ಸಂಕಟ, ಸಂಕಷ್ಟಗಳಿಗೆ ತುಡಿಯುವ ಮನಸ್ಸೆಲ್ಲಿದೆ?
ಬಿ.ಅರವಿಂದ
ಎಲ್ಲವೂ ರಾಜಕೀಯ. ಮೀಸಲಾತಿಯಲ್ಲೂ ರಾಜಕಾರಣ, ಗ್ಯಾರಂಟಿ ಘೋಷಣೆಯಲ್ಲೂ ರಾಜಕಾರಣ. ನಾವೆಲ್ಲ ತಲೆತಗ್ಗಿಸುವಂತಾದ ರೇಪ್‌ನಲ್ಲೂ ಇವರು ರಾಜಕಾರಣ ಬಿಡಲ್ಲ. ಎಲ್ಲರಿಗೂ ಮತಗಳೇ ಪ್ರಧಾನ. ಹೀಗಾದರೆ ಈ ಸಮಾಜ ಎಲ್ಲಿಗೆ ಹೋಗುತ್ತದೆ? ನಿತ್ಯ ಬೆಳಗಾದರೆ ಪೇಪರ್‌ನಲ್ಲಿ ರೇಪ್ ಮತ್ತಿತರ ಕ್ರೈಮ್ ಸುದ್ದಿಗಳನ್ನು ಓದುವ ದೌರ್ಭಾಗ್ಯ ನಮ್ಮದಾಗಿದೆ. ಅಪರಾಧಿಗಳಿಗೆ ಜೈಲಿನಲ್ಲಿ ಮನೆಗಿಂತ ಮಿಗಿಲಾದ ಆತಿಥ್ಯ ಸಿಗುತ್ತಿದೆ. ಎತ್ತ ಹೊರಟಿದ್ದೇವೆ ನಾವು? ಎಲ್ಲರಿಗೂ ರಾಜಕೀಯವೇ ಮುಖ್ಯವಾಗುತ್ತಿದೆ. ಜನರ ನಿತ್ಯ ಸಂಕಷ್ಟ-ಸಂಕಟಗಳಿಗೆ ಮಿಡಿಯುವ ಮನಸ್ಸು ಯಾರಲ್ಲೂ ಉಳಿದಿಲ್ಲ…
ಇದು ಖ್ಯಾತ ಕಾದಂಬರಿಕಾರ, ಸರಸ್ವತಿ ಸಮ್ಮಾನ್' ಪುರಸ್ಕೃತ ಎಸ್.ಎಲ್.ಭೈರಪ್ಪ ಅವರ ಮನದಾಳದ ನೋವು. ಸಾಹಿತ್ಯ ಕಾರ್ಯಕ್ರಮಕ್ಕಾಗಿ ಬಹು ವರ್ಷಗಳ ನಂತರ ಹುಬ್ಬಳ್ಳಿಗೆ ಭೇಟಿ ನೀಡಿರುವ ಅವರು, ಬದುಕು, ಬರಹ, ಸಾಹಿತ್ಯ, ಸಮಾಜ ಮತ್ತು ಇವೆಲ್ಲವುಗಳ ಅವಿಭಾಜ್ಯ ಅಂಗವಾಗಿರುವ ರಾಜಕೀಯದ ಬಗ್ಗೆ
ಸಂಯುಕ್ತ ಕರ್ನಾಟಕ'ದ ಜೊತೆ ಅತ್ಯಂತ ಮುಕ್ತವಾಗಿ ಮಾತನಾಡಿದರು. ತೊಂಬತ್ಮೂರರ ಇಳಿಹರೆಯದಲ್ಲಿ, ಜ್ಞಾಪಕಶಕ್ತಿ ಕುಂದಿದೆ ಎನ್ನುತ್ತಲೇ ಎಲ್ಲ ಆಗುಹೋಗುಗಳನ್ನು ಒರೆಗೆ ಹಚ್ಚಿದರು.ಮೀಸಲಾತಿ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದು ಟೀಕೆ ಪ್ರತಿ ಟೀಕೆಗಳಿಗೆ ಒಳಗಾಗಿದೆ ಎಂಬುದು ಒಂದೆಡೆ ಇರಲಿ. ಆದರೆ ವೋಟಿಗಾಗಿ ಇವರೆಲ್ಲ ಮೀಸಲಾತಿಯನ್ನು ಗುರಾಣಿಯನ್ನಾಗಿ ಮಾಡಿಕೊಂಡಿಲ್ಲವೇ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ತನ್ನ ತಾತ ನೆಹರೂ ಮಾಡಿದ ತಪ್ಪನ್ನೇ ಮುಂದುವರಿಸುತ್ತ, ಚೀನಾ ಬೆಂಬಲಿಸುವ ರಾಹುಲ್ ಹೇಳಿದ್ದು ಮತ್ತು ಅವರನ್ನು