ಸಂಪೂರ್ಣ ನಕ್ಸಲಿಂ ತೊಡೆದುಹಾಕವುದು ಸರ್ಕಾರದ ಉದ್ದೇಶ
ಮೈಸೂರು: ನಕ್ಸಲಿಂ ಸಂಪೂರ್ಣ ತೊಡೆದುಹಾಕವುದು ಕಾಂಗ್ರೆಸ್ ಸರ್ಕಾರದ ಉದ್ದೇಶ. ಯಾವುದೇ ಹೋರಾಟಗಳಾಗಲಿ ಶಾಂತಿಯುತವಾಗಿರಬೇಕೇ ಹೊರತು ಹಿಂಸಾತ್ಮಕ ದಾರಿ ಹಿಡಿಯಬಾರದೆಂಬುದು ಸರ್ಕಾರದ ನಿಲುವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶರಣಾಗತರಾದ ನಕ್ಸಲರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವ ಬಗ್ಗೆ ಹಾಗೂ ನಕ್ಸಲರ ಶರಣಾಗತಿಯ ಬಗ್ಗೆ ಪರವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ನಕ್ಸಲರು ಶರಣಾಗಿದ್ದು, ಅವರ ಶಸ್ತ್ರಾಸ್ತ್ರಗಳನ್ನೂ ಮಹಜರು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಹೋರಾಟಗಳು ಸಂವಿಧಾನಾತ್ಮಕ ರೀತಿಯಲ್ಲಿ ನಡೆಯಬೇಕೆಂದು ಡಾ. ಅಂಬೇಡ್ಕರ್‌ರವರೂ ಹೇಳಿದ್ದಾರೆ. ಅನ್ಯಾಯದ ವಿರುದ್ಧ ಧ್ವನಿಎತ್ತಲು ಸಂವಿಧಾನದಲ್ಲಿ ಅವಕಾಶವಿದ್ದರೂ, ಕಾನೂನನ್ನು ಕೈಗೆ ತೆಗೆದುಕೊಳ್ಳುವ ಅವಕಾಶ ಯಾರಿಗೂ ನೀಡಲಾಗಿಲ್ಲ. ಶೃಂಗೇರಿಯಲ್ಲಿ ಮತ್ತೊಬ್ಬ ನಕ್ಸಲ್ ಇರುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೂ ಅವರೂ ಕೂಡ ಕಾನೂನಿಗೆ ಶರಣಾಗಿ ಮುಖ್ಯವಾಹಿನಿಗೆ ಬರುವಂತಾಗಲಿ ಎಂದು ಕೋರುವುದಾಗಿ ತಿಳಿಸಿದರು.
ಕೇಂದ್ರದಲ್ಲಿ ಅಮಾನವೀಯ, ರೈತವಿರೋಧಿ ಸರ್ಕಾರವಿದೆ
ನವದೆಹಲಿಯಲ್ಲಿ ಎಂಎಸ್‌ಪಿ ಬೇಡಿಕೆ ಸಂಬಂಧ ರೈತರ ಬಹಳ ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ಕೇಂದ್ರ ಸರ್ಕಾರ ಅವರ ನ್ಯಾಯಬದ್ಧ ಬೇಡಿಕೆಗೆ ಸ್ಪಂದಿಸುತ್ತಿಲ್ಲವೆಂಬ ಬಗ್ಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿ, ಕೇಂದ್ರ ಸರ್ಕಾರ ರೈತರ ಪರವಾದ ಸರ್ಕಾರವಲ್ಲ. ಬೆಳೆಗಳಿಗೆ ಎಂಎಸ್‌ಪಿ ನೀಡುವುದಕ್ಕೆ ಕಾನೂನು ರಚಿಸುವಂತೆ ರೈತರ ಬೇಡಿಕೆಯಾಗಿದ್ದು, ಈ ಬೇಡಿಕೆಗೆ ಮಣಿಯದ ಅಮಾನವೀಯ ಹಾಗೂ ರೈತವಿರೋಧಿ ಸರ್ಕಾರವಾಗಿದೆ. ನೂರಾರು ರೈತರು ಪ್ರತಿಭಟನೆಯನ್ನು ಪ್ರಾಣ ಕಳೆದುಕೊಂಡಿದ್ದರೂ ಸಹ ರೈತರ ಬೇಡಿಕೆಗೆ ಮಣಿಯುತ್ತಿಲ್ಲ ಎಂದರು.
ಆಶಾ ಕಾರ್ಯಕರ್ತರಿಗೆ 10,000 ರೂ.
ಆಶಾ ಕಾರ್ಯಕರ್ತರ ಮುಷ್ಕರದ ಬಗ್ಗೆ ಪ್ರತಿಕ್ರಿಯೆ ನೀಡಿ, ಆಶಾ ಕಾರ್ಯಕರ್ತರೊಂದಿಗೆ ಸಭೆ ನಡೆಸಲಾಗಿದೆ. ಈ ಮುಂಚೆ ಪ್ರತಿ ತಿಂಗಳು 8000 ರೂ. ನೀಡಲಾಗುತ್ತಿದ್ದು, ಈಗ ಪ್ರೋತ್ಸಾಹಕಗಳನ್ನೂ ಸೇರಿದಂತೆ ಪ್ರತಿ ತಿಂಗಳು 10,000 ರೂ.ಗಳ ವೇತನವನ್ನು ನೀಡಲು ನಿರ್ಧಾರ ಕೈಗೊಂಡಿದ್ದು, ಅವರು ಮುಷ್ಕರವನ್ನು ಕೈಬಿಡಲು ಸಮ್ಮತಿಸಿದ್ದಾರೆ ಹಾಗೂ ಈ ಮೊತ್ತವನ್ನು ನೀಡಲು, ಸರ್ಕಾರದ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ ಎಂದು ತಿಳಿಸಿದರು.