ವಿವಿಧ ಬೇಡಿಕೆ ಈಡೇರಿಕೆಗೆ ಎಡಿಸಿಗೆ ವಾಲ್ಮೀಕಿ ಸಮಾಜದ ಮನವಿ
ಕೊಪ್ಪಳ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಮನವಿ ಸಲ್ಲಿಸಿದರು.
ಜಿಲ್ಲೆಯ ಪರಿಶಿಷ್ಟ ಪಂಗಡ ಕಾಲೇಜು ವಿದ್ಯಾರ್ಥಿಗಳಿಗೆ ತಾಲ್ಲೂಕಿಗೆ ಒಂದರಂತೆ ವಸತಿ ನಿಲಯ ನಿರ್ಮಾಣ ಮಾಡಬೇಕು. ಕೊಪ್ಪಳ ನಗರದಲ್ಲಿ ನಾಲ್ಕು ಪರಿಶಿಷ್ಟ ಪಂಗಡದ ವಸತಿ ನಿಲಯಗಳನ್ನು ಅವಶ್ಯಕತೆ ಇದ್ದು, ಆದಷ್ಟು ಬೇಗ ನಿರ್ಮಿಸಬೇಕು. ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವೇತನವು ಎರಡ್ಮೂರು ವರ್ಷಗಳಿಂದ ವಿಳಂಬವಾಗುತ್ತಿದ್ದು, ಇದನ್ನು ಸರಿಪಡಿಸಿ, ಕ್ರಮಕೈಗೊಳ್ಳಬೇಕು. ಅಲ್ಲದೇ ಈಗಾಗಲೇ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯನ್ನು ಪ್ರತ್ಯೇಕಿಸಲಾಗಿದ್ದು, ಕೊಪ್ಪಳ ಮತ್ತು ಯಲಬುರ್ಗಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯನ್ನು ಘೋಷಣೆ ಮಾಡಬೇಕು ಎಂದು ಸಮಾಜದ ಮುಖಂಡರು ಆಗ್ರಹಿಸಿದರು.
ಮಹಾಸಭಾದ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ನಾಯಕ, ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಶ ದೊಣ್ಣಿ, ವಾಕ್ಮೀಕಿ ಗುರುಪೀಠದ ಧರ್ಮದರ್ಶಿ ರಾಮಣ್ಣ ಕಲ್ಲನವರ, ಯುವ ಘಟಕದ ಜಿಲ್ಲಾಧ್ಯಕ್ಷ ರವಿಕುಮಾರ ಗಿಣಗೇರಾ, ರುಕ್ಮಣ್ಣ ಶ್ಯಾವಿ, ಮಂಜುನಾಥ ಶ್ಯಾವಿ, ಹುಲುಗಪ್ಪ ನಾಯಕ ಇದ್ದರು.