ವರದಕ್ಷಿಣೆ ಕಿರುಕುಳ: ಯುವತಿ ಕೊಲೆ
ಕುಷ್ಟಗಿ: ಪ್ರೀತಿಸಿ ಮದುವೆಯಾದ ಯುವತಿಗೆ ವರದಕ್ಷಿಣೆ ತರುವಂತೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ ಕತ್ತು ಹಿಸುಕಿ ಕೊಲೆ ಮಾಡಿದ್ದ ಆರೋಪಿಯನ್ನು ಕುಷ್ಟಗಿ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಗೋತಗಿ ಗ್ರಾಮದ ಮುತ್ತುರಾಜ ನಾಗಪ್ಪ ಹುಬ್ಬಳ್ಳಿ ಬಂಧಿತ ಆರೋಪಿ. ಹುಬ್ಬಳ್ಳಿಯ ಲಕ್ಷ್ಮೀ(೨೩) ಎಂಬ ಯುವತಿಯನ್ನು ಮುತ್ತುರಾಜ ಎರಡು ವರ್ಷದ ಹಿಂದೆ ಪ್ರೀತಿಸಿ 2022 ಜೂನ್ ೩ರಂದು ಕುಷ್ಟಗಿಯಲ್ಲಿ ರಜಿಸ್ಟರ್ ಮದುವೆಯಾಗಿದ್ದ. ದಂಪತಿಗೆ ಎಂಟು ತಿಂಗಳ ಹೆಣ್ಣು ಮಗು ಇದೆ. ಮುತ್ತುರಾಜ ಹಾಗೂ ಅವರ ತಾಯಿ ದ್ರಾಕ್ಷಾಯಣಿ ಸೇರಿಕೊಂಡು ಲಕ್ಷ್ಮೀ ಜಮೀನು, ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದಾರೆ ಎನ್ನಲಾಗಿದೆ.
ಆ. ೨೦ರಂದು ಬೆಳಗ್ಗೆ ಅನುಮಾನಸ್ಪದವಾಗಿ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಶವವನ್ನು ಗುಟಕ್ಕೆ ಬಡಿದಿದ್ದರು, ನಂತರ ಶವವನ್ನು ತಗ್ಗು ತೆಗೆದು ಮುಚ್ಚಿದ್ದರು ಎನ್ನಲಾಗಿದೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ದೇವರಾಜ ಹನುಮಂತಪ್ಪ ಗುರಿಕಾರ ದೂರು ನೀಡಿದ್ದರು. ದೂರಿನನ್ವಯ ಆರೋಪಿ ಮುತ್ತುರಾಜ ನಾಗಪ್ಪ ಹುಬ್ಬಳ್ಳಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.