ಶ್ರಾವಣ ಮತ್ತು ತಿಗಡೇಸಿ ಬೆಕ್ಕು….
ಶ್ರಾವಣ ಮಾಸವನ್ನು ಭಯಂಕರ ಆಚರಣೆ ಮಾಡುವವರ ಪೈಕಿ ಮೊದಲ ಸಾಲಿಗೆ ನಿಲ್ಲುವ ವ್ಯಕ್ತಿ ಅಂದರೆ ತಿಗಡೇಸಿ. ಶ್ರಾವಣ ಮುಗಿಯುವವರೆಗೆ ದಿನಾಲೂ ನಾಲ್ಕೈದು ಬಾರಿ ಸ್ನಾನ ಮಾಡಿ ಪೂಜೆ ಮಾಡುತ್ತಾನೆ. ಸಂಜೆ ಆಯಿತು ಅಂದರೆ ಆತ ಬಸವಣ್ಣದೇವರ ಗುಡಿಯಲ್ಲಿ ಹೇಳುವ ದೇವಿಪುರಾಣಕ್ಕೆ ಅಕ್ಕಪಕ್ಕದೂರಿನ ಜನರು ಹಿಂಡುಗಟ್ಟಲೇ ಬರುತ್ತಾರೆ. ಊರಿನ ಜನರು ಶ್ರಾವಣಮಾಸಕ್ಕೆ ದೇವರೇ ತಿಗಡೇಸಿಯನ್ನು ನಮ್ಮೂರಿಗೆ ಕಳಿಸಿದ್ದಾನೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಎಲ್ಲರೂ ಹೀಗೆ ಗೌರವದಿಂದ ಕಾಣುತ್ತಿದ್ದರೂ ತಿಗಡೇಸಿ ಹೆಂಡತಿ ಮತ್ತು ಮಕ್ಕಳು ಮಾತ್ರ ಶ್ರಾವಣಮಾಸದಲ್ಲಿ ತಿಗಡೇಸಿ ಮಾಡುವ ಕ್ರಮಗಳಿಂದ ಬೇಸತ್ತು ಹೋಗಿದ್ದರು. ಕೊರೆಯುವ ಚಳಿಯಲ್ಲಿ ಎಲ್ಲ ಮಕ್ಕಳನ್ನು ಸಾಲಾಗಿ ನಿಲ್ಲಿಸುತ್ತಿದ್ದ. ಅವರಿಗೆ ಮಂತ್ರ ಹೇಳಿಸುತ್ತಿದ್ದ ತಲೆಗೆ ಕೊಬ್ಬರಿ ಎಣ್ಣೆ ಹಚ್ಚಿ ತಣ್ಣೀರಿನಿಂದ ಸ್ನಾನ ಮಾಡಿ ಗಾಳಿಯಿಂದಲೇ ಮೈ ಒಣಗಿಸುತ್ತಿದ್ದ. ಹೆಂಡತಿ ಎಷ್ಟು ಹೇಳಿದರೂ ತಿಗಡೇಸಿ ಕೇಳುತ್ತಿರಲಿಲ್ಲ. ನಂತರದಲ್ಲಿ ಮನೆಯಲ್ಲಿದ್ದ ಹಸುಗಳ ಮುಖಕ್ಕೆ ತಣ್ಣೀರು ಹಾಕಿ ಹಣೆಗೆ ಕುಂಕುಮ ಇರಿಸಿ ಅವುಗಳನ್ನು ಪೂಜಿಸುತ್ತಿದ್ದ. ಎಲ್ಲ ಮಕ್ಕಳನ್ನು ಚಳಿಯಲ್ಲಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಬರುತ್ತಿದ್ದ. ಈ ವಿಷಯದ ಸಲುವಾಗಿ ಜಗಳವಾಗಿ ಶ್ರಾವಣಮಾಸದಲ್ಲಿ ಹೆಂಡತಿಯನ್ನು ಬಡಿದಿದ್ದ. ಇಂತಹ ತಿಗಡೇಸಿ ಮನೆಯಲ್ಲಿ ಸಾಕಿದ ಬೆಕ್ಕು ಇತ್ತು. ಮಹಾನ್ ಶ್ರಾವಣ ಮಾಸದಲ್ಲಿ ಎಲ್ಲರೂ ಪೂಜೆ ಪುನಸ್ಕಾರ ಅನ್ನುವಾಗ ಈ ಬೆಕ್ಕು ಹಾಗೆಯೇ ತಿರುಗುತ್ತಿದೆ ಇದಕ್ಕೆ ಸ್ನಾನ ಮಾಡಿಸಬೇಕು ಎಂದು ದಿನಾಲೂ ಅಂದುಕೊಳ್ಳುತ್ತಿದ್ದ. ಆದರೆ ಆಗುತ್ತಿರಲಿಲ್ಲ. ಛೆ..ಛೆ… ಹೀಗಾಗಬಾರದಲ್ಲ ಎಂದು ಅಂದುಕೊಂಡು ಒಂದು ದಿನ ಚಳಿಯಲಿ ಮುಂಜಾನೆ ಮಲಗಿದ ಬೆಕ್ಕಿನ ಮೇಲೆ ಕೈ ಆಡಿಸಿ ಅದನ್ನು ಎತ್ತಿಕೊಂಡ. ಮೆಲ್ಲಗೇ ಅದಕ್ಕೆಲ್ಲ ಕೊಬ್ಬರಿ ಎಣ್ಣಿ ಸವರಿದ. ಮನೆಯ ಅಂಗಳದಲ್ಲಿ ಮೊದಲೇ ನಳ ಚಾಲೂ ಮಾಡಿ ಬಂದಿದ್ದ. ಬೆಕ್ಕು ಎತ್ತಿಕೊಂಡು ಬಂದವನೇ ಅದನ್ನು ನೆಲದ ಕೆಳಗೆ ಹಿಡಿದು ೫೦೧ ಸೋಪು ಹಚ್ಚಿ ಗಸಗಸ ತಿಕ್ಕಿದ. ಅದು ಕುಂಯ್ಯೋ…ರ್ರೋ ಎಂದು ಒದರತೊಡಗಿತು. ಈ ಧ್ವನಿಗೆ ಎಚ್ಚೆತ್ತುಕೊಂಡ ಪಕ್ಕದ ಮನೆ ಡಿವಿರಾಚಾರಿ ಏನೋ ಅದು ಅಪದ್ಧ ಎಂದು ಕೂಗಿದ. ಅಯ್ಯೋ ಸ್ವಾಮಿ ಶ್ರಾವಣ ಅಲ್ಲವೇ… ನಾವು ಭಯಂಕರ ಶುಭ್ರ.. ಅದಕ್ಕಾಗಿ ಬೆಕ್ಕಿಗೆ ಸ್ನಾನ ಮಾಡಿಸುತ್ತಿದ್ದೇನೆ ಅಂದ. ಅಯ್ಯೋ ನೋಡು ಬೆಕ್ಕಿನ ಗುಂಟ ನೀರು ಇಳಿಯುತ್ತಿವೆ ಎಂದು ಹೇಳಿದಾಗ.. ಅದಕ್ಕೇನು ಹಿಂಡುತ್ತೇನೆ ತಡೀರಿ ಎಂದು ಬೆಕ್ಕನ್ನು ನುರಿಯಾಗಿ ಹಿಂಡಿದ. ಮರುಕ್ಷಣವೇ ಬೆಕ್ಕು ಒದರುವುದನ್ನು ನಿಲ್ಲಿಸಿ… ಶಿವನಪಾದ ಸೇರಿತು. ಶ್ರಾವಣ ಮಾಸದಿಂದ ತಿಗಡೇಸಿಗೆ ಬಹಿಷ್ಕಾರ ಹಾಕಲಾಯಿತು.