ವಿಶ್ವವನ್ನೇ ಹೃದಯದಲ್ಲಿ ತುಂಬುವ ವಿಶಾಲ ದೃಷ್ಟಿ 'ವಿರಾಸತ್': ಹೆಗ್ಗಡೆ
ಮೂಡುಬಿದಿರೆ: ವಿಶ್ವವನ್ನೇ ಹೃದಯದಲ್ಲಿ ತುಂಬುವ ವಿಶಾಲ ದೃಷ್ಟಿಯನ್ನು 'ವಿರಾಸತ್' ಹಬ್ಬ ಹೊತ್ತು ತಂದಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಇಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಡಿ.10 ರಿಂದ ಡಿ. 15ರವರೆಗೆ ಆಯೋಜಿಸಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ '30ನೇ ವರ್ಷದ 'ಅಳ್ವಾಸ್ ವಿರಾಸತ್''ನ್ನು ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಮಂಗಳವಾರ ಸಂಜೆ ಉದ್ಘಾಟಿಸಿ ಮಾತನಾಡಿದರು.
ವಿರಾಸತ್ ಕೇವಲ ಮೂಡುಬಿದಿರೆಗೆ ಸೀಮಿತವಾಗದೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಕಾರ್ಯಕ್ರಮವಾಗಿದ್ದು, ಎರಡು ಜಿಲ್ಲೆಗಳ ಮನಸ್ಸನ್ನು ಒಟ್ಟುಗೂಡಿಸುವ ಕಾರ್ಯಕ್ರಮ ಇದಾಗಿದೆ. ಸಾಹಿತ್ಯ ಮತ್ತು ಸಂಸ್ಕೃತಿ ಜೊತೆಯಾಗಿ ಮೇಳೈಸುತ್ತಿರುವ ಈ ಕಾರ್ಯಕ್ರಮದಲ್ಲಿ ನಮ್ಮ ಸಾಂಸ್ಕೃತಿಕ ಸಂಪತ್ತು ಹೆಚ್ಚಾದಾಗ ಮನಸ್ಸು ಅರಳುತ್ತದೆ ಎಲ್ಲರಿಗೂ ಸಂತೋಷ ನೀಡುವಂತೆ ಕಾರ್ಯಕ್ರಮ ರೂಪಿಸುವ ವ್ಯಕ್ತಿತ್ವವೇ ಆಳ್ವ ಎಂದು ಬಣ್ಣಿಸಿದರು.
ಒಳ್ಳೆಯದನ್ನು ಒಪ್ಪಿಕೊಂಡು ಅಪ್ಪಿಕೊಳ್ಳಿ. ಆ ಹಾದಿಯಲ್ಲಿ ಸಮಾಜ, ದೇಶ ಬೆಳೆಯಬೇಕು. ಪ್ರತಿಯೊಬ್ನರೂ ಕೃಷಿಯನ್ನು ಪಗರೀತಿಸಬೇಕು. ನಾವು ಮಣ್ಣು, ಭೂಮಿ, ಪ್ರಕೃತಿಯನ್ನು ಪ್ರೀತಿಸಿದಾಗ ಕೃಷಿ ಅಭಿವೃದ್ಧಿಯಾಗುತ್ತದೆ. ಕೃಷಿ ಪ್ರತಿಯೊಬ್ಬರ ಹೃದಯವನ್ನು ಅರಳಿಸುತ್ತದೆ.ಆಳ್ವಾಸ್ ಕೃಷಿ ಮೇಳ ಕಂಡು ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿರುವ ಸ್ವಲ್ಪ ಜಾಗದಲ್ಲಿ ಸಣ್ಣ ಕೈತೋಟ ಮಾಡಿ ಎಂದು ಸಲಹೆ ನೀಡಿದರು.
ಡಾ. ಮೋಹನ್ ಆಳ್ವ ಅವರು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹೃದಯ ವೈಶಲ್ಯತೆಯನ್ನು ಉಣಬಡಿಸುವುದರೊಂದಿಗೆ, ಪಂಚೇಂದ್ರಿಯಗಳಿಗೆ ಹಿತ ನೀಡುತ್ತಿದ್ದಾರೆ. ಇದರೊಂದಿಗೆ ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳನ್ಮು ನಾವು ನೋಡಿ ಆನಂದಿಸುವುದರೊಂದಿಗೆ ಇನ್ನೂ ಹೆಚ್ವಿನ ಜನ ನೋಡಿ ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಎಂ.ಜಿ.ಆರ್. ಗ್ರೂಪ್ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಮಾತನಾಡಿದರು.