For the best experience, open
https://m.samyuktakarnataka.in
on your mobile browser.

ವಕ್ಪ್ : ಸಿಬಿಐ ತನಿಖೆಗೆ ಆಗ್ರಹಿಸಿ ಪಿಎಂಗೆ ಸಿಎಂ ಆಗ್ರಹ

04:21 PM Dec 14, 2024 IST | Samyukta Karnataka
ವಕ್ಪ್   ಸಿಬಿಐ ತನಿಖೆಗೆ ಆಗ್ರಹಿಸಿ ಪಿಎಂಗೆ ಸಿಎಂ ಆಗ್ರಹ

ನರೇಂದ್ರ ಮೋದಿಯವರಿಗೆ ನೇರವಾಗಿ ಪತ್ರ ಬರೆದಿರುವುದು ಬಯಲಾಗಿದೆ. ಪ್ರಧಾನಮಂತ್ರಿಯವರು ಈ ಆರೋಪವನ್ನು ಗಂಭೀರವಾಗಿ ಸ್ವೀಕರಿಸಿ ತಕ್ಷಣ ಸಿಬಿಐ ತನಿಖೆಗೆ ಆದೇಶಿಸಬೇಕೆಂದು ಆಗ್ರಹ

ವಕ್ಪ್ ಆಸ್ತಿ ಕಬಳಿಕೆಯ ಬಗ್ಗೆ ಮೌನವಾಗಿರಲು ವಿಜಯೇಂದ್ರ ಅವರು ತಮಗೆ 150 ಕೋಟಿ ರೂಪಾಯಿ ಆಮಿಷವೊಡ್ಡಿದ್ದರು ಎಂದು ಕರ್ನಾಟಕ ಬಿಜೆಪಿ ಸರ್ಕಾರದಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ನೇರವಾಗಿ ಪತ್ರ ಬರೆದಿರುವುದು ಬಯಲಾಗಿದೆ. ಪ್ರಧಾನಮಂತ್ರಿಯವರು ಈ ಆರೋಪವನ್ನು ಗಂಭೀರವಾಗಿ ಸ್ವೀಕರಿಸಿ ತಕ್ಷಣ ಸಿಬಿಐ ತನಿಖೆಗೆ ಆದೇಶಿಸಬೇಕೆಂದು ಆಗ್ರಹಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ವಿಜಯೇಂದ್ರ ನಮ್ಮ ಮನೆಗೆ ಬಂದು ವಕ್ಪ್ ಆಸ್ತಿ ಕಬಳಿಕೆಯ ತನಿಖೆ ನಡೆಸಿ ನೀಡಿರುವ ವರದಿ ಬಗ್ಗೆ ಮೌನವಹಿಸುವಂತೆ ಕೇಳಿಕೊಂಡಿದ್ದು ಮಾತ್ರವಲ್ಲ ಇದಕ್ಕಾಗಿ 150 ಕೋಟಿ ರೂಪಾಯಿಗಳ ಆಮಿಷವೊಡ್ಡಿದ್ದರು. ನಾನು ಅವರಿಗೆ ಗದರಿಸಿ ಮನೆಯಿಂದ ಓಡಿಸಿದ್ದೆ. ಅದರ ನಂತರ ಈ ಎಲ್ಲ ಘಟನೆಗಳನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದೆ ಎಂದು ಸಾಕ್ಷಾತ್ ಅನ್ವರ್ ಮಾಣಿಪ್ಪಾಡಿಯವರೇ ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು. ‘’ನಾ ಖಾವೂಂಗಾ, ನಾ ಖಾನೆ ದೂಂಗಾ’’ ಎಂದು ಊರೆಲ್ಲ ಡಂಗೂರ ಹೊಡ್ಕೊಂಡು ತಿರುಗಾಡುವ ನರೇಂದ್ರ ಮೋದಿಯವರು ಈ ಆರೋಪದ ಬಗ್ಗೆ ಮೌನವಾಗಿರುವುದು ಸಂಶಯವನ್ನು ಮಾತ್ರವಲ್ಲ, ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ?

