ ಮುಖ್ಯಸ್ಥರು ಗಾಜಾ ಮತ್ತು ಲೆಬನಾನ್ನಲ್ಲಿ ಕದನ ವಿರಾಮ ಜಾರಿಗೆ ತರಲು ಆಗ್ರಹಿಸಿದ್ದರು. ಗ್ಯಾಲಂಟ್ ನಿರಂತರವಾಗಿ ನೆತನ್ಯಾಹು ಗುರಿಗಳೇನೆಂದು ಪ್ರಶ್ನಿಸಿದ್ದು, ಮುಂದಿನ ಕ್ರಮಗಳ ಕುರಿತು ಸ್ಪಷ್ಟ ಯೋಜನೆ ರೂಪಿಸುವಂತೆ ಕೇಳುತ್ತಾ ಬಂದಿದ್ದರು. ಪ್ರಧಾನಿಯೊಡನೆ ಬಹಿರಂಗವಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ವಾರದೊಳಗೆ ಗ್ಯಾಲಂಟ್ರನ್ನು ವಜಾಗೊಳಿಸಲಾಯಿತು. ಆದರೆ, ಇಸ್ರೇಲಿ ಡಿಫೆನ್ಸ್ ಫೋರ್ಸಸ್ (ಐಡಿಎಫ್) ಆಲೋಚನೆಗಳನ್ನು ಪ್ರತಿನಿಧಿಸುವ ಅವರ ಆಲೋಚನೆಗಳೂ ಈ ನಿರ್ಧಾರದ ಹಿಂದೆ ಒಂದಷ್ಟು ಪ್ರಭಾವ ಬೀರಿರುವ ಸಾಧ್ಯತೆಗಳಿವೆ. ಸಚಿವ ಸಂಪುಟದ ಅಭಿಪ್ರಾಯ ಮತದಲ್ಲಿ ತೀವ್ರ ಬಲಪಂಥೀಯ ಧೋರಣೆಯ ರಾಷ್ಟ್ರೀಯ ಭದ್ರತಾ ಸಚಿವರಾದ ಇತಾಮರ್ ಬೆನ್ ಗ್ವಿರ್ ಒಬ್ಬರೇ ಕದನ ವಿರಾಮದ ವಿರುದ್ಧ ಮತ ಚಲಾಯಿಸಿದ್ದರು. ಅವರು ಯಾವತ್ತೂ ಗ್ಯಾಲಂಟ್ ಅಭಿಪ್ರಾಯದ ವಿರುದ್ಧ ಧೋರಣೆ ಹೊಂದಿದ್ದರು. ಎರಡನೆಯದಾಗಿ, ಇಸ್ರೇಲ್ ಲೆಬನಾನ್ನಲ್ಲಿನ ಕದನಗಳಲ್ಲಿ ಯಶಸ್ವಿಯಾಗುತ್ತಿದ್ದರೂ, ಒಟ್ಟಾರೆ ಫಲಿತಾಂಶಗಳು ಸಮಾಧಾನಕರವಾಗಿರಲಿಲ್ಲ. ಲೆಬನಾನ್ನಲ್ಲಿ ದೀರ್ಘಕಾಲ ಮಿಲಿಟರಿ ಉಪಸ್ಥಿತಿ ಹೊಂದುವುದು ಐಡಿಎಫ್ಗೆ ಕಷ್ಟಕರವಾಗಲಿದೆ. ಆದ್ದರಿಂದಲೇ ಉತ್ತರ ಇಸ್ರೇಲಿನ ಜನರು ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗುವಷ್ಟು ಹೆಜ್ಬೊಲ್ಲಾ ದುರ್ಬಲವಾದಾಗ ಇಸ್ರೇಲ್ಗೆ ಸೇನೆಯನ್ನು ಹಿಂಪಡೆಯುವುದು ಸುಲಭ ಆಯ್ಕೆಯಾಗಿದೆ. ಒಂದುವೇಳೆ ಇಸ್ರೇಲ್ ದೀರ್ಘಕಾಲ ದಕ್ಷಿಣ ಲೆಬನಾನ್ನಲ್ಲಿ ಉಪಸ್ಥಿತಿ ಹೊಂದಿದರೆ, ಆಗ ಹೆಜ್ಬೊಲ್ಲಾಗೆ ಮರಳಿ ಜನಬೆಂಬಲ ಗಳಿಸಲು ಇಸ್ರೇಲ್ ಅನುವು ಮಾಡಿಕೊಟ್ಟಂತಾಗಬಹುದು. ೨೦೨೩ರ ಮಧ್ಯಭಾಗದ ವೇಳೆಗೆ ಬಹಳಷ್ಟು ಲೆಬಾನೀಸ್ ಜನರು ಹೆಜ್ಬೊಲ್ಲಾದ ಕ್ರಮಗಳು ಮತ್ತು ಪ್ರಭಾವದ ಕಾರಣಗಳಿಂದ ಅದನ್ನು ವಿರೋಧಿಸತೊಡಗಿದ್ದರು. ಆದರೆ, ದೀರ್ಘಕಾಲ ಲೆಬನಾನ್ನಲ್ಲಿ ಇಸ್ರೇಲ್ ಸೇನಾ ಉಪಸ್ಥಿತಿ ಇದ್ದರೆ, ಜನರ ಅಭಿಪ್ರಾಯ ಮತ್ತೆ ಇಸ್ರೇಲ್ ವಿರುದ್ಧ ತಿರುಗಬಹುದು. ಮೂರನೆಯದಾಗಿ, ಹೆಜ್ಬೊಲ್ಲಾ ತನ್ನ ಉನ್ನತ ಮುಖಂಡರು ಮತ್ತು ಮೂಲಭೂತ ವ್ಯವಸ್ಥೆಗಳನ್ನು ಕಳೆದುಕೊಂಡರೂ, ಕೊನೆಯ ತನಕ ಇಸ್ರೇಲ್ ವಿರುದ್ಧ ದಾಳಿ ನಡೆಸಲು ಶಕ್ತವಾಗಿತ್ತು. ಕದನ ವಿರಾಮಕ್ಕೆ ಕೇವಲ ಎರಡು ದಿನಗಳ ಮುನ್ನ ಹೆಜ್ಬೊಲ್ಲಾ ಇಸ್ರೇಲ್ ಮೇಲೆ ತನ್ನ ಅತಿದೊಡ್ಡ ದಾಳಿ ಸಂಘಟಿಸಿ, ೨೫೦ ರಾಕೆಟ್ಗಳನ್ನು ಉಡಾಯಿಸಿತ್ತು. ಕೇಂದ್ರ ಬೈರುತ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಆರೋಗ್ಯ ಸಿಬ್ಬಂದಿಗಳೂ ಸೇರಿದಂತೆ ೨೯ ಜನರು ಪ್ರಾಣ ಕಳೆದುಕೊಂಡ ಬಳಿಕ, ಹೆಜ್ಬೊಲ್ಲಾ ಈ ದಾಳಿ ನಡೆಸಿತ್ತು. ಐಡಿಎಫ್ ಬಹಳ ಶಕ್ತಿಶಾಲಿಯಾಗಿದ್ದರೂ, ಹೆಜ್ಬೊಲ್ಲಾದ ಯುದ್ಧ ನಡೆಸುವ ಸಾಮರ್ಥ್ಯ ಯುದ್ಧವನ್ನು ಇನ್ನಷ್ಟು ಸುದೀರ್ಘವಾಗಿಸುತ್ತಿತ್ತು. ಲಿಟಾನಿ ನದಿಯ ತನಕ ತಲುಪಿದ್ದು ಇಸ್ರೇಲ್ ಪಾಲಿಗೆ ಸಾಂಕೇತಿಕ ವಿಜಯವಾಗಿದ್ದು, ಆ ಬಳಿಕ ಕದನ ವಿರಾಮ ಘೋಷಿಸುವಂತೆ ಐಡಿಎಫ್ ಸಲಹೆ ನೀಡಿತ್ತು. ಕದನ ವಿರಾಮದ ಪರಿಣಾಮಗಳೇನು? ಇಸ್ರೇಲಿನ ಎಲ್ಲ ಸೇನಾ ಕ್ರಮಗಳಿಗೂ ಮೂಲ ಕಾರಣವೆಂದರೆ ೨೦೨೩ರ ಅಕ್ಟೋಬರ್ ೭ರಂದು ಇಸ್ರೇಲ್ ಮೇಲೆ ನಡೆದ ದಾಳಿ ಮತ್ತು ಅದರಿಂದ ಇಸ್ರೇಲ್ ಕಳೆದುಕೊಂಡ ಭದ್ರತೆಯ ಭಾವನೆ. ಈ ದಾಳಿಯ ಕಾರಣದಿಂದಾಗಿ ಇಸ್ರೇಲ್ ಮೊದಲಿಗೆ ಗಾಜಾದಲ್ಲಿ, ಬಳಿಕ ಲೆಬನಾನ್ನಲ್ಲಿ ಭಾರೀ ಕಾರ್ಯಾಚರಣೆಗಳನ್ನು ನಡೆಸಿತು. ಇಸ್ರೇಲ್ ಮೇಲೆ ಅಂತಾರಾಷ್ಟ್ರೀಯ ಒತ್ತಡಗಳೂ ಹೆಚ್ಚಾಗಿಯೇ ಇದ್ದವು. ವಿಶ್ವಸಂಸ್ಥೆಯ ತಜ್ಞರು ಇಸ್ರೇಲಿನ ಕ್ರಮಗಳನ್ನು
ನರಮೇಧ' ಎಂದು ಕರೆದಿದ್ದು, ಅಂತಾರಾಷ್ಟ್ರೀಯ ನ್ಯಾಯಾಲಯ ಇಸ್ರೇಲ್ ವಶಪಡಿಸಿಕೊಂಡ ಸ್ಥಳಗಳಿಂದ ಹಿಂದೆ ಸರಿಯುವಂತೆ ಆದೇಶಿಸಿದೆ. ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಲಯ ನೆತನ್ಯಾಹು ವಿರುದ್ಧ ಬಂಧನದ ವಾರಂಟ್ ಹೊರಡಿಸಿದೆ.
ಆದರೆ ಇದಾವುದೂ ಇಸ್ರೇಲ್ ಗಾಜಾದಲ್ಲಿನ ಕಾರ್ಯಾಚರಣೆಗಳನ್ನು ಮುಂದುವರಿಸದಂತೆ ತಡೆಯಲು ಸಾಧ್ಯವಾಗಲಿಲ್ಲ. ಇಸ್ರೇಲ್ ಭವಿಷ್ಯದ ಅಪಾಯಗಳನ್ನು ತಡೆಗಟ್ಟಲು ಇದು ಏಕೈಕ ಮಾರ್ಗ ಎಂದೇ ಪರಿಗಣಿಸಿದೆ. `ಮಿಸ್ಟರ್ ಸೆಕ್ಯುರಿಟಿ' ಎಂಬ ನೆತನ್ಯಾಹು ಅವರ ಹೆಗ್ಗಳಿಕೆಗೂ ಈಗ ಧಕ್ಕೆ ಉಂಟಾಗಿದ್ದು, ಇರಾನ್ ಬೆಂಬಲಿತ ಗುಂಪುಗಳೆಲ್ಲವನ್ನೂ ಇಸ್ರೇಲ್ ಶತ್ರುವಾಗಿ ಪರಿಗಣಿಸಿದೆ.
ಹೆಜ್ಬೊಲ್ಲಾ ಇಂದಿಗೂ ಲೆಬನಾನ್ ಸಮಾಜ ಮತ್ತು ಸರ್ಕಾರದಲ್ಲಿ ಸಕ್ರಿಯವಾಗಿದ್ದು, ೧೫ ಸಂಸತ್ ಸದಸ್ಯರನ್ನು ಹೊಂದಿದೆ. ಕದನ ವಿರಾಮವನ್ನು ಪಾಶ್ಚಾತ್ಯ ಜಗತ್ತು ಗಮನಿಸುವ ಹೊರತಾಗಿಯೂ, ಹೆಜ್ಬೊಲ್ಲಾ ಮರಳಿ ಸಮಾಜ ಮತ್ತು ರಾಜಕೀಯ ಬೆಂಬಲ ಗಳಿಸಿ, ೨೦೦೬ರಲ್ಲಿ ಇಸ್ರೇಲ್ ಹಿಂದೆ ಸರಿಯುವಂತೆ ಮಾಡಿದ್ದನ್ನು ಪುನರಾವರ್ತಿಸಬಹುದು. ಕದನ ವಿರಾಮದ ಹೊರತಾಗಿಯೂ ನಮ್ಮ ಪ್ರತಿರೋಧ ಮುಂದುವರಿಯಲಿದೆ ಎಂದು ಹೆಜ್ಬೊಲ್ಲಾ ಸಂಸದರಾದ ಹಸಬ್ ಫದ್ಲಲ್ಲಾ ಘೋಷಿಸಿದ್ದಾರೆ.
ಕದನ ವಿರಾಮದ ಪ್ರಾದೇಶಿಕ ಪರಿಣಾಮಗಳೇನು?
ದಕ್ಷಿಣ ಲೆಬನಾನ್ನಲ್ಲಿ ಅಮೆರಿಕದ ಸಣ್ಣ ಉಪಸ್ಥಿತಿಗೆ ಲೆಬನಾನ್ ಮತ್ತು ಹೆಜ್ಬೊಲ್ಲಾ ತನ್ನ ಆಪ್ತ ಇರಾನಿನೊಡನೆ ಚರ್ಚಿಸಿಯೇ ಒಪ್ಪಿರುವ ಸಾಧ್ಯತೆಗಳಿವೆ. ಹೆಜ್ಬೊಲ್ಲಾ ಮುಖಂಡ ನಯೀಮ್ ಕಾಸಿಮ್ ವಾರದ ಹಿಂದೆ ಸಾರ್ವಜನಿಕವಾಗಿ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದು, ಅದಕ್ಕೆ ಇರಾನ್ ಅನುಮತಿಯನ್ನು ಖಂಡಿತಾ ಪಡೆದಿರುತ್ತಾರೆ.
ಇರಾನ್ ಐಎಇಎ(ಇಂಟರ್ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ) ಜೊತೆ ಮಾತುಕತೆ ನಡೆಸುತ್ತಿದ್ದು, ನಿರ್ಬಂಧಗಳನ್ನು ಸಡಿಲಿಸಿ, ಅರಬ್ ನೆರೆ ರಾಷ್ಟçಗಳೊಡನೆ ಉತ್ತಮ ಸಂಬಂಧ ಸಾಧಿಸಲು ತಾನು ಸಿದ್ಧ ಎಂದು ಅಮೆರಿಕಗೆ ಸಂದೇಶ ಕಳುಹಿಸುತ್ತಿದೆ. ಈಗ ಇರಾನ್ಗೆ ತನ್ನ ಅತಿದೊಡ್ಡ ಮಿತ್ರ ಹೆಜ್ಬೊಲ್ಲಾ ಕುರಿತು ಚಿಂತಿಸುವ ಅಗತ್ಯವಿಲ್ಲ. ಇರಾನ್ ತನ್ನ ಮತ್ತು ಇಸ್ರೇಲ್ ನಡುವೆ ಮಿಲಿಟರಿ ತಡೆ ಸ್ಥಾಪಿಸಲೆಂದೇ ಹೆಜ್ಬೊಲ್ಲಾವನ್ನು ಬೆಂಬಲಿಸುತ್ತಿದೆ.
ಎರಡನೆಯದಾಗಿ, ಇಸ್ರೇಲ್ ಈಗ ತನ್ನ ಗಮನವನ್ನು ಸಂಪೂರ್ಣವಾಗಿ ಗಾಜಾದಲ್ಲಿರುವ ಹಮಾಸ್ ಮೇಲೆ ಮಾತ್ರವಲ್ಲದೆ, ಸಿರಿಯಾ, ಇರಾಕ್, ಮತ್ತು ಯೆಮೆನ್ಗಳಲ್ಲಿರುವ ಇರಾನಿನ ಪ್ರಾಕ್ಸಿಗಳ ಮೇಲೂ ಹರಿಸಬಹುದು.
ನೆತನ್ಯಾಹು ಅವರು ಸಿರಿಯನ್ ಅಧ್ಯಕ್ಷ ಬಶರ್ ಅಲ್ ಅಸದ್ಗೆ ನೀವು ಬೆಂಕಿಯೊಡನೆ ಆಡವಾಡುತ್ತಿದ್ದೀರಿ ಎಂದು ಎಚ್ಚರಿಸಿದ್ದರು. ಟ್ರಂಪ್ ಆಡಳಿತ ಬರುವ ಹಿನ್ನೆಲೆಯಲ್ಲಿ ಇರಾನ್ ಜಾಗರೂಕತೆಯ ಹೆಜ್ಜೆ ಇಡುತ್ತಿದೆ. ಇಸ್ರೇಲ್ ಮುಂದೆ ಈಗ ಎರಡು ಆಯ್ಕೆಗಳಿವೆ: ಅದು ಇರಾನ್ ಬೆಂಬಲಿತ ಗುಂಪುಗಳ ಮೇಲೆ ದಾಳಿ ನಡೆಸುವುದನ್ನು ಮುಂದುವರಿಸಬಹುದು ಅಥವಾ ಇರಾನ್ ರೀತಿಯಲ್ಲಿ ಜಾಗರೂಕವಾಗಿ ಮುಂದುವರಿಯಬಹುದು. ಸದ್ಯಕ್ಕಂತೂ ಇಸ್ರೇಲ್ ಗಮನ ೪೫,೦೦೦ ಜನರು ಸಾವು ಕಂಡಿರುವ ಗಾಜಾ ಮೇಲಿದೆ.
ಲೆಬನಾನ್ನಲ್ಲಿ ಯುದ್ಧಕ್ಕೆ ಕಾರಣವಾದ ವಿಚಾರಗಳು ಇನ್ನೂ ಪರಿಹಾರ ಕಂಡಿಲ್ಲ. ಲೆಬನಾನ್ ಮತ್ತು ಉತ್ತರ ಇಸ್ರೇಲ್ನಲ್ಲಿ ಸಂಪೂರ್ಣ ಶಾಂತಿ ಸ್ಥಾಪನೆಯಾಗಲು ಬಹಳಷ್ಟು ಸಮಯ ಮತ್ತು ಪ್ರಯತ್ನಗಳ ಅಗತ್ಯವಿದೆ.