ಟೀಕೆ ಮಾಡುವುದು ಈ ಎರಡರ ಹಿಂದೆಯೂ ರಾಜಕೀಯ ಅಡಗಿದೆಯೇ ಹೊರತು ಇನ್ನೇನೂ ಇಲ್ಲ. ಮೀಸಲಾತಿ ಬೇಕು. ಆದರೆ ಕೆನೆಪದರ ತಲುಪಿದವರಿಗೆ ಇದನ್ನು ತೆಗೆಯಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿದ್ದು, ಮತಗಳ ಕಡೆಗೆ ಗಮನ ಇಡುವ ರಾಜಕೀಯ ಪಕ್ಷಗಳಿಗೆ ಅಪಥ್ಯವಾಗುತ್ತಿದೆ. ಕೆನೆಪದರಕ್ಕೆ ಮೀಸಲಾತಿ ತೆಗೆಯಬೇಕಾದುದು ರಾಜಕೀಯ ಪಕ್ಷಗಳ ಮೊದಲ ಆದ್ಯತೆಯಾಗಬೇಕು.
ನಮ್ಮ ದೇಶದಲ್ಲಿ ಕುಟುಂಬ ರಾಜಕಾರಣ ಮಿತಿ ಮೀರಿರುವುದು ಅನೇಕ ಸಾಮಾಜಿಕ ಸಂಕಷ್ಟಗಳಿಗೆ ಕಾರಣ. ಪ್ರತಿ ರಾಜ್ಯದಲ್ಲೂ ಕುಟುಂಬ ರಾಜಕಾರಣ ವಿಜೃಂಭಿಸುತ್ತಿದ್ದು, ಎಲ್ಲ ರಾಜಕೀಯ ಪಕ್ಷಗಳಲ್ಲೂ ಇದೇ ಪರಿಸ್ಥಿತಿ. ಒಂದು ಪಕ್ಷ ಸ್ವಲ್ಪ ಹೆಚ್ಚಿರಬಹುದು ಅಷ್ಟೇ. ನೆಹರೂ, ಇಂದಿರಾ ಗಾಂಧಿ ಈ ದೇಶದ ಮೌಲಿಕ ತಂತುಗಳನ್ನು ನಾಶ ಮಾಡಲು ಒಂದು ಮಾದರಿ (ಪ್ಯಾಟರ್ನ್) ಹಾಕಿಕೊಟ್ಟರು. ಉಳಿದವರು ಅನುಸರಿಸಿದರು. ಪರಿಣಾಮವಾಗಿ ಜಾತಿ, ಧರ್ಮ, ಸಾಮಾಜಿಕ ಕ್ಲೇಶ ಉಳಿದು ಹೋಗುವಂತಾಗಿವೆ.ದೇಶ ಪ್ರಗತಿಯತ್ತ ಸಾಗುವಂತಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾರಣ. ಅವರು ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿರುವುದರಿಂದ ಇಂದು ಭಾರತೀಯ ಸಮಾಜ ಹೆಮ್ಮೆ ಪಡುವ ಸ್ಥಿತಿಯಲ್ಲಿದೆ. ತುಷ್ಟೀಕರಣ ಬಿಟ್ಟು
ನಾಗಮಂಗಲ, ಮಂಗಳೂರು ಮೊದಲಾದ ಗಲಭೆಗಳಿಗೆ ತುಷ್ಟೀಕರಣವೇ ಕಾರಣ. ತುಷ್ಟೀಕರಣ ಬಿಟ್ಟು ಎಲ್ಲರನ್ನೂ ಒಳಗೊಂಡು ಸಾಗಿದ್ದೇ ಆದರೆ ಮನುಷು ಮನುಷ್ಯರ ನಡುವೆ ಸಂಘರ್ಷಗಳು ಸಂಭವಿಸುವುದಿಲ್ಲ. ಈಗ ಆಡಳಿತಾತ್ಮಕ ರಾಜಕೀಯವು ಜಾತಿ, ವರ್ಗ ಸುತ್ತ ಸುತ್ತುತ್ತಿದೆ. ಅಂತಿಮವಾಗಿ ಶ್ರೀಸಾಮಾನ್ಯ ಕಷ್ಟಕ್ಕೆ ಸಿಲುಕಿದ್ದಾನೆ…' ಎಂದು ನಿಟ್ಟುಸಿರು ಬಿಟ್ಟರು ಸಾಹಿತ್ಯ ಕ್ಷೇತ್ರದ ಈ ಮೇರುಸದೃಶ ಹಿರಿಯ.
