For the best experience, open
https://m.samyuktakarnataka.in
on your mobile browser.

ವಿಶ್ವ ಹಿಂದೂ ಪರಿಷತ್ ಷಷ್ಠಿಪೂರ್ತಿ ಸಂಭ್ರಮ

04:01 PM Aug 28, 2024 IST | Samyukta Karnataka
ವಿಶ್ವ ಹಿಂದೂ ಪರಿಷತ್ ಷಷ್ಠಿಪೂರ್ತಿ ಸಂಭ್ರಮ

ಹಿಂದೂ ಸಮಾವೇಶ, ಸಮ್ಮೇಳನ ಸಹಿತ ವಿವಿಧ ಕಾರ್ಯಕ್ರಮಗಳ ಆಯೋಜನೆ

ಮಂಗಳೂರು: ಭಾರತೀಯ ಧರ್ಮ, ಸಂಸ್ಕೃತಿ ಹಿಂದೂ ಜೀವನ ಮೌಲ್ಯಗಳು, ನಂಬಿಕೆ ಮತ್ತು ಸ್ವಾಭಿಮಾನವನ್ನು
ರಕ್ಷಿಸಲು ಪ್ರಾರಂಭಗೊಂಡ ವಿಶ್ವದ ಅತೀ ದೊಡ್ಡ ಸಂಘಟನೆ ವಿಶ್ವ ಹಿಂದೂ ಪರಿಷತ್. 1964 ಆಗಸ್ಟ್ 29ರಂದು ಮುಂಬೈಯ ಸಾಂದೀಪಿನಿ ಆಶ್ರಮದಲ್ಲಿ ಪ್ರಾರಂಭಗೊಂಡ ವಿಶ್ವ ಹಿಂದೂ ಪರಿಷತ್ತಿಗೆ ಈ ವರ್ಷ ಷಷ್ಠಿಪೂರ್ತಿ ಸಂಭ್ರಮ. ಕಳೆದ 60 ವರ್ಷಗಳಲ್ಲಿ ಜಗತ್ತಿನ ಹಿಂದುಗಳನ್ನು ಸಂಘಟಿಸುವ ಕಾರ್ಯದೊಂದಿಗೆ ಹಿಂದೂ ಧರ್ಮದ ಆಚರಣೆ, ಪ್ರಚಾರ, ರಕ್ಷಣೆಯ ಉದ್ದೇಶವನ್ನು ಇಟ್ಟುಕೊಂಡು, ಕೆಲಸಕಾರ್ಯಗಳನ್ನು ಮಾಡುತ್ತ ಬಂದಿದೆ“ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದರು.
ಭಾರತ ಮಾತ್ರವಲ್ಲದೆ ಅಮೇರಿಕ, ಕೆನಡಾ, ಆಫ್ರಿಕಾ, ಇಂಗ್ಲೆಂಡ್, ಹಂಗೇರಿ, ಜರ್ಮನಿ, ಫ್ರಾನ್ಸ್ ಕಿನ್ಯ, ಫಿಜಿ, ಶ್ರೀಲಂಕಾ, ಇಂಡೋನೇಷ್ಯಾ, ಮಾರಿಷಸ್, ಥಾಯ್ಲೆಾಂಡ್, ಮಲೇಷಿಯಾ, ಜಪಾನ್ ಸೇರಿದಂತೆ 50 ಕ್ಕೂ ಹೆಚ್ಚು ದೇಶಗಳಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕಾರ್ಯ ನಡೆಯುತ್ತಿದೆ. ಮೊದಲನೆಯ ರಾಷ್ಟ್ರೀಯ ಅಧ್ಯಕ್ಷರಾದ ಮೈಸೂರಿನ ಮಹಾರಾಜರಾದ ಜಯಚಾಮರಾಜ ಒಡೆಯರ್ ಇವರ ನೇತೃತ್ವದೊಂದಿಗೆ ದೇಶದಲ್ಲಿ ವಿವಿಧ ಮತಪಂಥಗಳ ಪೂಜ್ಯ ಸಾಧು ಸಂತರು, ಧರ್ಮಾಚಾರ್ಯರು, ಧಾರ್ಮಿಕ ರಾಷ್ಟ್ರೀಯ ಚಿಂತಕರು, ವಿದ್ವಾಂಸರು ಒಳಗೊಂಡ ಮಾರ್ಗದರ್ಶಕ ಮಂಡಳಿಯ ಮಾರ್ಗದರ್ಶನದ ಮೂಲಕ ಪ್ರಾರಂಭಗೊಂಡ ವಿಶ್ವ ಹಿಂದೂ ಪರಿಷದ್ ಹಲವಾರು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಅದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ, ಇದೀಗ ನಮ್ಮ ದೇಶದ ಸುಮಾರು 90 ಸಾವಿರಕ್ಕೂ ಹೆಚ್ಚು ಸ್ಥಾನಗಳಲ್ಲಿ ವಿಶ್ವ ಹಿಂದೂ ಪರಿಷತ್ ಸಮಿತಿಗಳ ಮೂಲಕ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದೆ. ಗೋವುಗಳ ರಕ್ಷಣೆಯ ಜೊತೆಗೆ ಪಾಲನೆಯನ್ನು ಮಾಡಿಕೊಂಡು ಬರುತ್ತಿದೆ. ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಆಂದೋಲನ, ಅಮರನಾಥ, ರಾಮಸೇತು, ತಿರುಪತಿ ಉಳಿಸಿ ಆಂದೋಲನ, ಕರ್ನಾಟಕದ ಪವಿತ್ರ ಕ್ಷೇತ್ರ ದತ್ತಪೀಠದ ಮುಕ್ತಿಗೋಸ್ಕರ ಹೋರಾಟವನ್ನು ಕೈಗೆತ್ತಿಕೊಂಡು ಶ್ರದ್ಧಾಕೇಂದ್ರಗಳನ್ನು ಉಳಿಸುವುದರಲ್ಲಿ ಯಶಸ್ವಿಯಾಗಿದೆ. ಬಜರಂಗದಳ, ದುರ್ಗಾವಾಹಿನಿ ಮುಖಾಂತರ ಯುವಕ ಯುವತಿಯರಲ್ಲಿ ರಾಷ್ಟ್ರ ಭಕ್ತಿಯನ್ನು ಮೂಡಿಸಿ, ಅವರನ್ನು ರಾಷ್ಟ್ರರಕ್ಷಣೆಯ ಕಾರ್ಯದಲ್ಲಿ ಕೈಜೋಡಿಸುವಂತೆ ಮಾಡಿದೆ. ಮಾತೃಶಕ್ತಿ ಮೂಲಕ ಮಹಿಳಾಕಾರ್ಯ, ಬಾಲಸಂಸ್ಕಾರ, ಸತ್ಸಂಗಗಳ ಮೂಲಕ ಸಂಸ್ಕಾರ ಕೇಂದ್ರಗಳು ಪ್ರಾರಂಭಗೊಂಡಿದೆ“ ಎಂದವರು ಹೇಳಿದರು.
ಬಳಿಕ ಮಾತಾಡಿದ ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್ ಅವರು, ”ಷಷ್ಠಿಪೂರ್ತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಗಸ್ಟ್ 25ರಿಂದ ಸೆಪ್ಟೆಂಬರ್ 1ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ 21 ಪ್ರಖಂಡಗಳಲ್ಲಿ ಹಿಂದೂ ಸಮಾವೇಶ, ಸಮ್ಮೇಳನ, ಶೋಭಾಯಾತ್ರೆ ಮೆರವಣಿಗೆ, ಕ್ರೀಡಾಕೂಟಗಳು, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ ಬಾಂಧವರು ಪಾಲ್ಗೊಳ್ಳುವ ನಿರೀಕ್ಷೆಯಿದೆ“ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಹೆಚ್.ಕೆ.ಪುರುಷೋತ್ತಮ್, ಜಿಲ್ಲಾ ಉಪಾಧ್ಯಕ್ಷ ಮನೋಹರ್ ಸುವರ್ಣ, ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ, ಪುನೀತ್ ಅತ್ತಾವರ, ಭುಜಂಗ ಕುಲಾಲ್, ಗುರುಪ್ರಸಾದ್ ಉಳ್ಳಾಲ್, ರವಿ ಕಡೆಗೋಳಿ ಮತ್ತಿತರರು ಉಪಸ್ಥಿತರಿದ್ದರು.

Tags :