ವಕ್ಪ್ ಆಸ್ತಿ ವಿಚಾರದಲ್ಲಿ ಬಿ ವಿಜಯೇಂದ್ರ ಅವರು ವಹಿಸುತ್ತಿರುವ ಆಸಕ್ತಿಯನ್ನ ನೋಡಿದರೆ ಅವರು ಮತ್ತು ಅವರ ಕುಟುಂಬ ವರ್ಗ ವಕ್ಪ್ ಆಸ್ತಿ ಕಬಳಿಕೆಯಲ್ಲಿ ನೇರವಾಗಿ ಷಾಮೀಲಾಗಿರುವಂತೆ ಕಾಣುತ್ತಿದೆ. ಅವರ ಜೊತೆ ಕರ್ನಾಟಕ ಬಿಜೆಪಿ ಪಕ್ಷದ ಮಹಾಮಹಿಮರೆಲ್ಲರೂ ಷಾಮೀಲಾಗಿರುವ ಸಂಶಯ ಇದೆ. ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ವಕ್ಪ್ ಆಸ್ತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಗರಿಷ್ಠ ಸಂಖ‍್ಯೆಯಲ್ಲಿ ನೋಟೀಸ್ ನೀಡಿರುವುದನ್ನು ಈಗಾಗಲೇ ಮಾಧ್ಯಮಗಳು ವ್ಯಾಪಕವಾಗಿ ವರದಿ ಮಾಡಿವೆ. ಮಾಣಿಪ್ಪಾಡಿ ಅವರ ಬಾಯಿಮುಚ್ಚಿಸುವ ಷಡ್ಯಂತ್ರದಲ್ಲಿ ಯಾರೆಲ್ಲ ಷಾಮೀಲಾಗಿದ್ದಾರೆ? ವಕ್ಪ್ ಆಸ್ತಿ ಲೂಟಿಯಲ್ಲಿ ಬೇರೆ ಯಾರೆಲ್ಲ ಪಾಲುದಾರರಿದ್ದಾರೆ? ಎನ್ನುವ ಬಗ್ಗೆಯೂ ತನಿಖೆಯಾಗಬೇಕಾಗಿದೆ.

ಆಶ್ಚರ್ಯದ ಸಂಗತಿಯೆಂದರೆ, ಒಂದೆಡೆ ಇಂತಹ ಗಂಭೀರ ಆರೋಪ ಹೊತ್ತುಕೊಂಡಿರುವ ವಿಜಯೇಂದ್ರ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾಗುತ್ತಾರೆ, ಇನ್ನೊಂದೆಡೆ ಪಕ್ಷದ ಹೈಕಮಾಂಡ್‌ಗೆ ಎರಡು ಸಾವಿರ ಕೋಟಿ ರೂಪಾಯಿ ಸಂದಾಯ ಮಾಡಿ ವಿಜಯೇಂದ್ರ ಅವರು ತಮ್ಮ ತಂದೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆರೋಪಿಸುತ್ತಾರೆ. ಈ ಎಲ್ಲ ಬೆಳವಣಿಗೆಗಳನ್ನು ಒಂದು ಕ್ರಮದಲ್ಲಿ ಜೋಡಿಸಿ ನೋಡಿದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿತ್ತು ಎಂದು ಆರೋಪಿಸಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರೇ, ಕೋವಿಡ್ ಸಲಕರಣೆಗಳ ಖರೀದಿ ಭ್ರಷ್ಟಾಚಾರದಿಂದ ಹಿಡಿದು ವಕ್ಪ್ ಆಸ್ತಿ ಕಬಳಿಕೆಯಲ್ಲಿನ ಲೂಟಿ ವರೆಗೆ ರಾಜ್ಯ ಬಿಜೆಪಿಯ ಕಪಾಟಿನಿಂದ ಒಂದೊಂದೇ ಅಸ್ತಿ ಪಂಜರಗಳು ಉರುಳಿಬೀಳುತ್ತಲೇ ಇದೆ. ಈ ಹಗರಣಗಳಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ರಾಜ್ಯದ ಬಿಜೆಪಿ ನಾಯಕರು ನಮ್ಮ ಪಕ್ಷ ಮತ್ತು ನಾಯಕರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಜನರ ಗಮನ ಬೇರೆ ಕಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ.

Tags :