For the best experience, open
https://m.samyuktakarnataka.in
on your mobile browser.

ಶಸ್ತ್ರ ಚಿಕಿತ್ಸೆ ಮೂಲಕ ಹೊರಬಂತು 98 ಸೆಮೀ ಕಬ್ಬಿಣದ ರಾಡ್

09:52 PM Oct 03, 2024 IST | Samyukta Karnataka
ಶಸ್ತ್ರ ಚಿಕಿತ್ಸೆ ಮೂಲಕ ಹೊರಬಂತು 98 ಸೆಮೀ ಕಬ್ಬಿಣದ ರಾಡ್

ಹುಬ್ಬಳ್ಳಿ: ರಾಣೆಬೆನ್ನೂರು ಹೂಲಿಹಳ್ಳಿ ಬಳಿ ಅ. ೨ರಂದು ಬೆಳಗಿನ ಜಾವ ೪ಕ್ಕೆ ಸಂಭವಿಸಿದ ಅಪಘಾತದಲ್ಲಿ ಲಾರಿ ಕ್ಲೀನರ್ ಎದೆ ಸೀಳಿದ್ದ ೯೮ ಸೆಮೀ ಕಬ್ಬಿಣದ ರಾಡ್‌ನ್ನು ಕೆಎಂಸಿಆರ್‌ಐ ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಹೊರೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ಅ. ೨ರಂದು ಬೆಳಗಿನ ಜಾವ ೪ಕ್ಕೆ ಲಾರಿ ಮುಗುಚಿ ಬಿದ್ದು ಶಿರಸಿ ಜವಳಮಕ್ಕಿಯ ದಯಾನಂದ ಶಂಕರಬಡಗಿ(೨೭) ಅವರ ಎದೆ ಸೀಳಿ ಸರ್ವಿಸ್ ರಸ್ತೆಯ ಕಬ್ಬಿಣದ ಪೈಪ್ ಬೆನ್ನಿನಿಂದ ಹೊರ ಬಂದಿತ್ತು ಎಂದರು.
ತಕ್ಷಣವೇ ಗಾಯಾಳು ದಾವಣಗೆರೆ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ತಜ್ಞ ವೈದ್ಯರಿಲ್ಲ ಎಂದು ಕೆಎಂಸಿಆರ್‌ಐನ ತುರ್ತು ಚಿಕಿತ್ಸಾ ಘಟಕಕ್ಕೆ ಕರೆ ತರಲಾಗಿತ್ತು. ಘಟಕದ ಮುಖ್ಯಸ್ಥ ಡಾ. ನಾಗರಾಜ ಚಾಂದಿ ಅವರು ಅಪಾಯವನ್ನಿರತು ತುರ್ತು ಚಿಕಿತ್ಸೆ ನೀಡಿ ಹಿರಿಯ ವೈದ್ಯರ ಗಮನಕ್ಕೆ ತಂದರು. ಶೀಘ್ರವೇ ಶಸ್ತ್ರ ಚಿಕಿತ್ಸೆ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. ಬಳಿಕ ವಿಕಿರಣಶಾಸ್ತ್ರ ವಿಭಾಗದಲ್ಲಿ ಅಲ್ಟ್ರಾಸೌಂಡ್ ತಪಾಸಣೆ ನಡೆಸಿದ ಡಾ. ವೀಣಾ ಮರಡಿ ಅವರು ಹೃದಯ ಹಾಗೂ ಪ್ರಮುಖ ರಕ್ತನಾಗಳಿಗೆ ಯಾವುದೆ ಹಾನಿಯಾಗಿಲ್ಲವೆಂದು ಮಾಹಿತಿ ನೀಡುತ್ತಾರೆ. ಇದರ ಆಧಾರದಲ್ಲಿ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ರಮೇಶ ಹೊಸಮನಿ, ವಿವಿಧ ವಿಭಾಗದ ಡಾ. ವಿಜಯ ಕಾಮತ್, ಡಾ. ವಿನಾಯಕ ಬ್ಯಾಟೆಪ್ಪನವರ, ಡಾ. ವಸಂತ ತೆಗ್ಗಿನಮನಿ, ಹೃದ್ರೋಗ ಶಸ್ತ್ರ ಚಿಕಿತ್ಸಕ ಡಾ. ಕೋಬಣ್ಣ ಕಟ್ಟಿಮನಿ, ಡಾ. ಧರ್ಮೇಶ ಲದ್ದಡ ನೇತೃತ್ವದ ವೈದ್ಯಕೀಯ ತಂಡವು ಮಧ್ಯಾಹ್ನ ೨ ರಿಂದ ೪.೩೦ ರವರೆಗೆ ಶಸ್ತ್ರ ಚಿಕಿತ್ಸೆ ಪ್ರಕ್ರಿಯೆ ನಡೆಸಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಡಾ. ರಮೇಶ ಹೊಸಮನಿ ಮಾತನಾಡಿ, ಗಾಯಾಳುವಿಗೆ ಪೈಪ್ ಅಡ್ಡಿಯಾದ ಹಿನ್ನೆಲೆಯಲ್ಲಿ ಸಿಸಿ ಸ್ಕ್ಯಾನ್ ಮಾಡಲಾಗಲಿಲ್ಲ. ಎದೆ ಮೂಳೆ ಕೆಲವೆಡೆ ಮುರಿದಿತ್ತು. ಶ್ವಾಸಕೋಶ ಹಾನಿಯಾಗಿತ್ತು. ಎದೆ ಹಿಂಭಾಗದಿಂದ ಹೊರಬಂದಿರುವ ಪೈಪ್‌ನೊಂದಿಗೆ ಸಣ್ಣ ಮೊಳೆಯೂ ಇತ್ತು. ಹೃದಯದ ಸನಿಹವೇ ಪೈಪ್ ಹಾದು ಹೋಗಿತ್ತು. ಇದೆಲ್ಲವನ್ನೂ ಬಹು ಎಚ್ಚರಿಕೆಯಿಂದ ನಿಭಾಯಿಸಿ ೯೮ ಸೆಂ.ಮೀ. ಪೈಪ್ ಎದೆಯಿಂದ ಹೊರ ತೆಗೆಯಲಾಗಿದೆ. ಗಾಯಾಳು ದಯಾನಂದ ಈಗ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೆರಡು ದಿನ ತೀವ್ರ ನಿಗಾ ಘಟಕದಲ್ಲಿ ಇರಲಿದ್ದಾರೆ. ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ತದನಂತರ ಡಿಸ್ಚಾರ್ಜ್ ಮಾಡಲಾಗುವುದು ಎಂದರು.
ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ ಮಾತನಾಡಿ, ಆರಂಭದಲ್ಲಿ ನೋಡಿದ ವ್ಯಕ್ತಿಗೂ ಈಗ ನೋಡುವುದಕ್ಕೂ ವ್ಯತ್ಯಾಸವಾಗಿದೆ. ಗಾಯಾಳುವಿಗೆ ಶುಲ್ಕ ರಹಿತ ಚಿಕಿತ್ಸೆ ನೀಡಲಾಗಿದೆ. ೭ ಬಾಟಲ್ ರಕ್ತ ನೀಡಲಾಗಿದೆ. ರಜೆ ದಿನವೂ ನಮ್ಮ ವೈದ್ಯಕೀಯ ತಂಡ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿದೆ. ಎಂದು ಮಾಹಿತಿ ನೀಡಿದರು.
ಪ್ರಾಚಾರ್ಯ ಡಾ. ಗುರುಶಾಂತಪ್ಪ ಯಲಗಚ್ಚಿನ, ಆರ್‌ಎಂಒ ಡಾ. ಸಿದ್ದೇಶ್ವರ ಕಟಕೋಳ, ಡಾ. ರಾಜಶೇಖರ ದ್ಯಾಬೇರಿ, ಡಾ. ಮಾಧುರಿ ಕುರ್ಡಿ ಇದ್ದರು.