ಶ್ರೀ ಕೃಷ್ಣ ಜನ್ಮಾಷ್ಟಮಿ ಸಡಗರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಸಡಗರ. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮನೆ ಮನೆಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ದೇವರ ಮನೆಗಳನ್ನು ಹೂವಿನಿಂದ ಅಲಂಕರಿಸಿ ಮತ್ತು ಕೊಟ್ಟಿಗೆ, ಮೂಡೆ, ಪಾಯಸಗಳನ್ನು ತಯಾರಿಸಿ ಶ್ರೀಕೃಷ್ಣನಿಗೆ ನೈವೇದ್ಯ ಅರ್ಪಿಸಿ, ಎಲ್ಲಾ ಕಷ್ಟ ಕಳೆದು ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಲಾಗುತ್ತಿದೆ. ತಾಯಂದಿರು ಮಕ್ಕಳಿಗೆ ಶ್ರೀಕೃಷ್ಣನ ವೇಷ ತೊಡಿಸಿ ಸಂತಸಪಡುತ್ತಿದ್ದಾರೆ.
ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಶ್ರೀ ಕೃಷ್ಣನ ಆರಾಧನೆ, ಭಜನೆ ನಡೆಯುತ್ತಿದೆ. ಭಕ್ತರು ದಿನವಿಡಿ ಉಪವಾಸವಿದ್ದು ರಾತ್ರಿ ೧೨ ಗಂಟೆಗೆ ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರದಾನದ ಬಳಿಕ ಆಹಾರ ಸೇವನೆ. ಅಲ್ಲಲ್ಲಿ ಹುಲಿವೇಷಗಳು ಜನ್ಮಾಷ್ಟಮಿಯ ಸಂಭ್ರಮವನ್ನು ಹೆಚ್ಚಿಸಿದೆ.
ಕದ್ರಿ ದೇಗುಲದಲ್ಲಿ ಕೃಷ್ಣ ವೇಷ ಸ್ಪರ್ಧೆ: ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಪ್ರಯತ್ನವಾಗಿ ಮತ್ತು ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಸದುದ್ದೇಶದಿಂದ ಕಳೆದ ನಾಲ್ಕು ದಶಕಗಳಿಂದ (೪೨ವರ್ಷ) ಕಲ್ಕೂರ ಪ್ರತಿಷ್ಠಾನವು ನಡೆಸಿಕೊಂಡು ಬಂದಿರುವ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವದಲ್ಲಿ"ಶ್ರೀ ಕೃಷ್ಣ ವೇಷ ಸ್ಪರ್ಧೆ"ಯನ್ನು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ. ಇಂದು ಬೆಳಗ್ಗೆ ೯ ರಿಂದ ಶ್ರೀ ಕೃಷ್ಣ ವರ್ಣ ವೈಭವ, ಮಧ್ಯಾಹ್ನ ೧೨ ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ೧ ಗಂಟೆಗೆ ಸರಿಯಾಗಿ ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ವೇದಿಕೆಯಲ್ಲಿ ನಡೆಯುತ್ತಿದೆ.
ರಾತ್ರಿ ೧೨ ರ ತನಕ ವಿವಿಧ ಸ್ಪರ್ಧೆಗಳನ್ನು ಒಟ್ಟು ೪೨ ವಿಭಾಗಗಳಲ್ಲಿ, ೯ ವೇದಿಕೆಗಳಲ್ಲಿ ಏಕಕಾಲದಲ್ಲಿ ಆಯೋಜಿಸಲಾಗಿದೆ ಮತ್ತು ಮಧ್ಯಾಹ್ನ ೧೨ ರಿಂದ ರಾತ್ರಿ ೧೨ರ ವರೆಗೆ ವಿವಿಧ ಸಾಹಿತ್ಯಕ - ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ರಾಷ್ಟ್ರೀಯ ಮಕ್ಕಳ ಉತ್ಸವದಲ್ಲಿ ನಡೆಸಲಾಗುತ್ತಿದೆ. ರಾತ್ರಿ ೧೨ ಗಂಟೆಗೆ ಅರ್ಘ್ಯ ಪ್ರದಾನ - ಪ್ರಸಾದ ವಿತರಣೆಯೊಂದಿಗೆ ಸಂಪನ್ನವಾಗಲಿದೆ. ಇಂದು ಮುಂಜಾನೆ ಪಂಡರಪುರ ಕೃಷ್ಣ ನೃತ್ಯ, ಯಕ್ಷ ಕೃಷ್ಣ ನೃತ್ಯ ಸಂಭ್ರಮದಿಂದ ನಡೆದವು.
ಮೊಸರು ಕುಡಿಕೆ…
ಇಂದು ಜಿಲ್ಲೆಯಾದ್ಯಂತ ಮೊಸರು ಕುಡಿಕೆ ಸಂಭ್ರಮ. ಜಿಲ್ಲೆಯ ಅಟ್ಟಳಿಗೆ ನಿರ್ಮಿಸಿ ಮಾನವ ಪಿರಾಮಿಡ್ ಮೂಲಕ ಮಡಿಕೆ ಹೊಡೆಯುವ ಕ್ಷಣವನ್ನು ವೀಕ್ಷಿಸಲು ಸಾವಿರಾರು ಮಂದಿ ಸೇರುತ್ತಾರೆ. ಈ ಸಂದರ್ಭದಲ್ಲಿ ವರ್ಣರಂಜಿತ ಮೆರವಣಿಗೆ, ರಸಮಂಜರಿ, ಜನಮನ ಸೂರೆಗೊಳ್ಳುತ್ತದೆ. ಹುಲಿ ವೇಷ, ವಿವಿಧ ಸ್ತಬ್ಧ ಚಿತ್ರಗಳು, ಕೊಂಬು, ಕಹಳೆ, ಗೊಂಬೆ ವೇಷಗಳು ಮೆರವಣಿಗೆಯಲ್ಲಿರುತ್ತದೆ.