ಶೇ. ೪೮ರಷ್ಟು ಅಭ್ಯರ್ಥಿಗಳು ಗೈರು
ಬೆಂಗಳೂರು: ರಾಜ್ಯಾದ್ಯಂತ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ೧೫೦ ಪಿಡಿಒ ಹುದ್ದೆಗಳ ಲಿಖಿತ ಪರೀಕ್ಷೆಗೆ ಶೇ.೫೨.೫ ರಷ್ಟು ಅಭ್ಯಥಿಗಳು ಭಾನುವಾರ ಪರೀಕ್ಷೆ ಬರೆದಿದ್ದಾರೆ.
ವಸ್ತçಸಂಹಿತೆ ನಿಯಮ ಉಲ್ಲಂಘಿಸಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು. ಉದ್ದನೆಯ ತೋಳಿನ ಬಟ್ಟೆಗಳನ್ನು ಧರಿಸಿಕೊಂಡು ಬಂದ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ನಿರಾಕರಿಸಲಾಗಿತ್ತು. ಇದರಿಂದ ಉದ್ದನೆಯ ತೋಳಿನ ಬಟ್ಟೆಗಳನ್ನು ಕತ್ತರಿಸಿ ನಂತರ ಪರೀಕ್ಷೆಗೆ ಅನುಮತಿ ನೀಡಲಾಯಿತು. ಒಂದು ಇಂಚು ಉದ್ದ ಇರುವ ಬಟ್ಟೆಗಳನ್ನು ಪರೀಕ್ಷಾ ಮೇಲ್ವಿಚಾರಕರು ಕತ್ತರಿಸಿರುವ ಪರಿಣಾಮ ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಜಿಲ್ಲೆಗಳ ಹಾಗೂ ತಾಲೂಕುಗಳಲ್ಲಿ ಸುಮಾರು ೧,೦೩೫ ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ ೧೦ ರಿಂದ ೧೨ ರವರೆಗೆ ಪತ್ರಿಕೆ-೧ ಹಾಗೂ ಮಧ್ಯಾಹ್ನ ೨ ರಿಂದ ೪ ರವರೆಗೆ ನಡೆದ ಪತ್ರಿಕೆ-೨ರಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ. ಹೈದರಾಬಾದ್ ಮತ್ತು ಮೂಲ ವೃಂದದ ಹುದ್ದೆಗಳಿಗೆ ೩.೮೬ ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆದರೆ, ಶೇ.೪೭ ರಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ ಎಂದು ಕೆಪಿಎಸ್‌ಸಿ ತಿಳಿಸಿದೆ.
ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ನಾಲ್ಕು ವಿಭಾಗದ ೩೦ ಜಿಲ್ಲೆಗಳಲ್ಲಿ ಪರೀಕ್ಷೆ ನಡೆಸಲಾಗಿದೆ. ಡಿ.೭ ರಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆದಿದ್ದು, ೨.೯೦ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.