ವಿರಾಸತ್‌ನಲ್ಲಿ ಮನಸೆಳೆದ 'ತಿರ'
ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ವೈಭವವನ್ನು ಸಾರುವ ಆಳ್ವಾಸ್ ವಿರಾಸತ್ ಜನರ ಕಣ್ಮನ ಸೆಳೆದಿದೆ.
ಮೂಡುಬಿದಿರೆ: ಪಾಲಕ್ಕಾಡ್ ಮಣ್ಣಾರ್ ಕಾಡ್ ಭಾಗದಿಂದ ಬಂದು ತಿರ ಎನ್ನುವ ಕಲಾ ಪ್ರದರ್ಶನ.
ಕೇರಳದ ವಲ್ಲುವನಾಡ್ ಪ್ರದೇಶಗಳಲ್ಲಿ ಕಂಡುಬರುವ ಕಲೆಗಳಲ್ಲಿ ಒಂದು ಕಲೆ ತಿರ. ತಿರಯಾಟ್ಟಮ್ ನೋಡಿ ಅರ್ಥಮಾಡಬೇಕೆಂದರೆ ಮೊದಲು ಅದರ ಹಿಂದಿರುವ ವಿಶ್ವಾಸ , ಆಚರಣೆ, ಸಂಕಲ್ಪಗಳನ್ನು ತಿಳಿಯಬೇಕು. ಕೇರಳದ ವಿವಿಧ ಪ್ರದೇಶದಲ್ಲಿ ಸಾವಿರಾರು ಕಾವುಗಳಲ್ಲಿ ತಿರಯಾಟ್ಟಮ್ ನಡೆಸುತ್ತಾರೆ. ಹೆಚ್ಚಾಗಿ ದೇವಿಕ್ಷೇತ್ರ ಹಾಗೂ ಶಿವಕ್ಷೇತ್ರಗಳ ಉತ್ಸವಗಳಿಗೆ ಸಂಬಂಧಿಸಿ ಪೆರುಮಣ್ಣಾನ್, ವಣ್ಣಾನ್ ಸಮುದಾಯದವರು ಕಟ್ಟಿಯಾಡುವ ಪರಂಪರಾಗತವಾದ ಒಂದು ಕ್ಷೇತ್ರಕಲೆ. ಕ್ಷೇತ್ರದ ಮೂರ್ತಿಗೆ ಅನುಸರಿಸಿ ಹೊರ ನರ್ತನ ಹಾಗೂ ಒಳ ನರ್ತನವಿದೆ. ಅಂದರೆ ಮೂರ್ತಿ ರೌದ್ರ ರೂಪವಾದಲ್ಲಿ ಒಳ ನರ್ತನ ಹಾಗೂ ಶಾಂತ ರೂಪವಾದಲ್ಲಿ ಹೊರ ನರ್ತನವು ಕಂಡುಬರುತ್ತದೆ.
ವಲ್ಲುವನಾಡ್ ಗ್ರಾಮಗಳಲ್ಲಿ ಹಾಗೂ ಸಮೀಪ ಪ್ರದೇಶಗಳಲ್ಲಿ ಕುಂಭ ಹಾಗೂ ಮೀನ ಮಾಸಗಳಲ್ಲಿ ತಿರ ಕಂಡುಬರುತ್ತದೆ. ಪಾಲಕ್ಕಾಡ್ ಭಾಗಗಳಲ್ಲಿ ಕಿಳಕ್ ( ಪೂರ್ವ) ಹಾಗೂ ಮಲಪ್ಪುರ ಭಾಗಗಳಲ್ಲಿ ಪಡಿಂಜಾರ್ (ಪಶ್ಚಿಮ) ಎಂಬ ಎರಡು ಶೈಲಿಗಳಲ್ಲಿ ಇದು ನಡೆದುಬರುತ್ತದೆ.
ತಿರ, ಭದ್ರಕಾಳಿ ಹಾಗೂ ಭೂತಗಣಗಳನ್ನು ಪ್ರತಿನಿಧಿಕರಿಸುತ್ತದೆ. ತಿರ ನರ್ತಿಸುವ ಮೊದಲು ವೃತ ಹಿಡಿಯುವ ಸಂಪ್ರದಾಯವು ಇದೆ. ಇವರು ತಿರಯಾಟ್ಟಮ್ ನರ್ತಿಸುವಾಗ ಕಣ್ಮಸಿಯನ್ನು ಕಣ್ಣಿಗೆ ಹಾಕಿ, ಅರಶಿಣ ಮತ್ತು ಚಂದನ ಮಿಶ್ರಣಮಾಡಿ ಮೈ ಗೆ ಹಚ್ಚುತ್ತಾರೆ. ತಿರ ಎರಡು ಸಂಕಲ್ಪಗಳಲ್ಲಿ ಮಾಡುತ್ತಾರೆ ಶಿವ ಸಂಕಲ್ಪ ಹಾಗೂ ದೇವಿ ಸಂಕಲ್ಪ. ತಿರ, ಶಿವ ಸಂಕಲ್ಪವಾದಲ್ಲಿ ಕಾಲಿಗೆ ಚಿಲಂಬ್(ಗೆಜ್ಜೆ) ಹಾಗೂ ದೇವಿ ಸಂಕಲ್ಪವಾದಲ್ಲಿ ಸೊಂಟಕ್ಕೆ ಅರೆಮಣಿ ಮತ್ತು ಕಾಲಿಗೆ ಚಿಲಂಬ್ ನ್ನು ಧರಿಸುತ್ತಾರೆ. ಕೈಯಲ್ಲಿ ತಿರ(ಕಿರೀಟ)ವನ್ನು ಹಿಡಿದು ಕೊಂಡು ಡೋಲಿನ ತಾಳಕ್ಕೆ ಅನುಸರಿಸಿ ಕುಣಿಯುತ್ತಾರೆ. ಈ ಕಿರೀಟವು ಅರ್ಧ ವೃತ್ತಾಕೃತಿಯಲ್ಲಿ ಇರುತ್ತದೆ. ಕಾವೇಟ್ಟಮ್ ಆಚರಣೆಯು ತಿರ ಉತ್ಸವದ ವಿವರವನ್ನು ಗ್ರಾಮದವರಿಗೆ ತಿಳಿಸಲು ಕೋಲವನ್ನು ಕಟ್ಟಿ ಮನೆಮನೆಗೂ ಹೋಗಿ ನರ್ತಿಸುತ್ತಾರೆ. ಈ ನೃತ್ಯೋತ್ಸವದಿಂದ ಮನೆಯವರು ಅಕ್ಕಿ, ಭತ್ತ, ಹಣ, ವಸ್ತ್ರ ಮುಂತಾದವುಗಳನ್ನು ತಿರ ಕಟ್ಟುವವರಿಗೆ ನೀಡುವ ಸಂಪ್ರದಾಯವು ಇದೆ.