ಸಮಾಜಕ್ಕೆ ಕಂಟಕವಾದ ಗ್ಯಾರಂಟಿಗಳು…
`ಕರ್ನಾಟಕದ ಗ್ಯಾರಂಟಿಗಳು, ಉಚಿತ ಭಾಗ್ಯಗಳೆಲ್ಲ ಸಮಾಜಕ್ಕೆ ಕಂಟಕ. ಶ್ರೀಮಂತರು ಬಡವರು ಎನ್ನದೇ ಪ್ರತಿಯೊಬ್ಬರೂ ಉಚಿತವಾಗಿ ಓಡಾಡಿ ಎಂದು ಬಿಟ್ಟಿದ್ದರ ಫಲವಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಎಷ್ಟು ಪ್ರಮಾಣದ ನಷ್ಟವಾಗಿದೆ? ಯಾರೂ ಆಲೋಚನೆ ಮಾಡುತ್ತಿಲ್ಲ. ಜನರ ಕೈಗಳಿಗೆ ಕೆಲಸ ಕೊಡುವ ದೀರ್ಘಾವಧಿ ಆರ್ಥಿಕತೆಯ ಬಗ್ಗೆ ಆಲೋಚನೆಯನ್ನು ಕಲ್ಯಾಣಪರ ಸರ್ಕಾರಗಳು ಮಾಡಬೇಕು. ಇದೇ ರೀತಿ ಮುಂದುವರಿದರೆ ಬೊಕ್ಕಸ ಬರಿದಾಗುತ್ತದೆ ಎಂಬುದು ಭೈರಪ್ಪ ನಿಲುವು.
ಏಕೆ ಬರೆಯಲ್ಲ…?
ಭೈರಪ್ಪ ಇತ್ತೀಚೆಗೆ ಬರೆದಿಲ್ಲ. ಬರೆಯುವ ಸೂಚನೆಯೂ ಇಲ್ಲ. ಸಾಹಿತ್ಯ ಸಮ್ಮೇಳನಗಳ ಬಗ್ಗೆಯೂ ಅವರು ವಿಮುಖ. ಏಕೆ? ಹೊಸ ಬರಹಗಾರರ ಬಗ್ಗೆ ಅವರ ಅನಿಸಿಕೆ ಏನು? ಈ ಪ್ರಶ್ನೆಗಳಿಗೆ ಅವರ ಪ್ರಾಮಾಣಿಕ ಉತ್ತರ ಹೀಗಿತ್ತು.ಇಲ್ಲ ಈಗ ಬರೆಯಲಾರೆ. ನೆನಪಿನ ಶಕ್ತಿ ಕುಂದಿದೆ. ಯಾವುದೇ ವಿಷಯವಾದರೂ ಅಧ್ಯಯನದ ಆಳ-ನೆನಪಿನ ಶಕ್ತಿಗಳಿಲ್ಲದೇ ಬರೆಯಬಾರದು ಎಂಬುದು ನನ್ನ ಖಚಿತ ನಿಲುವು. ಆದ್ದರಿಂದ
ಉತ್ತರಕಾಂಡ'ದ ನಂತರ ಬರವಣಿಗೆ ನಿಲ್ಲಿಸಿರುವೆ. ನೀವು ಬರೀರಿ, ನಿಮಗೆ ಸರಸ್ವತಿ ಒಲಿದಿದ್ದಾಳೆ ಎನ್ನುತ್ತಾರೆ. ನನಗೆ ಇದರಲ್ಲೆಲ್ಲ ನಂಬಿಕೆ ಇಲ್ಲ. ಹಾಗೆಯೇ ಸಾಹಿತ್ಯ ಸಮಾರಂಭಗಳು, ಸಮ್ಮೇಳನಗಳಲ್ಲಿ ನನಗೆ ಯಾವ ಆಸಕ್ತಿಯೂ ಇಲ್ಲ. ಹೊಸ ಬರಹಗಳನ್ನು ನಾನು ಓದುತ್ತಿಲ್ಲ. ಏಕೆಂದರೆ ಈ ವಯಸ್ಸಿನಲ್ಲಿ ಓದಲು ಆಗುತ್ತಿಲ್ಲ' ಎಂದರು.